ತೀವ್ರ ಬರದಿಂದ ಕಂಗೆಟ್ಟಿರುವ ರಾಜ್ಯದ 101 ತಾಲೂಕುಗಳ ರೈತರ ನೆರವಿಗೆ ಸರ್ಕಾರ ಧಾವಿಸಿದೆ. ಕೃಷಿ ಸಾಲಗಳ ಬಲವಂತದ ವಸೂಲಾತಿಗೆ ಬ್ರೇಕ್ ಹಾಕಲಾಗಿದ್ದು, ಮರುಪಾವತಿಗೆ 60 ತಿಂಗಳವರೆಗೆ ಕಾಲಾವಕಾಶ ನೀಡಲಾಗಿದೆ.
ಬೆಂಗಳೂರು (ಸೆ.17): ತೀವ್ರ ಬರದಿಂದ ಕಂಗೆಟ್ಟಿರುವ ರಾಜ್ಯದ ರೈತರ ನೆರವಿಗೆ ರಾಜ್ಯ ಸರ್ಕಾರ ಧಾವಿಸಿದೆ. ರಾಜ್ಯದ ಬರಪೀಡಿತ ತಾಲೂಕುಗಳ ರೈತರಿಂದ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲಗಳ ಬಲವಂತ ವಸೂಲಾತಿಗೆ ಬ್ರೇಕ್ ಹಾಕಲಾಗಿದೆ. ಸಾಲ ಮರುಪಾವತಿಸಲು ರೈತರಿಗೆ 60 ತಿಂಗಳವರೆಗೆ ಅವಧಿ ನೀಡಲಾಗಿದೆ.
ಬರಪೀಡಿತ 101 ತಾಲೂಕಿನ ರೈತರಿಗೆ ಅನ್ವಯ
ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ನೇತೃತ್ವದಲ್ಲಿ ನಡೆದ ಬ್ಯಾಂಕರ್‌ಗಳ ರಾಜ್ಯ ಮಟ್ಟದ ಸಮಿತಿ (ಎಸ್‌ಎಲ್‌ಬಿಸಿ) ಸಭೆಯಲ್ಲಿ ಬರ ಪೀಡಿತ ತಾಲೂಕುಗಳ ರೈತರ ನೆರವಿಗಾಗಿ ಕೆಲ ಪರಿಹಾರ ಯೋಜನೆಗಳನ್ನು ಘೋಷಿಸಲಾಯಿತು.
ರಾಜ್ಯದ 24 ಜಿಲ್ಲೆಗಳ ಒಟ್ಟು 101 ತಾಲೂಕುಗಳು ಬರಪೀಡಿತ ಎಂದು ಸರ್ಕಾರ ಘೋಷಿಸಿದ್ದು, ಅದರಲ್ಲಿ 89 ತಾಲೂಕುಗಳು ತೀವ್ರ ಬರ ಪೀಡಿತ ಹಾಗೂ 12 ತಾಲೂಕುಗಳನ್ನು ಸಾಧಾರಣ ಬರಪೀಡಿತ ಎಂದು ವರ್ಗೀಕರಿಸಲಾಗಿದೆ.
ಸಾಲ ಮರುಪಾವತಿ ಅವಧಿ 60 ತಿಂಗಳು ವಿಸ್ತರಣೆ
ಸಾಮಾನ್ಯವಾಗಿ ಕಿಸಾನ್ ಕ್ರೆಡಿಟ್ ಕಾರ್ಡ್, ಕೃಷಿ ಸಾಲಗಳು, ಹೈನುಗಾರಿಕೆ, ರೇಷ್ಮೆ ಹಾಗೂ ಮೀನುಗಾರಿಕೆ ಸೇರಿ ಇತರ ಕೃಷಿ ಸಂಬಂಧಿತ ಸಾಲಗಳಿಗೆ 12 ತಿಂಗಳ ತಾತ್ಕಾಲಿಕ ತಡೆ ನೀಡಲಾಗುತ್ತದೆ. ಸಾಧಾರಣ ಬರ ಪೀಡಿತ ತಾಲೂಕುಗಳಲ್ಲಿ ಸಾಲ ಮರುಪಾವತಿ ಅವಧಿಯನ್ನು 36 ತಿಂಗಳಿಗೆ ಹಾಗೂ ತೀವ್ರ ಬರಪೀಡಿತ ತಾಲೂಕುಗಳಲ್ಲಿ 60 ತಿಂಗಳಿಗೆ ವಿಸ್ತರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ವಿವರ ಪುಟ 7


