ಕೊರೋನಾ ಪ್ರಕರಣ ಇಳಿಕೆ: ಲಾಕ್‌ಡೌನ್‌ಗೆ ವಿನಾಯ್ತಿ
* ಬೆಳಗ್ಗೆ 6 ರಿಂದ 10ರ ವರೆಗೆ ಅಗತ್ಯ ಸೇವೆಗಳಿಗೆ ಅನುಮತಿ
* ತರಕಾರಿ, ಕಿರಾಣಿ ಅಂಗಡಿ, ಹೋಟೆಲ್ ಹಾಗೂ ಮದ್ಯ ಪಾರ್ಸಲ್ ಸೇವೆಗೆ ಅವಕಾಶ
* ಧಾರವಾಡ ಜಿಲ್ಲೆಯಲ್ಲಿ ಬೆಳೆ ವಿಮೆ ಮತ್ತು ಪರಿಹಾರ ಕಾರ್ಯ ಪೂರ್ಣ
ಹುಬ್ಬಳ್ಳಿ(ಜೂ.06): ಧಾರವಾಡ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿರುವ ಬೆನ್ನಲ್ಲೇ ಸೋಮವಾರದಿಂದ ತರಕಾರಿ, ಹಾಲು, ದಿನಸಿ ಖರೀದಿಗೆ ಬೆಳಗ್ಗೆ 6ರಿಂದ 10ಗಂಟೆ ವರೆಗೆ ಅವಕಾಶ ನೀಡಲಾಗಿದೆ.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಅವರ ನೇತೃತ್ವದಲ್ಲಿ ಶನಿವಾರ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಕೊಳ್ಳಲಾಗಿದೆ.
ಸದ್ಯ ಹಾಲು ತರಕಾರಿ ಸೇವೆಗಳಿಗೆ ಮಾತ್ರ ಬೆಳಗ್ಗೆ 6 ರಿಂದ 8 ಗಂಟೆವರೆಗೆ ಅವಕಾಶವಿದೆ. ಈ ಸಮಯವನ್ನು ಬೆಳಗ್ಗೆ 10ರ ಗಂಟೆವರೆಗೆ ವಿಸ್ತರಿಸಿ ಹಾಲು, ತರಕಾರಿ, ಕಿರಾಣಿ ಅಂಗಡಿ, ಹೋಟೆಲ್ ಹಾಗೂ ಮದ್ಯ ಅಂಗಡಿಗಳಲ್ಲಿ ಪಾರ್ಸಲ್ ಸೇವೆಗೆ ಅವಕಾಶ ನೀಡಲಾಗಿದೆ. ಹೋಟೆಲ್‌ಗಳ ಮೂಲಕ ಹೋಮ್ ಡಿಲೆವರಿಗೆ ರಾತ್ರಿ 8ರ ವರೆಗೆ ಸಮಯಾವಕಾಶ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸಚಿವ ಜಗದೀಶ್ ಶೆಟ್ಟರ್ ಸೂಚಿಸಿದರು.
ಗ್ರಾಮೀಣ ಭಾಗಗಳಲ್ಲಿ ಕೋವಿಡ್ ಲಸಿಕೆ ಕಾರ್ಯ ಚುರುಕುಗೊಳ್ಳಬೇಕು. ಸರ್ಕಾರದ ಪರಿಷ್ಕೃತ ಆದೇಶದಂತೆ ಆದ್ಯತೆ ಮತ್ತು ದುರ್ಬಲ ವರ್ಗದವರಿಗೆ ಕಡ್ಡಾಯವಾಗಿ ಲಸಿಕೆ ನೀಡಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ಧಾರವಾಡ: ತಾಲೂಕಾಡಳಿತ ನಿರ್ಲಕ್ಷ, ಬೀದಿಯಲ್ಲಿ ಹಣ್ಣು, ತರಕಾರಿ ಮಾರುವ ಮಕ್ಕಳು..!
ಜಿಲ್ಲೆಯಲ್ಲಿ ಬೆಳೆ ವಿಮೆ ಮತ್ತು ಪರಿಹಾರ ಕಾರ್ಯ ಪೂರ್ಣಗೊಂಡಿದೆ. ತಾಂತ್ರಿಕ ಕಾರಣಗಳಿಂದ ವಿಮೆ ಲಭಿಸದವರ ವಿವರ ಪಡೆಯಲಾಗಿದೆ. ಆಯಾ ತಾಲೂಕು ಮಟ್ಟದ ಅಧಿಕಾರಿಗಳು ಸಮಸ್ಯೆಯನ್ನು ಬಗೆಹರಿಸಲಿದ್ದಾರೆ. ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಜಿಲ್ಲೆಯ ಹಣ್ಣು ಬೆಳೆಗಾರರಿಗೆ 1,08,64,487 ಹಾಗೂ ಹೂ ಬೆಳೆಗಾರರಿಗೆ . 10,73,529 ಅನುದಾನ ಬಿಡುಗಡೆಯಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ವರ್ತುಲ ರಸ್ತೆ ಕಾಮಗಾರಿ ತ್ವರಿತ ರೀತಿಯಲ್ಲಿ ಕೈಗೊಳ್ಳುವಂತೆ ಸಂಬಂಧ ಪಟ್ಟಎಂಜಿನಿಯರ್‌ಗಳಿಗೆ ಸೂಚಿಸಲಾಯಿತು. ಕಿಮ್ಸ್ ಆವರಣದಲ್ಲಿ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿರುವ ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆ ಕಿಮ್ಸ್‌ಗೆ ಹಸ್ತಾಂತರಿಸುವಂತೆ ನಿರ್ದೇಶನ ನೀಡಲಾಯಿತು.
ಹುಬ್ಬಳ್ಳಿ -ಧಾರವಾಡ ಪೊಲೀಸ್ ಆಯುಕ್ತ ಲಾಭುರಾಮ, ಜಿಪಂ ಸಿಇಒ ಡಾ. ಬಿ. ಸುಶೀಲಾ, ಪಾಲಿಕೆ ಆಯುಕ್ತ ಡಾ. ಸುರೇಶ್ ಇಟ್ನಾಳ್, ವಾಕರಸಾಸಂ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಬಾಜಪೇಯಿ, ಡಿಎಚ್‌ಒ ಯಶವಂತ ಮದೀನಕರ ಸೇರಿ ಇತರರು ಸಭೆಯಲ್ಲಿದ್ದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona