Hyderabad ATM robbery incident: ಎಸ್‌ಬಿಐ ಎಟಿಎಂ ಮುಂದೆಯೇ ದುಷ್ಕರ್ಮಿಗಳು ಕೇರಳ ಮೂಲದ ಯುವ ಉದ್ಯಮಿಯ ಕಾಲಿಗೆ ಗುಂಡಿಕ್ಕಿ ಆತನ ಬಳಿ ಇದ್ದ 6 ಲಕ್ಷ ರೂಪಾಯಿ ದರೋಡೆ ಮಾಡಿದ ಘಟನೆ ನಡೆದಿದೆ.

ಎಸ್‌ಬಿಐ ಎಟಿಎಂ ಮುಂದೆಯೇ ದರೋಡೆ:

ಹೈದರಾಬಾದ್‌: ಎಸ್‌ಬಿಐ ಎಟಿಎಂ ಮುಂದೆಯೇ ದುಷ್ಕರ್ಮಿಗಳು ಕೇರಳ ಮೂಲದ ಯುವ ಉದ್ಯಮಿಯ ಕಾಲಿಗೆ ಗುಂಡಿಕ್ಕಿ ಆತನ ಬಳಿ ಇದ್ದ 6 ಲಕ್ಷ ರೂಪಾಯಿ ದರೋಡೆ ಮಾಡಿದ ಘಟನೆ ನಡೆದಿದೆ. 26 ವರ್ಷದ ಯುವ ಉದ್ಯಮಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂಗೆ ಹಣ ಠೇವಣಿ ಇಡುತ್ತಿದ್ದಾಗ ಇಬ್ಬರು ಅಪರಿಚಿತ ವ್ಯಕ್ತಿಗಳು ಅವರ ಮೇಲೆ ಗುಂಡು ಹಾರಿಸಿ ಅವರ ಬಳಿ ಇದ್ದ ಹಣವನ್ನು ದರೋಡೆ ಮಾಡಿ ಪರಾರಿಯಾಗಿದ್ದಾರೆ. ಹೈದರಾಬಾದ್‌ನ ಕೋಟಿ ಬಳಿಯ ಬ್ಯಾಂಕ್ ಸ್ಟ್ರೀಟ್ ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕ್ ಎಟಿಎಂ ಮುಂದೆ ಈ ಘಟನೆ ನಡೆದಿದೆ.

ಕೋಝಿಕ್ಕೋಡ್‌ನ ಬಟ್ಟೆ ವ್ಯಾಪಾರಿ ರಿನ್ಶಾದ್ ಪಿವಿ ದರೋಡೆಗೊಳಗಾದವವರು. ಜನವರಿ 7 ರಂದು ತಮ್ಮ ವ್ಯವಹಾರಕ್ಕಾಗಿ ಸ್ಟಾಕ್ ಖರೀದಿ ಮಾಡಲು ಅವರು ಹೈದರಾಬಾದ್‌ಗೆ ಬಂದಿದ್ದರು. ಆದರೆ ವ್ಯವಹಾರ ಕಾರ್ಯರೂಪಕ್ಕೆ ಬಾರದ ಕಾರಣ ಕೈಯಲ್ಲಿ ಇಷ್ಟು ಮೊತ್ತದ ಹಣವನ್ನು ಹಿಡಿದುಕೊಂಡು ಸಾಗುವುದು ಅಪಾಯಕಾರಿಯಾಗಿದ್ದರಿಂದ ಹಣವನ್ನು ಎಟಿಎಂ ಮೂಲಕ ಬ್ಯಾಂಕ್ ಖಾತೆಗೆ ಜಮಾ ಮಾಡಲು ಅವರ ಸೋದರ ಸಂಬಂಧಿ ಮಿಶ್ಬಾನ್ ಸಲಹೆ ನೀಡಿದ್ದರು. ಅದರಂತೆ ರಿನ್ಶ್ಯಾದ್ ಪಿವಿ ಅವರು ಹಣವನ್ನು ಖಾತೆಗೆ ಜಮಾ ಮಾಡುವುದಕ್ಕಾಗಿ ಎಟಿಎಂಗೆ ಬಂದಿದ್ದ ವೇಳೆ ಹಿಂದಿನಿಂದ ಬಂದ ಇಬ್ಬರು ದುಷ್ಕರ್ಮಿಗಳು ಈ ಕೃತ್ಯವೆಸಗಿದ್ದಾರೆ.

ಜನವರಿ 31 ರ ಬೆಳಿಗ್ಗೆ ಸುಮಾರು 7 ಗಂಟೆಗೆ ಈ ಘಟನೆ ನಡೆದಿದೆ. ರಿನ್ಶಾದ್ ತನ್ನ ಸ್ನೇಹಿತ ಅಮೀರ್ ಎಂಬುವವರಿಗೆ ಸೇರಿದ ದ್ವಿಚಕ್ರ ವಾಹನದಲ್ಲಿ ಕೋಟಿಯ ಬ್ಯಾಂಕ್ ಸ್ಟ್ರೀಟ್ ರಸ್ತೆಯಲ್ಲಿರುವ ಎಸ್‌ಬಿಐ ಮುಖ್ಯ ಶಾಖೆಯ ಎಟಿಎಂ ಬಳಿ ತಲುಪಿ ಹಣದ ಚೀಲದೊಂದಿಗೆ ಎಟಿಎಂ ಬಳಿ ನಿಂತಿದ್ದಾಗ ಇಬ್ಬರು ದುಷ್ಕರ್ಮಿಗಳು ಅಲ್ಲಿಗೆ ಬಂದಿದ್ದಾರೆ. ಅವರಲ್ಲೊಬ್ಬ ಎರಡು ಸುತ್ತು ಗುಂಡು ಹಾರಿಸಿದ್ದು, ಒಂದು ಗುಂಡು ರಿನ್ಶಾದ್ ಬಲಗಾಲಿಗೆ ತಗುಲಿ ಅವರು ಕೆಳಗೆ ಬಿದ್ದಿದ್ದಾರೆ. ಈ ವೇಳೆ ದರೋಡೆಕೋರರು ಅವರ ಬಳಿ ಇದ್ದ 6 ಲಕ್ಷ ಮೌಲ್ಯದ ನಗದು ಹಣದೊಂದಿಗೆ ಪರಾರಿಯಾಗಿದ್ದಾರೆ.

ಇದನ್ನೂ ಓದಿ: ನನ್ನ ಅಮ್ಮ ಯಾರು? ಕರುಳಬಳ್ಳಿಯ ಅರಸಿ 7000 ಕಿಲೋ ಮೀಟರ್ ದೂರದಿಂದ ಭಾರತಕ್ಕೆ ಬಂದ ಬಾಲಕ

ಹೀಗೆ ಹಣದೊಂದಿಗೆ ಎಸ್ಕೇಪ್ ಆಗುವ ಮೊದಲು ಖದೀಮರು ರಿನ್ಶ್ಯಾದ್ ಅವರ ಬೈಕ್ ಕೀಯನ್ನು ತೆಗೆದುಕೊಂಡು ಅವರ ಬೈಕ್‌ನಲ್ಲೇ ಅಲ್ಲಿಂದ ಹೋಗಿದ್ದಾರೆ. ಶಂಕಿತರು ಚಾದರ್‌ಘಾತ್ ಕಡೆಗೆ ಹೋಗಿದ್ದು, ಕಾಚಿಗುಡದ ನಿಂಬೋಲಿಯಡ್ಡ ಕಡೆಗೆ ತೆರಳಿ ಅಲ್ಲಿ ಬೈಕ್‌ನ್ನು ತ್ಯಜಿಸಿ ಬಟ್ಟೆಯನ್ನು ಕೂಡ ಬದಲಿಸಿ ಬರೀಗಾಲಲ್ಲಿ ಕಾಚೀಗುಡ್ಡ ಎಕ್ಸ್‌ರೋಡ್‌ನತ್ತ ಪರಾರಿಯಾಗಿದ್ದಾರೆ. ರಿನ್ಶಾದ್ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸುಲ್ತಾನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದರೋಡೆ ಮತ್ತು ಕೊಲೆಯತ್ನಕ್ಕೆ ಸಂಬಂಧಿಸಿದ ಸೆಕ್ಷನ್‌ಗಳಡಿ ಅಡಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಹಾಸ್ಟೆಲ್‌ನಲ್ಲಿ ಓದುತ್ತಿದ್ದ ಹದಿಹರೆಯದ ಇಬ್ಬರು ಮಕ್ಕಳ ಕರೆತಂದು ಜೊತೆಗೆ ರೈಲಿಗೆ ತಲೆಕೊಟ್ಟ ಸಾಫ್ಟ್‌ವೇರ್ ತಾಯಿ

ವಿಶೇಷ ಅಪರಾಧ ದಳದ ತಂಡಗಳು ಸಿಸಿಟಿವಿ ದೃಶ್ಯಾವಳಿಗಳನ್ನು ವಿಶ್ಲೇಷಿಸುತ್ತಿವೆ, ಸಾಕ್ಷಿ ಸಂಗ್ರಹಿಸುತ್ತಿವೆ ಮತ್ತು ಶಂಕಿತರನ್ನು ಪತ್ತೆಹಚ್ಚಲು ನೆರೆಯ ಪೊಲೀಸ್ ಘಟಕಗಳೊಂದಿಗೆ ಕೆಲಸ ಮಾಡುತ್ತಿವೆ. ಇಲ್ಲಿಯವರೆಗೆ ಕೃತ್ಯದಲ್ಲಿ ಭಾಗಿಯಾದ ದುಷ್ಕರ್ಮಿಗಳ ಗುರುತುಗಳು ತಿಳಿದು ಬಂದಿಲ್ಲ. ಈ ವಿಚಾರ ಗೊತ್ತಿದ್ದ ಸಂತ್ರಸ್ತನ ಹತ್ತಿರವಿರುವ ಯಾರಾದರೂ ಅವರ ಬಳಿ ನಗದು ಇದ್ದ ಬಗ್ಗೆ ಮಾಹಿತಿ ನೀಡಿದ್ದಾರೆಯೇ ಎಂಬ ಬಗ್ಗೆಯೂ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಆದರೆ ಇನ್ನೂ ಯಾವುದೇ ತೀರ್ಮಾನಕ್ಕೆ ಬಂದಿಲ್ಲ.