ಕರ್ನಾಟಕ ಬರದಿಂದ ಕಾವೇರಿ ನೀರು ಬಿಡಲು ಸಾಧ್ಯವಿಲ್ಲ, ತಮಿಳುನಾಡು ಬೇಡಿಕೆ ತಿರಸ್ಕರಿಸಿದ CWRC!
ಕಾವೇರಿ ನದಿ ನೀರು ಸಂಘರ್ಷ ವಿಚಾರದಲ್ಲಿ ತಮಿಳುನಾಡು ಬೇಡಿಕೆಯನ್ನು ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ತಿರಸ್ಕರಿಸಿದೆ. 2023-2024 ಜಲವರ್ಷದ ಅಂತಿಮ ಸಭೆಯಲ್ಲಿ ನೀರು ಬಿಡಲು ಸಾಧ್ಯವಿಲ್ಲ ಎಂದು ಸಿಡಬ್ಲ್ಯೂಆರ್‌ಸಿ ಸ್ಪಷ್ಟಪಡಿಸಿದೆ.
ನವದೆಹಲಿ (ಮೇ 16): ಕಾವೇರಿ ನದಿ ನೀರು ಸಂಘರ್ಷ ವಿಚಾರದಲ್ಲಿ ತಮಿಳುನಾಡು ಬೇಡಿಕೆಯನ್ನು ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ತಿರಸ್ಕರಿಸಿದೆ. 2023-2024 ಜಲವರ್ಷದ ಅಂತಿಮ ಸಭೆಯಲ್ಲಿ ನೀರು ಬಿಡಲು ಸಾಧ್ಯವಿಲ್ಲ ಎಂದು ಸಿಡಬ್ಲ್ಯೂಆರ್‌ಸಿ ಸ್ಪಷ್ಟಪಡಿಸಿದೆ. ಕರ್ನಾಟಕದಲ್ಲಿ ಬರದ ಪರಿಸ್ಥಿತಿ ಇರುವ ಕಾರಣ ನೀರು ಕೊಡಲು ಸಾಧ್ಯವಿಲ್ಲ, ಹಾಗಾಗಿ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆಯಿಂದ ನೈಸರ್ಗಿಕವಾಗಿ ನದಿ ಸೇರುವ ನೀರು ಬಳಸಿಕೊಳ್ಳಿ ಎಂದು ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿ ತಮಿಳುನಾಡಿಗೆ ತಿಳಿಸಿದೆ. ಇನ್ನು ಮೇ 21ರಂದು CWMA ಸಭೆ ನಡೆಯಲಿದೆ.
ಕಾವೇರಿ ನೀರು ಕೇಳಿದ ತಮಿಳುನಾಡಿಗೆ ಭಾರಿ ಮುಖಭಂಗ: ಕರ್ನಾಟಕ ರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿದ್ದು, ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿದೆ. ಇಂತಹ ಬರಗಾಲದ ನಡುವೆಯೂ ನಾಚಿಕೆಯಿಲ್ಲದೇ ಏಪ್ರಿಲ್ ಹಾಗೂ ಮೇ ತಿಂಗಳ ತಮಿಳುನಾಡಿನ ಪಾಲಿನ ನೀರನ್ನು ಬಿಡುವಂತೆ ಅರ್ಜಿ ಸಲ್ಲಿಸಿದ ತಮಿಳುನಾಡು ಸರ್ಕಾರಕ್ಕೆ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಮಹಾಮಂಗಳಾರತಿ ಮಾಡಿ ಬರಿಗೈಯಲ್ಲಿ ವಾಪಸ್ ಕಳಿಸಿದೆ. ನೀರು ಬಿಡುವಂತೆ ಸಲ್ಲಿಕೆ ಮಾಡಿದ ಅರ್ಜಿಯನ್ನು ತಿರಸ್ಕರಿಸಿದೆ.
ಬೆಂಗಳೂರು ನೀರಿನ ಸಮಸ್ಯೆ ನೀಗಿಸಿದ ಜಲಮಂಡಳಿ ಅಧ್ಯಕ್ಷರಿಗೆ ಎಫ್‌ಕೆಸಿಸಿಐ ಸನ್ಮಾನ
ಕಾವೇರಿ ನೀರು ನಿರ್ವಹಣೆ ಬಿಕ್ಕಟ್ಟು ವಿಚಾರದಲ್ಲಿ ಆಗಿಂದಾಗ್ಗೆ ಕರ್ನಾಟಕಕ್ಕೆ ಭಾರಿ ಸಂಕಷ್ಟ ತಂದಿಡುತ್ತಿದ್ದ ತಮಿಳುನಾಡಿಗೆ ಈ ಬಾರಿ ಕಾವೇರಿ ನೀರು ನಿಯಂತ್ರಣ ಸಮಿತಿಯಿಂದ ಮುಖಭಂಗವಾಗಿದೆ. ಯಾರಾದ್ರೂ ಹಾಳಾಗೋಗ್ಲಿ ನಾವು ನೆಟ್ಟಗಿದ್ದರೆ ಸಾಕು ಎನ್ನುವ ಮನಸ್ಥಿತಿಯಿಂದ ಕರ್ನಾಟಕದಲ್ಲಿ ಜನರು ಬರಗಾಲದಿಂದ ತತ್ತರಿಸಿ ಹೋಗಿದ್ದರೂ, ತಮಗೆ ಸಾಮಾನ್ಯ ವರ್ಷಗಳಂತೆ ನೀರು ಕೊಡಬೇಕು ಎಂದು ತಮಿಳುನಾಡು ಕಾವೇರಿ ನೀರು ನಿಯಂತ್ರಣ ಸಮಿತಿಗೆ ಅರ್ಜಿ ಸಲ್ಲಿಕೆ ಮಾಡಿತ್ತು. ನಮಗೆ ಕರ್ನಾಟಕದಿಂದ ಏಪ್ರಿಲ್ ಮತ್ತು ಮೇ ತಿಂಗಳ ನೀರನ್ನು ಬಿಟ್ಟಿಲ್ಲ. ಕೂಡಲೇ ಸುಪ್ರೀಂ ಕೋರ್ಟ್ ನೇಮಕ ಮಾಡಿರುವ ಕಾವೇರಿ ನೀಡು ನಿಯಂತ್ರಣ ಸಮಿತಿಯಿಂದ ತಮಿಳುನಾಡಿಗೆ ನೀರನ್ನು ಹರಿಸುವುದಕ್ಕೆ ಕರ್ನಾಟಕ ಸರ್ಕಾರಕ್ಕೆ ಆದೇಶ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿತ್ತು.