ನಟ ಗಣೇಶ್, 'ನಿದ್ರಾದೇವಿ ನೆಕ್ಸ್ಟ್ ಡೋರ್' ಚಿತ್ರದಲ್ಲಿ ಸೋನು ನಿಗಮ್ ಹಾಡಿರುವ ಹಾಡನ್ನು ತೆಗೆದುಹಾಕುವಂತೆ ಸೂಚಿಸಿದ್ದಾರೆ. ಕನ್ನಡ ಭಾಷೆಯ ಬಗ್ಗೆ ಸೋನು ನಿಗಮ್ ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕೆ ಗಣೇಶ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಭಾಷೆಯೇ ಮೊದಲು ಎಂದು ಗಣೇಶ್ ಹೇಳಿದ್ದಾರೆ.
ಬೆಂಗಳೂರು: ಗೋಲ್ಡನ್ ಸ್ಟಾರ್‌ಗಣೇಶ್ ತಮ್ಮ ನಟನೆಯ 'ನಿದ್ರಾದೇವಿ ನೆಕ್ಸ್ ಡೋರ್' ಚಿತ್ರದಿಂದ ಕನ್ನಡದ ಬಗ್ಗೆ ಆಕ್ಷೇಪಾರ್ಹ ಮಾತು ಆಡಿದ್ದ ಗಾಯಕ ಸೋನು ನಿಗಂ ಹಾಡಿದ ಗೀತೆ ತೆಗೆಯಲು ಸೂಚಿಸಿದ್ದಾರೆ. 'ನಮ್ಮಿಂದಲ್ಲ ಭಾಷೆ, ಭಾಷೆ ಉಳಿದರಷ್ಟೇ ನಾವು' ಎಂದಿದ್ದಾರೆ.
‘ನಿದ್ರಾದೇವಿ ನೆಕ್ಸ್ಟ್ ಡೋರ್’ ಚಿತ್ರದ ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ಗಣೇಶ್ ಈ ವಿಷಯವನ್ನು ತಮ್ಮದೇ ಶೈಲಿಯಲ್ಲಿ, ನಗುಮೊಗದೊಂದಿಗೆ ಆದರೆ ಗಂಭೀರವಾಗಿ ವ್ಯಕ್ತಪಡಿಸಿದ್ದಾರೆ. ಸೋನು ನಿಗಮ್‌ರ ಹೆಸರನ್ನು ನೇರವಾಗಿ ಉಲ್ಲೇಖಿಸದಿದ್ದರೂ, ಚಿತ್ರದ ನಿರ್ಮಾಪಕರಿಗೆ ತಮ್ಮ ಆಕ್ಷೇಪವನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ. ಅದೇನೆಂದರೆ 'ಭಾಷೆಯಿಂದಲೇ ನಾವು. ನಾವು ಇದ್ದರೂ ಇಲ್ಲದಿದ್ದರೂ, ಭಾಷೆ ಇರುತ್ತದೆ. ಕನ್ನಡ ಭಾಷೆಗೆ ದೊಡ್ಡ ಇತಿಹಾಸವಿದೆ. ಅದನ್ನು ಸುಮ್ಮನೆ ಏನೇನೋ ಎಂದರೆ ಒಪ್ಪುವಂತದ್ದಲ್ಲ. ಭಾಷೆ ಇಲ್ಲದಿದ್ದರೆ ನಾವೇನೂ ಅಲ್ಲ' ಎಂದು ಗಣೇಶ್ ಸೋನು ನಿಗಮ್ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದಾರೆ.'
ಹಾಡನ್ನು ತೆಗೆದುಹಾಕಬೇಕಿತ್ತು, ಯೋಚನೆ ಮಾಡುತ್ತೇನೆ ಎನ್ನುವುದು ಬೇಡ. ಭಾಷೆಯೇ ನಮಗೆ ಮೊದಲು. ನಮ್ಮ ಕನ್ನಡ ಭಾಷೆಯಿಂದಲೇ ನಾವು ಹೀರೋಗಳು ಆಗಿರುವುದು ಎಂದಿರುವ ಗಣೇಶ್ ಆದರೆ ಚಿತ್ರದ ಹಾಡಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, 'ಹಾಡು ತುಂಬಾ ಚೆನ್ನಾಗಿದೆ, ಆದರೆ ಕನ್ನಡ ಭಾಷೆಯ ಗೌರವ ಮೊದಲು, ಎಂದು ಹೇಳಿದ್ದಾರೆ.
ಗಣೇಶ್‌ರ ಈ ನಿಲುವು ಕನ್ನಡ ಭಾಷೆಯ ಬಗ್ಗೆ ಅವರ ಗೌರವ ಮತ್ತು ಅಭಿಮಾನಕ್ಕೆ ಸಾಕ್ಷಿಯಾಗಿದೆ. ‘ನಿದ್ರಾದೇವಿ ನೆಕ್ಸ್ಟ್ ಡೋರ್’ ಚಿತ್ರದ ಹಾಡಿನ ಬಗ್ಗೆ ಗಣೇಶ್ ಅವರ ಕನ್ನಡ ಪ್ರೇಮದ ಮಾತುಗಳು ಕನ್ನಡಿಗರನ್ನು ಇನ್ನಷ್ಟು ಎಚ್ಚರಗೊಳಿಸಿದೆ
