ಕಳೆದ ನಾಲ್ಕು ತಿಂಗಳಿನಿಂದ ಬೃಹತ್ ಮೊತ್ತದ ಹಣ ಬೆಂಗಳೂರಿನ ಸಿದ್ಧಾಪುರ ಠಾಣೆಯಲ್ಲಿಯೇ ಇದ್ದು, ಪೊಲೀಸರು ಹದ್ದಿನ ಕಣ್ಣು ಇಟ್ಟು ಅದನ್ನು ಕಾವಲು ಕಾಯುತ್ತಿದ್ದಾರೆ. ಇನ್ನು ನೈಟ್ ಬೀಟ್ ಮಾಡುವ ಸಿಬ್ಬಂದಿ ಬಹಳ ಎಚ್ಚರದಿಂದ ಕೆಲಸ ಮಾಡುತ್ತಿದ್ದಾರೆ. 

Add Asianetnews Kannada as a Preferred SourcegooglePreferred

ಸಿದ್ಧಾಪುರ ಠಾಣೆ ಪೊಲೀಸರಿಗೀಗ ಕೇಸ್‌ಗಿಂತ 7 ಕೋಟಿ ಕಾಸು ಕಾಯುವುದೇ ಚಿಂತೆ

ಬೆಂಗಳೂರು: ಎಟಿಎಂಗೆ ತುಂಬಬೇಕಿದ್ದ 7 ಕೋಟಿ ರು. ದರೋಡೆ ಪ್ರಕರಣದಲ್ಲಿ ಜಪ್ತಿ ಮಾಡಿರುವ ಅಷ್ಟೂ ಹಣವನ್ನು ಸಿದ್ದಾಪುರ ಠಾಣೆಯಲ್ಲಿ ಇಡಲಾಗಿದ್ದು, ಆ ದೊಡ್ಡ ಮೊತ್ತದ ಹಣವನ್ನು ಕಾಯುವುದೇ ಪೊಲೀಸರಿಗೆ ಸವಾಲಿನ ಕೆಲಸವಾಗಿದೆ ಪರಿಣಮಿಸಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ದುಷ್ಕರ್ಮಿಗಳು ಹಾಡಹಗಲೇ ಎಟಿಎಂಗೆ ತುಂಬಬೇಕಿದ್ದ 7 ಕೋಟಿ ರು. ದರೋಡೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂಎಸ್ ಸಂಸ್ಥೆ ಮಾಜಿ ನೌಕರ ಕ್ಸೇವಿಯರ್, ಗೋವಿಂದಪುರ ಪೊಲೀಸ್ ಠಾಣಾ ಪೇದೆ ಅಣ್ಣಪ್ಪ ನಾಯ್ಕ, ಸಿಎಂಎಸ್ ಸಂಸ್ಥೆ ಸಿಬ್ಬಂದಿ ಸೇರಿ ಒಟ್ಟು ಏಳು ಮಂದಿಯನ್ನು ಬಂಧಿಸಲಾಗಿತ್ತು. ಆರೋಪಿಗಳಿಂದ 7 ಕೋಟಿ ರು.ಗಳನ್ನು ವಶಕ್ಕೆ ಪಡೆಯಲಾಗಿತ್ತು.

4 ತಿಂಗಳಿಂದ ಠಾಣೆಯಲ್ಲಿ ರೊಕ್ಕ: ಕಳೆದ ನಾಲ್ಕು ತಿಂಗಳಿನಿಂದ ಬೃಹತ್ ಮೊತ್ತದ ಹಣ ಠಾಣೆಯಲ್ಲಿಯೇ ಇದ್ದು, ಪೊಲೀಸರು ಹದ್ದಿನ ಕಣ್ಣು ಇಟ್ಟು ಅದನ್ನು ಕಾವಲು ಕಾಯುತ್ತಿದ್ದಾರೆ. ಇನ್ನು ನೈಟ್ ಬೀಟ್ ಮಾಡುವ ಸಿಬ್ಬಂದಿ ಬಹಳ ಎಚ್ಚರದಿಂದ ಕೆಲಸ ಮಾಡುತ್ತಿದ್ದಾರೆ.

ರಾತ್ರಿ ಹೊತ್ತು ಬಾಗಿಲು ಬಂದ್: ಯಾವುದೇ ವ್ಯಕ್ತಿಗಳು ರಾತ್ರಿ ವೇಳೆಯಲ್ಲಿ ಠಾಣೆಗೆ ಬಂದರೆ ಅವರನ್ನುಕೂಲಂಕುಷವಾಗಿ ಪರಿಶೀಲನೆ ನಡೆಸುತ್ತಿದ್ದಾರೆ. ದೂರು ನೀಡುವವರನ್ನು ಮಾತ್ರ ಒಳಬಿಡಲಾಗುತ್ತದೆ. ಠಾಣೆಯಲ್ಲಿ ದೊಡ್ಡಮಟ್ಟದ ಹಣ ಇರುವುದರಿಂದ ರಾತ್ರಿಯ ವೇಳೆ ಕೆಲ ಗಂಟೆಗಳ ಕಾಲ ಠಾಣೆಯ ಬಾಗಿಲು ಮುಚ್ಚಲಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಅಧಿಕಾರಿಗಳು ಈ ಆರೋಪವನ್ನು ತಳ್ಳಿ ಹಾಕಿದ್ದಾರೆ.

ಹಣ ರಕ್ಷಣೆ ನಮ್ಮ ಜವಾಬ್ದಾರಿ: ಪೊಲೀಸರು

ಪೊಲೀಸ್ ಠಾಣೆ ಅಂದ ಮೇಲೆ ಜಪ್ತಿ ಮಾಡಿದ ಸಾಕಷ್ಟು ವಸ್ತುಗಳು ಹಾಗೂ ಹಣ ಇದ್ದೇ ಇರುತ್ತದೆ. ಕೋರ್ಟಿನಿಂದ ನಮಗೆ ಆದೇಶ ಬರುವರೆಗೂ ಅದನ್ನು ಕಾಪಾಡುವ ಜವಾಬ್ದಾರಿ ನಮ್ಮ ಮೇಲೆ ಇದೆ. ಇದೇ ರೀತಿ ದರೋಡೆ ಪ್ರಕರಣದಲ್ಲಿ ಜಪ್ತಿ ಮಾಡಲಾದ ಹಣವನ್ನು ಕೂಡ ಸುಭದ್ರವಾಗಿ ಇಡಲಾಗಿದೆ. ದೊಡ್ಡ ಮೊತ್ತದ ಹಣ ಇರುವುದರಿಂದ ನಮಗೆ ಯಾವುದೇ ಟೆನ್ಸನ್ ಇಲ್ಲ. ಕೋರ್ಟಿನ ಆದೇಶ ಬಂದ ಕೂಡಲೇ ಸಂಬಂಧಪಟ್ಟವರಿಗೆ ನೀಡಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.