ಅಬಕಾರಿ ಇಲಾಖೆಗೆ 2025-26ನೇ ಸಾಲಿನಲ್ಲಿ ರಾಜಸ್ವ ಸಂಗ್ರಹದ ಗುರಿ ಮುಟ್ಟುವಲ್ಲಿ ವಿಫಲವಾಗುವುದು ಬಹುತೇಕ ಖಚಿತ ಎನ್ನುವಂತಾಗಿದೆ. ಇಲಾಖೆಗೆ ಈ ಸಾಲಿನಲ್ಲಿ ₹43000 ಕೋಟಿ ಗುರಿ ನೀಡಿದ್ದು, ಫೆಬ್ರವರಿ ವರೆಗೂ ₹36,492 ಕೋಟಿ ಮಾತ್ರ ಸಂಗ್ರಹವಾಗಿದೆ.

ಸಿದ್ದು ಚಿಕ್ಕಬಳ್ಳೇಕೆರೆ

Add Asianetnews Kannada as a Preferred SourcegooglePreferred

ಬೆಂಗಳೂರು : ಅಬಕಾರಿ ಇಲಾಖೆಗೆ 2025-26ನೇ ಸಾಲಿನಲ್ಲಿ ರಾಜಸ್ವ ಸಂಗ್ರಹದ ಗುರಿ ಮುಟ್ಟುವಲ್ಲಿ ವಿಫಲವಾಗುವುದು ಬಹುತೇಕ ಖಚಿತ ಎನ್ನುವಂತಾಗಿದೆ. ಇಲಾಖೆಗೆ ಈ ಸಾಲಿನಲ್ಲಿ ₹43000 ಕೋಟಿ ಗುರಿ ನೀಡಿದ್ದು, ಫೆಬ್ರವರಿ ವರೆಗೂ ₹36,492 ಕೋಟಿ ಮಾತ್ರ ಸಂಗ್ರಹವಾಗಿದೆ.

ಬಜೆಟ್‌ನಲ್ಲಿ ಅಬಕಾರಿ ಇಲಾಖೆಗೆ 40 ಸಾವಿರ ಕೋಟಿ ರು. ಆದಾಯ ಸಂಗ್ರಹದ ಟಾರ್ಗೆಟ್‌ ನೀಡಲಾಗಿತ್ತು. ಬಳಿಕ ಇದನ್ನು ಪರಿಷ್ಕರಿಸಿ 43 ಸಾವಿರ ಕೋಟಿ ರುಪಾಯಿಗೆ ಹೆಚ್ಚುವರಿ ಗುರಿ ನೀಡಲಾಯಿತು. ಕಳೆದ ಮಾರ್ಚ್‌ನಿಂದ ಫೆಬ್ರವರಿವರೆಗೂ 36,492 ಕೋಟಿ ರು. ಮಾತ್ರ ಸಂಗ್ರಹವಾಗಿದ್ದು, ಇನ್ನು ಒಂದು ತಿಂಗಳಿನಲ್ಲಿ ಗುರಿ ಮುಟ್ಟುವುದು ಸಾಧ್ಯವಿಲ್ಲ ಎಂದೇ ವಿಶ್ಲೇಷಿಸಲಾಗುತ್ತಿದೆ.

2023-24ನೇ ಸಾಲಿನಲ್ಲಿ 34,628 ಕೋಟಿ ರು. ರಾಜಸ್ವ ಸಂಗ್ರಹಿಸಲಾಗಿತ್ತು. 2024-25 ರಲ್ಲಿ ಇದು 35,783 ಕೋಟಿ ರುಪಾಯಿಗೆ ಬಂದು ತಲುಪಿತ್ತು. 2025-26ನೇ ಸಾಲಿನಲ್ಲಿ ರಾಜಸ್ವ ಸಂಗ್ರಹ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಬಹುದು ಎಂದು ನಿರೀಕ್ಷಿಸಲಾಗಿತ್ತಾದರೂ, ಮದ್ಯದ ಬೆಲೆ ಹೆಚ್ಚಳ, ಬೇರೆ ರಾಜ್ಯಗಳಿಂದ ಮದ್ಯ ತಂದು ರಾಜ್ಯದಲ್ಲಿ ಬಳಕೆ ಮಾಡುವುದು ಸೇರಿದಂತೆ ಹಲವು ಕಾರಣಗಳಿಂದಾಗಿ ರಾಜಸ್ವ ಸಂಗ್ರಹಕ್ಕೆ ಹಿನ್ನಡೆ ಉಂಟಾಗಿದೆ.

ಒಟ್ಟಾರೆ ಶೇ.14 ರಷ್ಟು ಕುಸಿತ:

ಕಳೆದ ಎರಡು ವರ್ಷಕ್ಕೆ ಹೋಲಿಸಿದರೆ ವಿಸ್ಕಿ, ರಮ್‌, ಜಿನ್‌, ಬ್ರಾಂಡಿ ಸೇರಿ ಐಎಂಎಲ್‌ ಮದ್ಯ ಮಾರಾಟದಲ್ಲಿ ಶೇ.0.51 ಕುಸಿತ ಕಂಡು ಬಂದಿದೆ. ಮತ್ತೊಂದೆಡೆ ಬಿಯರ್‌ ಮಾರಾಟವಂತೂ ಪಾತಾಳಕ್ಕೆ ಇಳಿದಿದ್ದು, ಶೇ.13.74 ಕೊರತೆ ಕಂಡು ಬಂದಿದೆ. ಆಗಿಂದಾಗ್ಗೆ ಮದ್ಯದ ಬೆಲೆಯನ್ನು ಹೆಚ್ಚಳ ಮಾಡಿದ್ದೇ ಇದಕ್ಕೆ ಮೂಲ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಮಾರ್ಚ್‌ನಿಂದ ಫೆಬ್ರವರಿಯವರೆಗಿನ ಐಎಂಎಲ್‌ ಮದ್ಯ ಮಾರಾಟದ ಅವಧಿಯನ್ನು ಪರಿಗಣನೆಗೆ ತೆಗೆದುಕೊಂಡರೆ, 2023-24 ರಲ್ಲಿ 648.46 ಲಕ್ಷ ಬಾಕ್ಸ್‌(ಒಂದು ಬಾಕ್ಸ್‌ಗೆ 8.64 ಲೀಟರ್‌) ಮಾರಾಟವಾಗಿತ್ತು. 2024-25 ರಲ್ಲಿ ಇದು 644.66 ಲಕ್ಷ ಬಾಕ್ಸ್‌ಗೆ ಇಳಿಕೆಯಾಗಿತ್ತು. 2025-26 ನೇ ಸಾಲಿನಲ್ಲಿ ಇದು 641.39 ಲಕ್ಷ ಬಾಕ್ಸ್‌ಗೆ ಕುಸಿದಿದೆ.

ಬಿಯರ್‌ ಮಾರಾಟ ಪಾತಾಳಕ್ಕೆ:

ಇನ್ನು ಬಿಯರ್‌ ವಿಷಯಕ್ಕೆ ಬರುವುದಾದರೆ, ಮಾರ್ಚ್‌ನಿಂದ ಫೆಬ್ರವರಿಯವರೆಗಿನ ಅವಧಿಯಲ್ಲಿ 2023-24 ರಲ್ಲಿ 397.92 ಲಕ್ಷ ಬಾಕ್ಸ್‌(ಒಂದು ಬಾಕ್ಸ್‌ಗೆ 7.80 ಲೀಟರ್‌) ಮಾರಾಟವಾಗಿತ್ತು. 2024-25 ರಲ್ಲಿ ಒಂದಷ್ಟು ಚೇತರಿಕೆ ಕಂಡು 411.37 ಲಕ್ಷ ಬಾಕ್ಸ್‌ಗೆ ಹೆಚ್ಚಳವಾಗಿತ್ತು. ಆದರೆ 2025-26 ರಲ್ಲಂತೂ ಇದು ಬರೋಬ್ಬರಿ 354.83 ಲಕ್ಷ ಬಾಕ್ಸ್‌ಗೆ ಇಳಿಕೆಯಾಗಿದೆ.

ಬೆಲೆ ಹೆಚ್ಚಳದಿಂದ ‘ಬ್ಯಾಲೆನ್ಸ್‌’

ಮದ್ಯ ಮಾರಾಟದಲ್ಲಿ ಗಣನೀಯ ಇಳಿಕೆ ಕಂಡುಬಂದರೂ ಬೆಲೆ ಹೆಚ್ಚಳದಿಂದಾಗಿ ಇದು ರಾಜಸ್ವಕ್ಕೇನೂ ಹೊಡೆತ ನೀಡಿಲ್ಲ. ಬಡವರು, ಶ್ರಮಿಕರು ಹೆಚ್ಚಾಗಿ ಸೇವನೆ ಮಾಡುವ ಮದ್ಯವೇ ರಾಜ್ಯದಲ್ಲಿ ಹೆಚ್ಚಾಗಿ ಮಾರಾಟವಾಗುತ್ತಿದ್ದು, ಈ ಬ್ರಾಂಡ್‌ಗಳ ಬೆಲೆಯನ್ನು ಗಣನೀಯವಾಗಿ ಹೆಚ್ಚಳ ಮಾಡಿದ್ದರಿಂದ ರಾಜಸ್ವ ಸಂಗ್ರಹದಲ್ಲಿ ‘ಬ್ಯಾಲೆನ್ಸ್‌’ ಆಗಿದೆ. ಮಾರ್ಚ್‌ನಿಂದ ಫೆಬ್ರವರಿಯವರೆಗಿನ ರಾಜಸ್ವ ಸಂಗ್ರಹವನ್ನು ಗಮನಿಸಿದಾಗ, 2023-24 ರಲ್ಲಿ 31,276 ಕೋಟಿ ರುಪಾಯಿ, 2024-25 ರಲ್ಲಿ 32,381 ಕೋಟಿ ಹಾಗೂ 2025-26 ರಲ್ಲಿ ಈಗಾಗಲೇ 36,492 ಕೋಟಿ ರು. ಸಂಗ್ರಹವಾಗಿ ಶೇ.12.70 ರಷ್ಟು ಬೆಳವಣಿಗೆಯಾಗಿದೆ.

ಇಂದು ಮದ್ಯ ಮಾರಾಟಗಾರರ ಪ್ರತಿಭಟನೆ

ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿರುವ ವ್ಯಾಪಕ ಭ್ರಷ್ಟಾಚಾರವನ್ನು ತಡೆಗಟ್ಟುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಗುರುವಾರ ಮದ್ಯ ಮಾರಾಟಗಾರರು ನಗರದಲ್ಲಿ ಹೋರಾಟ ಹಮ್ಮಿಕೊಂಡಿದ್ದಾರೆ. ಫೆಡರೇಷನ್‌ ಆಫ್‌ ವೈನ್‌ ಮರ್ಚೆಂಟ್ಸ್‌ ಅಸೋಸಿಯೇಷನ್‌ ಕರ್ನಾಟಕವು ಪ್ರತಿಭಟನೆಗೆ ಕರೆ ನೀಡಿದ್ದು ಮಧ್ಯಾಹ್ನ 12.30ರಿಂದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಡೆಯಲಿದೆ.