ಶಿಕ್ಷಕರು ಮತ್ತು ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆಯಾದ ಹಳೇ ಪಿಂಚಣಿ ಪದ್ಧತಿ (ಒಪಿಎಸ್) ಜಾರಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಘೋಷಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರು (ಸೆ.6): ಶಿಕ್ಷಕರು ಹಾಗೂ ಸರ್ಕಾರಿ ನೌಕರರ ಬಹಳ ದಿನಗಳ ಬೇಡಿಕೆಯಾದ ಹಳೇ ಪಿಂಚಣಿ ಪದ್ಧತಿಯನ್ನು (ಒಪಿಎಸ್) ಜಾರಿಗೊಳಿಸಲು ರಾಜ್ಯ ಸರ್ಕಾರ ಬದ್ಧವಾಗಿದ್ದು ಶೀಘ್ರ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಘೋಷಣೆ ಮಾಡಿದರು.

ಶಿಕ್ಷಕರ ದಿನಾಚರಣೆ ವೇಳೆ ಮಾತನಾಡಿದ ಅವರು, ‘ಹೊಸ ಪಿಂಚಣಿ ಪದ್ಧತಿ (ಎನ್‌ಪಿಎಸ್) ರದ್ದುಗೊಳಿಸಿ ಹಳೇ ಪಿಂಚಣಿ ಪದ್ದತಿ ಜಾರಿ ಕುರಿತು ನಾನು ಮತ್ತು ಮುಖ್ಯಮಂತ್ರಿಗಳು ಈಗಾಗಲೇ ಚರ್ಚಿಸಿದ್ದು, ಸದ್ಯದಲ್ಲೇ ಆದೇಶ ಹೊರ ಬೀಳಲಿದೆ. ಇದು ಸರ್ಕಾರದ ಬಹಳ ದೊಡ್ಡ ತೀರ್ಮಾನವಾಗಲಿದೆ’ ಎಂದರು.

‘ಈ ಅಂಶ ನಮ್ಮ ಪ್ರಣಾಳಿಕೆಯಲ್ಲಿತ್ತು. 3 ವರ್ಷ ವಿಳಂಬ ಆದರೂ ಅದು ಶೀಘ್ರ ಜಾರಿಯಾಗಲಿದೆ. ಹಳೇ ಪಿಂಚಣಿ ಪದ್ಧತಿ ಜಾರಿಯಿಂದ ಶಿಕ್ಷಕರು, ಸರ್ಕಾರಿ ನೌಕರರು ಸೇರಿ ಬಹಳಷ್ಟು ಮಂದಿಗೆ ಅನುಕೂಲವಾಗಲಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ ಆರ್ಥಿಕವಾಗಿ ದೊಡ್ಡ ಹೊರೆಯೂ ಆಗಲಿದೆ’ ಎಂದು ಹೇಳಿದರು.