ದಕ್ಷಿಣ ಪಶ್ಚಿಮ ರೈಲ್ವೆಯು ಹಳಿಗಳ ನಿರ್ವಹಣೆ ಕಾಮಗಾರಿ ಕೈಗೊಂಡಿರುವುದರಿಂದ ಸೆ. 22 ರಿಂದ ನವೆಂಬರ್ 05 ರವರೆಗೆ ಬೆಂಗಳೂರು-ಕುಪ್ಪಂ ಮಾರ್ಗದ ರೈಲು ಸಂಚಾರದಲ್ಲಿ ಬದಲಾವಣೆಯಾಗಿದೆ. ಕೆಲವು ರೈಲುಗಳನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದ್ದು, ಇನ್ನು ಕೆಲವು ರೈಲುಗಳ ಸಂಚಾರವನ್ನು ಭಾಗಶಃ ರದ್ದುಗೊಳಿಸಲಾಗಿದೆ.
ಬಂಗಾರಪೇಟೆ (ಸೆ.23): ದಕ್ಷಿಣ ಪಶ್ಚಿಮ ರೈಲ್ವೆಯ ಬೆಂಗಳೂರು ವಿಭಾಗದಲ್ಲಿ ರೈಲು ಹಳಿಗಳ ನಿರ್ವಹಣೆ ಹಾಗೂ ಸುರಕ್ಷತಾ ತಪಾಸಣೆ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಕುಪ್ಪಂ ಮಾರ್ಗದ ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.
ರೈಲು ಸಂಚಾರದಲ್ಲಿ ಮಹತ್ವದ ಬದಲಾವಣೆ!
ಸೆ. 22 ರಿಂದ ನವೆಂಬರ್ 05 ರವರೆಗೆ ವಿವಿಧ ದಿನಗಳಲ್ಲಿ ಕೆಲವು ರೈಲುಗಳನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದ್ದು, ಇನ್ನೂ ಕೆಲವು ರೈಲುಗಳ ಸಂಚಾರವನ್ನು ಭಾಗಶಃ ರದ್ದುಪಡಿಸಲಾಗಿದೆ. ರೈಲ್ವೆ ಇಲಾಖೆಯ ಸೆಪ್ಟೆಂಬರ್ ೧೭ರ ಆದೇಶದ ಪ್ರಕಾರ, ವೈಟ್‌ಫೀಲ್ಡ್–ದೇವನಗುಂದಿ, ದೇವನಗುಂದಿ–ಮಾಲೂರು ಹಾಗೂ ದೇವನಗುಂದಿ–ವೈಟ್‌ಫೀಲ್ಡ್ ನಡುವಿನ ರೈಲು ಹಳಿಗಳಲ್ಲಿ ನಿರ್ದಿಷ್ಟ ಅವಧಿಗೆ ಕಾಮಗಾರಿ ನಡೆಸಲು ರೈಲು ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ.
ಯಾವ ರೈಲು 35 ದಿನಗಳ ಸಂಪೂರ್ಣ ರದ್ದು?
ರೈಲು ಸಂಖ್ಯೆ 66544 ಬಾಣಸವಾಡಿ–ಕುಪ್ಪಂ ಮೆಮು ಹಾಗೂ 66543 ಕುಪ್ಪಂ–ಬೆಂಗಳೂರು ಮೆಮು ರೈಲುಗಳನ್ನು ಸೂಚಿಸಿರುವ ದಿನಗಳಲ್ಲಿ ಒಟ್ಟು 35 ದಿನಗಳ ಕಾಲ ಸಂಪೂರ್ಣವಾಗಿ ರದ್ದುಪಡಿಸಲಾಗಿದೆ.
ಈ ಕಾರಣದಿಂದ ಬೆಂಗಳೂರು, ಬಾಣಸವಾಡಿ, ಕೃಷ್ಣರಾಜಪುರ, ವೈಟ್‌ಫೀಲ್ಡ್, ಮಾಲೂರು, ಬಂಗಾರಪೇಟೆ ಮತ್ತು ಕುಪ್ಪಂ ಭಾಗದ ಪ್ರಯಾಣಿಕರಿಗೆ ತೊಂದರೆಯಾಗುವ ಸಾಧ್ಯತೆ ಇದೆ. ರೈಲು ಸಂಖ್ಯೆ 66511 ಬೆಂಗಳೂರು–ಮಾರಿಕುಪ್ಪಂ ಮೆಮು ರೈಲನ್ನು 23 ದಿನಗಳ ಕಾಲ ಬಂಗಾರಪೇಟೆಯಲ್ಲೇ ಅಲ್ಪಾವಧಿಗೆ ನಿಲ್ಲಿಸಲಾಗುತ್ತದೆ.
ರೈಲು ಸಂಖ್ಯೆ 66514 ಮಾರಿಕುಪ್ಪಂ ಮತ್ತು ಕೃಷ್ಣರಾಜಪುರಂ ಮೆಮು ರೈಲು 23 ದಿನಗಳ ಕಾಲ ಬಂಗಾರಪೇಟೆಯಿಂದಲೇ ತನ್ನ ಸಂಚಾರ ಆರಂಭಿಸಲಿದೆ. ಅಕ್ಟೋಬರ್ 24ರಿಂದ ನವೆಂಬರ್ 5ರವರೆಗೆ 12 ದಿನಗಳ ಅವಧಿಯಲ್ಲಿ ರೈಲು ಸಂಖ್ಯೆ 66514 ಅನ್ನು ದೇವನಗುಂದಿಯಲ್ಲೇ ಅಲ್ಪಾವಧಿಗೆ ನಿಲ್ಲಿಸಲಾಗುತ್ತದೆ.
ಇದೇ ಅವಧಿಯಲ್ಲಿ ರೈಲು ಸಂಖ್ಯೆ 66515 ಕೃಷ್ಣರಾಜಪುರಂ– ಮತ್ತು ಮಾರಿಕುಪ್ಪಂ ಮೆಮು ರೈಲು ದೇವನಗುಂದಿಯಿಂದಲೇ ತನ್ನ ಸಂಚಾರ ಆರಂಭಿಸಲಿದೆ. ರೈಲು ಸಂಖ್ಯೆ 66511 ಬೆಂಗಳೂರು–ಮಾರಿಕುಪ್ಪಂ ಮೆಮು ರೈಲನ್ನು ಸೂಚಿಸಿರುವ 23 ದಿನಗಳಲ್ಲಿ ಸುಮಾರು 30 ನಿಮಿಷಗಳ ಕಾಲ ತಡವಾಗಿ ಓಡಿಸಲಾಗುತ್ತದೆ.
ವೈಟ್‌ಫೀಲ್ಡ್–ದೇವನಗುಂದಿ ಮಾರ್ಗದಲ್ಲಿ ಮಧ್ಯಾಹ್ನ 12.05ರಿಂದ 1.35ರವರೆಗೆ, ದೇವನಗುಂದಿ–ಮಾಲೂರು ಮಾರ್ಗದಲ್ಲಿ ಮಧ್ಯಾಹ್ನ 12.15ರಿಂದ 1.45ರವರೆಗೆ ಹಾಗೂ ದೇವನಗುಂದಿ–ವೈಟ್‌ಫೀಲ್ಡ್ ಮಾರ್ಗದಲ್ಲಿ ಸಂಜೆ 3.40ರಿಂದ 5.10ರವರೆಗೆ ರೈಲು ಹಳಿಗಳ ಕಾಮಗಾರಿ ನಡೆಯಲಿದೆ.
ಪ್ರಯಾಣಿಕರ ಗಮನಕ್ಕೆ
ಪ್ರಯಾಣಿಕರು ತಮ್ಮ ಪ್ರಯಾಣದ ದಿನದ ರೈಲು ಸಂಚಾರದ ಸ್ಥಿತಿಯನ್ನು ಮುಂಚಿತವಾಗಿ ಪರಿಶೀಲಿಸಿಕೊಂಡು, ಅಗತ್ಯವಿದ್ದಲ್ಲಿ ಪರ್ಯಾಯ ಸಾರಿಗೆ ವ್ಯವಸ್ಥೆ ಮಾಡಿಕೊಳ್ಳುವಂತೆ ರೈಲ್ವೆ ಇಲಾಖೆ ಸೂಚಿಸಿದೆ.


