ಬೇಸಿಗೆಯ ಬಿಸಿಲಿನ ತಾಪ: ಐತಿಹಾಸಿಕ ತಾಣ ಬಾದಾಮಿ ನೋಡಲು ಪ್ರವಾಸಿಗರ ಬರ!
ಬೇಸಿಗೆಯ ಬಿಸಿಲಿನ ತಾಪದಿಂದ ಬಾದಾಮಿಯ ಐತಿಹಾಸಿಕ ಪ್ರವಾಸಿ ತಾಣಕ್ಕೂ ಬಿಸಿ ತಟ್ಟಿದ್ದು, ಗುಹಾಂತರ ದೇವಾಲಯಗಳ ವೀಕ್ಷಣೆಗೆ ಆಗಮಿಸುವ ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಇಳಿಕೆಯಾಗಿದೆ.
ಶಂಕರ ಕುದರಿಮನಿ
ಬಾದಾಮಿ (ಮೇ 16): ಬೇಸಿಗೆಯ ಬಿಸಿಲಿನ ತಾಪದಿಂದ ಬಾದಾಮಿಯ ಐತಿಹಾಸಿಕ ಪ್ರವಾಸಿ ತಾಣಕ್ಕೂ ಬಿಸಿ ತಟ್ಟಿದ್ದು, ಗುಹಾಂತರ ದೇವಾಲಯಗಳ ವೀಕ್ಷಣೆಗೆ ಆಗಮಿಸುವ ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಇಳಿಕೆಯಾಗಿದೆ. 2023-24ರ ಜನವರಿಯಿಂದ ಮೇ ತಿಂಗಳವರೆಗೆ 2.5 ಲಕ್ಷ ಪ್ರವಾಸಿಗರು ಗುಹಾಂತರ ದೇವಾಲಯ ವೀಕ್ಷಣೆ ಮಾಡಿದ್ದರೆ, ಪ್ರಸಕ್ತ ಸಾಲಿನಲ್ಲಿ ಮೇ ತಿಂಗಳು ಅರ್ಧ ಕಳೆದಿದ್ದು, ಇಲ್ಲಿಯವರೆಗೆ ಕೇವಲ 60 ಸಾವಿರ ಪ್ರವಾಸಿಗರು ಮಾತ್ರ ವೀಕ್ಷಣೆ ಮಾಡಿದ್ದಾರೆ.
ಏಪ್ರಿಲ್, ಮೇ ತಿಂಗಳು ಶಾಲೆ, ಕಾಲೇಜುಗಳಿಗೆ ರಜೆಯ ಅವಧಿ ಆಗಿರುವುದರಿಂದ ಪಾಲಕರು ಬಿಡುವು ಮಾಡಿಕೊಂಡು ಪ್ರವಾಸಿ ತಾಣಗಳ ವೀಕ್ಷಣೆಗೆ ಹೋಗುವುದು ಸಾಮಾನ್ಯ. ಹೀಗಾಗಿ ಈ ಅವಧಿಯಲ್ಲಿ ಪ್ರವಾಸಿಗರ ಸಂಖ್ಯೆ ಅಧಿಕವಾಗಿರುತ್ತದೆ. ಇನ್ನು ಅಗಸ್ಟ್‌ವರೆಗೆ ಮಳೆಗಾಲ ಇರುವುದರಿಂದ ಪ್ರವಾಸಿಗರ ಸಂಖ್ಯೆ ಕ್ಷೀಣಿಸಲಿದೆ. ಆದರೆ, ಈ ಬಾರಿ 1.5.2024 ರಿಂದ 13.5.2024ರ ಅವಧಿಯಲ್ಲಿ ಸಾಲು ಸಾಲು ಸರ್ಕಾರಿ ರಜೆಯಿದ್ದರೂ ಗುಹಾಂತರ ದೇವಾಲಯ ವೀಕ್ಷಣೆಗೆ 9556 ಸ್ವದೇಶಿ ಮತ್ತು 30 ಜನ ವಿದೇಶಿ ಪ್ರವಾಸಿಗರು ಮಾತ್ರ ಭೇಟಿ ನೀಡಿದ್ದಾರೆ. ಈಗಿನ ಸ್ಥಿತಿ ನೋಡಿದರೆ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾಗುವ ಸಾಧ್ಯತೆ ಇದೆ ಎಂದು ಪ್ರವಾಸೋದ್ಯಮ ಇಲಾಖೆ ಮೂಲಗಳು ತಿಳಿಸಿವೆ.
ಬಿಜೆಪಿಗೆ ದ್ರೋಹ ಎಸಗಿದವರಿಗೆ ತಕ್ಕ ಪಾಠ ಕಲಿಸಿ: ವೈ.ಎ.ನಾರಾಯಣಸ್ವಾಮಿ
ಕಳೆದ ಹಲವು ದಶಕಗಳಿಂದ ಬೇಸಿಗೆ ರಜೆ ದಿನಗಳಲ್ಲಿ ಈ ಹಿಂದೆ ಲಕ್ಷಕ್ಕೂ ಅಧಿಕ ಪ್ರವಾಸಿಗರು, ಜಿಲ್ಲೆ ಹಾಗೂ ರಾಜ್ಯ ಬೇರೆ ಜಿಲ್ಲೆಗಳ ವಿದ್ಯಾರ್ಥಿಗಳು ವೀಕ್ಷಣೆಗೆ ಆಗಮಿಸುತ್ತಿದ್ದರು. ಆದರೆ, ಈ ವರ್ಷದ ಬೇಸಿಗೆ ರಜೆಯಲ್ಲಿ ಪ್ರವಾಸಿಗರ ಆಗಮನ ಸಂಪೂರ್ಣ ಕಡಿಮೆಯಾಗಿದೆ. ಪ್ರವಾಸಿಗರಿಲ್ಲದೆ ಪ್ರವಾಸೋದ್ಯಮ ಇಲಾಖೆಗೆ ಆದಾಯ ಕಡಿಮೆಯಾಗಿದೆ. ಪ್ರವಾಸಿಗರನ್ನೇ ನಂಬಿ ಜೀವನ ನಡೆಸುತ್ತಿರುವ ಮಾರ್ಗದರ್ಶಿಗಳು ಹಾಗೂ ವ್ಯಾಪಾರಿಗಳಿಗೆ ಸಾಕಷ್ಟು ತೊಂದರೆಯಾಗಿದೆ.
ರಜೆಯಲ್ಲು ಸುಳಿಯದ ಪ್ರವಾಸಿಗರು: ಶುಕ್ರವಾರ, ಶನಿವಾರ ಮತ್ತು ಭಾನುವಾರ ಮೂರು ದಿನ ಸರ್ಕಾರಿ ರಜೆ ಇದ್ದರೂ ಮೇಣಬಸದಿ ವೀಕ್ಷಣೆಗೆ ಕೇವಲ 1400 ದೇಶೀಯ ಪ್ರವಾಸಿಗರು ಆಗಮಿಸಿದ್ದಾರೆ. ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡಿದ್ದರೂ ಮಹಿಳೆಯರು ಗುಹಾಂತರ ದೇವಾಲಯಗಳ ವೀಕ್ಷಣೆಗೆ ಆಗಮಿಸುತ್ತಿಲ್ಲ. ಧಾರ್ಮಿಕ ಕ್ಷೇತ್ರಗಳತ್ತ ಹೆಚ್ಚಿನ ಮಹಿಳೆಯರು ಹೊರಟಿದ್ದಾರೆ. ಕಳೆದ ಎರಡು ದಿನಗಳಲ್ಲಿ ಬಾದಾಮಿ-ಬನಶಂಕರಿ ಮತ್ತು ಮಹಾಕೂಟ ದೇವಸ್ಥಾನಗಳಿಗೆ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಭೇಟಿ ನೀಡಿರುವುದು ತಿಳಿದುಬಂದಿದೆ.
ಬಿಸಿಲ ಹೊಡೆತ: ಕೆಲವು ವಿದ್ಯಾರ್ಥಿನಿಯರು ಮತ್ತು ಮಹಿಳೆಯರು ಆಟೋ ಮೂಲಕ ಆಗಮಿಸಿ ಪ್ರವಾಸಿ ತಾಣ ವೀಕ್ಷಣೆ ಮಾಡಲು ಬಂದಿದ್ದರು. ಅವರಿಗೆ ಬಸ್ ಪ್ರಯಾಣ ಉಚಿತವಿದೆ ಹಣ ಕೊಟ್ಟು ಖಾಸಗಿ ವಾಹನದಲ್ಲೇಕೆ ಬಂದಿದ್ದೀರಿ ಎಂದು ವಿಚಾರಿಸಿದರೆ ಬಸ್ ನಲ್ಲಿ ಬಂದರೆ ಬಾದಾಮಿ, ಪಟ್ಟದಕಲ್ಲು, ಮಹಾಕೂಟ, ಶಿವಯೋಗ ಮಂದಿರ, ಬಾದಾಮಿ ಬನಶಂಕರಿ ದೇವಸ್ಥಾನ ಎಲ್ಲವನ್ನೂ ಒಂದೇ ದಿನದಲ್ಲಿ ನೋಡಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಆಟೋ ಮಾಡಿಕೊಂಡು ಬಂದಿದ್ದೇವೆ ಎಂದು ಉತ್ತರಿಸಿದರು. ಒಟ್ಟಿನಲ್ಲಿ ಈ ವರ್ಷದ ದಾಖಲೆ ಪ್ರಮಾಣದ ಬಿಸಿಲು ಕೃಷಿಗಷ್ಟೇ ಅಲ್ಲ, ಪ್ರವಾಸೋದ್ಯಮಕ್ಕೂ ಹೊಡೆತ ನೀಡಿದೆ. ಇದನ್ನೇ ನಂಬಿ ಜೀವನ ನಿರ್ವಹಣೆ ಮಾಡುವ ಅನೇಕ ಕುಟುಂಬಗಳಿಗೆ ಬೇಸಿಗೆ ಬಿಸಿ ತಟ್ಟಿದೆ.
ಪ್ರಖರ ಬಿಸಲು ಹಾಗೂ ಲೋಕಸಭೆ ಚುನಾವಣೆಯ ಕಾರಣ ಬೇರೆ ರಾಜ್ಯಗಳ ಪ್ರವಾಸಿಗರು ಆಗಮಿಸುತ್ತಿಲ್ಲ. ಇದರಿಂದ ಪ್ರವಾಸಿ ಮಾರ್ಗದರ್ಶಿಗಳು ಹಾಗೂ ವ್ಯಾಪಾರಿಗಳಿಗೆ ಸಾಕಷ್ಟು ತೊಂದರೆಯಾಗಿದೆ.
-ಬಸುರಾಜ ಕಟಗೇರಿ, ಪ್ರವಾಸಿ ಮಾರ್ಗದರ್ಶಿ
ಕರ್ನಾಟಕ ಬರದಿಂದ ಕಾವೇರಿ ನೀರು ಬಿಡಲು ಸಾಧ್ಯವಿಲ್ಲ, ತಮಿಳುನಾಡು ಬೇಡಿಕೆ ತಿರಸ್ಕರಿಸಿದ CWRC!
ಬೇಸಿಗೆ ರಜೆಯ ಅವಧಿಯಲ್ಲಿ ಸಾಮಾನ್ಯವಾಗಿ ಪ್ರವಾಸಿಗರ ಸಂಖ್ಯೆ ಅಧಿಕವಾಗಿರುತ್ತದೆ. ಆದರೆ, ಈ ವರ್ಷ ಚುನಾವಣೆ ಹಾಗೂ ತಾಪಮಾನ ದಾಖಲೆ ಪ್ರಮಾಣದಲ್ಲಿ ಅಧಿಕವಾಗಿರುವುದರಿಂದ ವಯೋವೃದ್ಧರು, ಮಕ್ಕಳು ಹೊರಗೆ ಹೋಗಲು ಹಿಂಜರಿಯುತ್ತಿರುವ ಕಾರಣ ಈ ಬಾರಿ ಬೇಸಿಗೆ ರಜೆಯಲ್ಲಿ ಪ್ರವಾಸಿಗರ ಸಂಖ್ಯೆ ತೀವ್ರ ಇಳಿಮುಖವಾಗಿದೆ.
-ಉಮೇಶ ಟಿ.ಎನ್. ಪುರಾತತ್ವ ಇಲಾಖೆ ಸಂರಕ್ಷಣಾಧಿಕಾರಿ