ಸಚಿವ ಸ್ಥಾನದ ಭರವಸೆ ಹುಸಿಯಾದ ಕಾರಣ ರಾಜೀನಾಮೆ ನೀಡಿದ್ದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ, ಪಕ್ಷದ ವರಿಷ್ಠರ ಮನವಿ ಹಾಗೂ ಕಾರ್ಯಕರ್ತರ ಒತ್ತಾಯಕ್ಕೆ ಮಣಿದು ತಮ್ಮ ನಿರ್ಧಾರವನ್ನು ಹಿಂಪಡೆದಿದ್ದಾರೆ. ತಮಗೆ ಮಾತುಕೊಟ್ಟು ತಪ್ಪಿದ ನಾಯಕರ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ಇನ್ನು ಮುಂದೆ ಸಚಿವ ಸ್ಥಾನಕ್ಕಾಗಿ ಭಿಕ್ಷೆ ಬೇಡುವುದಿಲ್ಲ ಎಂದು ಹೇಳಿದ್ದಾರೆ.
ವಿಜಯುಪುರ: ನನಗೆ ಸಚಿವ ಸ್ಥಾನ ಕೊಡಲಿಲ್ಲವೆಂದು ನೋವಾಗಿಲ್ಲ. ಸಚಿವ ಸ್ಥಾನದ ಪಟ್ಟಿಯಲ್ಲಿ ಹೆಸರಿದ್ದು, ಕೊನೆಯ ಹಂತದಲ್ಲಿ ಹೆಸರು ಕೈಬಿಟ್ಟಿದ್ದಾರೆ. ಹೀಗೇಕೆ ಮಾಡಿದರು ಎಂಬ ನೋವಿದೆ. ಮಾತು ಕೊಟ್ಟಂತೆ ನಾಯಕರು ನಡೆದುಕೊಳ್ಳಲಿಲ್ಲ ಎಂಬ ಒಂದೇ ವಿಚಾರಕ್ಕೆ ರಾಜೀನಾಮೆ ನೀಡಿದ್ದೇನೆ. ನಿಮ್ಮೆಲ್ಲರ ಅಭಿಮಾನ, ಒತ್ತಾಯ, ವರಿಷ್ಠರ ಮನವಿಗೆ ಗೌರವಿಸಿ ರಾಜೀನಾಮೆಯನ್ನು ವಾಪಸ್ ಪಡೆಯುತ್ತೇನೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಕಾರ್ಯಕರ್ತರ ಬಹಿರಂಗ ಸಭೆಯಲ್ಲಿ ತಮ್ಮ ನಿರ್ಧಾರ ಪ್ರಕಟಿಸಿದರು. ರಾಜೀನಾಮೆ ಕೊಟ್ಟು ಬಂದ ದಿನವೇ ಪಕ್ಷದ ರಾಜ್ಯದ ಉಸ್ತುವಾರಿ ಸುರ್ಜೆವಾಲಾ ಅವರು ಮನೆಗೆ ಬಂದು ನನ್ನ ಹಾಗೂ ಅವರ ರಾಜಕೀಯ ಹಿನ್ನೆಲೆಯನ್ನು ಸುದೀರ್ಘವಾಗಿ ಚರ್ಚಿಸಿದ್ದೇವೆ. ಹರಿಯಾಣದ ಚುನಾವಣೆಯಲ್ಲಿ ನನಗೆ ಟಿಕೇಟ್ ಸಿಗಲಿಲ್ಲ ಎಂದು ತಿಳಿಸಿದ ಅವರು, ಪಕ್ಷದಲ್ಲಿ ನಾವು, ನೀವು ಬೆಳೆದಿದ್ದೇವೆ. ನೋವುಗಳನ್ನು ಸಹಿಸಿಕೊಂಡು ಪಕ್ಷ ಗಟ್ಟಿ ಮಾಡಬೇಕಿದೆ ಎಂಬ ಕಳಕಳಿಯ ಮಾತುಗಳನ್ನು ಹೇಳಿದ್ದಾರೆ. ಸಚಿವ ಸ್ಥಾನ ನೀಡುವುದಾಗಿ ಹಿಂದೆ ಮಾತುಕೊಟ್ಟಿದ್ದೇವೆ. ಈಗ ರಾಜೀನಾಮೆ ವಾಪಸ್ ಪಡೆದುಕೊಳ್ಳಿ ಎಂದು ಹೇಳುವ ನೈತಿಕತೆ ನನಗಿಲ್ಲ. ನೀಡಿದ ರಾಜೀನಾಮೆಯನ್ನು ಇನ್ನೊಮ್ಮೆ ಪರಾಮರ್ಶಿಸಿಕೊಳ್ಳಿ ಎಂದು ಹೇಳಿ ಹೋಗಿದ್ದಾರೆ. ಹೀಗಾಗಿ ಪಕ್ಷದ ವರಿಷ್ಠರು ಮನೆಗೆ ಬಂದು ಮನವಿ ಮಾಡಿದ ಮೇಲೆ ಏನೇ ಇದ್ದರೂ ಸಹಕರಿಸಬೇಕಾಗಿರುವುದು ಮನುಷ್ಯ ಧರ್ಮ. ಹೀಗಾಗಿ, ನಾಲ್ಕುದಿನ ಕಾಲಾವಕಾಶ ಕೇಳಿ ನಿಮ್ಮ ಅಭಿಪ್ರಾಯ ಪಡೆಯಲು ಸಭೆ ಕರೆದಿರುವುದಾಗಿ ಹೇಳಿದರು.
ಸುರ್ಜೇವಾಲಾ, ಸಿದ್ದರಾಮಯ್ಯ, ಡಿಕೆಶಿ ಭರವಸೆ ನೀಡಿದ್ದರು
ವರಿಷ್ಠರು ಮಾತು ಕೊಟ್ಟಿದ್ದರು. ಪಕ್ಷದ ವರಿಷ್ಠರಾದ ರಣದೀಪ ಸಿಂಗ್ ಸುರ್ಜೇವಾಲಾ, ಮಾಜಿ ಸಿಎಂ ಸಿದ್ದರಾಮಯ್ಯನವರು ಹಾಗೂ ಸಿಎಂ ಡಿ.ಕೆ.ಶಿವಕುಮಾರ ಅವರು, 2023ರಲ್ಲಿ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಮೂವರಿಗೆ ಅಧಿಕಾರ ಶೇರ್ ಮಾಡುತ್ತೇವೆ ಎಂದು ಭರವಸೆಯ ಮಾತು ಕೊಟ್ಟಿದ್ದರು. ಪಕ್ಷ ಅಧಿಕಾರಕ್ಕೆ ಬಂದ ಮೇಲೆ, ಲೋಕಭಾ ಚುನಾವಣೆ ಬಂದಿದೆ. ಈಗ ಇಬ್ಬರಿಗೆ ಅವಕಾಶ ನೀಡಲಾಗುತ್ತದೆ. ಎರಡೂವರೆ ವರ್ಷದ ಬಳಿಕ ನಿಮಗೂ ಅವಕಾಶ ನೀಡಲಾಗುವುದು ಎಂದು ಭರವಸೆ ನೀಡಿದ್ದರು. ಸಿಎಂ ಬದಲಾವಣೆ ಬಳಿಕ ನನಗೆ ಮಾತುಕೊಟ್ಟಿದ್ದನ್ನು ವರಿಷ್ಠರಿಗೆ ನೆನಪಿಸಿದ್ದೇನೆ. ಸಿಎಂ ಡಿ.ಕೆ.ಶಿವಕುಮಾರ ಅವರು ನಿಮ್ಮ ಆಯ್ಕೆಯಲ್ಲಿ ಸೀರಿಯಸ್ ಆಗಿ ತೆಗೆದುಕೊಂಡಿದ್ದೇನೆ ಎಂದು ಹೇಳಿದರೆ, ಮಾಜಿ ಸಿಎಂ ಸಿದ್ದರಾಮಯ್ಯನವರು ನಿನ್ನ ಹೆಸರನ್ನು ಲಿಸ್ಟ್‌ನಲ್ಲಿ ಕಳಿಸಿದ್ದೇನೆ ಎಂದು ಹೇಳಿದ್ದರು. ಆದರೆ, ಕೊನೆ ಕ್ಷಣದಲ್ಲಿ ಬದಲಾಗಿದೆ. ಏಕೆ ಆಯಿತು ಎಂದು ಬೇಸರದಿಂದ ರಾಜೀನಾಮೆ ನೀಡಿದ್ದಾಗಿ ಕ್ಷೇತ್ರದ ಜನರ ಮುಂದೆ ಮನದಾಳ ತೋಡಿಕೊಂಡರು.
ಡಿ.ಎ.ಮುಜಗೊಂಡ, ನೀಲಕಂಠ ರೂಗಿ, ಮುತ್ತಪ್ಪ ಪೊತೆ, ಹುಚ್ಚಪ್ಪ ತಳವಾರ, ಪ್ರಶಾಂತ ಕಾಳೆ, ಸತ್ತಾರ ಬಾಗವಾನ, ಪ್ರಭುಗೌಡ ಪಾಟೀಲ, ಶ್ರೀಕಾಂತ ಕುಡಿಗನೂರ, ಅಂಬಣ್ಣ ಸುಣಗಾರ, ಡಿ.ಆರ್.ಶಹಾ, ಜಾವೀದ ಮೋಮಿನ, ನಿರ್ಮಲಾ ತಳಕೇರಿ ಸೇರಿ ಹಲವರು ಮಾತನಾಡಿ, ರಾಜೀನಾಮೆ ವಾಪಸ್ ಪಡೆಯುವಂತೆ ಶಾಸಕರಿಗೆ ಮನವಿ ಮಾಡಿದರು.
ಗಣಪತಿ ಬಾಣಿಕೊಲ,ಎಐಸಿಸಿ ಸದಸ್ಯ ಮಲ್ಲನಗೌಡ ಪಾಟೀಲ, ಶಿವಯೋಗೆಪ್ಪ ಚನಗೊಂಡ,ಶೈಲಶ್ರೀ ಜಾಧವ, ಸುನೀಲ ರಾಠೋಡ, ಸೋಮು ಮ್ಯಾಕೇರಿ, ಧರ್ಮು ವಾಲಿಕಾರ,ಅವಿನಾಶ ಬಗಲಿ,ಭೀಮಾಶಂಕರ ಮೂರಮನ, ಸಂತೋಷ ಪರಸೆನವರ,ಮೈಬೂಬ ಅರಬ, ಜೈನುದ್ದಿನ ಬಾಗವಾನ, ಧರ್ಮು ಸಾಲೋಟಗಿ, ಜಟ್ಟೆಪ್ಪ ಶಿವಪೂರ,ಚಂದು ಸೊನ್ನ,ಕಲ್ಲಪ್ಪ ಅಂಜುಟಗಿ,ಜಟ್ಟೆಪ್ಪ ರವಳಿ,ಜೀತಪ್ಪ ಕಲ್ಯಾಣಿ,ಇಮ್ರಾನ್ ಮಕಂದಾರ, ರವಿ ಹೊಸಮನಿ,ಸಂಕೇತ ಜೋಶಿ ಸೇರಿದಂತೆ ಐದು ನೂರಕ್ಕೂ ಹೆಚ್ಚು ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಇಂಡಿಗೆ ಶಾಸಕರಾದವರಿಗೆ ಸಚಿವ ಸ್ಥಾನ ಒದಗುವ ಭಾಗ್ಯವಿಲ್ಲ ಎಂದು ಭಾವಿಸಿ ಇನ್ನು ಮುಂದೆ ಸಚಿವ ಸ್ಥಾನಕ್ಕಾಗಿ ಯಾರಲ್ಲಿಯೂ ಕೇಳುವುದಿಲ್ಲ, ಭಿಕ್ಷೆ ಬೇಡುವುದಿಲ್ಲ ಎಂದು ತೀರ್ಮಾನಿಸಿದ್ದೇನೆ. ರಾಜಕಾರಣದಲ್ಲಿ ಸಂತೋಷವನ್ನುವು ಕಂಡಿದ್ದೇನೆ. ನೋವನ್ನು ಕಂಡಿದ್ದೇನೆ. ಕುಚೇಷ್ಟೆ ಮಾಡುವವರಿಗೆ ಅವಕಾಶ ನೀಡಬಾರದು. ನನ್ನನ್ನು ಬೆಳೆಸಿದ ಮತದಾರರು, ಕಾರ್ಯಕರ್ತರ ಭಾವನೆಗಳಿಗೆ ನೋವು ನೀಡಬಾರದೆಂದು ರಾಜೀನಾಮೆ ವಾಪಸ್ ಪಡೆದಿದ್ದೇನೆ.
ನಾನು ರಾಜೀನಾಮೆ ಕೊಟ್ಟ ಮೇಲೆ ನಾಡಿನ ಮಠಾಧೀಶರು, ಸಚಿವರು, ಶಾಸಕ ಮಿತ್ರರು, ಕಾರ್ಯಕರ್ತರು ಮನೆಗೆ ಬಂದು ಆತ್ಮಸ್ಥೈರ್ಯ ತುಂಬಿ, ಪ್ರೀತಿ ತೋರಿಸಿದಕ್ಕಾಗಿ ಎಲ್ಲರನ್ನು ಅಭಿನಂದಿಸುತ್ತೇನೆ ಎಂದು ಹೇಳಿದ್ದಾರೆ.
ವಿರೋಧಿಗಳ ನಡೆಗೆ ಯಶವಂತರಾಯಗೌಡ ಬೇಸರ
ನನ್ನ ತಂದೆ ಕಾಲದಿಂದಲೂ ಕಾಂಗ್ರೆಸ್ ಪಕ್ಷವನ್ನು ಕಟ್ಟುತ್ತ, ರಕ್ತದ ಕಣಕಣದಲ್ಲೂ ಕಾಂಗ್ರೆಸ್ ಬೆಳೆಸಿಕೊಂಡಿದ್ದೇನೆ. ನಾನು ಎಲ್ಲಿಂದಲೋ ಬಂದವನಲ್ಲ. ಸೈದ್ದಾಂತಿಕ ರಾಜಕಾರಣ ಮಾಡುತ್ತಿದ್ದೇನೆ. ವೀರೇಂದ್ರ ಪಾಟೀಲರ ಸರ್ಕಾರ ಯಾರು ಕೆಡವಿದರು ಎಂಬುದು ರಾಜ್ಯದ ಜನತೆಗೆ ಗೊತ್ತಿದೆ. ನನ್ನ ಸುದೀರ್ಘ ರಾಜಕಾರಣದಲ್ಲಿ ಒಂದು ಒಳಗಿನವರ, ಇನ್ನೊಂದು ಹೊರಗಿನವರ ಎರಡು ಚುನಾವಣೆ ಎದುರಿಸಿದ್ದೇನೆ. ಇದೇನು ನನಗೆ ಹೊಸದಲ್ಲ. ದೇವರು, ಮತದಾರರು ನನಗೆ ಆ ಶಕ್ತಿ ನೀಡಿದ್ದಾರೆ. ನನಗೆ ರಾಜಕೀಯದಲ್ಲಿ ಸುದೀರ್ಘವಾಗಿ ಕಾಡಿದ ಅವರ ತಮ್ಮನಿಗೂ ಟಿಕೇಟ್ ಕೊಡಿಸಿ ಗೆಲ್ಲಿಸಿದ್ದೇನೆ ಎಂದು ಪರೋಕ್ಷವಾಗಿ ಸಚಿವ ಎಂ.ಬಿ.ಪಾಟೀಲ ವಿರುದ್ದ ಹರಿಹಾಯ್ದರು.
1996-97ರಲ್ಲಿ ಯಾರಿಗೆ ಸಂಸದರಾಗುವ ಕಾಲ ಬಂದಿತ್ತೋ ಆಗ ಸಂಸದರನ್ನಾಗಿ ಮಾಡಿದ್ದೇನೆ. 2018 ರಲ್ಲಿ ಇನ್ನೊಬ್ಬರಿಗೆ ಸಚಿವರಾಗುವ ಕಾಲ ಬಂದಾಗ ಗಟ್ಟಿತನದಿಂದ ಸಚಿವನಾಗಿ ಮಾಡಿದ್ದೇನೆ ಎಂದು ಶಿವಾನಂದ ಪಾಟೀಲರಿಗೆ ಕುಟುಕಿದರು. 2023ರಲ್ಲಿ ಇವರಿಗೆ ಟಿಕೇಟ್ ಸಿಗಲ್ಲ ಎನ್ನುವ ಸಂದರ್ಭದಲ್ಲಿ ಹಾಗಾದರೆ ನನಗೂ ಟಿಕೇಟ್ ಬೇಡ ಎಂದು ವರಿಷ್ಠರ ಮನವೊಲಿಸಿ ಟಿಕೇಟ್ ಕೊಡಿಸಿದ್ದೇನೆ. ಅವರೇ ಇಂದು ನನಗೆ ತಿರುಗಿ ಬಿದ್ದಿದ್ದಾರೆ ಎಂದು ಶಾಸಕ ಮನಗೂಳಿ ನಡೆಗೆ ಬೇಸರ ವ್ಯಕ್ತಪಡಿಸಿದರು.


