ಬೆಂಗಳೂರು (ಜೂ.06):  ಕೊರೋನಾಘಾತದ ಜತೆಗೆ ಕಾಡುತ್ತಿರುವ ಬ್ಲ್ಯಾಕ್‌ ಫಂಗಸ್‌ ರೋಗಕ್ಕೆ ಉಚಿತ ಚಿಕಿತ್ಸೆ ನೀಡವ ಭರವಸೆಯೇನೋ ಸರ್ಕಾರ ನೀಡಿದೆ. ಆದರೆ, ಈ ಕಪ್ಪು ಶಿಲೀಧ್ರವು ರೋಗಿಯ ಮೇಲೆ ಶಾಶ್ವತ ಪರಿಣಾಮ ಬೀರುವ ಕಾರಣ ಅಂಗಾಂಗ ಜೋಡಣೆಗೂ ನೆರವು ನೀಡುವ ದಿಸೆಯಲ್ಲಿ ಸರ್ಕಾರ ಚಿಂತಿಸಬೇಕು ಎಂಬ ಕೂಗು ಎದ್ದಿದೆ.

ಕಪ್ಪು ಶಿಲೀಂಧ್ರ ರೋಗಕ್ಕೆ ಸರ್ಕಾರ ಶಸ್ತ್ರಚಿಕಿತ್ಸೆ ಸಹಿತ ಉಚಿತ ಚಿಕಿತ್ಸೆ ನೀಡುತ್ತಿದೆ. ಆದರೆ ಇದು ಮೊದಲ ಹಂತ. ಈ ರೋಗಕ್ಕೆ ತುತ್ತಾದವರು ಕಣ್ಣು, ಮೂಗು, ದವಡೆ ಮುಂತಾದ ದೇಹದ ಅತ್ಯಮೂಲ್ಯ ಅಂಗಾಂಗಗಳನ್ನು ಕಳೆದುಕೊಳ್ಳುವುದು ಸಾಮಾನ್ಯ. ಇಂತಹ ರೋಗಿಗಳಿಗೆ ಕೃತಕ ಕಣ್ಣು, ಮೂಗು, ದವಡೆ ಜೋಡಿಸುವವರೆಗೂ ಸರ್ಕಾರ ನೆರವಿಗೆ ನಿಲ್ಲಬೇಕು. ಏಕೆಂದರೆ ಕೃತಕ ಅಂಗಾಂಗ ಜೋಡಣೆ ದುಬಾರಿಯಾದದ್ದು. ಬ್ಲ್ಯಾಕ್‌ ಫಂಗಸ್‌ನಿಂದ ಪ್ರಾಣ ಉಳಿಸಿಕೊಂಡು ತೀವ್ರ ಸ್ವರೂಪದ ತೊಂದರೆಗೆ ಒಳಗಾದವರ ಪುನಶ್ಚೇತನಕ್ಕೆ ಸದ್ಯ ಸರ್ಕಾರದ ಬಳಿ ಯಾವುದೇ ಯೋಜನೆಯಿಲ್ಲ. ಆದರೆ ಭವಿಷ್ಯದ ದೃಷ್ಟಿಯಿಂದ ಇದು ಕಾರ್ಯಗತವಾಗಬೇಕು ಎಂದು ಆರೋಗ್ಯ ತಜ್ಞರು ಅಭಿಪ್ರಾಯ ಪಡುತ್ತಾರೆ.

ಕೋವಿಡ್‌ನಿಂದ ಚೇತರಿಸಿಕೊಂಡವರಲ್ಲಿ ಹೆಚ್ಚುತ್ತಿದೆ ಸ್ಟ್ರೋಕ್, ಹಾರ್ಟ್‌ ಆ್ಯಟಾಕ್!

ಶಸ್ತ್ರ ಚಿಕಿತ್ಸೆ ಮಾಡಿದ ನಂತರ ನಮ್ಮ ಕೆಲಸ ಮುಗಿಯಿತು ಎಂದು ಸರ್ಕಾರ ಸುಮ್ಮನಾಗುವಂತಿಲ್ಲ. ಅಂಗಾಂಶ ಜೋಡಣೆಗೂ ಆದ್ಯತೆ ನೀಡಬೇಕಿದೆ. ಮುಖದ ಭಾಗದಲ್ಲಿ ದೊಡ್ಡದಾಗಿ ಅಂಗಾಂಶ ದೋಷ ಉಂಟಾದರೆ ತೀವ್ರವಾದ ವಿರೂಪಕ್ಕೆ ಕಾರಣವಾಗುತ್ತದೆ. ಇದರಿಂದಾಗಿ ರೋಗಿಯು ಸದಾ ಪ್ರತ್ಯೇಕವಾಗಿ ಇರಲು ಬಯಸಬಹುದು. ಮುಂದೆ ಇದು ಖಿನ್ನತೆಗೂ ಕಾರಣವಾಗಬಹುದು.

ಕಪ್ಪು ಶಿಲೀಂಧ್ರ ರೋಗ ಮಾರಣಾಂತಿಕ. ಹಾಗೆಯೇ ಶಸ್ತ್ರ ಚಿಕಿತ್ಸೆ ಸೂಕ್ತ ರೀತಿಯಲ್ಲಿ ನಡೆಯದೇ ಹೋದರೆ ಮರುಕಳಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ವೈದ್ಯರು ಸ್ಕಾ್ಯನ್‌ ಮಾಡಿದಾಗ ಅಥವಾ ಶಸ್ತ್ರ ಚಿಕಿತ್ಸೆ ನಡೆಸುವಾಗ ಸ್ವಲ್ಪ ಸಂಶಯ ಬಂದರೂ ಆ ಭಾಗವನ್ನು ತೆಗೆಯುತ್ತಾರೆ. ವೈದ್ಯರು ರೋಗಿಯ ಪ್ರಾಣವನ್ನು ಉಳಿಸಲು ಆದ್ಯತೆ ನೀಡುತ್ತಾರೆ. ಆದ್ದರಿಂದ ಸೋಂಕಿನ ಭಾಗಕ್ಕಿಂತ ತುಸು ಹೆಚ್ಚೇ ರೋಗಿ ಕಳೆದುಕೊಳ್ಳಬೇಕಾಗುತ್ತದೆ ಎಂದು ವಿಕ್ಟೋರಿಯಾ ಡೆಂಟಲ್‌ ಕಾಲೇಜಿನ ಅಸಿಸ್ಟೆಂಟ್‌ ಪ್ರೊಫೆಸರ್‌ ಅನೂಪ್‌ ನಾಯರ್‌ ಹೇಳುತ್ತಾರೆ.

ಶಸ್ತ್ರ ಚಿಕಿತ್ಸೆ ನಡೆದು ಗಾಯಗಳು ಮಾಯಲು 15ರಿಂದ 20 ದಿನ ಬೇಕಾಗುತ್ತದೆ. ಆ ಬಳಿಕ ತಿಂಗಳಲ್ಲಿ ರೋಗಿಗಳಿಗೆ ನೀಡುವ ಇತರ ಚಿಕಿತ್ಸೆ, ಔಷಧಿಗಳ ಕೋರ್ಸ್‌ ಪೂರ್ಣವಾಗುತ್ತದೆ. ಆದರೆ ದವಡೆಯಲ್ಲಿ ಆದ ರಂಧ್ರಗಳು ಹಾಗೆಯೇ ಉಳಿದುಕೊಂಡು ಊಟ ಮಾಡಲು, ನೀರು ಕುಡಿಯಲು ಪರದಾಡಬೇಕಾಗುತ್ತದೆ. ಕಣ್ಣು ಕಳಕೊಂಡರೆ ಆ ಜಾಗದಲ್ಲಿ ದೊಡ್ಡ ರಂಧ್ರ ಉಳಿದುಬಿಡುತ್ತದೆ. ಇಂತಹ ಸ್ಥಿತಿಯಲ್ಲಿ ಸಮಾಜದಲ್ಲಿ ಬೆರೆಯಲು ಸಾಧ್ಯವಿಲ್ಲ. ಆದ್ದರಿಂದ ಕಪ್ಪು ಶಿಲೀಂಧ್ರ ಕಾಯಿಲೆಯಿಂದ ಹಾನಿಗೊಂಡ ಭಾಗಗಳ ಪುನಶ್ಚೇತನಕ್ಕೆ ಕ್ರಮ ಕ್ರಮಗೊಳ್ಳಬೇಕಾಗುತ್ತದೆ ಎಂದು ಡಾ.ಅನೂಪ್‌ ನಾಯರ್‌ ಅಭಿಪ್ರಾಯ ಪಡುತ್ತಾರೆ.

ಜಿಂಕ್‌, ಕಬ್ಬಿಣ, ಹಬೆ  ಅತಿಯಾದರೆ ಸಮಸ್ಯೆ

ಜಿಂಕ್‌ (ಸತು) ಮತ್ತು ಕಬ್ಬಿಣದ ಅಂಶವಿರುವ ಮಾತ್ರೆಗಳ ಅತಿ ಸೇವನೆ ಕೂಡ ಕಪ್ಪು ಶಿಲೀಂಧ್ರ ರೋಗಕ್ಕೆ ಕಾರಣವಾಗಿರಬಹುದು. ನಾವು ಸಹಜವಾಗಿ ತಿನ್ನುವ ತರಕಾರಿ, ಸೊಪ್ಪುಗಳಲ್ಲಿರುವ ಸತು ಮತ್ತು ಕಬ್ಬಿಣದ ಅಂಶಗಳು ನಮ್ಮ ಆರೋಗ್ಯಕ್ಕೆ ಸಾಕಾಗುತ್ತದೆ. ಆದರೆ ಕೃತಕವಾಗಿ ಸೇವಿಸಿದಾಗ ಈ ಅಂಶಗಳು ದೇಹದಲ್ಲಿ ಹೆಚ್ಚಾಗಿ ಕಪ್ಪು ಶಿಲಿಂಧ್ರ ಬರುವ ಸಾಧ್ಯತೆಯಿದೆ. ಅದೇ ರೀತಿ ಅತಿ ಹಬೆ ಸೇವನೆಯಿಂದ ಮೂಗಿನಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳೂ ಸಾಯುತ್ತವೆ. ಇದೂ ಕೂಡ ಕಾಯಿಲೆಗೆ ಕಾರಣವಾಗಬಹುದು ಎಂದು ವಿಕ್ಟೋರಿಯಾ ಡೆಂಟಲ್‌ ಕಾಲೇಜಿನ ಅಸಿಸ್ಟೆಂಟ್‌ ಪ್ರೊಫೆಸರ್‌ ಡಾ. ಅನೂಪ್‌ ನಾಯರ್‌ ಅಭಿಪ್ರಯಿಸಿದ್ದಾರೆ.

ಕೃತಕ ಕಣ್ಣು ಜೋಡಣೆ, ದವಡೆಯ ಮರು ನಿರ್ಮಾಣ ಮುಂತಾದವು ಕಪ್ಪು ಶಿಲೀಂಧ್ರ ರೋಗಿಗೆ ಅನಿವಾರ್ಯ. ನಮ್ಮಲ್ಲಿ 2-3 ಕೃತಕ ಅಂಗ ಜೋಡಣೆಯ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ಮಾಡಿದ್ದೇವೆ. ಆದರೆ ಕೃತಕ ಅಂಗಗಳ ರಚನೆಗೆ ಅಗತ್ಯವಾದ ವಸ್ತುಗಳ ಕೊರತೆಯಿದೆ. ಸಿಲಿಕಾನ್‌, ಕೃತಕ ಆಯಸ್ಕಾಂತ ಮುಂತಾದ ವಸ್ತುಗಳು ಸಿಗುತ್ತಿಲ್ಲ. ಈ ವಸ್ತುಗಳನ್ನು ಬಳಸಿಕೊಂಡು ನಾವು ತಾತ್ಕಾಲಿಕ ಕೃತಕ ಅಂಗಾಂಗ ರೂಪಿಸಬಹುದು. ಅಂಗಾಂಗ ಕಸಿಯ ಮೂಲಕ ಶಾಶ್ವತ ಪರಿಹಾರ ರೂಪಿಸಬಹುದಾದರೂ ಅದು ತೀರಾ ದುಬಾರಿಯಾಗುತ್ತದೆ ಎನ್ನುತ್ತಾರೆ ಅನೂಪ್‌ ನಾಯರ್‌.

ಕಪ್ಪು ಶಿಲೀಂಧ್ರ ರೋಗಿಗಳ ಪುನಶ್ಚೇತನ ಕಾರ್ಯಕ್ರಮದ ಬಗ್ಗೆ ಸರ್ಕಾರ ಸದ್ಯ ಯೋಚನೆ ಮಾಡಿಲ್ಲ. ರೋಗಿಗಳು ಸಂಪೂರ್ಣವಾಗಿ ಚೇತರಿಸಿಕೊಳ್ಳುವವರೆಗೆ ಸರ್ಕಾರದಿಂದ ಅವರ ಆರೋಗ್ಯದ ಮೇಲೆ ನಿಗಾ ಇಡುತ್ತಿದ್ದೇವೆ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸುತ್ತಾರೆ.

ಜಿಂಕ್‌, ಕಬ್ಬಿಣ, ಹಬೆ ಅತಿಯಾದರೆ ಸಮಸ್ಯೆ

ಜಿಂಕ್‌ (ಸತು) ಮತ್ತು ಕಬ್ಬಿಣದ ಅಂಶವಿರುವ ಮಾತ್ರೆಗಳ ಅತಿ ಸೇವನೆ ಕೂಡ ಕಪ್ಪು ಶಿಲೀಂಧ್ರ ರೋಗಕ್ಕೆ ಕಾರಣವಾಗಿರಬಹುದು. ನಾವು ಸಹಜವಾಗಿ ತಿನ್ನುವ ತರಕಾರಿ, ಸೊಪ್ಪುಗಳಲ್ಲಿರುವ ಸತು ಮತ್ತು ಕಬ್ಬಿಣದ ಅಂಶಗಳು ನಮ್ಮ ಆರೋಗ್ಯಕ್ಕೆ ಸಾಕಾಗುತ್ತದೆ. ಆದರೆ ಕೃತಕವಾಗಿ ಸೇವಿಸಿದಾಗ ಈ ಅಂಶಗಳು ದೇಹದಲ್ಲಿ ಹೆಚ್ಚಾಗಿ ಕಪ್ಪು ಶಿಲಿಂಧ್ರ ಬರುವ ಸಾಧ್ಯತೆಯಿದೆ. ಅದೇ ರೀತಿ ಅತಿ ಹಬೆ ಸೇವನೆಯಿಂದ ಮೂಗಿನಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳೂ ಸಾಯುತ್ತವೆ. ಇದೂ ಕೂಡ ಕಾಯಿಲೆಗೆ ಕಾರಣವಾಗಬಹುದು ಎಂದು ಡಾ. ಅನೂಪ್‌ ನಾಯರ್‌ ಅಭಿಪ್ರಾಯ ಪಡುತ್ತಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona