Asianet Suvarna News Asianet Suvarna News

5 ನಿಮಿಷದಲ್ಲಿ ಕೊವಿಡ್ ಪರೀಕ್ಷೆ: ಸಂಶೋಧಕರ ಜತೆ ಡಾ.ಅಶ್ವತ್ಥನಾರಾಯಣ ಚರ್ಚೆ!

ಕೊರೋನಾ ವೈರಸ್ ನಿಯಂತ್ರಣಕ್ಕ ಸರ್ಕಾರದ ಜೊತೆ ಹಲವು ಸಂಸ್ಥೆಗಳು ಅವಿರತ ಪ್ರಯತ್ನ ಮಾಡುತ್ತಿದೆ. ಇದೀಗ ಬೆಂಗಳೂರು ಬಯೋ ಇನೋವೇಷನ್‌ ಸೆಂಟರ್‌' ನಲ್ಲಿ ಇರುವ 45 ಸ್ಟಾರ್ಟ್ಅಪ್ ಗಳು ಕೊರೋನಾ ವೈರಸ್‌ ತ್ವರಿತಗತಿ ಪರೀಕ್ಷೆ ಹಾಗೂ ಲಸಿಕೆ ಕಂಡುಹಿಡಿಯುವ ಮಹತ್ ಕೆಲಸಕ್ಕೆ ಮುಂದಾಗಿದೆ   45 ಸ್ಟಾರ್ಟ್ ಅಪ್‌ ಜೊತೆ ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಚರ್ಚೆ ನಡೆಸಿದ್ದಾರೆ. 

DCM CN Ashwath Narayan discussion with coronavirus test researchers
Author
Bengaluru, First Published May 14, 2020, 7:54 PM IST

ಬೆಂಗಳೂರು(ಮೇ.14): ರಾಜ್ಯ ಜೈವಿಕ ತಂತ್ರಜ್ಞಾನ ಇಲಾಖೆಯ 'ಬೆಂಗಳೂರು ಬಯೋ ಇನೋವೇಷನ್‌ ಸೆಂಟರ್‌' ನಲ್ಲಿ ಇರುವ 45 ಸ್ಟಾರ್ಟ್ಅಪ್ ಗಳು ಕೊವಿಡ್ ಸೋಂಕಿಗೆ ಔಷಧ ಕಂಡುಹಿಡಿಯುವ‌‌‌ ಮತ್ತು ತ್ವರಿತವಾಗಿ ಸೋಂಕು ಪತ್ತೆ ಪರೀಕ್ಷೆ ಗಳನ್ನು ಕೈಗೆತ್ತಿಕೊಳ್ಳುವ ನಿಟ್ಟಿನಲ್ಲಿ ಅವಿರತ ಶ್ರಮ ಹಾಕುತ್ತಿದ್ದು ಅಂತಹ  ಕೆಲವು ಸಂಸ್ಥೆಗಳ ಪ್ರತಿನಿಧಿಗಳ ಜತೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಗುರುವಾರ ಸಂವಾದ‌ ನಡೆಸಿ, ಅವರಿಗೆ ಬೆಂಬಲ ಸೂಚಿಸಿದರು.

ಕ್ವಾರಂಟೈನ್ ಸಮಯದಲ್ಲಿ ಅಶ್ವಥ್ ನಾರಾಯಣ್ ಬರೆದ್ರು 'ನನ್ನ ಕ್ವಾರಂಟೈನ್ ಡೈರಿ'
 
ಎಲೆಕ್ಟ್ರಾನಿಕ್ ಸಿಟಿಯಲ್ಲಿ ಇರುವ 'ಬೆಂಗಳೂರು ಬಯೋ ಇನೋವೇಷನ್‌ ಸೆಂಟರ್‌'ಗೆ ಗುರುವಾರ ಭೇಟಿ ನೀಡಿದ ಅವರು  ಕೊವಿಡ್ ಟೆಸ್ಟ್‌ ಹಾಗೂ ಕೊವಿಡ್ ಔಷಧ ಅನ್ವೇಷಣೆ ಕಾರ್ಯದಲ್ಲಿ ತೊಡಗಿರುವ ಸಂಶೋಧಕರ ಜತೆ  ಸಂವಾದ ನಡೆಸಿದರಲ್ಲದೆ, ಎಸ್‌ಎನ್‌ ಲೈಫ್‌ಸೈನ್ಸಸ್‌, ಕಫ/ಸ್ವ್ಯಾಬ್‌ ಮಾದರಿಯಿಂದ ಆರ್‌ಎನ್‌ಎ ಬೇರ್ಪಡಿಸುವ  ಪ್ರೋಗ್ರಾಂಬಲ್‌ ರೊಬೊಟಿಕ್‌ ಯಂತ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

"ಕೊವಿಡ್ ಸೋಂಕಿಗೆ ಔಷಧ ಕಂಡುಹಿಡಿಯುವುದರ ಜತೆಗೆ ಕಡಿಮೆ ವೆಚ್ಚದಲ್ಲಿ ಮತ್ತು ತ್ವರಿತವಾಗಿ ಸೋಂಕು ಪತ್ತೆ ಮಾಡುವುದು ನಮ್ಮ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಕೆಲವು ಸ್ಟಾರ್ಟ್ ಅಪ್ ಗಳು ಕ್ಲಿನಿಕಲ್ ಟೆಸ್ಟ್ ಹಂತದಲ್ಲಿದ್ದರೆ, ಇನ್ನು ಕೆಲವು ಸಂಶೋಧನೆ ಮುಗಿಸಿ ನಿಯಂತ್ರಣ ಪ್ರಾಧಿಕಾರಗಳ ಒಪ್ಪಿಗೆಗಾಗಿ ಕಾಯುತ್ತಿವೆ. ಒಟ್ಟಿನಲ್ಲಿ ಕರ್ನಾಟಕದ ಸಂಸ್ಥೆಗಳು ಈ ಸೋಂಕಿನ ವಿರುದ್ಧ ಹೋರಾಡಲು ಜಗತ್ತಿಗೆ ಪರಿಹಾರ ಸೂಚಿಸುತ್ತಿರುವುದು‌ ನಿಜಕ್ಕೂ ಖುಷಿಯ ವಿಚಾರ," ಎಂದು ಉಪ ಮುಖ್ಯ ಮಂತ್ರಿ ಹೇಳಿದರು.

ಪಾದರಾಯನಪುರ, ಬಾಪೂಜಿ ನಗರ ಆಯ್ತು, ಈಗ ಇನ್ನೊಂದು ವಾರ್ಡ್ ಸೀಲ್‌ಡೌನ್

5 ನಿಮಿಷದ ಪರೀಕ್ಷೆ
"ಜೈವಿಕ ತಂತ್ರಜ್ಞಾನ ಕ್ಷೇತ್ರದ ಕಂಪನಿಯೊಂದು ಕೇವಲ 5 ನಿಮಿಷದಲ್ಲಿ ಕೊವಿಡ್ ಸೋಂಕು ಪರೀಕ್ಷೆ ಮಾಡುವ ಯಂತ್ರ ಸಿದ್ಧಪಡಿಸಿದ್ದರೆ, ಮತ್ತೊಂದು ಕಂಪನಿ ಸೋಂಕು ಪತ್ತೆ ಜತೆಗೆ ಸ್ಯಾಂಪಲ್ ಅನ್ನು ತಕ್ಷಣವೇ ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಯಂತ್ರ ಸಂಶೋಧಿಸಿದೆ. ಅದೇ ರೀತಿ ಹಲವು ಕಂಪನಿಗಳು ನಾನಾ ರೀತಿಯ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿವೆ. 'ಬೆಂಗಳೂರು ಬಯೋ ಇನೋವೇಷನ್‌ ಸೆಂಟರ್‌' ವ್ಯಾಪ್ತಿಯಲ್ಲಿ ಸ್ಟಾರ್ಟ್ಅಪ್ ಗಳು ಇಂತಹ ಯಶಸ್ಸು ಸಾಧಿಸುತ್ತಿರುವುದು ರಾಜ್ಯ ಮತ್ತು ದೇಶದ ದೃಷ್ಟಿಯಿಂದ ಅತ್ಯಂತ ಉತ್ತಮ ಬೆಳವಣಿಗೆ. ಆರೋಗ್ಯದ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೇ ಆರ್ಥಿಕ ವಹಿವಾಟು ಮುಂದುವರಿಸಲು 5 ನಿಮಿಷದ ಪರೀಕ್ಷೆಯಿಂದ ಸಾಧ್ಯವಾಗಲಿದೆ," ಎಂದರು.

"ಈಗಾಗಲೇ ಸೋಂಕು ಪತ್ತೆ ತಂತ್ರಜ್ಞಾನ ಅಭಿವೃದ್ಧಿಪಡಿಸಿರುವ ಕಂಪನಿಗಳು ಪ್ರಾಣಿಗಳ ಮೇಲೆ ಪ್ರಯೋಗ ಮಾಡಿ ಯಶಸ್ಸು ಸಾಧಿಸಿದ್ದು,ಇದೀಗ ಕೊವಿಡ್ ಸೋಂಕು ಪರೀಕ್ಷೆಗೆ ಸೋಂಕಿತರ ಗಂಟಲು ದ್ರವ ನೀಡುವಂತೆ ಕೇಳಿಕೊಂಡಿವೆ. ಈ ಪ್ರಯೋಗ ಯಶಸ್ವಿಯಾದರೆ ಸ್ಥಳೀಯವಾಗಿ ಸಿದ್ಧಪಡಿಸಿದ ತಂತ್ರಜ್ಞಾನದಿಂದಲೇ ಸೋಂಕು ಪತ್ತೆ ಮಾಡಬಹುದು ಎಂದು ಹೇಳಿವೆ. ಆದರೆ, ಪಾಸಿಟಿವ್ ಬಂದಿರುವ ರೋಗಿಯ ಗಂಟಲು ದ್ರವವನ್ನು ಸಂಗ್ರಹಿಸುವುದು ಮತ್ತು ಪ್ರಯೋಗದ ಬಳಿಕ ವಿಲೇವಾರಿ ಮಾಡುವುದು ಅತ್ಯಂತ ಸವಾಲಿನ ಕೆಲಸ. ಇದಕ್ಕೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕಾಗಿದೆ. ಈ ಎಲ್ಲಾ ಅಂಶಗಳನ್ನು ಪರಿಶೀಲಿಸಿ ಕಂಪನಿಗೆ ಅಗತ್ಯವಿರುವ ಗಂಟಲು ದ್ರವ ಮಾದರಿಯನ್ನು ಒದಗಿಸುವ ಕುರಿತು ಕ್ರಮ ತೆಗೆದುಕೊಳ್ಳಲಾಗುವುದು" ಎಂದು ತಿಳಿಸಿದರು.

ಸಮಿತಿ ರಚನೆ
ಈ ಸ್ಟಾರ್ಟ್ಅಪ್ ಕಂಪನಿಗಳು ಇನ್ನಷ್ಟು ಪರಿಣಾಕಾರಿಯಾಗಿ ತಮ್ಮ ಸಂಶೋಧನಾ ಕಾರ್ಯ ಮುಂದುವರಿಸಲು ಸರ್ಕಾರದಿಂದಲೂ ಸಾಕಷ್ಟು ಸಹಕಾರ ಬೇಕು. ಈ ಹಿನ್ನೆಲೆಯಲ್ಲಿ ಕಂಪನಿಗಳು ಮತ್ತು ಸರ್ಕಾರದ ಮಧ್ಯೆ ಸಮನ್ವಯ ಸಾಧಿಸಲು ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಲಾಗುವುದು. ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಸ್ಥಳದಲ್ಲೇ ಇದ್ದ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ. ರಮಣ ರೆಡ್ಡಿ ಅವರಿಗೆ ಸೂಚಿಸಿದರು.

ಒಂದೇ ಬಾರಿಗೆ 8 ಮಾದರಿ ಪರೀಕ್ಷೆ
"ಎಸ್‌ಎನ್‌ ಲೈಫ್‌ಸೈನ್ಸ್‌   ಪ್ರೋಗ್ರಾಂಬಲ್‌ ರೊಬೊಟಿಕ್‌ ಯಂತ್ರವು ಕಫ/ಸ್ವ್ಯಾಬ್‌ಗಳ  ಕ್ಲಿನಿಕಲ್‌ ಮಾದರಿಯ ಆರ್‌ಎನ್‌ಎ ಪ್ರತ್ಯೇಕಿಸುವ ಕೆಲಸ ಮಾಡುತ್ತದೆ,  ಏಕಕಾಲದಲ್ಲಿ ಎಂಟು ಮಾದರಿಗಳ ಟೆಸ್ಟ್‌ ಮಾಡುವುದು ಈ ಯಂತ್ರದ ವಿಶೇಷತೆ. ಜತೆಗೆ ಪ್ರತಿ ಮಾದರಿಯ ಆರ್‌ಎನ್‌ಎ ಪ್ರತ್ಯೇಕಿಸುವ ವೆಚ್ಚವು 500ರೂ. ನಿಂದ 150ಕ್ಕೆ ಇಳಿಕೆಯಾಗಲಿದೆ,"ಎಂದರು.

ಎಸ್‌ಎನ್‌ ಲೈಫ್‌ಸೈನ್ಸಸ್‌, ನಿಯೋಮ್‌ ಟೆಕ್ನಾಲಜಿಸ್‌ ಪ್ರೈವೇಟ್ ಲಿಮಿಟೆಡ್, ಹೈಬ್ರಿನೋಮಿಕ್ಸ್ ಲೈಫ್ ಸೈನ್ಸಸ್ ಅಂಡ್ ಡಯಾಗ್ನಾಸ್ಟಿಕ್ಸ್ ಎಲ್ಎಲ್ ಪಿ (ಎಚ್ಎಲ್ ಡಿ) ಹಾಗೂ ಗೆಲೊರಿ ಟಿಎಕ್ಸ್ ಫಾರ್ಮಾಸಿಟಿಕಲ್ಸ್ ಪ್ರವೈಟ್ ಲಿಮಿಟೆಡ್ ಕಂಪನಿಯವರು ತಮ್ಮ ಸಂಶೋಧನೆಗೆ ಸಂಬಂಧಿಸಿದಂತೆ ಪ್ರಾತ್ಯಕ್ಷಿಕೆಗಳನ್ನು ನೀಡಿದರು. ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣರೆಡ್ಡಿ, ಬಿಬಿಸಿ ಎಂ.ಡಿ ಡಾ.ಜಿತೇಂದ್ರ ಕುಮಾರ್, ಡಾ.ಶರತ್ ಚಂದ್ರ, ವಿಶಾಲ ರಾವ್ ಸೇರಿದಂತೆ ಇತರ ವಿಜ್ಞಾನಿಗಳು  ಹಾಜರಿದ್ದರು.

ಸಭೆ ಬಳಿಕ‌ ಉಪ ಮುಖ್ಯಮಂತ್ರಿ ಯವರು ಸೆಂಟರ್ ಫಾರ್ ಹೂಮನ್  ಜೆನೆಟಿಕ್ಸ್ ಮತ್ತು ಬಯೊ ಇನ್ಫಾರ್ಮೇಟಿಕ್ಸ ಮತ್ತು ಅನ್ವಯಿಕ ಜೈವಿಕ ತಂತ್ರಜ್ಞಾನ ಸಂಸ್ಥೆ ಗೆ ಭೇಟಿ‌ ನೀಡಿ ಪ್ರಯೋಗಾಲಯಗಳನ್ನು ವೀಕ್ಷಿಸಿದರು.

Follow Us:
Download App:
  • android
  • ios