ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ಸಮಸ್ಯೆ ಆಲಿಸಲು ಕೇಂದ್ರ ಸರ್ಕಾರದ ಉನ್ನತ ಮಟ್ಟದ ಸಮಿತಿ ರಾಜ್ಯಕ್ಕೆ ಭೇಟಿ ನೀಡಲಿದೆ. ಪ್ರತಿ ಟನ್‌ಗೆ ₹5,500 ನಿಗದಿಪಡಿಸಲು ರೈತರು ಆಗ್ರಹಿಸುತ್ತಿದ್ದಾರೆ. ಆದರೆ, ಸಮಿತಿಯು ಬೆಳಗಾವಿಗೆ ಬಂದು ಸಮಸ್ಯೆ ಆಲಿಸಬೇಕು ಎಂದು ರೈತ ಮುಖಂಡರು ಪಟ್ಟು .

ಬೆಂಗಳೂರು (ಅ.29): ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆಗಳ ಮಾಲೀಕರ ಸಮಸ್ಯೆ ಆಲಿಸಲು ಕೇಂದ್ರ ಸರ್ಕಾರ ರಚಿಸಿರುವ ಡಾ.ರಮೇಶ ಚಾಂದ್ ನೇತೃತ್ವದ ಉನ್ನತ ಮಟ್ಟದ ಅಧಿಕಾರಿಗಳ ಜಂಟಿ ಸಮಿತಿ ಗುರುವಾರ ರಾಜ್ಯಕ್ಕೆ ಭೇಟಿ ನೀಡಲಿದ್ದು, ಬೆಂಗಳೂರಿನಲ್ಲಿ ಮಹತ್ವದ ಸಭೆ ನಡೆಸಲಿದೆ ಎಂದು ದೆಹಲಿಯ ಮೂಲಗಳು ತಿಳಿಸಿವೆ. ಆದರೆ, ಸಭೆ ನಡೆಯುವ ಬಗ್ಗೆ ರಾಜ್ಯ ಸರ್ಕಾರದ ಅಧಿಕಾರಿಗಳು ಯಾವುದೇ ಖಚಿತ ಮಾಹಿತಿ ನೀಡಿಲ್ಲ.

ಇದನ್ನೂ ಓದಿ: ವಿಧಾನ ಪರಿಷತ್‌ ಚುನಾವಣಾ ಫಲಿತಾಂಶದ ಬೆನ್ನಲ್ಲೇ ವಿಜಯೇಂದ್ರ ಬೆನ್ನುತಟ್ಟಿ ಮೆಚ್ಚುಗೆ ಸೂಚಿಸಿದ ಸಿದ್ದು!

ಎರಡು ದಿನಗಳ ಕಾಲ ರಾಜ್ಯಕ್ಕೆ ಕೇಂದ್ರ ತಂಡ ಭೇಟಿ

ಪ್ರತಿ ಟನ್‌ ಕಬ್ಬಿಗೆ ₹5,500 ಕನಿಷ್ಠ ಬೆಲೆ ನಿಗದಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಉನ್ನತ ಮಟ್ಟದ ಅಧಿಕಾರಿಗಳ ಜಂಟಿ ಸಮಿತಿ ರಚಿಸಿತ್ತು. ಈ ಸಮಿತಿ ಗುರುವಾರ ಮತ್ತು ಶುಕ್ರವಾರ, ಎರಡು ದಿನಗಳ ಕಾಲ ರಾಜ್ಯಕ್ಕೆ ಭೇಟಿ ನೀಡಲಿದೆ. ಗುರುವಾರ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಲಿದೆ. ಶುಕ್ರವಾರ ಕಬ್ಬು ಬೆಳೆಗಾರರ ಮುಖಂಡರು ಹಾಗೂ ಸಕ್ಕರೆ ಕಾರ್ಖಾನೆಗಳ ಮಾಲೀಕರ ಜೊತೆ ಮಾತುಕತೆ ನಡೆಸಲಿದ್ದು, ಅವರ ಸಮಸ್ಯೆಗಳನ್ನು ಆಲಿಸಲಿದೆ ಎಂದು ದೆಹಲಿಯ ಮೂಲಗಳು ಹೇಳಿವೆ. ಆದರೆ, ಅಧಿಕಾರಿಗಳ ಸಭೆ ನಡೆಯುವುದನ್ನು ರಾಜ್ಯ ಸರ್ಕಾರದ ಅಧಿಕಾರಿಗಳು ದೃಢಪಡಿಸಿಲ್ಲ.

ಇದನ್ನೂ ಓದಿ: ಮುಂದಿನ ಎಲ್ಲಾ ಚುನಾವಣೆ ಬ್ಯಾಲೆಟ್‌ ಮೂಲಕವೇ ಮಾಡೋಣ: ವಿಧಾನ ಪರಿಷತ್ ಚುನಾವಣೆ ಸೋಲಿನ ಬಳಿಕ ಬಿಜೆಪಿಗೆ ಪ್ರಿಯಾಂಕ್ ಹೊಸ ಸವಾಲ್

ಬೆಂಗಳೂರಿಗೆ ಬರುವಂತೆ ರೈತ ಮುಖಂಡರಿಗೆ ಆಹ್ವಾನ

ಈ ಮಧ್ಯೆ, ಬೆಳಗಾವಿಯಲ್ಲಿ ಮಾತನಾಡಿದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ಮತ್ತು ರಾಜ್ಯಾಧ್ಯಕ್ಷ ಚುನಪ್ಪ ಪೂಜೇರಿ, ಕೇಂದ್ರ ಸರ್ಕಾರದ ಸಮಿತಿ ಗುರುವಾರ ರಾಜ್ಯಕ್ಕೆ ಭೇಟಿ ನೀಡಲಿದ್ದು, ಬೆಂಗಳೂರಿಗೆ ಬರುವಂತೆ ರೈತ ಮುಖಂಡರಿಗೆ ಆಹ್ವಾನ ನೀಡಲಾಗಿದೆ. ಆದರೆ, ಸಮಿತಿಯ ಅಧಿಕಾರಿಗಳು ಕಬ್ಬು ಬೆಳೆಯುವ ಪ್ರಮುಖ ಪ್ರದೇಶವಾಗಿರುವ ಬೆಳಗಾವಿಗೆ ಬಂದು ರೈತರ ಸಮಸ್ಯೆ ಆಲಿಸಬೇಕು. ತಾವು ಬೆಂಗಳೂರಿಗೆ ಹೋಗುವುದಿಲ್ಲ ಎಂದು ತಿಳಿಸಿದ್ದಾರೆ.