ಸ್ತನ ಕ್ಯಾನ್ಸರ್ ಜಾಗೃತಿ ಮಾಸದ ಅಂಗವಾಗಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ಅಕ್ಟೋಬರ್ 29 ರಂದು ಬೆಂಗಳೂರಿನ ವಿಧಾನಸೌಧ, ಟೌನ್ ಹಾಲ್ ಸೇರಿದಂತೆ ಪ್ರಮುಖ ಐತಿಹಾಸಿಕ ಕಟ್ಟಡಗಳನ್ನು ಗುಲಾಬಿ ಬಣ್ಣದ ದೀಪಗಳಿಂದ ಬೆಳಗಿಸಲಾಗುವುದು.

ಬೆಂಗಳೂರು (ಅ.29): ಸ್ತನ ಕ್ಯಾನ್ಸರ್‌ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮುಂದಾಗಿರುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (RGUSH)ದ ಸದಾಶಯದಿಂದಾಗಿ ಅ.29 ರಂದು ನಗರದ ಹಲವು ಐತಿಹಾಸಿಕ ಕಟ್ಟಡಗಳು ಗುಲಾಬಿ ಬಣ್ಣದ ಲೈಟಿಂಗ್‌ನಲ್ಲಿ ಕಂಗೊಳಿಸಲಿವೆ.

ಇಂದಿನಿಂದ ವಿಧಾನಸೌಧ ಪಿಂಕ್ ಕಲರ್‌ನಲ್ಲಿ ಕಂಗೊಳಿಸಲಿದೆ

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ವಿವಿ ಕುಲಪತಿ ಡಾ.ಬಿ.ಸಿ.ಭಗವಾನ್, ಸ್ತನ ಕ್ಯಾನ್ಸರ್ ಜಾಗೃತಿ ಮಾಸದ ಅಂಗವಾಗಿ ವಿಧಾನಸೌಧ, ಟೌನ್ ಹಾಲ್, ಸರ್.ಶೇಷಾದ್ರಿ ಅಯ್ಯರ್ ಸ್ಮಾರಕ ಗ್ರಂಥಾಲಯ ಹಾಗೂ ರಾಜ್ಯ ವಸ್ತು ಸಂಗ್ರಹಾಲಯ ಕಟ್ಟಡಗಳಿಗೆ ಪಿಂಕ್ ಲೈಟಿಂಗ್ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದಕ್ಕೆ ಒಪ್ಪಿಗೆ ಸಿಕ್ಕಿದೆ ಎಂದು ಸ್ಪಷ್ಟಪಡಿಸಿದರು.

ಸ್ತನ ಕ್ಯಾನ್ಸರ್ ಜಾಗೃತಿ ಮಾಸ

ಪ್ರತಿ ವರ್ಷ ಅಕ್ಟೋಬರ್ ತಿಂಗಳನ್ನು ಸ್ತನ ಕ್ಯಾನ್ಸರ್ ಜಾಗೃತಿ ಮಾಸವನ್ನಾಗಿ ಆಚರಿಸಲಾಗುತ್ತದೆ. ಜಾಗತಿಕವಾಗಿ ಮಹಿಳೆಯರಲ್ಲಿ ಪ್ರಮುಖವಾಗಿ ಕಂಡುಬರುವ ಕ್ಯಾನ್ಸರ್‌ಗಳಲ್ಲಿ ಸ್ತನ ಕ್ಯಾನ್ಸರ್ ಕೂಡ ಒಂದಾಗಿದೆ. ರೋಗವನ್ನು ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ನೀಡುವುದರಿಂದ ಚಿಕಿತ್ಸೆಯ ಫಲಿತಾಂಶಗಳನ್ನು ಸುಧಾರಿಸಲು ಹಾಗೂ ಜೀವಗಳನ್ನು ಉಳಿಸಲು ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ, ಪಿಂಕ್ ಲೈಟಿಂಗ್ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನ ನಮ್ಮದಾಗಿದೆ ಎಂದು ವಿವರಿಸಿದರು.

ಸಂಯೋಜಿತ ಕಾಲೇಜುಗಳಲ್ಲಿ ಜಾಗೃತಿ

ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಹಾಗೂ ಇತರ ಪ್ರಮುಖ ಕ್ಯಾನ್ಸರ್ ಚಿಕಿತ್ಸಾ ಸಂಸ್ಥೆಗಳ ಸಹಯೋಗದೊಂದಿಗೆ ವಿವಿಯ ಎಲ್ಲಾ ಸಂಯೋಜಿತ ಕಾಲೇಜುಗಳಲ್ಲಿ ಸ್ತನ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲು ಉದ್ದೇಶಿಸಲಾಗಿದೆ. ಸ್ತನಗಳಲ್ಲಿ ಕಂಡುಬರುವ ಅಸಹಜ ಬದಲಾವಣೆಗಳನ್ನು ಗುರುತಿಸುವುದು, ವೈದ್ಯಕೀಯ ಸಲಹೆ ನೀಡುವುದು, ಸೂಕ್ತ ತಪಾಸಣೆ, ಆರಂಭಿಕ ಪತ್ತೆಯ ಮಹತ್ವದ ಕುರಿತು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುವುದು ಎಂದು ಹೇಳಿದರು.