ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದ 'ಬಳ್ಳಾರಿ ಚಲೋ' ಪಾದಯಾತ್ರೆಯು ಕೊಪ್ಪಳ ಜಿಲ್ಲೆಯಲ್ಲಿ ಮುಂದುವರಿದಿದ್ದು, ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯಗಳನ್ನು ಖಂಡಿಸಿದ್ದಾರೆ. ತಮ್ಮ ಹೋರಾಟದಿಂದಾಗಿಯೇ ಸರ್ಕಾರ ಎಚ್ಚೆತ್ತುಕೊಂಡಿದೆ ಎಂದಿದ್ದಾರೆ.

ಎ.ಜಿ. ಕಾರಟಗಿ

ಕನ್ನಡಪ್ರಭ ವಾರ್ತೆ ಕಾರಟಗಿ (ಕೊಪ್ಪಳ)

ಬಡವರು ಹಾಗೂ ರೈತರ ಬಗ್ಗೆ ಕಾಳಜಿ ಇಲ್ಲದ ಕಾಂಗ್ರೆಸ್ ಸರ್ಕಾರಕ್ಕೆ ಮನುಷ್ಯತ್ವವೇ ಇಲ್ಲ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ‘ಮುಖ್ಯಮಂತ್ರಿ ಅವರು ಹೆಲಿಕಾಪ್ಟರ್‌ನಲ್ಲಿ ಬಂದು ಬರ ಪರಿಸ್ಥಿತಿ ವೀಕ್ಷಣೆ ಮಾಡುವುದು ಸರಿಯಲ್ಲ. ಇದೇ ಮೊದಲ ಬಾರಿಗೆ ಅವರು ಹಸಿರು ಶಾಲು ಹಾಕಿಕೊಂಡು ಉತ್ತರ ಕರ್ನಾಟಕ ಭಾಗಕ್ಕೆ ಬಂದಿದ್ದಾರೆ. ಇದು ನಮ್ಮ ಪಾದಯಾತ್ರೆಗೆ ಸಿಕ್ಕ ದೊಡ್ಡ ಜಯ’ ಎಂದಿದ್ದಾರೆ.

ಅಲ್ಲದೆ, ‘ಬಿಜೆಪಿ ಹಮ್ಮಿಕೊಂಡಿರುವ ಹೋರಾಟ ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರಗೊಳ್ಳಲಿದ್ದು, ಜನರ ಸಮಸ್ಯೆಗಳಿಗೆ ಧ್ವನಿಯಾಗಲಿದೆ’ ಎಂದೂ ಹೇಳಿದ್ದಾರೆ.

‘ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ ನೀಡಿದ್ದರೂ ದುರ್ಬಳಕೆ ಆದ 187 ಕೋಟಿ ರು. ಹಣ ವಾಪಸ್ ಆ ನಿಗಮಕ್ಕೆ ಜಮಾ ಆಗಬೇಕು ಎಂಬ ಆಗ್ರಹ ಸೇರಿದಂತೆ ರಾಜ್ಯ ಕಾಂಗ್ರೆಸ್‌ ಸರ್ಕಾರದ ಆಡಳಿತ ವೈಫಲ್ಯಗಳನ್ನು ಪ್ರಸ್ತಾಪಿಸಿ ರಾಜ್ಯ ಬಿಜೆಪಿ ಹಮ್ಮಿಕೊಂಡಿರುವ ‘ಬಳ್ಳಾರಿ ಚಲೋ’ ಪಾದಯಾತ್ರೆ 5ನೇ ದಿನವಾದ ಶನಿವಾರ ಕೊಪ್ಪಳ ಜಿಲ್ಲೆಯಲ್ಲಿ ಸಾಗಿತು. ಈ ವೇಳೆ ಮರಳಿ ಹಾಗೂ ಜಂಗಮರ ಕಲ್ಗುಡಿ ಹಾಗೂ ಕಾರಟಗಿಯಲ್ಲಿ ಮಾತನಾಡಿದ ಅವರು, ‘ನಮ್ಮ ಪಾದಯಾತ್ರೆ ಕುಂಭಕರ್ಣ ನಿದ್ದೆಯಲ್ಲಿರುವ ಕಾಂಗ್ರೆಸ್ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಿದೆ. ಬಿಜೆಪಿ ಪಾದಯಾತ್ರೆಯಿಂದ ಸರ್ಕಾರಕ್ಕೆ ಆತಂಕ ಶುರುವಾಗಿದೆ’ ಎಂದರು.

‘ಬಿಜೆಪಿ ಪಾದಯಾತ್ರೆ ಘೋಷಣೆ ಮಾಡಿದ ಬೆನ್ನಲ್ಲೇ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿ.ನಾಗೇಂದ್ರ ಅವರನ್ನು ಸಚಿವ ಸಂಪುಟದಿಂದ ಕೈಬಿಡಲಾಯಿತು. ನಂತರ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಯಿತು. ಇದೀಗ ಮತ್ತಷ್ಟು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲು ಸಿದ್ಧತೆ ನಡೆದಿದೆ. ಇದರಿಂದ ನಮ್ಮ ಹೋರಾಟಕ್ಕೆ ಜಯ ಸಿಕ್ಕಿದ್ದು, ಪಾದಯಾತ್ರೆ ಸರ್ಕಾರಕ್ಕೆ ಆತಂಕವನ್ನುಂಟು ಮಾಡಿದೆ’ ಎಂದರು.

‘ವಿಧಾನಮಂಡಲದ ವಿಶೇಷ ಅಧಿವೇಶನ ಕರೆಯಬೇಕೆಂದು ನಾನು ಆಗ್ರಹಿಸಿದ್ದೆ. ಅದರ ಫಲವಾಗಿ ಸೆ.21ರಿಂದ ಮೂರು ದಿನಗಳ ಕಾಲ ಅಧಿವೇಶನ ಕರೆಯಲಾಗಿದೆ. ಈ ಅಧಿವೇಶನದಲ್ಲಿ ರಾಜ್ಯದ ಜ್ವಲಂತ ಸಮಸ್ಯೆಗಳ ಕುರಿತು ಸರ್ಕಾರವನ್ನು ಪ್ರಶ್ನಿಸಲಾಗುವುದು’ ಎಂದರು.

ನವಲಿ ಡ್ಯಾಂ ಬಗ್ಗೆ ವಿಶೇಷ ಅಧಿವೇಶನದಲ್ಲಿ ಚರ್ಚೆ

ನವಲಿ ಜಲಾಶಯ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮುಂಬರುವ ಬಜೆಟ್‌ನಲ್ಲಿ ವಿಶೇಷ ಅನುದಾನ ಮೀಸಲಿಡಬೇಕು. ಈ ಬಗ್ಗೆ ಸರ್ಕಾರದ ವಿರುದ್ಧ ಸದನದ ಒಳಗೂ ಹಾಗೂ ಹೊರಗೂ ಬಿಜೆಪಿ ಹೋರಾಟ ಮುಂದುವರಿಸಲಿದೆ. ಭ್ರಷ್ಟಾಚಾರ, ದಲಿತ ವಿರೋಧಿ ಹಾಗೂ ಬಡವರ ಮತ್ತು ಜನವಿರೋಧಿ ನೀತಿಗಳ ವಿರುದ್ಧ ನಿರಂತರ ಹೋರಾಟ ನಡೆಸುವುದಾಗಿ ವಿಜಯೇಂದ್ರ ಹೇಳಿದರು.

ಹೂಮಳೆ

ದಾರಿಯುದ್ದಕ್ಕೂ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಹೂವಿನ ಮಳೆ ಸುರಿಸಿ, ಪಾದಯಾತ್ರೆ ಬೆಂಬಲಿಸಿದರು. ಹೊಸಜೂರಟಗಿಯಲ್ಲಿ ಮಹಿಳೆಯರು ಭತ್ತದ ಬೆಳೆಯನ್ನು ಕಾಣಿಗೆಯಾಗಿ ನೀಡಿದರೆ, ಮರ್ಲಾನಹಳ್ಳಿಯಲ್ಲಿ ಮಹಿಳೆಯರು ಆರತಿ ಬೆಳಗಿ, ಕೃಷ್ಣನ ಪ್ರತಿಮೆ ನೀಡಿ, ವಿಜಯೇಂದ್ರ ಮತ್ತು ಬಿ. ಶ್ರೀರಾಮುಲು ಅವರನ್ನು ಸ್ವಾಗತಿಸಿದರು. ಅಭಿಮಾನಿಗಳು ಜೆಸಿಬಿ ಮೂಲಕ ಹೂವಿನ ಮಳೆ ಸುರಿಸಿದರು.

ಬಳಿಕ, ಶ್ರೀರಾಮನಗರದಲ್ಲಿ ಭೋಜನ ಮುಗಿಸಿದ ವಿಜಯೇಂದ್ರ, ಮರಳಿ ಬಳಿ ತೋಟವೊಂದರಲ್ಲಿ ರೈತ ಹೋರಾಟಗಾರರೊಂದಿಗೆ ನವಲಿ ಸಮಾನಾಂತರ ಜಲಾಶಯ ಕುರಿತು ಸಂವಾದ ನಡೆಸಿದರು. ಸಂಜೆಯ ವೇಳೆಗೆ ಜಂಗಮರ ಕಲ್ಗುಡಿಯಲ್ಲಿ ಬಹಿರಂಗ ಸಮಾವೇಶ ನಡೆಸಿ, ಐದನೇ ದಿನದ ‘ಬಳ್ಳಾರಿ ಚಲೋ’ ಪಾದಯಾತ್ರೆಯನ್ನು ಸಮಾಪನೆ ಮಾಡಿದರು.

ರೇಣುಕಾಚಾರ್ಯ ಭರ್ಜರಿ ಸ್ಟೆಪ್ಸ್‌

ಮಾಜಿ ಸಚಿವ ರೇಣುಕಾಚಾರ್ಯ ಐದನೇ ದಿನದ ಆಕರ್ಷಣೆಯಾಗಿ ಎಲ್ಲರ ಗಮನ ಸೆಳೆದರು. ಯಾತ್ರೆ ವೇಳೆ ಡಿಜೆ ಸೌಂಡ್ಸ್‌ ಮತ್ತು ಉಳುವಾ ಯೋಗಿಯ ನೋಡಿಲ್ಲಿ ಎನ್ನುವ ಹಾಡಿಗೆ ಮಾಜಿ ಸಚಿವ ರಾಜುಗೌಡ, ರೇಣುಕಾಚಾರ್ಯರು ಭರ್ಜರಿ ಸ್ಟೆಪ್ಸ್‌ ಹಾಕಿದರು.

ಮಾರ್ಗಮಧ್ಯೆ ಕಾಪ್ಟರಲ್ಲಿ ಬರ ವೀಕ್ಷಣೆ ಮಾಡಿದ್ದೆ

ಹೆಲಿಕಾಪ್ಟರ್ ಪ್ರವಾಸ ಕುರಿತು ಬರುವ ಟೀಕೆಗಳಿಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನಾನು ಹೆಲಿಕಾಪ್ಟರ್‌ನಲ್ಲಿ ಹೋಗುವಾಗ ಬರ ವೀಕ್ಷಣೆ ಮಾಡಿದ್ದೆ. ರೈತರ ಹೊಲಕ್ಕೂ ಹೋಗಿ ಪರಿಶೀಲಿಸಿದ್ದೇನೆ. ಟೀಕೆಗಳು ಸಾಯುತ್ತವೆ, ಆದರೆ, ನಾವು ಮಾಡಿದ ಕೆಲಸಗಳು ಮಾತ್ರ ಉಳಿಯುತ್ತವೆ ಎಂದು ಡಿಕೆ ಶಿವಕುಮಾರ್‌ ಹೇಳಿದ್ದಾರೆ.

26 ಕಿ.ಮೀ. ಸಾಗಿದ ಬಿಜೆಪಿ ಪಾದಯಾತ್ರೆ

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ನಡೆದ ಐದನೇ ದಿನದ ಪಾದಯಾತ್ರೆ, ಕೊಪ್ಪಳದ ಕಾರಟಗಿಯಿಂದ ಗಂಗಾವತಿ ತಾಲೂಕಿನ ಜಂಗಮಕಲ್ಗುಡಿಯವರೆಗೆ 26 ಕಿ.ಮೀ.ಸಾಗಿತು. ಕಾರಟಗಿಯ ಆರಾಧ್ಯದೈವ ಶ್ರೀಶರಣಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಕನಕದಾಸ ವೃತ್ತದಲ್ಲಿ ಶ್ರೀರಾಮನ ಬಿಲ್ಲಿನಿಂದ ಬಾಣ ಹೊಡೆದು ಬಿ.ವೈ.ವಿಜಯೇಂದ್ರ ತಮ್ಮ ಐದನೇ ದಿನದ ಪಾದಯಾತ್ರೆ ಪ್ರಾರಂಭಿಸಿದರು. ಪಾದಯಾತ್ರ ಭಾನುವಾರ ಜಂಗಮನಕಲ್ಗುಡಿಯಿಂದ ಆರಂಭವಾಗಿ ಕಂಪ್ಲಿಗೆ ತಲುಪಲಿದೆ.