3 ಡಿಸಿಎಂ ಬೇಕೆಂಬ ಹೇಳಿಕೆಗೆ ಬದ್ಧ, ನಾನು ಡಿಸಿಎಂ ಆಗಲ್ಲ: ಸಚಿವ ರಾಜಣ್ಣ
ಸಿದ್ದರಾಮಯ್ಯ ಸಂಪುಟಕ್ಕೆ ಈಗ ಮೂವರು ಉಪ ಮುಖ್ಯಮಂತ್ರಿಗಳು ಬೇಕು ಎಂದು ತಾವು ಹೇಳಿದ್ದು ಏಕೆ ಎಂಬುದನ್ನು ಸಾದ್ಯಂತವಾಗಿ ವಿವರಿಸಲು ಕನ್ನಡಪ್ರಭದೊಂದಿಗೆ ಮುಖಾಮುಖಿಯಾಗಿದ್ದಾರೆ ಸಹಕಾರಿ ಸಚಿವ ಕೆ.ಎನ್.ರಾಜಣ್ಣ.

ಸಂದರ್ಶನ: ಎಸ್. ಗಿರೀಶ್ ಬಾಬು, ಚಂದ್ರಮೌಳಿ ಎಂ.ಆರ್.
ಸರಿ ಕಂಡಿದ್ದನ್ನು ನೇರ ಹಾಗೂ ನಿಷ್ಠುರವಾಗಿ ಹೇಳುವ ಅಗ್ರಗಣ್ಯ ನಾಯಕ ಕೆ.ಎನ್. ರಾಜಣ್ಣ. ಮಕ್ಕಳಿಗೆ ಉಚಿತ ಶೂಗಳನ್ನುನೀಡುವ ಯೋಜನೆ ಘೋಷಿಸದಿದ್ದರೆ ನಿಮ್ಮ ಬಜೆಟ್ ಪುಸ್ತಕವನ್ನು ಹರಿದುಹಾಕುವೆ ಎನ್ನುವ ಒತ್ತಡ ಹಾಕಿ ಸಿದ್ದರಾಮಯ್ಯ ಅವರಿಂದ ಶೂಭಾಗ್ಯ ಯೋಜನೆ ಘೋಷಣೆಯಾಗುವಂತೆ ಮಾಡುವುದಾಗಲಿ ಅಥವಾ ಸಹಕಾರಿ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರ ಮೂಗು ತೂರಿಸುತ್ತಿದೆ ಎಂದು ಎಲ್ಲ ಕಾಂಗ್ರೆಸ್ಸಿಗರೂ ಕೆಂಡ ಕಾರುವಾಗ ಕೇಂದ್ರ ಸಚಿವ ಅಮಿತ್ ಶಾ ಸಹಕಾರಿ ಕ್ಷೇತ್ರದಲ್ಲಿ ತರುತ್ತಿರುವ ಕಾನೂನು ಬದಲಾವಣೆಯನ್ನು ಸಮರ್ಥಿಸಿಕೊಳ್ಳುವವರೆಗೆ...
ತಮಗೆ ಸರಿಕಂಡಂತೆ ನಡೆದಿದ್ದಾರೆ ರಾಜಣ್ಣ. ಇಂತಹ ರಾಜಣ್ಣ ಸಹಕಾರ ಇಲಾಖೆ ಹೊಣೆ ಹೊತ್ತು ಸಹಕಾರ ತತ್ವ ಪ್ರತಿ ಗ್ರಾಮ ಪಂಚಾಯತಿ ಮಟ್ಟಕ್ಕೆ ಇಳಿಯುವಂತೆ ಮಾಡಲು ರೂಪಿಸಿರುವ ಯೋಜನೆ, ಸಹಕಾರಿ ಸಂಘಗಳಲ್ಲಿನ ಅಕ್ರಮಕ್ಕೆ ಕಡಿವಾಣ ಹಾಕಲು ಕೈಗೊಳ್ಳಲು ಮುಂದಾಗಿರುವ ಕ್ರಮ, ಸಹಕಾರಿ ಕ್ಷೇತ್ರದ ಲೋಪದೋಷ ಸರಿಪಡಿಸಲು ಸವದಿ ಸಮಿತಿ ರಚಿಸಿದ್ದರ ಹಿನ್ನೆಲೆ, ಜತೆಗೆ ಸಿದ್ದರಾಮಯ್ಯ ಸಂಪುಟಕ್ಕೆ ಈಗ ಮೂವರು ಉಪ ಮುಖ್ಯಮಂತ್ರಿಗಳು ಬೇಕು ಎಂದು ತಾವು ಹೇಳಿದ್ದು ಏಕೆ ಎಂಬುದನ್ನು ಸಾದ್ಯಂತವಾಗಿ ವಿವರಿಸಲು ಕನ್ನಡಪ್ರಭದೊಂದಿಗೆ ಮುಖಾಮುಖಿಯಾಗಿದ್ದಾರೆ ಸಹಕಾರಿ ಸಚಿವ ಕೆ.ಎನ್.ರಾಜಣ್ಣ.
ಎಸ್ಸಿ,ಎಸ್ಟಿ, ಅಲ್ಪಸಂಖ್ಯಾತ, ವೀರಶೈವರಿಗೂ ಡಿಸಿಎಂ ಹುದ್ದೆ ಸಿಗಲಿ: ಸಚಿವ ರಾಜಣ್ಣ
* ಹಠಾತ್ ಆಗಿ ಡಿಸಿಎಂ ಹುದ್ದೆ ಬೆಂಕಿ ಕೂಗು ಹುಟ್ಟುಹಾಕಿದ್ರಿ, ಅದು ಏಕೆ?
ಲೋಕಸಭಾ ಚುನಾವಣೆ ಸಮೀಪಿಸಿದೆ. ಈ ಚುನಾವಣೆಯ ಫಲಿತಾಂಶ ರಾಜ್ಯ ರಾಜಕಾರಣದ ಮೇಲೂ ಪ್ರಭಾವ ಬೀರುವ ಸಾಧ್ಯತೆಯಿದೆ. ಹೀಗಾಗಿ ಈ ಚುನಾವಣೆಯಲ್ಲಿ ಕಾಂಗ್ರೆಸ್ ಅತಿ ಹೆಚ್ಚು ಸ್ಥಾನ ಗೆಲ್ಲಬೇಕು. ಹೀಗಾಗಲು ಎಲ್ಲ ಸಮುದಾಯಗಳ ಬೆಂಬಲ ಕಾಂಗ್ರೆಸ್‌ಗೆ ಬೇಕು. ಹಿಂದೆ ಬಿಜೆಪಿ ಬೇರೆ ಬೇರೆ ಸಮುದಾಯದ ಮೂವರನ್ನು ಉಪಮುಖ್ಯಮಂತ್ರಿಗಳನ್ನಾಗಿ ಮಾಡಿದ್ದರು. ಇದೇ ಕಾರಣದಿಂದ ಮೂವರು ಡಿಸಿಎಂ ಪ್ರಸ್ತಾಪ ಮಾಡಿದ್ದೇನೆ. ಇದರಲ್ಲಿ ಬೇರೆ ಯಾವುದೇ ಉದ್ದೇಶವಿಲ್ಲ.
* ಈ ಕೂಗು ಹುಟ್ಟುಹಾಕುವುದರ ಹಿಂದೆ ನಿಮ್ಮ ಆಸಕ್ತಿಯೇನು?
ನನ್ನದೇನೂ ಆಸಕ್ತಿ ಇಲ್ಲ. ಪಕ್ಷದ ಹಿತಕ್ಕಾಗಿ ಹೇಳಿದ ಮಾತಿದು. ಇಷ್ಟಕ್ಕೂ ನಾನೇನೂ ಡಿಸಿಎಂ ಆಗುವುದಿಲ್ಲ. ಅಷ್ಟೇ ಅಲ್ಲ. ಇದೇ ನನ್ನ ಕಡೆ ಚುನಾವಣೆ. ನನಗೂ ವಯಸ್ಸಾಯ್ತು. ಮೊದಲು ಹತ್ತಾರು ಪುಶ್ ಅಪ್ ಹೊಡೆಯುತ್ತಿದ್ದೆ. ಈಗ ಹತ್ತು ಹೊಡೆಯುವಷ್ಟರಲ್ಲಿ ಸುಸ್ತಾಗುತ್ತದೆ. ಹೀಗಾಗಿ ಮುಂದೆ ಚುನಾವಣೆ ನಿಲ್ಲುವ ಉದ್ದೇಶ ನನಗೆ ಇಲ್ಲ. ಕೇವಲ ಪಕ್ಷ ಹಿತಕ್ಕಾಗಿ ನೀಡಿದ ಹೇಳಿಕೆಯಿದು. ನನ್ನ ಈ ಹೇಳಿಕೆಗೆ ನಾನು ಈಗಲೂ ಬದ್ಧನಾಗಿದ್ದೇನೆ.
* ಆದರೆ, ಈ ಹೇಳಿಕೆಯಿಂದಾಗಿ ಯಾರಿಗೋ ಹಿತ, ಇನ್ಯಾರಿಗೋ ಅಹಿತವಂತೆ?
ನಾನು ಈ ಹೇಳಿಕೆ ನೀಡಿದ ನಂತರ ಏನೇನೋ ಗಾಳಿಸುದ್ದಿ ಹುಟ್ಟಿಕೊಂಡು ಬಿಟ್ಟಿದೆ. ಸಿದ್ದರಾಮಯ್ಯ ಅವರೇ ನನ್ನಿಂದ ಹೇಳಿಕೆ ನೀಡಿಸಿದ್ದಾರೆ ಅಂತ ಒಂದು ಗಾಳಿ ಸುದ್ದಿ. ಹರಿಪ್ರಸಾದ್ ವಿರೋಧ ಆರಂಭವಾದ ನಂತರ ಈ ಹೇಳಿಕೆ ನೀಡಿಸಿ ವಿಷಯಾಂತರ ಮಾಡಿಸುತ್ತಿದ್ದಾರೆ ಅಂತ ಮತ್ತೊಂದು ಗಾಳಿ ಸುದ್ದಿ. ಆದರೆ, ಪ್ರಾಮಾಣಿಕವಾಗಿ ಹೇಳುತ್ತೇನೆ. ಈ ವಿಚಾರದ ಬಗ್ಗೆ ಸಿಎಂ ಆಗಲಿ ಅಥವಾ ಬೇರೆ ಯಾರೇ ಆಗಲಿ ನನ್ನ ಜತೆ ಮಾತನಾಡಿಲ್ಲ. ನಾನು ನನಗೆ ಅನಿಸಿದ್ದನ್ನು ಹೇಳಿದ್ದೇನೆ. ಇನ್ಯಾರು ನನಗೆ ಹೀಗೆ ಹೇಳುವಂತೆ ಮಾಡಿಲ್ಲ.
* ಹೆಚ್ಚುವರಿ ಡಿಸಿಎಂ ಸೃಷ್ಟಿಯಾದರೆ ಹಾಲಿ ಡಿಸಿಎಂ ಶಿವಕುಮಾರ್ ಪ್ರಾಮುಖ್ಯತೆ ಕಡಿಮೆಯಾಗುವುದಿಲ್ಲವೇ?
ನನ್ನ ಹೇಳಿಕೆ ಉದ್ದೇಶ ಅದಲ್ಲ. ಇವತ್ತು ರಾಜಕೀಯ ನಡೆಯುತ್ತಿರುವುದು ದುಡ್ಡು, ಜಾತಿಯ ಮೇಲೆ. ಇಡೀ ವ್ಯವಸ್ಥೆ ರೀತಿ ಇದೆ. ನಾನು ಯಾರ ಪರವಾಗಿಯೂ ಇಲ್ಲ, ಯಾರ ಪರವಾಗಿ ಮಾತನಾಡಿದರೆ ನನಗೇನೂ ಆಗಬೇಕಾಗಿಲ್ಲ. ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲಬೇಕು ಎಂಬ ಕಾರಣದಿಂದ ಹೇಳಿದ್ದೇನೆ. ಇನ್ನೂ ಡಿ.ಕೆ. ಶಿವಕುಮಾರ್ ಅವರು ಅತ್ಯುತ್ತಮ ಸಂಘಟಕ. ಅವರು ರಾಜಕೀಯವಾಗಿ ಮತ್ತಷ್ಟು ಬೆಳೆಯಬೇಕು ಎಂದು ಬಯಸುವವರಲ್ಲಿ ನಾನು ಒಬ್ಬ. ನನ್ನ ಈ ಹೇಳಿಕೆಯ ಹಿಂದೆ ಅವರ ಪ್ರಾಮುಖ್ಯತೆ ಕಡಿಮೆ ಮಾಡುವ ಯಾವ ಉದ್ದೇಶವೂ ಇಲ್ಲ.
* ಇಷ್ಟು ದೊಡ್ಡ ಕೂಗು ಹುಟ್ಟಿಹಾಕಿರುವ ಡಿಸಿಎಂ ಹುದ್ದೆಗೆ ಸಂವಿಧಾನದ ಮಾನ್ಯತೆಯೇ ಇಲ್ಲವಲ್ಲ?
ಹೌದು. ಸಂವಿಧಾನದಲ್ಲಿ ಈ ಹುದ್ದೆಗೆ ಮಾನ್ಯತೆಯಿಲ್ಲ. ಅದೊಂದು ಹುದ್ದೆಯೇ ಹೊರತು, ಅದರಿಂದ ಸಾರಿಗೆ, ಭತ್ಯೆ ಯಾವುದು ಹೆಚ್ಚು ಸಿಗುವುದಿಲ್ಲ. ಅದು ನಿಜ. ಆದರೆ, ಬಿಜೆಪಿಯವರೂ 3 ಡಿಸಿಎಂ ಮಾಡಿದ್ದರಲ್ಲ. ಆಗ ಏಕೆ ನೀವು (ಮಾಧ್ಯಮ) ಅದನ್ನು ಪ್ರಶ್ನಿಸಲಿಲ್ಲ?
* ಸಿದ್ದರಾಮಯ್ಯ ಅವರೇ 5 ವರ್ಷ ಮುಖ್ಯಮಂತ್ರಿ ಆಗಬೇಕು ಎಂದು ಹೇಳಿಕೆ ನೀಡಿದ್ದಿರಿ, ಏಕೆ,ಅಧಿಕಾರ ಹಂಚಿಕೆ ಸೂತ್ರವಿರುವುದು ನಿಜವೇ?
ಸಿದ್ದರಾಮಯ್ಯ ಅವರು ಐದು ವರ್ಷ ಸಿಎಂ ಆಗಿರಬೇಕು. ಮುಂದಿನ ಚುನಾವಣೆ ನಂತರವೂ ಐದು ವರ್ಷವೂ ಅವರೇ ಸಿಎಂ ಆಗಬೇಕು. ಈ ಮಾತನ್ನು ನಾನೊಬ್ಬನೇ ಹೇಳುತ್ತಿಲ್ಲ. ಇನ್ನೂ ಹಲವಾರು ಮಂದಿ ಹೇಳಿದ್ದಾರೆ. ಇನ್ನು ಅಧಿಕಾರ ಹಂಚಿಕೆ ಸೂತ್ರ ಎಂಬುದೆಲ್ಲ, ನಮಗೆ ಗೊತ್ತಿಲ್ಲದ ವಿಷಯ, ನಮ್ಮ ಅನಿಸಿಕೆ, ಭಾವನೆಯನ್ನು ನಾವು ಹೇಳಿಕೊಳ್ಳುತ್ತೇವೆ. ಆದರೆ, ಅಂತಿಮ ನಿರ್ಧಾರ ಹೈಕಮಾಂಡ್‌ಗೆ ಬಿಟ್ಟದ್ದು.
* ಸಿದ್ದರಾಮಯ್ಯ ಸರಿ, ಅವರ ಸಂಪುಟವೂ ಮುಂದಿನ 5 ವರ್ಷ ಮುಂದುವರೆಯಬೇಕೇ?
ಹಾಗಂತ ನಾನು ಹೇಳುವುದಿಲ್ಲ. ನನ್ನ ಹೇಳಿಕೆಯೇನಿದ್ದರೂ ಸಿದ್ದರಾಮಯ್ಯ ಅವರಿಗೆ ಸೀಮಿತ. ಇಷ್ಟಕ್ಕೂ ಸಿದ್ದರಾಮಯ್ಯ ಏಕೆ 5 ವರ್ಷ ಇರಬೇಕು ಎಂದರೆ, ಅವರಿಗೆ ರೈತರು, ಬಡವರು, ಹಿಂದುಳಿದವರ ಬಗ್ಗೆ ಏನಾದರೂ ಮಾಡುವ ಮನಸ್ಥಿತಿಯಿದೆ. ಶೂ ಭಾಗ್ಯಕ್ಕಾಗಿ ನಾನು ಹಠ ಹಿಡಿದಾಗ ಆರಂಭದಲ್ಲಿ ಹಣಕಾಸು ಇಲಾಖೆ ಬೇಡ ಎನ್ನುತ್ತಿದೆ ಎಂದು ಹೇಳಿದ್ದರಾದರೂ ಅಂತಿಮವಾಗಿ ಬಜೆಟ್ ನಲ್ಲಿ ಯೋಜನೆ ಘೋಷಿಸಿದರು. ತಮ್ಮ ಜೀವನದ ಅನುಭವ ಆಧರಿಸಿ ಅನ್ನಭಾಗ್ಯದಂತಹ ಯೋಜನೆ ತಂದರು. ಹೀಗಾಗಿ ಅವರ ಪರ ನನ್ನ ಹೇಳಿಕೆ ನೀಡಿದ್ದೆ.
* ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ್ ಅವರು ಅತಿ ಹಿಂದುಳಿದ ವರ್ಗ ಸಮಾವೇಶ ನಡೆಸಲು ಮುಂದಾಗಿದ್ದಾರೆ?
ಹರಿಪ್ರಸಾದ್ ಅವರನ್ನು 40 ವರ್ಷಗಳಿಂದ ಬಲ್ಲೆ, ಯಾವತ್ತೂ ಕೂಡಾ ಅವರು ಹೈಕಮಾಂಡ್ ವಿರುದ್ಧ ಹೋಗಿಲ್ಲ. ಹೈಕಮಾಂಡ್ ಆದೇಶ ಧಿಕ್ಕರಿಸುವ ವ್ಯಕ್ತಿ ಅಲ್ಲ. ಅವರು ಪಕ್ಷದ ಹಿತದೃಷ್ಟಿಯಿಂದ ಸಮಾವೇಶ ನಡೆಸಲು ಹೊರಟಿದ್ದಾರೆ ಎಂದು ನಾವು ಭಾವಿಸಬೇಕಾಗುತ್ತದೆ.
* ಸಹಕಾರಿ ಬ್ಯಾಂಕುಗಳ ವಲಯದಲ್ಲಿ ಹಣದ ದುರುಪಯೋಗ, ಕಾಲಕ್ಕೆ ತಕ್ಕಂತೆ ಕಾನೂನು ಬದಲಾವಣೆಯಾಗದೇ ಸಹಕಾರಿಗಳಿಗೆ ತೊಂದರೆ ಉಂಟಾಗುತ್ತಿದೆ ಎಂಬ ದೂರಿದೆಯಲ್ಲ?
ನಿಜ, ಇತ್ತೀಚಿನ ವರ್ಷಗಳಲ್ಲಿ ಹೊಸ ಕಾನೂನು, ನಿಯಮ ಸೇರಿದಂತೆ ನಾನಾ ಕಾರಣಗಳಿಂದ ಡಿಸಿಸಿ ಬ್ಯಾಂಕುಗಳು ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿವೆ. ಪ್ರಮುಖವಾಗಿ ಡಿಸಿಸಿ ಬ್ಯಾಂಕುಗಳಿಗೆ ಇದ್ದ ಆದಾಯ ತೆರಿಗೆ ವಿನಾಯಿತಿ ಸೌಲಭ್ಯವನ್ನು ಕೇಂದ್ರ ಹಣಕಾಸು ಸಚಿವರಾಗಿದ್ದ ಚಿದಂಬರಂ ಕಾಲದಲ್ಲಿ ತೆಗೆದು ಹಾಕಲಾಗಿದೆ.ಇದಾದ ನಂತರ ಅರ್ಬನ್ ಬ್ಯಾಂಕ್‌ನಲ್ಲಿ ಬಂದ ಠೇವಣಿ ಹಣದಲ್ಲಿ ಶೇ. 20 ರಷ್ಟನ್ನು ಶಾಸನ ಬದ್ದ ದ್ರವ್ಯ ಅನುಪಾತ (ಎಸ್‌ಎಲ್‌ಆರ್) ತೆಗೆದಿಡಬೇಕು, ಜಿಲ್ಲಾ ಬ್ಯಾಂಕುಗಳಲ್ಲಿನ ಸಂಗ್ರಹವಾಗುವ ಠೇವಣಿ ಅಪೆಕ್ಸ್ ಬ್ಯಾಂಕ್‌ನಲ್ಲಿ ಇಡಬೇಕು. ಈ ಬ್ಯಾಂಕ್‌ಗಳಲ್ಲಿ ಇಟ್ಟ ಠೇವಣಿಯಲ್ಲಿ ಶೇ. 20 ರಷ್ಟನ್ನು ರಿಸರ್ವ್ ಬ್ಯಾಂಕ್‌ನಲ್ಲಿ ಇಡಲಾಗುತ್ತಿತ್ತು. ಆದರೆ ಈಗ ಎಸ್‌ಎಲ್‌ಆರ್ ಪದ್ಧತಿ ತೆಗೆದು ಸರ್ಕಾರಿ ಸೆಕ್ಯೂರಿಟಿಯಲ್ಲಿ (ಬಾಂಡ್, ಡಿಬೆಂಚರ್ ಇತ್ಯಾದಿ) ಇಡಬೇಕು ಎಂದು ಹೇಳಲಾಗುತ್ತಿದೆ. ಇದರಿಂದ ಬ್ಯಾಂಕುಗಳಿಗೆ ತೊಂದರೆಯಾಗಿದೆ. ಇಂತಹ ಹಲವು ಸಮಸ್ಯೆಗಳು ಆಂತರಿಕವಾಗಿ ಇವೆ. ಇವುಗಳನ್ನು ಸರಿಪಡಿಸಬೇಕಾಗಿದೆ.
* ಇದನ್ನು ಸರಿಪಡಿಸಲು ಏನು ಮಾಡುತ್ತೀರಿ?
ಸಹಕಾರಿ ಬ್ಯಾಂಕುಗಳಲ್ಲಿ ಇರುವ ದೋಷ ಸರಿಪಡಿಸಲು ಹಿರಿಯ ಸಹಕಾರಿ ಲಕ್ಷ್ಮಣ ಸವದಿ ನೇತೃತ್ವದಲ್ಲಿ ಅನುಭವಿ ಸಹಕಾರಿಗಳ ಸಮಿತಿ ರಚಿಸಲಾಗಿದೆ. ಸಮಿತಿಯಲ್ಲಿ ಎಸ್.ಆರ್. ಪಾಟೀಲ್, ಜಿ.ಟಿ. ದೇವೇಗೌಡ, ಷಡಕ್ಷರಿ, ಶಿವರಾಂ ಹೆಬ್ಬಾರ್, ರಾಜೇಂದ್ರ ರಾಜಣ್ಣ ಮೊದಲಾದವರಿದ್ದಾರೆ. ಈ ಸಮಿತಿ ಒಟ್ಟಾರೆ ಸಹಕಾರಿಗಳಿಗೆ ತೊಂದರೆ ಕೊಡುವಂತಹ ಕಾಯ್ದೆ, ಕಾನೂನು, ನಿಯಮಗಳಿದ್ದಲ್ಲಿ ಅವುಗಳನ್ನು ಪರಾಮರ್ಶೆ ಮಾಡಿ ತಿದ್ದುಪಡಿ ಮಾಡಬೇಕು, ಈ ಬಗ್ಗೆ ಶಿಫಾರಸು ಮಾಡುವಂತೆ ಸಮಿತಿಗೆ ಸೂಚಿಸಲಾಗಿದೆ. ಒಂದು ತಿಂಗಳಲ್ಲಿ ವರದಿ ನೀಡುವಂತೆ ಕೋರಲಾಗಿದೆ. ಸಾಧ್ಯವಾದರೆ ಬೆಳಗಾವಿ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆ ಮಂಡಿಸಲಾಗುವುದು, ಯಾವುದೇ ಕಾನೂನು ತುರ್ತಾಗಿ ಜಾರಿ ತರುವ ಅಗತ್ಯವಿದ್ದರೆ ಸುಗ್ರೀವಾಜ್ಞೆ ಹೊರಡಿಸಿ ಜಾರಿಗೆ ತರಲಾಗುವುದು.
* ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ ಬಗ್ಗೆ ಆರೋಪಗಳು ಕೇಳಿ ಬರುತ್ತಿವೆ?
ನಮ್ಮಲ್ಲಿ ಕೋ ಆಪರೇಟಿವ್ ಆಡಿಟ್‌ಗೂ ರಾಜ್ಯ ಅಕೌಂಟ್ಸ್ ಅಡಿಟ್ ಕಾರ್ಯಗಳಲ್ಲಿ ತುಂಬಾ ವ್ಯತ್ಯಾಸವಿದೆ. ಹೀಗಿದ್ದರೂ ಸ್ಟೇಟ್ಸ್ ಅಕೌಂಟ್ಸ್ ಇಲಾಖೆಯಲ್ಲಿ ಕೋ ಆಪರೇಟಿವ್ ಆಡಿಟ್ ವಿಭಾಗವನ್ನು ವಿಲೀನ ಮಾಡಲಾಗಿದೆ. ಈ ಪದ್ಧತಿ ಸರಿ ಇಲ್ಲ ಎಂಬ ಕಾರಣದಿಂದ ಈ ಮೊದಲಿನಂತೆ ಕೋ ಆಪರೇಟಿವ್ ಅಕೌಂಟ್ಸ್ ಇಲಾಖೆಯನ್ನು ಪ್ರತ್ಯೇಕಗೊಳಿಸಲು ಸಚಿವ ಸಂಪುಟದ ಒಪ್ಪಿಗೆ ಪಡೆಯಲಾಗಿದೆ. ಒಂದೆರಡು ದಿನದಲ್ಲಿ ಈ ಸಂಬಂಧ ಸರ್ಕಾರ ಆದೇಶ ಹೊರಡಿಸಲಾಗುವುದು.
* ಮರು ಜಾರಿ ಮಾಡಿರುವ ಯಶಸ್ವಿನಿ ಯೋಜನೆಯಲ್ಲಿ ನೀಡುವ ಚಿಕಿತ್ಸಾ ವೆಚ್ಚ ಕಡಿಮೆ ಎಂಬ ಕಾರಣದಿಂದ ಯೋಜನೆಯಡಿ ಖಾಸಗಿ ಆಸ್ಪತ್ರೆಗಳು ಸೇರ್ಪಡೆಯಾಗಲು ಹಿಂಜರಿಯುತ್ತಿವೆ?
ಬಹಳಷ್ಟು ಸಹಕಾರಿಗಳ ಒತ್ತಡದ ಕಾರಣ ಯಶಸ್ವಿನಿ ಜಾರಿಗೆ ತಂದಿದ್ದೇವೆ. ಚಿಕಿತ್ಸೆ ವೆಚ್ಚ ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕದ ಪ್ರಕಾರ ನಾವು ಚಿಕಿತ್ಸಾ ದರ ಕೊಡಲು ಖಾಸಗಿ ಆಸ್ಪತ್ರೆಗಳು ಒಪ್ಪಿಕೊಳ್ಳಲಾಗಿತ್ತು. ಆದರೆ ಈಗ ಹಳೆಯ ಯಶಸ್ವಿನಿ ಯೋಜನೆಯಡಿ ನಿಗದಿ ಮಾಡಿದ್ದ ದರ ನೀಡುವಂತೆ ಬೇಡಿಕೆ ಇಟ್ಟಿದ್ದರು. ಅದರ ಪ್ರಕಾರವೇ ನಾವು ದರ ನಿಗದಿ ಮಾಡಲು ಒಪ್ಪಿಕೊಂಡಿದ್ದೇವೆ. ಜೊತೆಗೆ ಈಗ ಜನವರಿಯಿಂದ ಡಿಸೆಂಬರ್‌ವರೆಗೆ ಯೋಜನೆ ಜಾರಿಯಲ್ಲಿದೆ. ಇದನ್ನು ಬದಲಾಯಿಸಿ ಆರ್ಥಿಕ ವರ್ಷ ಮಾರ್ಚನಿಂದ ಜಾರಿಗೆ ತರಲು ಉದ್ದೇಶಿದ್ದೇವೆ.
* ಹಿಂದಿನ ಸರ್ಕಾರ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಸ್ಥಾಪನೆಗೆ ಮುಂದಾಗಿತ್ತು. ಅದರ ಕಥೆ ಏನಾಯ್ತು?
ಕ್ಷೀರ ಬ್ಯಾಂಕ್ ಸ್ಥಾಪನೆ ಸಾಧ್ಯವಾಗದ ವಿಷಯ, 25 ವರ್ಷಗಳ ಹಿಂದೆ ನಾವು ಕೋ ಆಪರೇಟಿವ್ ಬ್ಯಾಂಕ್ ಆಫ್ ಇಂಡಿಯಾ ಸ್ಥಾಪಿಸಿ, ಬೇರೆ ಬೇರೆ ಸಂಸ್ಥೆಗಳು ಬಂಡವಾಳ ಹಾಕಿ ನಡೆಸಲು ಉದ್ದೇಶಿಸಿದ್ದೆವು. ಈವರೆಗೆ ರಿಸರ್ವ ಬ್ಯಾಂಕ್ ಆಫ್ ಇಂಡಿಯಾ ಲೈಸೆನ್ಸ್ ಕೊಡುವುದಿಲ್ಲ ಎಂದು ಹೇಳಿಲ್ಲ, ಕೊಡುತ್ತೇವೆ ಎಂದು ಹೇಳಿಲ್ಲ. ಹೀಗಿರುವಾಗ ಕ್ಷೀರ ಬ್ಯಾಂಕ್ ಸ್ಥಾಪನೆ ಕಾರ್ಯಸಾಧುವಲ್ಲ. ಇದು ಗೊತ್ತಿದ್ದರೂ ಹಿಂದಿನ ಬಿಜೆಪಿಯವರು ವೃಥಾ ಘೋಷಣೆ ಮಾಡಿದ್ದಾರೆ.
* ಶೂನ್ಯ ದರದಲ್ಲಿ ಸಾಲ ನೀಡುವ ಮೊತ್ತ ಹೆಚ್ಚಿಸಿರುವುದನ್ನು ಬಿಟ್ಟರೆ ಹೊಸ ಕಾರ್ಯಕ್ರಮ ಬಜೆಟ್‌ನಲ್ಲಿ ಘೋಷಣೆಯಾಗಿಲ್ಲ, ಗ್ಯಾರಂಟಿ ಯೋಜನೆ ಇದಕ್ಕೆ ಅಡ್ಡಿಯಾಯಿತೇ?
ಸಹಜವಾಗಿ ಗ್ಯಾರಂಟಿ ಯೋಜನೆಯಿಂದ ಒತ್ತಡ ಆಗಿಯೇ ಆಗುತ್ತದೆ. ಗ್ಯಾರಂಟಿ ಯೋಜನೆಯಿಂದ ಹೊಸ ಯೋಜನೆಗಳಿಗೆ ಸಹಾಯ ಮಾಡಲು ಕಷ್ಟ ಆಗುತ್ತದೆ. ಆದಾಗ್ಯೂ ಜನಪರ, ರೈತರ ಕಾರ್ಯಕ್ರಮಗಳನ್ನು ತಪ್ಪಿಸಲು ಆಗುವುದಿಲ್ಲ. ಬದ್ಧತಾ ಕಾರ್ಯಕ್ರಮಗಳನ್ನು ಮುಂದುವರೆಸಿಕೊಂಡು ಹೋಗಬೇಕಾಗುತ್ತದೆ.
* ರಾಜ್ಯದಲ್ಲಿ ಬರ ಇದೆ. ಸಾಲದ ಅವಧಿ ಪರಿಷ್ಕರಿಸುವ ಅಥವಾ ಬಡ್ಡಿ ಮನ್ನಾ ಮಾಡುವ ಚಿಂತನೆ ಇದೆಯಾ?
ನಾವು ಕೊಡುವ ಸಾಲಕ್ಕೆ ಬಡ್ಡಿಯೇ ಇಲ್ಲ. ಹಿಂದೆ ಬರ ಪೀಡಿತ ಪ್ರದೇಶ ಎಂದು ಘೋಷಿಸಲು ಸರಳ ಮಾನದಂಡವಿತ್ತು. ಆದರೆ ಇತ್ತೀಚೆಗೆ ಕೇಂದ್ರ ಸರ್ಕಾರ ಹೊಸ ಮಾನದಂಡಗಳನ್ನು ರೂಪಿಸಿದೆ. ಮಳೆಯ ಪ್ರಮಾಣ, ಶುಷ್ಕ ವಾತಾವರಣ, ಉಪಗ್ರಹ ಚಿತ್ರ ಆಧರಿಸಿ ಹಸಿರಿನ ಹೊದಿಕೆ ಮುಂತಾದ ಅಂಶಗಳನ್ನು ಆಧರಿಸಿ ಬರ ಪೀಡಿತ ಎಂದು ತಂತಜ್ಞಾನ ಅಂಶ ನೋಡಿಕೊಂಡು ನಿರ್ಧರಿಸಲಾಗುತ್ತಿದೆ. ಇದರಿಂದ ಅಂತಿಮವಾಗಿ ಜನರಿಗೆ ತೊಂದರೆಯಾಗುತ್ತದೆ ಅಷ್ಟೇ. ಹೀಗಾಗಿ ಈ ಮಾನದಂಡ ಬದಲಾಯಿಸುವಂತೆ ಮುಖ್ಯಮಂತ್ರಿಗಳು ಪತ್ರ ಬರೆದಿದ್ದಾರೆ.
* ಕೇಂದ್ರ ಸರ್ಕಾರ ಸಹಕಾರ ಇಲಾಖೆ ರಚಿಸುವ ಮೂಲಕ ರಾಜ್ಯದ ಸಹಕಾರ ವಲಯ ನಿಯಂತ್ರಣ ಇಟ್ಟುಕೊಳ್ಳುವ ಪ್ರಯತ್ನ ಮಾಡುತ್ತಿದೆಯಂತೆ?
ರಾಜ್ಯ ಸಹಕಾರ ಕಾಯ್ದೆ ಹಾಗೂ ಕೇಂದ್ರ ಸಹಕಾರ ಕಾಯ್ದೆ ಎಂಬ ಎರಡು ವಿಧವಿದೆ. ರಾಜ್ಯ ಸಹಕಾರ ಕಾಯ್ದೆಯಲ್ಲಿ ಕೇಂದ್ರಕ್ಕೆ ತಿದ್ದುಪಡಿ ಮಾಡಲು ಬರುವುದಿಲ್ಲ. ಆದರೆ ಸಲಹೆ ನೀಡಬಹುದು. ಬಹುರಾಜ್ಯಗಳಲ್ಲಿ ಕಾರ್ಯನಿರ್ವಹಿಸುವ ಸಹಕಾರ ಸಂಸ್ಥೆಗಳಲ್ಲಿ ಮಾತ್ರ ಕೇಂದ್ರ ಮಧ್ಯಪ್ರವೇಶ ಮಾಡಬಹುದು. ವೈಯಕ್ತಿಕವಾಗಿ ಸಹಕಾರ ಆಂದೋಲನ ಸದಸ್ಯರಿಂದ ನಡೆಯುತ್ತಿದೆ. ಹಾಗಾಗಿ ಕೇಂದ್ರ ಸಹಕಾರ ಇಲಾಖೆ ತನ್ನ ಇತಿಮಿತಿಯಲ್ಲಿ ಮಧ್ಯ ಪ್ರವೇಶಿಸುವುದು ತಪ್ಪಲ್ಲ.
* ಹೊಸ ಡಿಸಿಸಿ ಬ್ಯಾಂಕ್ ರಚನೆ ಮಾಡಬೇಕೆಂಬ ಆಗ್ರಹ ಬಹಳ ಕಾಲದಿಂದ ಇದೆ?
ಕಳೆದ 10 ವರ್ಷಗಳ ಹಿಂದೆ ಲೈಸೆನ್ಸ್ ಇಲ್ಲದೇ ಬಹುತೇಕ ಡಿಸಿಸಿ ಬ್ಯಾಂಕುಗಳು ಕಾರ್ಯನಿರ್ವಹಿಸುತ್ತಿದ್ದವು. ಆದರೆ ಈಗ ಹೊಸದಾಗಿ ಡಿಸಿಸಿ ಬ್ಯಾಂಕ್ ಸ್ಥಾಪನೆಗೆ ಅನುಮತಿ ಪಡೆಯಬೇಕಾದರೆ ನಿಗದಿಗೊಳಿಸಿರುವ ಮಾನದಂಡ ಪಾಲನೆ ಮಾಡಬೇಕು. ಹಾಗಾಗಿ ಈಗಿರುವ ಲೈಸೆನ್ಸ್ ಪಡೆಯುವುದು ಕಷ್ಟ.
3 ಡಿಸಿಎಂ ವರಿಷ್ಠರ ಮಟ್ಟದಲ್ಲಿ ಚರ್ಚೆಗೆ ಬಂದಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ
* ಸಚಿವ ಕೆ.ಎಚ್. ಮುನಿಯಪ್ಪ ಎರಡೂವರೆ ವರ್ಷದ ನಂತರ ಸಂಪುಟದಿಂದ ಕೆಲವರನ್ನು ಕೈಬಿಡಬೇಕು ಅಂತಾರಲ್ಲ?
ಅಧಿಕಾರ ಕೆಲವರ ಬಳಿ ಕೇಂದ್ರಿಕೃತವಾಗಬಾರದು. ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿಯಾಗಲು, ಮಂತ್ರಿಗಳಾಗಲು ಎಷ್ಟೊಂದು ಜನರಿಗೆ ಆಸೆ ಇದೆ. ಎಲ್ಲರಿಗೂ ಅವಕಾಶ ಸಿಗಲಿ ಬಿಡಿ.
* ಸಹಕಾರ ಇಲಾಖೆಯಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇವೆ. ಇವುಗಳ ಭರ್ತಿಗೆ ಯಾವಾಗ?
ಸಹಕಾರ ಬ್ಯಾಂಕುಗಳಲ್ಲಿ ಹುದ್ದೆ ಖಾಲಿ ಇಲ್ಲ, ಬದಲಾಗಿ ಇಲಾಖೆಯಲ್ಲಿ ಖಾಲಿ ಇದೆ.ಆದರೆ ಈ ಹುದ್ದೆಗಳನ್ನು ಹೊರಗುತ್ತಿಗೆ ಮೇಲೆ ತೆಗೆದುಕೊಳ್ಳಲಾಗಿದೆ. ಅವರಿಗೆ ಯಾವ ಜವಾಬ್ದಾರಿ ಇಲ್ಲ. ಅವರು ತಪ್ಪು ಮಾಡಿದರೆ ಹೊಣೆಗಾರಿಕೆ ನಿಗದಿ ಮಾಡಲು ಆಗುವುದಿಲ್ಲ, ತಪ್ಪಿಸಿಕೊಂಡು ಹೋಗಿ ಬಿಡುತ್ತಾರೆ. ಅಷ್ಟೇ ಅಲ್ಲ ಹೊರಗುತ್ತಿಗೆಯಲ್ಲಿ ಮೀಸಲಾತಿ ಸಹ ಪಾಲನೆ ಆಗುವುದಿಲ್ಲ. ಹಾಗಾಗಿ ಹೊರಗುತ್ತಿಗೆ ಬದಲು ಸರ್ಕಾರ ನೇಮಕಾತಿ ಮಾಡಿಕೊಳ್ಳಬೇಕು ಎಂಬುದು ತಮ್ಮ ಅಭಿಪ್ರಾಯ, ನೇಮಕಾತಿ ಮಾಡಿಕೊಂಡರೆ ಹೊಣೆಗಾರಿಕೆ ಸಹ ಆತನಿಗೆ ನಿಗದಿಮಾಡಲು ಸಾಧ್ಯ.