ರಾಜ್ಯದ ರೈತ ಉತ್ಪಾದಕ ಸಂಸ್ಥೆಗಳನ್ನು (ಎಫ್ಪಿಒ) ಆರ್ಥಿಕವಾಗಿ ಸಶಕ್ತಗೊಳಿಸಲು 'ವಾಧ್ವಾನಿ ಎಫ್ಪಿಒ ಎಂಟರ್ಪ್ರೆನ್ಯೂರ್ಶಿಪ್ ಪ್ರೋಗ್ರಾಂ' ಆರಂಭಿಸಲಾಗಿದೆ. ಮೊದಲ ಹಂತವಾಗಿ 27 ಎಫ್ಪಿಒಗಳನ್ನು ಆಯ್ಕೆ ಮಾಡಲಾಗಿದ್ದು, ರೈತರನ್ನು ಸ್ವಯಂ ಉದ್ಯಮಿಗಳನ್ನಾಗಿ ಬೆಳೆಸಲು 10 ವಾರಗಳ ವಿಶೇಷ ತರಬೇತಿ ನೀಡಲಾಗುತ್ತದೆ.
ಬೆಂಗಳೂರು: ರಾಜ್ಯದಲ್ಲಿನ ರೈತ ಉತ್ಪಾದಕ ಸಂಸ್ಥೆಗಳನ್ನು (ಎಫ್ಪಿಒ) ಆರ್ಥಿಕವಾಗಿ ಮತ್ತಷ್ಟು ಸಶಕ್ತಗೊಳಿಸುವ ಹಾಗೂ ಕೃಷಿಕರ ಆದಾಯವನ್ನು ದ್ವಿಗುಣಗೊಳಿಸುವ ಮಹತ್ವಾಕಾಂಕ್ಷೆಯೊಂದಿಗೆ ಹೊಸ ಯೋಜನೆಯೊಂದಕ್ಕೆ ಚಾಲನೆ ನೀಡಲಾಗಿದೆ. ತೋಟಗಾರಿಕಾ ಇಲಾಖೆಯ ಬೆಂಬಲಿತ 'ರೈತ ಉತ್ಪಾದಕ ಸಂಸ್ಥೆಗಳ ಉತ್ಕೃಷ್ಟತಾ ಕೇಂದ್ರ' (ಸಿಒಇ - ಎಫ್ಪಿಒ) ಮತ್ತು 'ನ್ಯಾಷನಲ್ ಎಂಟರ್ಪ್ರೆನ್ಯೂರ್ಶಿಪ್ ನೆಟ್ವರ್ಕ್' (ಎನ್ಇಎನ್) ಸಂಸ್ಥೆಗಳು ಜಂಟಿಯಾಗಿ 'ವಾಧ್ವಾನಿ ಎಫ್ಪಿಒ ಎಂಟರ್ಪ್ರೆನ್ಯೂರ್ಶಿಪ್ ಪ್ರೋಗ್ರಾಂ' ಅನ್ನು ಕರ್ನಾಟಕದಲ್ಲಿ ಪ್ರಾರಂಬಿಸಿವೆ.
ರೈತರು ಕೇವಲ ಬೆಳೆಗಳನ್ನು ಬೆಳೆಯುವ ಬೆಳೆಗಾರರಾಗಿ ಮಾತ್ರ ಉಳಿಯದೆ, ಸ್ವಯಂ ಉದ್ಯಮಿಗಳಾಗಿ ಬೆಳೆಯಬೇಕು ಎಂಬುದು ಈ ವಿನೂತನ ಯೋಜನೆಯ ಮೂಲ ಉದ್ದೇಶವಾಗಿದೆ. ಮೊದಲ ಹಂತವಾಗಿ ರಾಜ್ಯದ ವಿವಿಧ ಭಾಗಗಳಿಂದ 27 ಪ್ರಮುಖ ಎಫ್ಪಿಒಗಳನ್ನು ಈ ಯೋಜನೆಗಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಸಂಸ್ಥೆಗಳನ್ನು ಸುಸ್ಥಿರ ಹಾಗೂ ಲಾಭದಾಯಕ ವಾಣಿಜ್ಯ ಉದ್ಯಮಗಳನ್ನಾಗಿ ಪರಿವರ್ತಿಸಲು ಸೂಕ್ತ ವ್ಯವಹಾರ ಯೋಜನೆ (ಬ್ಯುಸಿನೆಸ್ ಪ್ಲಾನ್), ಮಾರುಕಟ್ಟೆ ಸಂಪರ್ಕ ಮತ್ತು ವಿಸ್ತರಣಾ ತಂತ್ರಗಳ ಕುರಿತು ತಜ್ಞರಿಂದ ತರಬೇತಿ ನೀಡಲಾಗುತ್ತದೆ.
'ಗ್ರೋತ್ ಬೂಟ್ಕ್ಯಾಂಪ್' ಮೂಲಕ ಚಾಲನೆ
ಈ ಬೃಹತ್ ಕಾರ್ಯಕ್ರಮದ ಮೊದಲ ಹೆಜ್ಜೆಯಾಗಿ ಬೆಂಗಳೂರಿನಲ್ಲಿ ಸಿಒಇ - ಎಫ್ಪಿಒ ವತಿಯಿಂದ 'ಗ್ರೋತ್ ಬೂಟ್ಕ್ಯಾಂಪ್' ಕಾರ್ಯಾಗಾರವನ್ನು ಸಂಘಟಿಸಲಾಗಿತ್ತು. ರಾಜ್ಯಾದ್ಯಂತ ಆಯ್ಕೆಯಾದ 27 ಎಫ್ಪಿಒಗಳ ಪ್ರತಿನಿಧಿಗಳು, ವಿಷಯ ತಜ್ಞರು ಹಾಗೂ ಹಿರಿಯ ಸರ್ಕಾರಿ ಅಧಿಕಾರಿಗಳು ಸೇರಿದಂತೆ 60ಕ್ಕೂ ಹೆಚ್ಚು ಗಣ್ಯರು ಈ ಸಭೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ತೋಟಗಾರಿಕಾ ಇಲಾಖೆಯ ಅಧಿಕಾರಿ ಡಾ. ಮಂಜುನಾಥ್ ಎನ್, ಸಿಒಇ - ಎಫ್ಪಿಒ ನಿರ್ದೇಶಕರಾದ ಡಾ. ವಾಸುದೇವ ಕೆ.ಆರ್ ಮತ್ತು ಉಪನಿರ್ದೇಶಕ ಡಾ. ಸದಾನಂದ ಜಿ.ಕೆ ಉಪಸ್ಥಿತರಿದ್ದರು. ಕೃಷಿ-ಉದ್ಯಮ ಕ್ಷೇತ್ರದ ತಜ್ಞರಾದ ರಾಘವೇಂದ್ರ ಸಿಂಗ್ ಹಾಗೂ ಸಂಜೀವ್ ರಾಥೋಡ್ ಅವರು ಭಾಗವಹಿಸಿದ್ದ ರೈತ ಪ್ರತಿನಿಧಿಗಳಿಗೆ ವೃತ್ತಿಪರ ಮಾರ್ಗದರ್ಶನ ನೀಡಿದರು. ಬೂಟ್ಕ್ಯಾಂಪ್ನಲ್ಲಿ ಪ್ರತಿಯೊಂದು ಎಫ್ಪಿಒ ಮುಂದಿನ 12 ತಿಂಗಳ ಕಾಲ ಕೈಗೊಳ್ಳಬೇಕಾದ ಆದ್ಯತೆಯ ವ್ಯವಹಾರಗಳನ್ನು ಸುಲಭವಾಗಿ ಗುರುತಿಸಲು 'ಗ್ರೋತ್ ಸ್ಟ್ರಾಟಜಿ ವರ್ಕ್ಬುಕ್' ಅನ್ನು ವಿತರಿಸಲಾಯಿತು.
10 ವಾರಗಳ ಕಾಲ ಪ್ರಾಯೋಗಿಕ ತರಬೇತಿ
ಬೂಟ್ಕ್ಯಾಂಪ್ನಲ್ಲಿ ಭಾಗವಹಿಸಿದ ಈ 27 ಎಫ್ಪಿಒಗಳಿಗೆ ಎನ್ಇಎನ್ ಸಂಸ್ಥೆಯ 'ಡಬ್ಲ್ಯೂಇಐ' (WEI) ಡಿಜಿಟಲ್ ಪ್ಲಾಟ್ಫಾರ್ಮ್ ಮೂಲಕ ನಿರಂತರ 10 ವಾರಗಳ ಕಾಲ ವಿಶೇಷ ಶಿಕ್ಷಣ ನೀಡಲಾಗುವುದು. ಈ ತರಬೇತಿ ಅವಧಿಯಲ್ಲಿ:
ಕೃಷಿ ಕ್ಷೇತ್ರದ ಉನ್ನತ ತಜ್ಞರೊಂದಿಗೆ ನೇರ ಸಂವಾದ.
- ದೇಶೀಯ ಮತ್ತು ಅಂತರರಾಷ್ಟ್ರೀಯ (ರಫ್ತು) ಮಾರುಕಟ್ಟೆಗಳ ಸಮಗ್ರ ಪರಿಚಯ.
- ನಿರೀಕ್ಷಿತ ಬೃಹತ್ ಖರೀದಿದಾರರು ಮತ್ತು ಉದ್ಯಮಿಗಳೊಂದಿಗೆ ನೇರ ಸಂಪರ್ಕ.
- ಪ್ರಾಯೋಗಿಕ ಉದ್ಯಮ ನಿರ್ವಹಣೆ ಮತ್ತು ಹೂಡಿಕೆ ತಂತ್ರಗಳು.
"ರೈತರಿಗೆ ಸೂಕ್ತ ಮಾರುಕಟ್ಟೆ ಒದಗಿಸುವಲ್ಲಿ ಹಾಗೂ ಅವರ ಆದಾಯವನ್ನು ಸ್ಥಿರವಾಗಿ ಹೆಚ್ಚಿಸುವಲ್ಲಿ ಎಫ್ಪಿಒಗಳ ಪಾತ್ರ ಅತ್ಯಂತ ನಿರ್ಣಾಯಕ. ವಾಧ್ವಾನಿ ಕಾರ್ಯಕ್ರಮದ ಮೂಲಕ ನಮ್ಮ ಎಫ್ಪಿಒಗಳು ಕೇವಲ ಯೋಜನೆಗಳಿಗೆ ಸೀಮಿತವಾಗದೆ, ಸುವ್ಯವಸ್ಥಿತ ಬ್ಯುಸಿನೆಸ್ ಪ್ಲಾನ್ ಒಂದಿಗೆ ಮುನ್ನಡೆಯಲು ತಜ್ಞರ ಮಾರ್ಗದರ್ಶನ ದೊರೆಯಲಿದೆ. ಇದು ಗ್ರಾಮೀಣ ರೈತರು ಲಾಭದಾಯಕತೆಯತ್ತ ಹೆಜ್ಜೆ ಇಡಲು ಪೂರಕವಾಗಿದೆ."
- ಡಾ. ವಾಸುದೇವ್ ಕೆ.ಆರ್, ನಿರ್ದೇಶಕರು, ಸಿಒಇ - ಎಫ್ಪಿಒ
"ಸರಿಯಾದ ತರಬೇತಿ ಮತ್ತು ಮಾರುಕಟ್ಟೆ ಬೆಂಬಲ ಸಿಕ್ಕರೆ, ಎಫ್ಪಿಒಗಳು ಗ್ರಾಮೀಣ ಭಾರತದ ಪ್ರಬಲ ಆರ್ಥಿಕ ಶಕ್ತಿಗಳಾಗಿ ಹೊರಹೊಮ್ಮಬಲ್ಲವು. ರೈತ ನೇತೃತ್ವದ ಈ ಸಂಸ್ಥೆಗಳು ಎದುರಿಸುತ್ತಿರುವ ಸವಾಲುಗಳನ್ನು ನಿವಾರಿಸಿ, ವ್ಯವಹಾರವನ್ನು ವಿಸ್ತರಿಸುವುದು ಹಾಗೂ ಗ್ರಾಮೀಣ ಭಾಗದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದೇ ನಮ್ಮ ಪ್ರಮುಖ ಗುರಿಯಾಗಿದೆ."
- ರವಿಶಂಕರ್, ಇವಿಪಿ, ಎನ್ಇಎನ್ ನೆಟ್ವರ್ಕ್ಸ್
ಎನ್ಇಎನ್ ಕುರಿತು
ನ್ಯಾಷನಲ್ ಎಂಟರ್ಪ್ರೆನ್ಯೂರ್ಶಿಪ್ ನೆಟ್ವರ್ಕ್ (ಎನ್ಇಎನ್) ಭಾರತದಲ್ಲಿ ಉದ್ಯಮಶೀಲತೆ ಮತ್ತು ಆರ್ಥಿಕ ಸಶಕ್ತೀಕರಣಕ್ಕಾಗಿ ಶ್ರಮಿಸುತ್ತಿರುವ ಪ್ರಮುಖ ಲಾಭರಹಿತ ಸಂಸ್ಥೆಯಾಗಿದೆ. 'ವಾಧ್ವಾನಿ ಆಪರೇಟಿಂಗ್ ಫೌಂಡೇಶನ್'ನ ಆರ್ಥಿಕ ನೆರವಿನೊಂದಿಗೆ ಬೆಂಗಳೂರಿನಿಂದ ಕಾರ್ಯಾಚರಿಸುತ್ತಿರುವ ಈ ಸಂಸ್ಥೆಯು, ಸರ್ಕಾರಿ ಇಲಾಖೆಗಳು ಹಾಗೂ ಹೂಡಿಕೆದಾರರ ಜೊತೆಗೂಡಿ ಉದ್ಯಮಗಳನ್ನು ಆರ್ಥಿಕವಾಗಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.






