Bengaluru 7 crore robbery case:ಬೆಂಗಳೂರಿನಲ್ಲಿ ನಡೆದ 7 ಕೋಟಿ ರೂಪಾಯಿಗೂ ಅಧಿಕ ಮೊತ್ತದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಬಗ್ಗೆ ಮಹತ್ವದ ಸುಳಿವು ಸಿಕ್ಕಿದೆ. ಎಟಿಎಂಗೆ ಹಣ ಸಾಗಿಸುವ ಮಾಹಿತಿ ಪಡೆದು ಈ ಕೃತ್ಯ ಎಸಗಲಾಗಿದ್ದು, ಶೀಘ್ರದಲ್ಲೇ ಆರೋಪಿಗಳ ಬಂಧನ ಎಂದು ಗೃಹಸಚಿವರು ತಿಳಿಸಿದರು.

ಬೆಂಗಳೂರು (ನ.20): ನಗರದಲ್ಲಿ ನಡೆದ ಬಹು ಕೋಟಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಸುಳಿವು ಸಿಕ್ಕಿದ್ದು, ಶೀಘ್ರದಲ್ಲಿ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್‌ ತಿಳಿಸಿದರು.

ಏಳು ಕೋಟಿ ರೂ. ದರೋಡೆ ಮಾಡಿದವರು ಯಾರು?

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಎಟಿಎಂಗಳಿಗೆ ಹಣ ಹಾಕುವ ಮಾಹಿತಿಯನ್ನು ದರೋಡೆಕೋರರಿಗೆ ನೀಡಲಾಗಿದೆ. ಅದನ್ನಾಧರಿಸಿ ದರೋಡೆ ಮಾಡಲಾಗಿದೆ. ಈ ದರೋಡೆ ಮಾಡಿದವರ್‍ಯಾರು? ಎಟಿಎಂಗೆ ಹಣ ತಂದು ಹಾಕುವ ಮಾಹಿತಿ ನೀಡಿದ್ದು ಯಾರು? ಹಣ ಹಾಕುವವರಲ್ಲಿ ಯಾರಾದರೂ ಮಾಹಿತಿ ನೀಡಿದ್ದಾರೆಯೇ ಅಥವಾ ದರೋಡೆಯಲ್ಲಿ ಭಾಗಿಯಾಗಿದ್ದಾರೆಯೇ ಎಂಬ ಕುರಿತಂತೆ ಮಾಹಿತಿಗಳು ದೊರೆತಿವೆ. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ದರೋಡೆಕೋರರನ್ನು ಬಂಧಿಸುತ್ತೇವೆ ಎಂದರು.

ಬೆಂಗಳೂರು ಹಾಡುಹಗಲೇ 7 ಕೋಟಿ ರೂ. ದರೋಡೆ:

ಬೆಂಗಳೂರಿನಲ್ಲಿ ಹಾಡುಹಗಲೇ ಈ ರೀತಿಯ ಕೃತ್ಯ ಎಸಗಿದ್ದಾರೆ. 7 ಕೋಟಿ ರು.ಗೂ ಹೆಚ್ಚಿನ ಮೊತ್ತದ ರಾಬರಿ ಮಾಡಲಾಗಿದೆ. ದರೋಡೆಗೆ ಬಳಸಿದ ವಾಹನ ಸಂಖ್ಯೆ ಸೇರಿದ ಹಲವು ಮಾಹಿತಿ ಸಿಕ್ಕಿದೆ. ದರೋಡೆ ಎಸಗಿದವರು ರಾಜ್ಯದವರಾ ಅಥವಾ ಹೊರ ರಾಜ್ಯದವರಾ ಎಂಬ ಕುರಿತು ತನಿಖೆ ನಡೆಸಲಾಗುತ್ತಿದೆ. ತನಿಖೆಗೆ ಅಡ್ಡಿಯಾಗುವುದರಿಂದ ಈಗಲೇ ಎಲ್ಲ ಮಾಹಿತಿ ಬಹಿರಂಗ ಮಾಡಲಾಗದು. ದರೋಡೆಕೋರರನ್ನು ಖಂಡಿತ ಹಿಡಿಯುತ್ತೇವೆ ಎಂದರು.