ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ದಾಖಲೆಯ 17ನೇ ಬಜೆಟ್ ಮಂಡಿಸಲಿದ್ದು, ಶಿಕ್ಷಣ, ಆರೋಗ್ಯ, ಕೃಷಿ, ಕೈಗಾರಿಕೆ, ಸಾರಿಗೆ ಸೇರಿ ವಿವಿಧ ವಲಯಗಳ ಸಮುದಾಯದಿಂದ ಭಾರೀ ನಿರೀಕ್ಷೆಗಳಿವೆ.
ಲಿಂಗರಾಜು ಕೋರಾ
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ದಾಖಲೆಯ 17ನೇ ಬಜೆಟ್ ಮಂಡಿಸಲಿದ್ದು, ಶಿಕ್ಷಣ, ಆರೋಗ್ಯ, ಕೃಷಿ, ಕೈಗಾರಿಕೆ, ಸಾರಿಗೆ ಸೇರಿ ವಿವಿಧ ವಲಯಗಳ ಸಮುದಾಯದಿಂದ ಭಾರೀ ನಿರೀಕ್ಷೆಗಳಿವೆ.
ಬಜೆಟ್ ಪೂರ್ವಭಾವಿ ಸಭೆಯಲ್ಲಿ ಈಗಾಗಲೇ ಆಯಾ ವಲಯದ ಸಂಘ-ಸಂಸ್ಥೆಗಳು, ಕೈಗಾರಿಕೆಗಳು, ತಜ್ಞರು, ಭಾಗೀದಾರರು ಮುಖ್ಯಮಂತ್ರಿ ಅವರಿಗೆ ತಮ್ಮ ಬೇಡಿಕೆಗಳೇನು? ನಿರೀಕ್ಷೆಗಳೇನು ಎನ್ನುವ ಪಟ್ಟಿ ಸಲ್ಲಿಸಿದ್ದಾರೆ. ಇವುಗಳಲ್ಲಿ ಮುಖ್ಯಮಂತ್ರಿ ಯಾವ ವಲಯಕ್ಕೆ ಹೆಚ್ಚು ಒತ್ತು ನೀಡುತ್ತಾರೆ, ಯಾವ ಬೇಡಿಕೆಗಳನ್ನು ಪರಿಗಣಿಸಿ ಬಜೆಟ್‌ನಲ್ಲಿ ಘೋಷಿಸುತ್ತಾರೆ ಎನ್ನುವುದು ಶುಕ್ರವಾರ ಬಹಿರಂಗವಾಗಲಿದೆ.
ಶಿಕ್ಷಣ ವಲಯದಲ್ಲಿ ಹಲವು ಘೋಷಣೆ ನಿರೀಕ್ಷೆ:
ಶಿಕ್ಷಣ ವಲಯದಲ್ಲಿ ಪ್ರಮುಖವಾಗಿ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವಿದ್ದಾಗ ಜಾರಿಗೆ ತಂದ ಶಿಕ್ಷಣ ಹಕ್ಕು ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸಿಎಂ ಅವರು ಬಜೆಟ್‌ನಲ್ಲಿ ಘೋಷಣೆ ಮಾಡಬಹುದು ಎನ್ನುವ ನಿರೀಕ್ಷೆ ಲಕ್ಷಾಂತರ ಪೋಷಕರದ್ದು. ಲಕ್ಷಾಂತರ ರು. ಶುಲ್ಕ ಕಟ್ಟಿ ಖಾಸಗಿ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ಓದಿಸಲಾಗದ ಪೋಷಕರು ಆರ್‌ಇಟಿ ಕಾಯ್ದೆ ಜಾರಿ ಮೂಲಕ ಎಲ್ಲ ಶಾಲೆಗಳಲ್ಲೂ ಶೇ.25ರಷ್ಟು ಸೀಟುಗಳನ್ನು ಬಡ ಮಕ್ಕಳಿಗೆ ಮೀಸಲಿಟ್ಟು ಸರ್ಕಾರವೇ ಅವರ ಶುಲ್ಕ ಪಾವತಿಸುವ ಈ ಮಹತ್ವದ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡಬೇಕೆಂಬುದು ಬಹು ನಿರೀಕ್ಷೆಯಾಗಿದೆ.
ಇನ್ನು, ರಾಜ್ಯ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ 60 ಸಾವಿರ ಹುದ್ದೆಗಳ ಭರ್ತಿಗೆ ಆಕಾಂಕ್ಷಿಗಳು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಒಂದೆಡೆ ವಯೋಮಿತಿ ಮೀರುವ ಅಭ್ಯರ್ಥಿಗಳು ಹೇಗಾದರೂ ಮಾಡಿ ಶಿಕ್ಷಕರಾಗಿ ನೇಮಕವಾಗಬೇಕೆಂದು ಸಿಇಟಿ ಪರೀಕ್ಷೆಗೆ ಇದ್ದ ಕೆಲಸ ಬಿಟ್ಟು ತಯಾರಿ ನಡೆಸುತ್ತಿದ್ದಾರೆ. ಮತ್ತೊಂದೆಡೆ ಹಾಲಿ ಶಿಕ್ಷಕರೂ ಸೇರಿ ಸರ್ಕಾರಿ ನೌಕರರು ತಮಗೆ ಹೊಸ ಪಿಂಚಿಣಿ ಸೌಲಭ್ಯ ಬಿಟ್ಟು ಹಳೆಯ ಪಿಂಚಣಿ ಸೌಲಭ್ಯವನ್ನೇ ಮರು ಜಾರಿಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ಹಾಕುತ್ತಲೇ ಇದ್ದು, ಬಜೆಟ್‌ನಲ್ಲಿ ಇದರ ಜಾರಿಗೆ ಸ್ಪಷ್ಟ ಭರವಸೆ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಅತಿ ಕಡಿಮೆ ಗೌರವಧನಕ್ಕೆ ದುಡಿಯುತ್ತಿರುವ ಅತಿಥಿ ಶಿಕ್ಷಕರು, ಉಪನ್ಯಾಸಕರು, ಬಿಸಿಯೂಟ ಸಿಬ್ಬಂದಿ ಈ ಬಾರಿಯೂ ಮುಖ್ಯಮಂತ್ರಿ ಅವರು ಒಂದಷ್ಟು ಗೌರವಧನ ಹೆಚ್ಚಿಸಬಹುದೆಂಬ ಆಶಯದಲ್ಲಿದ್ದಾರೆ.
ಕೃಷಿ-ಸಹಕಾರ ವಲಯ: ಹೊಸ ಘೋಷಣೆ ನಿರೀಕ್ಷೆ
ಮುಖ್ಯಮಂತ್ರಿ ಅವರು ಯುವಜನರನ್ನು ಕೃಷಿಯತ್ತ ಆಕರ್ಷಿಸಲು ಹಾಗೂ ಸಾವಯವ ಮತ್ತು ಸಮಗ್ರ ಕೃಷಿ ಪದ್ಧತಿ ಉತ್ತೇಜನಕ್ಕೆ ಸಹಾಯಧನ ಕಾರ್ಯಕ್ರಮಗಳನ್ನು ಘೋಷಿಸುವ ನಿರೀಕ್ಷೆ ರೈತರು, ರೈತಮುಖಂಡರದ್ದಾಗಿದೆ. ಅದೇ ರೀತಿ ರೈತರಿಗೆ ಸಹಕಾರ ಸಂಘಗಳ ಮೂಲಕ ಶೂನ್ಯ ಬಡ್ಡಿದರದ ಸಾಲ ಪ್ರಮಾಣ ಹೆಚ್ಚಳ ಮಾಡಿದ್ದರೂ ಹಿಂದೆ ಸಮರ್ಪಕ ಜಾರಿಯಾಗಿಲ್ಲ ಎಂಬ ಆರೋಪಗಳಿವೆ. ಹಾಗಾಗಿ ಈ ಬಾರಿ ಅನುಷ್ಠಾನಕ್ಕೆ ಹೆಚ್ಚಿನ ಅನುದಾನ ಮೀಸಲಿಡುವ ಸಾಧ್ಯತೆ ಇದೆ.
ವನ್ಯಜೀವಿಗಳಿಂದ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ಹೆಚ್ಚಳ, ಪಂಜಾಬ್ ಮಾದರಿಯಲ್ಲಿ ರಾಜ್ಯಾದ್ಯಂತ ರೈತರು ಬೆಳೆದ ಬೆಳಗಳನ್ನು ಮಾರುಕಟ್ಟೆಗೆ ಸಾಗಿಸಲು ಟೋಲ್ ಮುಕ್ತಗೊಳಿಸಬೇಕು, ಕಬ್ಬಿಗೆ ದರ ಹೆಚ್ಚಳ ಮತ್ತು ಕೈಗಾರಿಕೆಗಳಿಂದ ಕಬ್ಬು ದರ ಬಾಕಿ ಉಳಿಸಿಕೊಳ್ಳುವುದು ತಡೆಯಲು ಮತ್ತಷ್ಟು ಕಠಿಣ ನಿಯಮ ಜಾರಿ, ಕಟಾವು, ಸಾಗಣೆ ವೆಚ್ಚವನ್ನು ಸಕ್ಕರೆ ಕಾರ್ಖಾನೆಗಳೇ ಭರಿಸುವಂತೆ ಮಾಡುವುದು, ರಾಜ್ಯಾದ್ಯಂತ ಎಲ್ಲ ಕೆರೆಗಳ ಹೂಳು ತೆಗೆಸಿ ರೈತರ ಜಮೀನಿಗೆ ಸಾಗಿಸುವುದು, ಭೂ ಸುಧಾರಣೆ ಕಾಯ್ದೆ ರದ್ದು, ಎಪಿಎಂಸಿ ಕಾಯ್ದೆ ರದ್ದು, ಕಳಪೆ ಕೀಟನಾಶಕ, ಬೀಜ, ನಕಲಿ ಗೊಬ್ಬರ, ನರ್ಸರಿ ಸಸಿಗಳ ಮಾರಾಟ ತಡೆಗೆ ಬಜೆಟ್‌ನಲ್ಲಿ ಸ್ಪಷ್ಟ ಭರವಸೆ ಸಿಗುವ ವಿಶ್ವಾಸದಲ್ಲಿ ರೈತರಿದ್ದಾರೆ. ಅಲ್ಲದೆ, ರೈತರ ಎಲ್ಲ ಬೆಳೆಗಳಿಗೂ ವಿಮೆ ಜಾರಿ, ವಿವಿಧ ಬೆಳೆಗಳಿಗೆ ಬೆಂಬಲ ಬೆಲೆ ಯೋಜನೆಗೆ ರಾಜ್ಯದಿಂದಲೂ ಹೆಚ್ಚಿನ ನೆರವು, ಹನಿ ನೀರಾವರಿ ಯೋಜನೆಗೆ ಇನ್ನಷ್ಟು ಪ್ರೋತ್ಸಾಹ ಸೇರಿದಂತೆ ಬಹಳಷ್ಟು ಕಾರ್ಯಕ್ರಮಗಳ ನಿರೀಕ್ಷೆಗಳು ಮನೆ ಮಾಡಿವೆ.
ಹಿಂ. ವರ್ಗಗಳಿಂದ ಮೀಸಲು ಅನುದಾನ ಹೆಚ್ಚಳದ ಆಶಯ
ರಾಜ್ಯದ ವಿವಿಧ ಹಿಂದುಳಿದ ವರ್ಗಗಳು ಈ ಬಾರಿಯ ಬಜೆಟ್‌ನಲ್ಲಿ ತಮ್ಮ ಸಮುದಾಯಗಳ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ದೊರೆಯುವ ಹಾಗೂ ಮೀಸಲಾತಿ ಹೆಚ್ಚಳದ ನಿರೀಕ್ಷೆ ಇಟ್ಟುಕೊಂಡಿವೆ. 2026-27ನೇ ಸಾಲಿನ ಬಜೆಟ್‌ನಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಕನಿಷ್ಠ 10 ಸಾವಿರ ಕೋಟಿ ರು. ಅನುದಾನ, ಮೀಸಲಾತಿ ಪ್ರಮಾಣವನ್ನು ಶೇ.50ಕ್ಕೆ ಹೆಚ್ಚಳ, ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಗಳಿಗೆ ನೀಡುತ್ತಿರುವ ಎಸ್ಸಿಎಸ್‌ಪಿ/ಟಿಎಸ್‌ಪಿ ಮೀಸಲಾತಿಯಂತೆ ಹಿಂದುಳಿದ ವರ್ಗಗಳ ಪ್ರವರ್ಗ 1 ಮತ್ತು ಪ್ರವರ್ಗ 2ಎಗೆ ಅನುದಾನದಲ್ಲಿ ಪ್ರತ್ಯೇಕ ಮೀಸಲಾತಿ ಭರವಸೆ ಸಿಗಬಹುದೆಂಬ ನಿರೀಕ್ಷೆ ಹೊಂದಿವೆ. ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಗಳಿಗೂ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ದೊರೆಯುವ ಆಶಾಭಾವನೆ ಇದೆ. ದೇವರಾಜ ಅರಸು ನಿಗಮದಿಂದ 2022ರಿಂದ ನಿಲ್ಲಿಸಲಾಗಿರುವ ಮೆಟ್ರಿಕ್ ಪೂರ್ವ ತರಗತಿ ಮಕ್ಕಳ ವಿದ್ಯಾರ್ಥಿವೇತನವನ್ನು ಪುನಾರಂಭಿಸಬಹುದೆಂದು ಅಂದಾಜಿಸಲಾಗಿದೆ.
ಕೈಗಾರಿಕಾ ವಲಯದಿಂದ ನಿರೀಕ್ಷೆಗಳ ಗೋಪುರ:
ರಾಜ್ಯದಲ್ಲಿ ಹೆಚ್ಚಿನ ಬಂಡವಾಳ ಆಕರ್ಷಣೆಗೆ ಉದ್ಯಮ ಸ್ಥಾಪನೆ ಪ್ರಕ್ರಿಯೆ, ತೆರಿಗೆ ಸಂಬಂಧಿತ ನಿಯಮ ಮತ್ತು ಕಾರ್ಯವಿಧಾನಗಳನ್ನು ಇನ್ನಷ್ಟು ಸರಳೀಕರಿಸುವ, ಬೆಂಗಳೂರಿನ ಹೊರಗೂ ಕೈಗಾರಿಕೆಗಳ ಬೆಳವಣಿಗೆಗೆ ಹೆಚ್ಚಿನ ಆದ್ಯತೆ ನೀಡುವ, ಕೈಗಾರಿಕಾ ವಲಯಕ್ಕೆ ಸಾಲದ ಹರಿವು ಹೆಚ್ಚಿಸುವ ಸಂಬಂಧ ಈ ಬಾರಿಯ ಬಜೆಟ್‌ನಲ್ಲಿ ಸಿದ್ದರಾಮಯ್ಯ ಹಲವು ಘೋಷಣೆ ಮಾಡುವ ನಿರೀಕ್ಷೆ ಉದ್ಯಮಿಗಳದ್ದು.
ಬೆಂಗಳೂರು ಕೇಂದ್ರೀಕೃತ ಕೈಗಾರಿಕೆಗಳನ್ನು ರಾಜ್ಯದ ಎರಡು ಮತ್ತು ಮೂರನೇ ಹಂತದ ನಗರಗಳಿಗೂ ವಿಸ್ತರಿಸಲು ಬಜೆಟ್‌ನಲ್ಲಿ ಉತ್ತೇಜಕ ಕಾರ್ಯಕ್ರಮಗಳನ್ನು ನೀಡಬೇಕು. ಈ ನಿಟ್ಟಿನಲ್ಲಿ ತಮ್ಮ ಮನವಿಯಂತೆ ಎಫ್‌ಕೆಸಿಸಿಐ ನೀಡಿರುವ ಶಿಫಾರಸುಗಳ ಅನುಷ್ಠಾನದ ಭರವಸೆಯನ್ನು ಬಜೆಟ್‌ನಲ್ಲಿ ಘೋಷಿಸಬಹುದೆಂದು ಉದ್ಯಮಿಗಳ ನಿರೀಕ್ಷೆ.
ಅಲ್ಲದೆ, ಕೈಗಾರಿಕಾ ಕ್ಷೇತ್ರಗಳ ಮೂಲಸೌಕರ್ಯ ಅಭಿವೃದ್ಧಿ, ಕೈಗಾರಿಕಾ ಎಸ್ಟೇಟ್‌ಗಳನ್ನು ಮೇಲ್ದರ್ಜೆಗೆ ಏರಿಸುವುದು, ಕೈಗಾರಿಕಾ ಟೌನ್‌ಶಿಪ್‌ಗಳ ಸ್ಥಾಪನೆ, ರಾಜ್ಯಕ್ಕೆ ಪ್ರತ್ಯೇಕ ಎಂಎಸ್‌ಎಂಇ ನೀತಿ ಮತ್ತು ವಿಶೇಷ ಉತ್ತೇಜಕ ಕ್ರಮಗಳ ಮೂಲಕ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಅಭಿವೃದ್ಧಿಗೆ ಆದ್ಯತೆ, ಕೌಶಲ್ಯಾಭಿವೃದ್ಧಿ ಚಟುವಟಿಕೆ, ಪ್ರವಾಸೋದ್ಯಮ ವಲಯದ ಬೆಳವಣಿಗೆಗೆ ಉತ್ತೇಜನ, ಇಂಧನ ವಲಯ ಮತ್ತು ಹಸಿರು ಇಂಧನಕ್ಕೆ ನೆರವು. ಕೃಷಿ ಕ್ಷೇತ್ರದ ಅಭಿವೃದ್ಧಿಗೆ ವೇಗ ನೀಡುವುದು, ಉತ್ಪಾದನಾ ವಲಯ ಬೆಳವಣಿಗೆಗೆ ಪ್ರೋತ್ಸಾಹ, ಕೈಗಾರಿಕಾ ವಲಯಕ್ಕೆ ಸಾಲದ ಹರಿವು ಹೆಚ್ಚಿಸಲು ಬಜೆಟ್‌ನಲ್ಲಿ ಪೂರಕ ಕಾರ್ಯಕ್ರಮಗಳ ಘೋಷಣೆಯ ಆಶಾಗೋಪುರ ಉದ್ಯಮವಲದಲ್ಲಿದೆ.
ಸಾರಿಗೆ ವಲಯದಲ್ಲಿ ಬಹು ನಿರೀಕ್ಷೆ:
ಬಸ್ಸು, ಟ್ಯಾಕ್ಸಿ, ಆಟೋ ಚಾಲಕ, ಮಾಲೀಕರು ಸೇರಿ ಸರ್ಕಾರಿ ಹಾಗೂ ಖಾಸಗಿ ಸಾರಿಗೆ ವಲಯದ ನೌಕರರು ಈ ಬಾರಿಯ ಬಜೆಟ್‌ನಲ್ಲಿ ತಮಗೂ ಒಂದಷ್ಟು ಲಾಭವಾಗಬಹುದು ಎಂದು ನಿರೀಕ್ಷಿಸುತ್ತಿದ್ದಾರೆ. ಪ್ರಮುಖವಾಗಿ ರಾಜ್ಯ ರಸ್ತೆ ಸಾರಿಗೆ ನೌಕರರು ಬಾಕಿ ಇರುವ 38 ತಿಂಗಳ ವೇತನ ಬಾಕಿ ಪಾವತಿ ಹಾಗೂ ವೇತನ ಪರಿಷ್ಕರಣೆಯ ಭರವಸೆಯ ನಿರೀಕ್ಷೆಯಲ್ಲಿದ್ದಾರೆ. ಇತ್ತ ಖಾಸಗಿ ಸಾರಿಗೆ ವಲಯದಲ್ಲಿ ವಾಣಿಜ್ಯ ಬಳಕೆಯ ಚಾಲಕರು ಹೆದ್ದಾರಿಗಳಲ್ಲಿ ಚಾಲಕರ ತಂಗುದಾಣ, ಅದೇ ರೀತಿ ಚಾಲಕರ ಸುರಕ್ಷತೆಗಾಗಿ ಹೆದ್ದಾರಿಗಳಲ್ಲಿ ಪೊಲೀಸ್ ಪೆಟ್ರೋಲಿಂಗ್ ಹೆಚ್ಚಿಸಬೇಕು. ಸಿಸಿಟಿವಿ ಮತ್ತು ತುರ್ತು ಸಹಾಯವಾಣಿ ವ್ಯವಸ್ಥೆ ಬಲಪಡಿಸಲು ಬಜೆಟ್‌ನಲ್ಲಿ ಅನುದಾನ ಸಿಗಬಹುದೆಂದು ಕಾಯುತ್ತಿದ್ದಾರೆ.
ಮತ್ತೊಂದಡೆ ಅಸಂಘಟಿತ ವಲಯದ ಚಾಲಕ, ಮಾಲೀಕರು ಆಟೋ, ಟ್ಯಾಕ್ಸಿ ಖಾಸಗಿ ಬಸ್, ಲಾರಿ, ಮ್ಯಾಕ್ಸಿ ಕ್ಯಾಬ್, ಗೂಡ್ಸ್ ಚಾಲಕರ ವರ್ಗಕ್ಕೆ ಅಸಂಘಟಿತ ಚಾಲಕರ ಅಭಿವೃದ್ಧಿ ನಿಗಮ ಸ್ಥಾಪಿಸುವ ಭರವಸೆ ಬಜೆಟ್‌ನಲ್ಲಿ ಸಿಗಬಹುದೆಂಬ ಆಶಯದಲ್ಲಿದ್ದಾರೆ. ಜಾತಿವಾರು ನಿಗಮಗಳಿಂದ ಹೊಸ ಆಟೋರಿಕ್ಷಾ, ಆಟೋರಿಕ್ಷಾ ನೇರ ಸಾಲ ಯೋಜನೆ, ಎಲೆಕ್ಟ್ರಿಕ್ ಆಟೋರಿಕ್ಷಾ, ಟ್ಯಾಕ್ಸಿಕೊಳ್ಳುವ ಚಾಲಕರಿಗೆ ಒಂದಷ್ಟು ಸಹಾಯಧನ ಘೋಷಣೆಯ ನಿರೀಕ್ಷೆ ಮಾಡುತ್ತಿದ್ದಾರೆ.
ಸರ್ವರಿಗೂ ಆರೋಗ್ಯಕ್ಕೆ ವಿಶೇಷ ಯೋಜನೆ ಸಾಧ್ಯತೆ
ಆರೋಗ್ಯ ಸೇವೆ ಅಭಿವೃದ್ಧಿಯ ಒಂದು ಚಾಲಕ ಶಕ್ತಿ ಎಂದು ನಂಬಿರುವ ಸಿದ್ದರಾಮಯ್ಯ ಅವರು ಆರೋಗ್ಯ ಸೇವೆ ಕಾರ್ಯಕ್ರಮಗಳ ಅನುಷ್ಠಾನವನ್ನು ಸಮರ್ಥವಾಗಿ ಪರಿಣಾಮಕಾರಿ ಮತ್ತು ಜನಮುಖಿಯಾಗಿ ನೀಡಲು 2026-27ನೇ ಸಾಲಿನ ಬಜೆಟ್‌ನಲ್ಲಿ ಒಂದಷ್ಟು ಯೋಜನೆಗಳನ್ನು ಘೋಷಿಸುವ ಸಾಧ್ಯತೆ ಇದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲಸೌಕರ್ಯ ಹೆಚ್ಚಿಸಲು ಅನುದಾನ, ಅಗತ್ಯವಿರುವೆಡೆ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಹಾಸಿಗೆ ಪ್ರಮಾಣ ಹೆಚ್ಚಳ, ಆಧುನಿಕ ವೈದ್ಯಕೀಯ ಉಪಕರಣಗಳ ನವೀಕರಣ, ಹೊಸ ಐಟಿಯು, ಡಯಾಲಿಸಿಸ್, ಕ್ಯಾನ್ಸರ್ ಚಿಕಿತ್ಸೆ ಘಟಕಗಳ ಸ್ಥಾಪನೆ, ವೈದ್ಯರು ಸಿಬ್ಬಂದಿ ನೇಮಕಾತಿ, ಗರ್ಭಿಣಿ ಮತ್ತು ನವಜಾತ ಶಿಶುಗಳ ಸಾವಿನ ಪ್ರಮಾಣ ಕಡಿಮೆ ಮಾಡಲು ವಿಶೇಷ ಯೋಜನೆ, ಆರೋಗ್ಯ ಕರ್ನಾಟಕ ಆಯುಷ್ಮಾನ್ ಯೋಜನೆ ವಿಸ್ತರಣೆ, ಕೆಲ ಜಿಲ್ಲೆಗಳಿಗೆ ಹೊಸ ಮೆಡಿಕಲ್ ಕಾಲೇಜು ಸ್ಥಾಪನೆ ಮತ್ತು ಹಾಲಿ ಕಾಲೇಜುಗಳಲ್ಲಿ ಸಂಶೋಧನೆಗೆ ವಿಶೇಷ ಅನುದಾನ, ಆರೋಗ್ಯ ಡೇಟಾ ಡಿಜಿಟಲೀಕರಣ ಸೇರಿ ಇನ್ನೂ ಹಲವು ಯೋಜನೆಗಳನ್ನು ಈ ಬಾರಿಯ ಬಜೆಟ್‌ನಲ್ಲಿ ಪ್ರಕಟಿಸುವ ನಿರೀಕ್ಷೆ ಇದೆ.


