ಕನ್ನಡಿಗರ ಭಾಷಾಭಿಮಾನವನ್ನು ಭಯೋತ್ಪಾದನೆಗೆ ಹೋಲಿಸಿದ್ದ ಗಾಯಕ ಸೋನು ನಿಗಮ್ ಅವರ ಬೆಂಗಳೂರು ಕಾರ್ಯಕ್ರಮಕ್ಕೆ ಕರವೇ ತೀವ್ರ ವಿರೋಧ ವ್ಯಕ್ತಪಡಿಸಿದೆ. ಅಕ್ಟೋಬರ್ 24ರಂದು ನಡೆಯಲಿರುವ ಈ ಸಂಗೀತ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದೆಂದು ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ. ಅನುಮತಿ ನೀಡಿದರೆ ಉಗ್ರ ಹೋರಾಟ ಮಾಡುವುದಾಗಿ ಕರವೇ ಎಚ್ಚರಿಸಿದೆ.

ಬೆಂಗಳೂರು (ಅ.14): ಕನ್ನಡಿಗರ ಭಾಷಾಭಿಮಾನವನ್ನು ಭಯೋತ್ಪಾದನಾ ದಾಳಿಗೆ ಹೋಲಿಸಿ ವಿವಾದಕ್ಕೀಡಾಗಿದ್ದ ಬಾಲಿವುಡ್‌ನ ಖ್ಯಾತ ಗಾಯಕ ಸೋನು ನಿಗಮ್ (Sonu Nigam) ಅವರಿಗೆ ಬೆಂಗಳೂರಿನಲ್ಲಿ ಮತ್ತೊಮ್ಮೆ ವಿರೋಧ ವ್ಯಕ್ತವಾಗಿದೆ. ಅಕ್ಟೋಬರ್ 24ರಂದು ನಗರದಲ್ಲಿ ಆಯೋಜಿಸಲಾಗಿರುವ ಸೋನು ನಿಗಮ್ ಅವರ ಸಂಗೀತ ಕಾರ್ಯಕ್ರಮಕ್ಕೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ವತಿಯಿಂದ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಅಧಿಕೃತ ಮನವಿ ಸಲ್ಲಿಸಲಾಗಿದೆ.

ಅನುಮತಿ ನಿರಾಕರಿಸುವಂತೆ ಕರವೇ ಬಲವಾದ ಆಗ್ರಹ:

ಕರವೇ ರಾಜ್ಯ ಅಧ್ಯಕ್ಷ ಟಿ.ಎ. ನಾರಾಯಣಗೌಡ (T.A. Narayana Gowda) ಅವರ ನೇತೃತ್ವದಲ್ಲಿ ಪೊಲೀಸ್ ಆಯುಕ್ತರಿಗೆ ಸಲ್ಲಿಸಲಾಗಿರುವ ಮನವಿಯಲ್ಲಿ, 'ಕನ್ನಡಿಗರ ಭಾಷಾಭಿಮಾನವನ್ನು ಪಹಲ್ಗಾಮ್ ಭಯೋತ್ಪಾದನಾ ದಾಳಿಗೆ ಹೋಲಿಸಿ ಅವಮಾನಿಸಿರುವ ಗಾಯಕ ಸೋನು ನಿಗಮ್ ಅವರ ಸಂಗೀತ ಕಾರ್ಯಕ್ರಮಕ್ಕೆ ಬೆಂಗಳೂರಿನಲ್ಲಿ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು' ಎಂದು ಬಲವಾಗಿ ಆಗ್ರಹಿಸಲಾಗಿದೆ.

ವಿವಾದದ ಹಿನ್ನೆಲೆ ಏನು?:

2025ರ ಏಪ್ರಿಲ್‌ನಲ್ಲಿ ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ನಡೆದ ಸಂಗೀತ ಕಾರ್ಯಕ್ರಮದ ಸಂದರ್ಭದಲ್ಲಿ, ಕನ್ನಡ ಹಾಡು ಹಾಡುವಂತೆ ಕೋರಿದ್ದ ವಿದ್ಯಾರ್ಥಿಯೊಬ್ಬರಿಗೆ ಪ್ರತಿಕ್ರಿಯಿಸಿದ್ದ ಸೋನು ನಿಗಮ್, "ಕನ್ನಡ, ಕನ್ನಡ, ಕನ್ನಡ.. ಇದೇ ಕಾರಣಕ್ಕೆ ಪಹಲ್ಗಾಮ್‌ನಲ್ಲಿ ಘಟನೆ (ಭಯೋತ್ಪಾದಕ ದಾಳಿ) ಸಂಭವಿಸಿತು' ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಕನ್ನಡ ಹಾಡು ಕೇಳುವುದು ಯಾವುದೇ ದೃಷ್ಟಿಯಲ್ಲೂ ಅಪರಾಧವಲ್ಲವಾದರೂ, ಕನ್ನಡಿಗರ ಭಾಷಾಭಿಮಾನವನ್ನು ಭಯೋತ್ಪಾದನಾ ದಾಳಿಗೆ ಹೋಲಿಸುವುದು ಅತ್ಯಂತ ಖಂಡನೀಯ ಹಾಗೂ ಕನ್ನಡಿಗರ ಸ್ವಾಭಿಮಾನಕ್ಕೆ ಮಾಡಿದ ದೊಡ್ಡ ಅಪಮಾನವಾಗಿದೆ ಎಂದು ಕರವೇ ಆಕ್ರೋಶ ವ್ಯಕ್ತಪಡಿಸಿದೆ. ಈ ಸಂಬಂಧ 2025ರ ಮೇ 2ರಂದೇ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಲಾಗಿದೆ.

ಅಕ್ಟೋಬರ್ 24ರಂದು ಕಾರ್ಯಕ್ರಮಕ್ಕೆ ಸಿದ್ಧತೆ:

ಸೋನು ನಿಗಮ್ ಅವರ 'ದಿ ರೆವಲ್ಯೂಷನ್ ಇಂಡಿಯಾ ಟೂರ್' (The Revolution India Tour) ಸಂಗೀತ ಕಾರ್ಯಕ್ರಮವು ಬಾಗಲೂರು ರಸ್ತೆಯ ಥಣಿಸಂದ್ರ ಮುಖ್ಯರಸ್ತೆಯಲ್ಲಿರುವ ಭಾರತೀಯ ಮಾಲ್ ಆಫ್ ಬೆಂಗಳೂರು (Bhartiya Mall of Bengaluru) ಆವರಣದಲ್ಲಿ ಅಕ್ಟೋಬರ್ 24ರಂದು ಸಂಜೆ 7 ಗಂಟೆಗೆ ಆಯೋಜನೆಯಾಗಿದೆ ಎಂಬ ಮಾಹಿತಿ ಲಭ್ಯವಿದೆ.

ಕರವೇ ಪ್ರಮುಖ ಬೇಡಿಕೆಗಳು ಮತ್ತು ಎಚ್ಚರಿಕೆ:

  • ಅಕ್ಟೋಬರ್ 24ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸೋನು ನಿಗಮ್ ಅವರ ಸಂಗೀತ ಕಾರ್ಯಕ್ರಮಕ್ಕೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು.
  • ಈಗಾಗಲೇ ಅನುಮತಿ ನೀಡಲಾಗಿದ್ದರೆ, ಸಾರ್ವಜನಿಕ ಆಕ್ರೋಶ ಹಾಗೂ ಕಾನೂನು ಸುವ್ಯವಸ್ಥೆಯ ಹಿತದೃಷ್ಟಿಯಿಂದ ಅದನ್ನು ತಕ್ಷಣವೇ ರದ್ದುಪಡಿಸಬೇಕು.
  • ಗಾಯಕ ಸೋನು ನಿಗಮ್ ವಿರುದ್ಧ ಕರವೇ ಸಲ್ಲಿಸಿರುವ ಹಿಂದಿನ ದೂರಿನ ಸ್ಥಿತಿಯನ್ನು ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು.
  • ಒಂದು ವೇಳೆ ಕಾರ್ಯಕ್ರಮಕ್ಕೆ ಅನುಮತಿ ನೀಡಿದರೆ, ಕನ್ನಡಿಗರ ಸ್ವಾಭಿಮಾನವನ್ನು ಕಾಪಾಡಲು ರಾಜ್ಯಾದ್ಯಂತ ತೀವ್ರ ಸ್ವರೂಪದ ಉಗ್ರ ಹೋರಾಟ ಹಾಗೂ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಕರವೇ ಎಚ್ಚರಿಕೆ ನೀಡಿದೆ.
  • ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಹದಗೆಡುವುದನ್ನು ತಪ್ಪಿಸಲು ಪೊಲೀಸರು ಕೂಡಲೇ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಕರವೇ ಒತ್ತಾಯಿಸಿದೆ.