Asianet Suvarna News Asianet Suvarna News

ವರಿಷ್ಠರ ನಡೆಯಿಂದ ರಾಜ್ಯ ಬಿಜೆಪಿ ದುರ್ಬಲವಾಗಿದೆ: ಡೀವಿ ಬೇಸರ

ಪಕ್ಷದ ಅನೇಕ ವಿಚಾರಗಳನ್ನು ನಾವು ಕೋರ್ ಕಮಿಟಿಯಲ್ಲಿ ಪ್ರಸ್ತಾಪ ಮಾಡುತ್ತೇವೆ. ಇದನ್ನು ಕೇಂದ್ರದ ವರಿಷ್ಠರಿಗೆ ತಲುಪಿಸಬೇಕು ಎಂದು ಹೇಳುತ್ತೇವೆ. ಆದರೆ, ರಾಷ್ಟ್ರೀಯ ನಾಯಕರಿಗೆ ನೇರವಾಗಿ ಮಾತನಾಡಲು ಆಗದಂಥ ವಾತಾವರಣವಿದೆ. ಇದು ಎಲ್ಲರಿಗೂ ಗೊತ್ತಿರುವಂಥ ವಿಷಯ.

Face to face interview with former CM D.V. Sadananda Gowda by vijay malagihal rav
Author
First Published Oct 12, 2023, 3:16 PM IST

ಮುಖಾಮುಖಿ
ವಿಜಯ್ ಮಲಗಿಹಾಳ

ರಾಜ್ಯ ವಿಧಾನಸಭೆ ಚುನಾವಣೆ ನಡೆದು ಐದು ತಿಂಗಳು ಕಳೆದಿದೆ. ಭಾರಿ ಬಹುಮತದಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಪಕ್ಷ ತನ್ನ ಪಾಡಿಗೆ ಸರ್ಕಾರ ನಡೆಸಿಕೊಂಡು ದಾಪುಗಾಲು ಹಾಕುತ್ತಿದ್ದರೆ ಪ್ರಮುಖ ಪ್ರತಿಪಕ್ಷ ಬಿಜೆಪಿ ಇನ್ನೂ ಸೋಲಿನಿಂದ ಚೇತರಿಸಿಕೊಳ್ಳದೆ ಕಂಗಾಲಾಗಿ ಕುಳಿತಂತಿದೆ. ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಹೊಸಬರ ನೇಮಕ ಬಾಕಿಯಿದೆ. ಪ್ರತಿಪಕ್ಷದ ನಾಯಕನ ಆಯ್ಕೆಯೇ ಆಗಿಲ್ಲ. ಪಕ್ಷದ ರಾಷ್ಟ್ರೀಯ ನಾಯಕರು ರಾಜ್ಯದತ್ತ ಮುಖ ಮಾಡುವುದನ್ನೇ ಮರೆತಿದ್ದಾರೆ. ಈ ನಡುವೆ ಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್‌ ಜತೆ ಮೈತ್ರಿ ನಿರ್ಧಾರವಾಗಿದೆ. ರಾಜ್ಯ ನಾಯಕರನ್ನು ದೂರವಿಟ್ಟೇ ರಾಷ್ಟ್ರೀಯ ನಾಯಕರು ಜೆಡಿಎಸ್ ಜತೆ ಮೈತ್ರಿಗೆ ವೇದಿಕೆಯನ್ನೂ ಸಜ್ಜು ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿಯೂ ಆಗಿರುವ ಬಿಜೆಪಿಯ ಹಾಲಿ ಸಂಸದ ಡಿ.ವಿ.ಸದಾನಂದಗೌಡ ಅವರು ಕನ್ನಡಪ್ರಭದ 'ಮುಖಾಮುಖಿ' ಸಂದರ್ಶನದಲ್ಲಿ ಅಸಮಾಧಾನ ಹೊರಹಾಕಿದ್ದಾರೆ.

ರಾಜ್ಯ ಬಿಜೆಪಿಯಲ್ಲಿ ಈಗ ಏನಾಗುತ್ತಿದೆ?

-ಚುನಾವಣೆಯಲ್ಲಿ ನಮ್ಮ ನಿರೀಕ್ಷೆ ಮೀರಿ ಹಿನ್ನಡೆ ಉಂಟಾಯಿತು. ಫಲಿತಾಂಶ ನಮಗೆಲ್ಲ ದೊಡ್ಡ ಆಘಾತ ನೀಡಿತು. ಕೇಂದ್ರದ ನಾಯಕರು ಕೂಡ ಇದನ್ನು ನಿರೀಕ್ಷೆ ಮಾಡಿರಲಿಲ್ಲ. ಅದಾದ ಬಳಿಕ ಯಾಕೋ ಏನೋ ನಮ್ಮ ಸಂಘಟನೆ ವೇಗ ಪಡೆದುಕೊಳ್ಳಲು ಆಗುತ್ತಿಲ್ಲ. ಕೇಂದ್ರದ ನಾಯಕರು ಕೂಡ ಪಕ್ಷ ಸಂಘಟನೆ ದೃಷ್ಟಿಯಿಂದ ಯಾವುದೇ ಸಲಹೆ, ಸೂಚನೆ ನೀಡುತ್ತಿಲ್ಲ. ಪಕ್ಷದ ವರಿಷ್ಠರಿಗೆ ರಾಜ್ಯ ಘಟಕದ ಮೇಲೆ ಭಾರಿ ಕೋಪ ಇದ್ದಂತಿದೆ. ಇದು ಸಂಘಟನೆ ಮೇಲೆ ಭಾರಿ ಪರಿಣಾಮ ಬೀರುತ್ತಿದೆ.

ಎಲ್ಲ ಜಾತಿಗಳ ನಡುವೆ ಸಮಾನತೆ ತರಲು ಜಾತಿ ಸಮೀಕ್ಷೆ ಅಗತ್ಯ: ಕಾಂತರಾಜು

ಚುನಾವಣೆ ಮುಗಿದು ಐದು ತಿಂಗಳಾಯಿತು. ಇದುವರೆಗೆ ಹೊಸ ರಾಜ್ಯಾಧ್ಯಕ್ಷರನ್ನಾಗಲಿ ಅಥವಾ ಪ್ರತಿಪಕ್ಷದ ನಾಯಕನನ್ನಾಗಲಿ ಆಯ್ಕೆ ಮಾಡಲು ಸಾಧ್ಯವಾಗಿಲ್ಲವಲ್ಲ?

-ಒಂದು ಅಧ್ಯಕ್ಷರ ಬದಲಾವಣೆ ಆಗಿಲ್ಲ. ಯಾಕೆ ಆಗಿಲ್ಲ ಎಂಬುದಕ್ಕೆ ಏನೂ ಉತ್ತರ ಇಲ್ಲ. ಮತ್ತೊಂದು ಸಂವಿಧಾನಾತ್ಮಕವಾಗಿ ಪ್ರಮುಖವಾದಂಥ ಪ್ರತಿಪಕ್ಷದ ನಾಯಕನ ಆಯ್ಕೆ. ಸಾಮಾನ್ಯವಾಗಿ ನೂತನ ಮುಖ್ಯಮಂತ್ರಿ ನೇತೃತ್ವದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಪ್ರತಿಪಕ್ಷದ ನಾಯಕನ ಆಯ್ಕೆ ಮಾಡಲಾಗುತ್ತದೆ. ಸರ್ಕಾರದ ತಪ್ಪು ನಡೆಯನ್ನು ಎತ್ತಿ ತೋರಿಸಲು ಪ್ರತಿಪಕ್ಷದ ನಾಯಕನ ಸ್ಥಾನ ಮುಖ್ಯವಾದದ್ದು. ಈ ಎರಡೂ ಅಂಶಗಳ ಬಗ್ಗೆ ಮುಖಂಡರಲ್ಲಿ ಹಾಗೂ ಕಾರ್ಯಕರ್ತರಲ್ಲಿ ತುಂಬಾ ನೋವಿದೆ.

ಈ ನೇಮಕಗಳ ವಿಳಂಬ ಪಕ್ಷದ ಸಂಘಟನೆ ಮೇಲೆ ಪ್ರಭಾವ ಬೀರುತ್ತದೆಯೇ?

-ಹೌದು. ಆಡಳಿತಾರೂಢ ಕಾಂಗ್ರೆಸ್ ಪಕ್ಷ ಬಿಜೆಪಿ ಕಾರ್ಯಕರ್ತರ ಮೇಲೆ ಸವಾರಿ ಮಾಡುತ್ತಿದೆ. ಬಿಜೆಪಿಯನ್ನು ಬಗ್ಗುಬಡಿಯಬೇಕು ಎಂಬ ಪ್ರಯತ್ನದಲ್ಲಿದೆ. ಇಂಥ ಸನ್ನಿವೇಶದಲ್ಲಿ ಈ ಎರಡೂ ಹುದ್ದೆಗಳ ನೇಮಕ ತಡೆ ಹಿಡಿದಿರುವುದು ನಮಗೆ ಸಾಕಷ್ಟು ತೊಂದರೆ ಉಂಟು ಮಾಡಿದೆ. ಕಳೆದ ಐದು ತಿಂಗಳಲ್ಲಿ ಪಕ್ಷ ಸಂಘಟನೆಯನ್ನು ವೇಗವಾಗಿ ಮಾಡಲು ಆಗುತ್ತಿಲ್ಲ. ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಒಂದು ರೀತಿಯಲ್ಲಿ ನಿಷ್ಕ್ರಿಯತೆ ತೋರುತ್ತಿದ್ದಾರೆ. ಇದು ಸಂಘಟನೆಗೆ ತುಂಬಾ ಹಿನ್ನೆಡೆ ಉಂಟಾಗಿದೆ. ಅಷ್ಟು ವಿಳಂಬ ಆಗುತ್ತದೆಯೋ ಅಷ್ಟು ಪಕ್ಷ ದುರ್ಬಲವಾಗುತ್ತದೆ. ಎಷ್ಟು ಬೇಗ ನೇಮಕ ಆಗುತ್ತದೆಯೋ ಅಷ್ಟು ಅನುಕೂಲವಾಗುತ್ತದೆ.

ಈ ಬಗ್ಗೆ ನೀವೆಲ್ಲ ರಾಜ್ಯ ನಾಯಕರು ಪಕ್ಷದ ವರಿಷ್ಠರ ಗಮನಕ್ಕೆ ತರಬಹುದಲ್ಲವೇ?

-ಪಕ್ಷದ ಅನೇಕ ವಿಚಾರಗಳನ್ನು ನಾವು ಕೋರ್ ಕಮಿಟಿಯಲ್ಲಿ ಪ್ರಸ್ತಾಪ ಮಾಡುತ್ತೇವೆ. ಇದನ್ನು ಕೇಂದ್ರದ ವರಿಷ್ಠರಿಗೆ ತಲುಪಿಸಬೇಕು ಎಂದು ಹೇಳುತ್ತೇವೆ. ಆದರೆ, ರಾಷ್ಟ್ರೀಯ ನಾಯಕರಿಗೆ ನೇರವಾಗಿ ಮಾತನಾಡಲು ಆಗದಂಥ ವಾತಾವರಣವಿದೆ. ಇದು ಎಲ್ಲರಿಗೂ ಗೊತ್ತಿರುವಂಥ ವಿಷಯ.

ನೀವು ಏಕಾಏಕಿ ಪಕ್ಷದ ರೆಬೆಲ್ ನಾಯಕರಾಗಿ ಹೊರಹೊಮ್ಮುತ್ತಿದ್ದೀರಲ್ಲ?

-ಪಕ್ಷದ ಸಂಘಟನೆ ಬಲಪಡಿಸುವುದಕ್ಕಾಗಿ ಕೆಲವು ವಿಚಾರಗಳ ಬಗ್ಗೆ ನೇರವಾಗಿ ಮಾತನಾಡುತ್ತಿದ್ದೇನೆ. ನಾನು ಆಡುತ್ತಿರುವ ಮಾತುಗಳನ್ನು ಕೇಳಿಯಾದರೂ ವರಿಷ್ಠರು ರಾಜ್ಯಕ್ಕೆ ಆಗಮಿಸಬೇಕು. ನಾವು ವರಿಷ್ಠರಿಗೆ ಪತ್ರ ಬರೆದರೆ ಉತ್ತರ ಬರುವುದಿಲ್ಲ. ಭೇಟಿ ಮಾಡಿ ಹೇಳೋಣ ಎಂದರೆ ಅದಕ್ಕೆ ಸರಿಯಾದ ವ್ಯವಸ್ಥೆಯಿಲ್ಲ. ಕನಿಷ್ಠ ಮಾಧ್ಯಮಗಳಲ್ಲಿ ಬಂದ ಮೇಲಾದರೂ ವರಿಷ್ಠರು ಇತ್ತ ಗಮನಿಸಲಿ ಎಂಬ ಸದುದ್ದೇಶವಿದೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಿಮಗೆ ಟಿಕೆಟ್ ಸಿಗುವುದಿಲ್ಲ ಎಂಬ ವದಂತಿಯೂ ಇದಕ್ಕೆ ಕಾರಣವಂತೆ ಹೌದೆ?

-ಯಾರು ಏನೇ ಅಂದುಕೊಂಡರೂ ಪರವಾಗಿಲ್ಲ. ನಾನು ಚುನಾವಣೆಗಾಗಿ ಈ ಹೇಳಿಕೆಗಳನ್ನು ನೀಡುತ್ತಿಲ್ಲ. ನಾನು ಈಗ ಚುನಾವಣಾ ರಾಜಕಾರಣದಲ್ಲಿ ಆಸಕ್ತನಲ್ಲ. ಪಕ್ಷದ ಸ್ಥಾನಮಾನಗಳಲ್ಲೂ ಆಸಕ್ತನಲ್ಲ. ಹಣದ ರಾಜಕಾರಣ ಮತ್ತು ಬಣ ರಾಜಕಾರಣದಿಂದ ನಾನು ಬೇಸತ್ತಿದ್ದೇನೆ. ಸುಮಾರು 30 ವರ್ಷಗಳ ಸುದೀರ್ಘ ಕಾಲ ಪಕ್ಷ ನನ್ನ ಸಾಮರ್ಥ್ಯ ಮೀರಿ ದೊಡ್ಡ ದೊಡ್ಡ ಸ್ಥಾನಗಳನ್ನು ನೀಡಿದೆ. ಈಗ ನಾನು ಪಕ್ಷಕ್ಕೆ ಕೊಡುವ ಸಮಯ. ಕಳೆದ ಬಾರಿಯೇ ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂಬ ಮಾತನ್ನು ಹೇಳಿದ್ದೆ. ಆದರೆ, ಸಂಘಟನೆಯ ವಿವಿಧ ಒತ್ತಡಗಳಿಂದಾಗಿ ಸ್ಪರ್ಧಿಸಬೇಕಾಯಿತು. ನನ್ನ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ನನ್ನ ಬಗ್ಗೆ ಅಪಸ್ವರ ಇದ್ದರೆ ನಾನು ಇಂದೇ ರಾಜಕಾರಣದಿಂದ ನಿವೃತ್ತಿಯಾಗುತ್ತೇನೆ. ನಾನು ಅಷ್ಟರ ಮಟ್ಟಿಗೆ ಮತದಾರರ ಹಾಗೂ ಪಕ್ಷದ ಕಾರ್ಯಕರ್ತರ ಪ್ರೀತಿ ಗಳಿಸಿದ್ದೇನೆ. ಯಾರಿಗೆ ಟಿಕೆಟ್‌ ನೀಡಿದರೂ ನಾನು ಅವರ ಪರವಾಗಿ ಕೆಲಸ ಮಾಡಿ ಗೆಲ್ಲಿಸಿಕೊಂಡು ಬರುತ್ತೇನೆ.

ವಿಧಾನಸಭಾ ಚುನಾವಣೆ ಬಳಿಕ ರಾಷ್ಟ್ರೀಯ ನಾಯಕರು ಕರ್ನಾಟಕದಿಂದ ಅಂತರ ಕಾಪಾಡಿಕೊಳ್ಳುತ್ತಿದ್ದಾರಲ್ಲ?

-ನಿಜ. ಚುನಾವಣೆ ಬಳಿಕ ಬಿಜೆಪಿಯ ರಾಷ್ಟ್ರೀಯ ನಾಯಕರಾರೂ ಕರ್ನಾಟಕದತ್ತ ತಲೆ ಹಾಕಲಿಲ್ಲ. ಯಾವುದೇ ನಿರ್ದೇಶನ ನೀಡಲಿಲ್ಲ. ಚುನಾವಣೆ ವೇಳೆ ಅನೇಕ ನಾಯಕರು ಸತತವಾಗಿ ರಾಜ್ಯಕ್ಕೆ ಬಂದು ಹೋದರು. ಚುನಾವಣೆಯಲ್ಲಿ ಸೋಲುಂಟಾದರೂ ಕರ್ನಾಟಕ ದಕ್ಷಿಣ ಭಾರತದ ಹೆಬ್ಬಾಗಿಲು ಎಂಬ ಕಾರಣಕ್ಕಾಗಿಯಾದರೂ ಬಂದು ಹೋಗಬೇಕಾಗಿತ್ತು. ಎಲ್ಲಿ ವೈಫಲ್ಯವಾಗಿದೆ ಎಂಬುದನ್ನು ತಿಳಿಸುವ ಪ್ರಯತ್ನ ಮಾಡಬೇಕಾಗಿತ್ತು. ಕಾರ್ಯಕರ್ತರಲ್ಲಿ ಕುಸಿದು ಹೋಗಿದ್ದ ಆತ್ಮಸ್ಥೈರ್ಯ ಎತ್ತಿ ಹಿಡಿಯುವ ಪ್ರಯತ್ನ ಮಾಡಬೇಕಾಗಿತ್ತು. ಆದರೆ, ಇದ್ಯಾವುದೂ ಆಗಲಿಲ್ಲ.

ರಾಷ್ಟ್ರೀಯ ನಾಯಕರು ಬರದಿದ್ದರೂ, ರಾಜ್ಯಾಧ್ಯಕ್ಷ-ಪ್ರತಿಪಕ್ಷದ ನಾಯಕ ಹುದ್ದೆಗಳ ನೇಮಕ ಆಗದಿದ್ದರೂ ಪಕ್ಷದ ಚಟುವಟಿಕೆಗಳು ಸಾಂಗವಾಗಿ ನಡೆದಿವೆಯಲ್ಲ?

-ಮೊದಲೆಲ್ಲ ಒಂದು ಚುನಾವಣೆಯಲ್ಲಿ ಸೋಲುಂಟಾದ ಬಳಿಕ ಕೆಲದಿನಗಳಲ್ಲೇ ರಾಷ್ಟ್ರೀಯ ನಾಯಕರು ರಾಜ್ಯಕ್ಕೆ ಆಗಮಿಸಿ ಆತ್ಮಾವಲೋಕನ ಮಾಡುವಂಥ ಪರಿಪಾಠ ಇತ್ತು. ರಾಜ್ಯ ಪದಾಧಿಕಾರಿಗಳು ಹಾಗೂ ಮುಖಂಡರು ಜಿಲ್ಲೆಗಳಿಗೆ ತೆರಳಿ ಆತ್ಮಾವಲೋಕನ ಮಾಡುತ್ತಿದ್ದರು. ಈ ಬಾರಿ ಇದ್ಯಾವುದೂ ನಡೆಯಲಿಲ್ಲ. ಪರಿಣಾಮ, ಈಗ ಪಕ್ಷದ ವತಿಯಿಂದ ಯಾವುದೇ ಹೋರಾಟ, ಪ್ರತಿಭಟನೆ ಹಮ್ಮಿಕೊಂಡರೂ ಕಾರ್ಯಕರ್ತರನ್ನು ಸೇರಿಸಲು ಕಷ್ಟವಾಗುತ್ತಿದೆ. ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ನಡೆಯುತ್ತಿಲ್ಲ ಎಂಬ ಭಾವನೆ ಕಾರ್ಯಕರ್ತರಲ್ಲಿ ಬಂದಿದೆ.

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾಂಗ್ರೆಸ್ ತಂತ್ರಗಾರಿಕೆ, ಗ್ಯಾರಂಟಿಗಳ ಘೋಷಣೆ ಕಾರಣ ಎಂಬ ಸರಳ ಲೆಕ್ಕಾಚಾರಕ್ಕೆ ನಿಮ್ಮ ಪಕ್ಷದ ನಾಯಕರು ಬಂದಿದ್ದಾರಲ್ಲ?

-ನಮ್ಮ ಚುನಾವಣಾ ಸೋಲಿಗೆ ಎದುರಾಳಿ ಪಕ್ಷದ ತಂತ್ರಗಾರಿಕೆ ಅಷ್ಟೇ ಕಾರಣ ಅಲ್ಲ. ನಮ್ಮೊಳಗಿನ ಆಂತರಿಕ ಭಿನ್ನಾಭಿಪ್ರಾಯಗಳೂ ಕಾರಣ. ನಮ್ಮಲ್ಲಿ ಮೂರು ಬಣಗಳಿವೆ. ಒಂದು ಯಡಿಯೂರಪ್ಪ ಬಣ. ಮತ್ತೊಂದು ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳ (ಬಿ.ಎಲ್‌.ಸಂತೋಷ್‌) ಬಣ. ಇವೆರಡರ ನಡುವೆ ಮೂರನೆಯದು ಬಿಜೆಪಿ ಬಣ. ನಾವೆಲ್ಲ ಬಿಜೆಪಿ ಬಣ. ನಮನ್ನು ಹೇಳುವವರು ಕೇಳುವವರೇ ಇಲ್ಲದಂತಾಗಿದೆ. ಚುನಾವಣೆ ವೇಳೆ ನಾವು ಕಾಂಗ್ರೆಸ್ ಮತ್ತು ಜೆಡಿಎಸ್ ಕಬಡ್ಡಿ ಆಡಲಿಲ್ಲ. ನಮ್ಮವರೊಂದಿಗೇ ಕಬಡ್ಡಿ ಆಡಿದೆವು.

ಬಣ ರಾಜಕಾರಣವನ್ನು ಮೀರಿ ಚುನಾವಣೆ ಎದುರಿಸಲು ಸಾಧ್ಯವಾಗಲಿಲ್ಲವೇ?

-ಈ ಬಣ ರಾಜಕೀಯ ಸಾಮಾನ್ಯ ಕಾರ್ಯಕರ್ತರ ಮಟ್ಟಕ್ಕೂ ತಲುಪುವಂತಾಗಿದೆ. ಬಿಜೆಪಿ ಒಂದು ಒಡೆದ ಮನೆ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲೂ ಬಂದಿದೆ. ಆದರೆ, ಇದನ್ನು ಸರಿದೂಗಿಸಿಕೊಂಡು ನಮ್ಮಲ್ಲಿ ಗುಂಪುಗಾರಿಕೆ ಇಲ್ಲ ಎಂದು ಪಕ್ಷದ ಕಾರ್ಯಕರ್ತರಿಗೆ ಮತ್ತು ವಿಶೇಷವಾಗಿ ಮತದಾರರಿಗೆ ಮನವರಿಕೆ ಮಾಡಿಕೊಡಲು ಸಾಧ್ಯವಾಗಲಿಲ್ಲ. ಬಿಜೆಪಿಯಂಥ ಶಿಸ್ತು ಬದ್ಧ ಪಕ್ಷದಲ್ಲಿ ಅಶಿಸ್ತು ತಾಂಡವವಾಡುತ್ತಿದೆ. ಗುಂಪುಗಾರಿಕೆ ನಿಲ್ಲಬೇಕು ಎಂಬ ಸಂದೇಶವನ್ನು ಜನರು ಚುನಾವಣೆ ಮೂಲಕ ನೀಡಿದರು.

ಬಿಜೆಪಿಯಲ್ಲಿ ಕೋರ್ ಕಮಿಟಿ ಎಂಬುದೊಂದು ಇದೆಯಲ್ಲ. ಅಲ್ಲಿ ನೀವೆಲ್ಲ ಮುಕ್ತವಾಗಿ ಚರ್ಚೆ ಮಾಡಬಹುದಲ್ಲವೇ?

-ನಾನು ಕೋರ್‌ ಕಮಿಟಿ ಸಭೆಯಲ್ಲಿ ಎಲ್ಲವನ್ನೂ ಪ್ರಸ್ತಾಪಿಸಿದ್ದೇನೆ. ವಿಧಾನಸಭಾ ಚುನಾವಣೆ ವೇಳೆ ರಾಜ್ಯ ಘಟಕ ಒಮ್ಮತದಿಂದ ತೆಗೆದುಕೊಂಡ ತೀರ್ಮಾನಗಳು ನಂತರ ರಾಜ್ಯ ಘಟಕಕ್ಕೆ ಗೊತ್ತಿಲ್ಲದೆ ಬದಲಾವಣೆ ಆದದ್ದು ಪಕ್ಷದ ನಾಯಕರು ಹಾಗೂ ಕಾರ್ಯಕರ್ತರ ಮೇಲೆ ಪ್ರಭಾವ ಬೀರಿದೆ. ಬದಲಾವಣೆ ಮಾಡುವುದಿದ್ದರೂ ರಾಜ್ಯ ಘಟಕದೊಂದಿಗೆ ಚರ್ಚಿಸಬೇಕಿತ್ತು. ಅದು ಆಗಲಿಲ್ಲ. ಹಲವು ಹಿರಿಯ ನಾಯಕರನ್ನು ಚುನಾವಣಾ ಕಣದಿಂದ ದೂರವಿಡುವ ಪ್ರಯತ್ನ ಮಾಡಲಾಯಿತು.

ರಾಜ್ಯ ಬಿಜೆಪಿಯ ಕೆಲವು ನಾಯಕರ 'ಉಗ್ರ' ಹೇಳಿಕೆಗಳು ಚುನಾವಣೆಯಲ್ಲಿ ಪಕ್ಷಕ್ಕೆ ದೊಡ್ಡ ಹೊಡೆತ ನೀಡಿತು ಎಂಬ ಮಾತು ನಿಮ್ಮ ಪಕ್ಷದಿಂದಲೇ ಕೇಳಿಬರುತ್ತಿದೆ?

-ನಾಲಗೆ ಹರಿಯಬಿಟ್ಟವರನ್ನು ಜನ ಸೋಲಿಸಿದರು. ಆದರೂ ನಮ್ಮವರಿಗೆ ಇನ್ನೂ ಬುದ್ಧಿ ಬಂದಿಲ್ಲ. ಸಿ.ಟಿ.ರವಿ, ಎಂ.ಪಿ.ರೇಣುಕಾಚಾರ್ಯ, ರಾಜುಗೌಡ, ಪ್ರೀತಂಗೌಡ ಇಂಥ ಹದಿನೈದು ಮಂದಿ ಸೋತವರ ಹೆಸರು ಹೇಳಬಲ್ಲೆ. ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳನ್ನು ಕಳೆದುಕೊಳ್ಳಬೇಕಾಯಿತು. ಕೊಡಗು ಸೋಲುವ ಕ್ಷೇತ್ರವೇ ಅಲ್ಲ. ದಿನನಿತ್ಯ ಮತ್ತೊಬ್ಬರನ್ನು ಬೈಯುವುದರಲ್ಲೇ ಇವರು ಕಾಲ ಕಳೆದರು. ಇವತ್ತು ಕೂಡ ಇದರಿಂದ ನಮಗೆ ಡ್ಯಾಮೇಜ್ ಆಗುತ್ತಿದೆ. ಪಕ್ಷದ ಕಚೇರಿಗೆ ಯಾರೂ ಹೆಚ್ಚಿಗೆ ಹೋಗುವುದಿಲ್ಲ. ಬೆಂಗಳೂರಿನಲ್ಲಿ ದಿನಕ್ಕೆ ಎರಡು-ಮೂರು ಪತ್ರಿಕಾಗೋಷ್ಠಿಗಳು ಮಾಡುವಂಥ ದಯನೀಯ ಪರಿಸ್ಥಿತಿಗೆ ಪಕ್ಷಕ್ಕೆ ಬರಬಾರದಿತ್ತು. ಅಗತ್ಯ ಇದ್ದಾಗ ಮಾಡಲಿ. ವಿಷಯಾಧಾರಿತ ಮಾಡಲಿ. ಅದು ಕೂಡ ಅಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂಥವರು ಪತ್ರಿಕಾಗೋಷ್ಠಿ ನಡೆಸುತ್ತಾರೆ. ಏನು ಪ್ರಯೋಜನ.

ವಿಧಾನಸಭಾ ಚುನಾವಣೆಯಲ್ಲಿ ಹೊಸಬರಿಗೆ ಅವಕಾಶ ನೀಡುವ ಸಲುವಾಗಿ ಪ್ರಯೋಗ ಮಾಡಿದ್ದು ಪಕ್ಷಕ್ಕೆ ಅನುಕೂಲವಾಯಿತೆ?

-ಹೊಸ ರಕ್ತ ಬರಬೇಕು ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಇದರಲ್ಲಿ ಎರಡು ಮಾತಿಲ್ಲ. ಆದರೆ, ಜೊತೆಗೆ ಹಳೆಯ ಅನುಭವಿಗಳ ತಲೆಮಾರು ಕೂಡ ಬೇಕು. ಇದರ ಸಮೀಕರಣ ಮಾಡುವಲ್ಲಿ ನಾವು ವಿಫಲರಾದೆವು.

ಇತ್ತೀಚಿನ ದಿನಗಳಲ್ಲಿ ಪಕ್ಷದ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳುವಾಗ ರಾಷ್ಟ್ರೀಯ ನಾಯಕರು ರಾಜ್ಯ ನಾಯಕತ್ವವನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿದ್ದಾರೆ ಎಂಬ ಆರೋಪವಿದೆ?

-ರಾಷ್ಟ್ರದ ಪ್ರಮುಖ ತೀರ್ಮಾನಗಳನ್ನು ರಾಷ್ಟ್ರೀಯ ನಾಯಕರು ಕೈಗೊಳ್ಳಲಿ. ಆದರೆ, ಅದರ ಅನುಷ್ಠಾನ ವಿಚಾರ ಬಂದಾಗ ರಾಜ್ಯ ಸರ್ಕಾರ ಅಥವಾ ರಾಜ್ಯ ಘಟಕವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಈ ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಬೇಕೆ ಬೇಕು. ಅವರ ಬಗ್ಗೆ ಎರಡು ಮಾತಿಲ್ಲ. ಆದರೆ, ಮೋದಿ ಅವರ ಹೆಸರನ್ನೇ ಹಿಡಿದುಕೊಂಡು ನೇತಾಡಿದರೆ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ಮತದಾರರಿಗೆ ಪಕ್ಷದ ವಿಚಾರಗಳನ್ನು ತಿಳಿಸಿ, ಅವರನ್ನು ಕರೆತಂದು ವೋಟ್ ಹಾಕಿಸುವ ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದರೆ ಹೇಗೆ. ಇಂಥ 'ಡಿಕ್ಟೇಟಿವ್ ಅಟಿಟ್ಯೂಡ್‌' (ಸರ್ವಾಧಿಕಾರಿ ಧೋರಣೆ) ಬಗ್ಗೆ ಸ್ಥಳೀಯ ಮುಖಂಡರೂ ಬೇಸರಗೊಂಡಿದ್ದಾರೆ.

ಹಾಗಂತ ರಾಷ್ಟ್ರೀಯ ಘಟಕಕ್ಕೆ ಯಾವುದೇ ಅಧಿಕಾರ ಇಲ್ಲವೇ?

-ಆಡಳಿತಕ್ಕೆ ಸಂಬಂಧಿಸಿದಂತೆ ತೆಗೆದುಕೊಳ್ಳುವ ನಿರ್ಣಯಗಳಿಗೂ ಮತ್ತು ರಾಜಕೀಯವಾಗಿ ತೆಗೆದುಕೊಳ್ಳುವ ನಿರ್ಣಯಗಳಿಗೂ ವ್ಯತ್ಯಾಸವಿದೆ. ವಿಶ್ವಾಸದ ರಾಜಕಾರಣ ನಡೆಯಬೇಕು. ಕುಳಿತು ಸಮಾಲೋಚನೆ ಮಾಡಬೇಕು. ಮೋದಿ ಅವರು ಬಂದಾಗ ಜನರು ಸೇರಿಸುವುದು ಮಾತ್ರ ಆಯಿತು. ಅವರು ಹೋದ ಮೇಲೆ ಆ ಜನರನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬುದರ ಬಗ್ಗೆ ಗಮನ ನೀಡಲಿಲ್ಲ. ಈ ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಬೇಕೆ ಬೇಕು. ಆದರೆ, ಮೋದಿ ಅವರ ಹೆಸರಿನಿಂದ ನೇತಾಡಿಕೊಂಡು ಸ್ಥಳೀಯ ನಾಯಕರನ್ನು ನಿರ್ಲಕ್ಷಿಸುವುದು ಸರಿಯಲ್ಲ. ಸ್ಥಳೀಯ ನಾಯಕರ ವಿಶ್ವಾಸ ಬಹುಮುಖ್ಯವಾದದ್ದು.

ರಾಜ್ಯ ಬಿಜೆಪಿ ದುರ್ಬಲವಾಗಿದೆ ಎಂಬ ಕಾರಣಕ್ಕಾಗಿ ಜೆಡಿಎಸ್‌ ಜತೆ ಮೈತ್ರಿಗೆ ರಾಷ್ಟ್ರೀಯ ನಾಯಕರು ನಿರ್ಧರಿಸಿದರಾ?

-ಇದೊಂದು ರಾಷ್ಟ್ರೀಯ ವಿಚಾರ. ಎನ್‌ಡಿಎ ಬಲಪಡಿಸುವ ಉದ್ದೇಶದಿಂದ ಮೈತ್ರಿ ನಿರ್ಣಯ ತೆಗೆದುಕೊಂಡಿರಬಹುದು. ಆದರೆ, ರಾಷ್ಟ್ರೀಯ ಘಟಕದ ತೀರ್ಮಾನ ಅನುಷ್ಠಾನಗೊಳಿಸಲು ರಾಜ್ಯ ಘಟಕದಿಂದಲೂ ಪ್ರಕ್ರಿಯೆ ನಡೆಯಬೇಕಾಗುತ್ತದೆ.

ಜೆಡಿಎಸ್ ಜತೆಗಿನ ಮೈತ್ರಿ ಬಗ್ಗೆ ನಿಮಗೆ ಸಮಾಧಾನವಿಲ್ಲವೇ?

-ಮೈತ್ರಿ ಬಗ್ಗೆ ರಾಜ್ಯ ನಾಯಕರಿಂದ ಅಭಿಪ್ರಾಯ ಸಂಗ್ರಹಣೆ ಮಾಡಿಕೊಂಡು ನಂತರ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಒಂದು ವೇ‍ಳೆ ರಾಜ್ಯ ಘಟಕದಲ್ಲಿ ವಿರೋಧವಿದ್ದರೆ ರಾಷ್ಟ್ರೀಯ ನಾಯಕರು ಅದನ್ನು ಮನವರಿಕೆ ಮಾಡಿ ಮುಂದುವರೆಯಬಹುದಿತ್ತು. ಆದರೆ, ಈ ಪ್ರಯತ್ನ ಎಲ್ಲಿಯೂ ಮಾಡದೆ, ಸಂಸದೀಯ ಮಂಡಳಿ ಸದಸ್ಯರಾಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಯಾವುದೇ ರಾಜ್ಯ ನಾಯಕರೊಂದಿಗೆ ಅಥವಾ ಕೋರ್ ಕಮಿಟಿಯೊಂದಿಗೆ ಚರ್ಚೆ ನಡೆಸದೆ ಹೊರಗಿಟ್ಟು ತೀರ್ಮಾನ ತೆಗೆದುಕೊಳ್ಳಲಾಗಿದೆ.

ಯಾಕೆ ರಾಷ್ಟ್ರೀಯ ನಾಯಕರು ನಿಮ್ಮನ್ನು ಕೇಳಿ ಮೈತ್ರಿ ಬಗ್ಗೆ ನಿರ್ಧಾರ ಕೈಗೊಳ್ಳಬೇಕಿತ್ತು?

-ನಾಳೆ ನಾವೇ ರಾಜ್ಯ ನಾಯಕರು ಇಲ್ಲಿ ಜೆಡಿಎಸ್ ಜತೆಗೆ ಕೆಲಸ ಮಾಡಬೇಕಾಗಿದೆ. ಕಳೆದ ಚುನಾವಣೆವರೆಗೂ ನಾವು ಜೆಡಿಎಸ್ ವಿರುದ್ಧ ಪ್ರಬಲವಾಗಿ ವಿರೋಧಿಸಿಕೊಂಡು ರಾಜಕಾರಣ ಮಾಡಿದ್ದೇವೆ. ಹೀಗಾಗಿ, ತಕ್ಷಣ ಒಟ್ಟಾಗಲು ಸಾಧ್ಯವೇ ಇಲ್ಲ. ಅದಕ್ಕೆ ಸಮಯ ಬೇಕು. ಯಾವುದಾದರೂ ಮಾರ್ಗ ಬೇಕು. ಮೊನ್ನೆವರೆಗೆ ರಣಾಂಗಣದಲ್ಲಿ ಕತ್ತಿ ಗುರಾಣಿ ಹಿಡಿದು ಚಕ್ರವ್ಯೂಹ ಬೇಧಿಸಿದ ನಮಗೆ ಈಗ ತಕ್ಷಣ ನೀವು ಒಟ್ಟಾಗಬೇಕು ಎಂದರೆ ಹೇಗಾಗುತ್ತದೆ? ಅದಕ್ಕೊಂದು ಸೂತ್ರ ಮಾಡಬೇಕಲ್ಲವೇ? ಇದರಲ್ಲಿ ನಾವು ವಿಫಲರಾಗಿದ್ದೇವೆ. ಮೈತ್ರಿ ಬಗ್ಗೆ ನರೇಂದ್ರ ಮೋದಿ, ಅಮಿತ್ ಶಾ ಮತ್ತು ದೇವೇಗೌಡರು ದೆಹಲಿಯಲ್ಲಿ ಸೇರಿ ಮಾತುಕತೆ, ನಿರ್ಧಾರ ಮಾಡಲಿ. ಅದನ್ನು ಸ್ವಾಗತಿಸುತ್ತೇವೆ. ಆದರೆ, ಕರ್ನಾಟಕದಲ್ಲಿ ಯಡಿಯೂರಪ್ಪ ಸೇರಿದಂತೆ ನಾವೆಲ್ಲ ಬಿಜೆಪಿ ನಾಯಕರು ಮತ್ತು ಎಚ್‌.ಡಿ.ಕುಮಾರಸ್ವಾಮಿ ಅವರು ಒಟ್ಟಾಗಿ ಸೇರಿ ಮಾಡಬೇಕು. ಆ ಪ್ರಕ್ರಿಯೆ ನಡೆದಿಲ್ಲ.

ಜೆಡಿಎಸ್‌ ಜತೆಗಿನ ಮೈತ್ರಿ ಅನಿವಾರ್ಯತೆ ಇತ್ತೆ?

-ಕಳೆದ ವಿಧಾನಸಭಾ ಚುನಾವಣೆ ಫಲಿತಾಂಶ ನೋಡಿದರೆ ಹಳೆ ಮೈಸೂರು ಭಾಗದ ಹಲವು ಜಿಲ್ಲೆಗಳಲ್ಲಿ ಶೂನ್ಯ ಸ್ಥಾನದಲ್ಲಿದೆ. ಕೆಲವು ಕಡೆ ಅಸ್ತಿತ್ವ ಕಳೆದುಕೊಳ್ಳುವಂಥ ಪರಿಸ್ಥಿತಿ ಎದುರಾಗಿದೆ. ಇದನ್ನು ಸರಿದೂಗಿಸಬೇಕಾದಲ್ಲಿ ಒಂದು ರಾಜಕೀಯ ಸಮೀಕರಣ ಮಾಡುವ ಅಗತ್ಯವಿದೆ ಎಂಬುದನ್ನು ನಾನು ಒಪ್ಪುತ್ತೇನೆ. ಆದರೆ, ಈ ಸಮೀಕರಣದ ಬದಲು ಜಗಳ ಹೆಚ್ಚಾಗಬಾರದಲ್ಲವೇ? ಅದಕ್ಕಾಗಿ ಉಭಯ ಪಕ್ಷಗಳ ನಾಯಕರನ್ನು ಕೂಡಿಸಿ ಮಾತನಾಡಬೇಕು.

ಮೈತ್ರಿಯಿಂದ ಯಾವ ಪಕ್ಷಕ್ಕೆ ಲಾಭವಾಗಲಿದೆ?

-ಈ ಹಂತದಲ್ಲಿ ನಾವು ಯಾವ ಪಕ್ಷಕ್ಕೆ ಲಾಭ ಎಂಬುದನ್ನು ನೋಡದೆ ಎನ್‌ಡಿಎಗೆ ಲಾಭವೋ, ಯುಪಿಎಗೆ ಲಾಭವೋ ಎಂಬುದನ್ನು ನೋಡಬೇಕಿದೆ.

ಲೋಕಸಭಾ ಚುನಾವಣೆ ಕುರಿತು ನಡೆದ ಚರ್ಚೆಯಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಹತ್ತರಿಂದ ಹದಿನೈದು ಕ್ಷೇತ್ರಗಳಲ್ಲಿ ಮುನ್ನಡೆ ಇರುವುದು ಕಂಡು ಬಂದಿದೆ. ಜೆಡಿಎಸ್‌ ಸುಮಾರು ನಾಲ್ಕು ಕ್ಷೇತ್ರಗಳಲ್ಲಿ ಚೆನ್ನಾಗಿದೆ. ಬಿಜೆಪಿ ಮತ್ತು ಜೆಡಿಎಸ್ ಜತೆಗೂಡಿದರೆ ಹೆಚ್ಚು ಸ್ಥಾನಗಳನ್ನು ಗಳಿಸಬಹುದಾಗಿದೆ. ವಿಧಾನಸಭಾ ಚುನಾವಣೆಯ ಮತ ಗಳಿಕೆ ನೋಡಿದರೆ ಬಹುತೇಕ ಲೋಕಸಭಾ ಕ್ಷೇತ್ರಗಳಲ್ಲಿ ನಮಗೆ ಹಿನ್ನಡೆ ಉಂಟಾಗಿದೆ.

ಲೋಕಸಭಾ ಚುನಾವಣೆಗೆ ರಾಷ್ಟ್ರೀಯ ನಾಯಕತ್ವ, ರಾಷ್ಟ್ರೀಯ ವಿಚಾರಗಳ ಮೇಲೆ ನಡೆಯುತ್ತದೆಯಲ್ಲವೇ? ಹೀಗಿರುವಾಗ ಬಿಜೆಪಿ ಇಷ್ಟೊಂದು ಹೆದರಬೇಕಾದ ಅಗತ್ಯವಿತ್ತೆ?

-ನಿಜ. ಲೋಕಸಭಾ ಚುನಾವಣೆ ರಾಷ್ಟ್ರೀಯ ನಾಯಕತ್ವ, ರಾಷ್ಟ್ರೀಯ ವಿಚಾರಗಳ ಮೇಲೆ ನಡೆಯುತ್ತದೆ. ಆದರೆ, ಯಾವುದೇ ಒಂದು ರಾಜ್ಯದಲ್ಲಿ ಅಲ್ಲಿ ಅಧಿಕಾರದಲ್ಲಿರುವ ಪಕ್ಷಕ್ಕೆ ಚುನಾವಣೆಯಲ್ಲಿ ಅದರದ್ದೇ ಆದ ಅನುಕೂಲಗಳು ಆಗುತ್ತವೆ. ಅದು ಯಾವುದೇ ಚುನಾವಣೆಯಾಗಿರಲಿ.

ಮೈತ್ರಿ ಪರಿಣಾಮ ಹಾಲಿ ಬಿಜೆಪಿ ಸಂಸದರು ಇರುವ ಕೆಲವು ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡಬೇಕಾಗುತ್ತದೆಯಲ್ಲವೇ?

-ಇದರ ಬಗ್ಗೆ ಪಕ್ಷದ ರಾಷ್ಟ್ರೀಯ ನಾಯಕರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಇದರಲ್ಲಿ ನಾವ್ಯಾರೂ ಹಸ್ತಕ್ಷೇಪ ಮಾಡುವುದಿಲ್ಲ. ಆದರೆ, ನಮ್ಮ ಸಲಹೆ ಪಡೆದುಕೊಳ್ಳಬೇಕು. ನೇರವಾಗಿ ದೆಹಲಿಯಲ್ಲೇ ಕುಳಿತು ಬಿ ಫಾರಂ ಕೊಡುವ ಕೆಲಸ ಆಗಬಾರದು. ರಾಜ್ಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು.

ಬಿಜೆಪಿಯ ಹಲವು ಹಾಲಿ ಮತ್ತು ಮಾಜಿ ಶಾಸಕರು ಕಾಂಗ್ರೆಸ್‌ಗೆ ವಲಸೆ ಹೋಗಲು ಸಜ್ಜಾಗಿದ್ದಾರೆ. ಕೆಲವರು ಈಗಾಗಲೇ ಸೇರ್ಪಡೆಯಾಗಿದ್ದಾರೆ?

-ಎಲ್ಲರನ್ನೂ ಹಿಡಿದಿಟ್ಟುಕೊಳ್ಳಬಹುದಿತ್ತು. ನಾವು ತಕ್ಷಣ ರಾಜ್ಯಾಧ್ಯಕ್ಷ ಮತ್ತು ಪ್ರತಿಪಕ್ಷದ ನಾಯಕರನ್ನು ನೇಮಿಸಬೇಕಿತ್ತು. ಜತೆಗೆ ಕೇಂದ್ರದ ಹಿರಿಯ ನಾಯಕರು ಇಲ್ಲಿ ಬಂದು ಕುಳಿತು ಮುಖಂಡರ ಅಸಮಾಧಾನ ಹೋಗಲಾಡಿಸುವ ಪ್ರಯತ್ನ ಮಾಡಬೇಕಾಗಿತ್ತು. ಇದ್ಯಾವುದೂ ಆಗದೇ ಇರುವುದೇ ವಲಸೆಗೆ ಕಾರಣ.

ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಸಕಾರಣವಿಲ್ಲದೆ ಕೆಳಗಿಳಿಸಿದ್ದೇ ಪಕ್ಷ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋತಿತು ಎಂಬ ಮಾತನ್ನು ಪಕ್ಷದ ಕೆಲವು ಮುಖಂಡರು ಹೇಳುತ್ತಿದ್ದಾರೆ?

-ನೋಡಿ, ಇಡೀ ಪಕ್ಷ ಒಂದಾಗಿದ್ದರೆ ಯಾರನ್ನು ಕೆಳಗಿಳಿಸಿದರೂ, ಯಾರನ್ನು ಮೇಲೇರಿಸಿದರೂ ಏನು ಆಗುವುದಿಲ್ಲ. ಬೇರೆ ಬೇರೆ ರಾಜ್ಯಗಳಲ್ಲಿ ಇದನ್ನು ನೋಡಿದ್ದೇವೆ. ಚುನಾವಣೆಗೆ ಮೂರು ತಿಂಗಳ ಮೊದಲು ಮುಖ್ಯಮಂತ್ರಿಯನ್ನು ಬದಲಿಸಿಯೂ ಗೆದ್ದಿದ್ದೇವೆ. ಅಲ್ಲಿ ಪಕ್ಷದ ಸಂಘಟನೆ ದುರ್ಬಲವಾಗಿರಲಿಲ್ಲ. ಪಕ್ಷ ಸಂಘಟನೆ ಪೂರ್ಣ ಕುಸಿದಿತ್ತು. ಇಬ್ಭಾಗವಾದಂಥ ಸಂಘಟನೆ. ನಾವು ಕಾಂಗ್ರೆಸ್ ಮತ್ತು ಜೆಡಿಎಸ್ ಜತೆ ಕಬಡ್ಡಿ ಆಡಲಿಲ್ಲ. ನಾವು ನಮ್ಮವರೊಂದಿಗೇ ಕಬಡ್ಡಿ ಆಡಿದೆವು. ಹೀಗಾಗಿ, ಯಡಿಯೂರಪ್ಪ ಅವರನ್ನು ಕೆಳಗಿಳಿಸಿದ್ದೂ ನಮ್ಮ ಸೋಲಿಗೆ ಒಂದು ಕಾರಣವಾಗಿರಬಹುದೇ ಹೊರತು ಅದೊಂದೇ ಅಲ್ಲ.

ಪಕ್ಷದ ಸಂಘಟನೆ ಇಬ್ಭಾಗಕ್ಕೆ ಯಾರು ಕಾರಣ?

-ಒಂದು ಯಡಿಯೂರಪ್ಪ ಅವರ ತಂಡ. ಮತ್ತೊಂದು ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳ (ಬಿ.ಎಲ್‌.ಸಂತೋಷ್‌) ತಂಡ.

ನಿಮ್ಮ ಪ್ರಕಾರ ಯಾರು ಮತ್ತು ಎಂಥವರು ರಾಜ್ಯಾಧ್ಯಕ್ಷರಾಗಬೇಕು?

-ನಾನು ಯಾರ ಹೆಸರನ್ನೂ ಹೇಳಲು ಬಯಸುವುದಿಲ್ಲ. ಈಗ ರಾಜ್ಯಾಧಕ್ಷ್ಯ ಹುದ್ದೆ ಅಲಂಕರಿಸುವುದು ಸವಾಲು ಇದ್ದಂತೆ. ಒಂದು ಜಿಲ್ಲೆಗೆ ಹೋಗಿ ಮೇಜು ಕುಟ್ಟಿ ಭಾಷಣ ಮಾಡುವವರು, ಪತ್ರಿಕಾಗೋಷ್ಠಿ ನಡೆಸುವವರು ರಾಜ್ಯಾಧ್ಯಕ್ಷರಾಗುವುದು ಬೇಡ. ಜಿಲ್ಲೆಗಳಲ್ಲಿ ಎಷ್ಟು ಗುಂಪುಗಳಿವೆ ಎಂಬುದನ್ನು ತಿಳಿದುಕೊಂಡು ಆ ಗುಂಪುಗಳ ಮುಖಂಡರನ್ನು ಪ್ರೀತಿ ವಿಶ್ವಾಸದಿಂದ ಮಾತನಾಡಿಸಿ ಒಂದು ಮಾಡಬಲ್ಲ, ನಾವೆಲ್ಲ ಒಂದು ಎಂದು ಪ್ರೇರಣೆ ನೀಡಬಲ್ಲವರು ರಾಜ್ಯಾಧ್ಯಕ್ಷರಾಗಬೇಕು.

ಈ ಬಾರಿಯ ಲೋಕಸಭಾ ಚುನಾವಣೆಯ ಟಿಕೆಟ್ ಹಂಚಿಕೆಯಲ್ಲೂ ಹೊಸ ಪ್ರಯೋಗ ನಡೆಯಬಹುದು ಎಂಬ ಮಾತು ಕೇಳಿಬರುತ್ತಿದೆ?

-ಹಿಂದಿನ 2014 ಮತ್ತು 2018ರ ಲೋಕಸಭಾ ಚುನಾವಣೆಗಳನ್ನು ಹೋಲಿಸಿದರೆ ಈ ಬಾರಿಯ ಚುನಾವಣೆ ವಿಭಿನ್ನವಾಗಿ ನಡೆಯುವ ನಿರೀಕ್ಷೆಯಿದೆ. ವಿಪಕ್ಷಗಳ ನೇತೃತ್ವದ ಇಂಡಿಯಾ ಕೂಡ ಸಂಘಟನೆ ಬಲಪಡಿಸಿಕೊಳ್ಳುತ್ತಿದೆ. ಹೀಗಾಗಿ, ವಿಧಾನಸಭಾ ಚುನಾವಣೆಯಲ್ಲಿ ಮಾಡಿದಂಥ ಭಾರಿ ಪ್ರಯೋಗ ಬಿಟ್ಟು, ವಾಸ್ತವಾಂಶದ ಕಡೆಗೆ ಒತ್ತು ಕೊಟ್ಟು ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು. ಜನರು ಮತ್ತು ಕಾರ್ಯಕರ್ತರು ಒಪ್ಪಿಕೊಳ್ಳುವಂಥವರನ್ನು ಅಭ್ಯರ್ಥಿಗಳನ್ನಾಗಿ ಮಾಡಬೇಕು. ನಾಯಕರ ಚೇಲಾಗಳು ಬೇಡ. ಹೊಸಬರಿಗೆ ಅವಕಾಶ ಸಿಗಲಿ. ಅದೇ ವೇಳೆ ಕೇವಲ ವಯಸ್ಸಿನ ಕಾರಣ ನೀಡಿ ಟಿಕೆಟ್ ನಿರಾಕರಿಸುವುದೂ ಬೇಡ.

3 ಡಿಸಿಎಂ ಬೇಕೆಂಬ ಹೇಳಿಕೆಗೆ ಬದ್ಧ, ನಾನು ಡಿಸಿಎಂ ಆಗಲ್ಲ: ಸಚಿವ ರಾಜಣ್ಣ

ಅಭ್ಯರ್ಥಿಗಳ ಆಯ್ಕೆಗೆ ಖಾಸಗಿ ಸಮೀಕ್ಷೆಗಳನ್ನು ನೆಚ್ಚಿಕೊಳ್ಳುವುದು ಬಿಜೆಪಿಯಲ್ಲಿ ಹೆಚ್ಚು ಅಲ್ಲವೇ?

-ಸಮೀಕ್ಷೆಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದರೆ ವರ್ಕೌಟ್ ಆಗುವುದಿಲ್ಲ ಎಂಬುದು ವಿಧಾನಸಭಾ ಚುನಾವಣೆಯಲ್ಲಿ ಸಾಬೀತಾಗಿದೆ. ಅದರ ಬದಲು ನಮ್ಮ ಪಕ್ಷದ ಪ್ರಮುಖರು ಯಾರನ್ನು ಮೌಲ್ಯಮಾಪನ ಮಾಡುತ್ತಾರೋ ಅಂಥವರಿಗೆ ಟಿಕೆಟ್ ಕೊಡಬೇಕು. ಅದೇ ವಾಸ್ತವ.

Follow Us:
Download App:
  • android
  • ios