ಬಸವನಗುಡಿ ಕಡಲೆಕಾಯಿ ಪರಿಷೆ; ಈ ವರ್ಷ ಉಚಿತ!
ಬೆಂಗಳೂರಿನ ಬಸವನಗುಡಿ ಕಡಲೆಕಾಯಿ ಪರಿಷೆಯನ್ನು ಈ ವರ್ಷ ರೈತರು ಮತ್ತು ವ್ಯಾಪಾರಿಗಳಿಗೆ ಶುಲ್ಕ ರಹಿತವಾಗಿ ನಡೆಸಲು ತೀರ್ಮಾನಿಸಲಾಗಿದೆ. ನವೆಂಬರ್ 25 ಮತ್ತು 26 ರಂದು ನಡೆಯಲಿರುವ ಈ ಪರಿಷೆಯಲ್ಲಿ ಯಾವುದೇ ಶುಲ್ಕ ವಸೂಲಿ ಮಾಡುವುದಿಲ್ಲ.
ಬೆಂಗಳೂರು (ನ.16): ಉದ್ಯಾನ ನಗರಿ ಬೆಂಗಳೂರಿನ ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಯನ್ನು ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರೈತರಿಗೆ ಹಾಗೂ ಎಲ್ಲ ಮಾದರಿಯ ವ್ಯಾಪಾರಿಗಳಿಗೆ ಶುಲ್ಕರಹಿತವಾಗಿ ನಡೆಸಲು ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಪ್ರತಿ ವರ್ಷದಂತೆ ಕಡೇ ಕಾರ್ತಿಕ ಸೋಮವಾರದಂದು ದಿನಾಂಕ ನ.25 ರಂದು ಬೆಳಗ್ಗೆ 10 ಗಂಟೆಗೆ ಐತಿಹಾಸಿಕ ಬಸವನಗುಡಿಯ ಶ್ರೀ ಬಸವಣ್ಣ ದೇವಾಲಯದಲ್ಲಿ ಕಡಲೆಕಾಯಿ ಪರಿಷೆಗೆ ಚಾಲನೆ ನೀಡಲಾಗುತ್ತದೆ. ಇನ್ನು ನ.25 ಮತ್ತು 26ರಂದು ಕಡಲೆಕಾಯಿ ಪರಿಷೆ ನಡೆಯಲಿದೆ. ಆದರೆ, ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಕಡಲೆಕಾಯಿ ಸೇರಿದಂತೆ ವಿವಿಧ ವಸ್ತುಗಳ ವ್ಯಾಪಾರ ವಹಿವಾಟು ನಡೆಸಲಿ ರೈತರು ಮತ್ತು ವ್ಯಾಪಾರಿಗಳು ಆಗಮಿಸುತ್ತಾರೆ. ಹೀಗಾಗಿ, ನ.23ರಿಂದಲೇ ರಸ್ತೆಗೆ ಬ್ಯಾರಿಕೇಡ್ ಹಾಕಿ, ದೀಪಾಲಂಕಾರ ಮಾಡಿ 5 ದಿನಗಳ ಕಾಲ ಲೈಟಿಂಗ್ ವ್ಯವಸ್ಥೆ ಮಾಡಲು ತೀರ್ಮಾನ ಕೈಗೊಳ್ಳಲಾಯಿತು.
ಇದನ್ನೂ ಓದಿ: ಬೆಂಗಳೂರಿಗೆ 281 ಕಿ.ಮೀ ಸರ್ಕ್ಯೂಲರ್ ರೈಲು ಯೋಜನೆ: ಸಚಿವ ಸೋಮಣ್ಣ ಬಿಗ್ ಅಪ್ಡೇಟ್
ಇನ್ನು ಮುಖ್ಯವಾಗಿ ಎರಡು ದಿನಗಳ ಕಾಲ ಕಡಲೆಕಾಯಿ ಪರಿಷೆಯಲ್ಲಿ ಭಾಗಿಯಾಗುವ ರೈತರಿಂದ ಯಾವುದೇ ಶುಲ್ಕ ವಸೂಲಾತಿ ಮಾಡದಿರಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಕಳೆದ ವರ್ಷ ರೈತರಿಂದ ಮತ್ತು ವ್ಯಾಪಾರಿಗಳಿಂದ ಬಲವಂತವಾಗಿ ಹಣ ವಸೂಲಿ ಮಾಡುತ್ತಿರುವುದಾಗಿ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ವರ್ಷ ಯಾವುದೇ ರೈತರು ಮತ್ತು ವ್ಯಾಪಾರಿಗಳಿಂದ ಶುಲ್ಕ ವಸೂಲಿ ಮಾಡುವಂತಿಲ್ಲ. ಹೀಗಾಗಿ, ಪ್ರತಿ ವರ್ಷದಂತೆ ಶುಲ್ಕ ವಸೂಲಿ ಮಾಡಲು ಟೆಂಡರ್ ಕರೆಯಲಾಗುತ್ತಿದ್ದು, ಈ ಬಾರಿ ಯಾವುದೇ ಟೆಂಡರ್ ಕರೆಯದಂತೆ ತೀರ್ಮಾನಿಸಲಾಗಿದೆ. ಬೆಂಗಳೂರು ರಾಜರ ಆಳ್ವಕೆಯ ಕಾಲದಿಂದಲೂ ಇಲ್ಲಿಗೆ ವ್ಯಾಪಾರಕ್ಕಾಗಿ ಬರುತ್ತಿದ್ದ ರೈತರಿಂದ ಶುಲ್ಕ ವಸೂಲಿ ಮಾಡಲಾಗುತ್ತಿತ್ತು. ಆದರೆ, ಇದೇ ಮೊದಲ ಬಾರಿಗೆ ರೈತರಿಗೆ ಮತ್ತು ವ್ಯಾಪಾರಿಗಳಿಗೆ ಅನುಕೂಲ ಆಗುವಂತೆ ಶುಲ್ಕ ರಹಿತವಾಗಿ ಕಡಲೆಕಾಯಿ ಪರಿಷೆ ನಡೆಸಲು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಇದರಂತೆ ಕಡಲೆಕಾಯಿ ಮಾರಾಟ ಮಾಡುವವರು, ಆಟಿಕೆ ಇಟ್ಟವರಿಂದಲೂ ಶುಲ್ಕ ವಸೂಲಾತಿಯಿಲ್ಲ.