ಹೊಸಪೇಟೆಯ ಕಲಾವಿದೆ ಆರ್.ಹರ್ಷಿತಾ, ಭರತನಾಟ್ಯ ಮಾಡುತ್ತಲೇ ಕೇವಲ 8 ನಿಮಿಷ 59 ಸೆಕೆಂಡುಗಳಲ್ಲಿ ಅಂಜನಾದ್ರಿ ಬೆಟ್ಟದ 574 ಮೆಟ್ಟಿಲುಗಳನ್ನು ಏರಿ ತಮ್ಮ ಹರಕೆ ತೀರಿಸಿದ್ದಾರೆ. ಇದೇ ವೇಳೆ, ಹನುಮಮಾಲಾ ವಿಸರ್ಜನೆ ನಿಮಿತ್ತ ಲಕ್ಷಾಂತರ ಭಕ್ತರು ಆಗಮಿಸಿ ಅಂಜನಾದ್ರಿ ಬೆಟ್ಟವು ಸಂಪೂರ್ಣ ಕೇಸರಿಮಯವಾಗಿತ್ತು.
ಗಂಗಾವತಿ (ಡಿ.4): ಭರತ ನಾಟ್ಯ ಮಾಡುತ್ತಲೇ ಅಂಜನಾದ್ರಿ ಬೆಟ್ಟವನ್ನು 8 ನಿಮಿಷ 59 ಸೆಂಕೆಂಡಗಳಲ್ಲಿ ಏರಿ ಕಲಾವಿದೆ ಆರ್.ಹರ್ಷಿತಾ ಗಮನ ಸೆಳೆದಿದ್ದಾರೆ. ವಿಜಯನಗರ ಜಿಲ್ಲೆ ಹೊಸಪೇಟೆಯ ಆರ್.ಹರ್ಷಿತಾ ಭರತನಾಟ್ಯ ಮಾಡುತ್ತಲೇ ಅಂಜನಾದ್ರಿ ಬೆಟ್ಟ ಏರಿ ಸೇವೆ ಸಲ್ಲಿಸುವುದಾಗಿ ಹರಕೆ ಹೊತ್ತಿದ್ದರು. ಅದರಂತೆ ಪಾಲಕರ ಮಾರ್ಗದರ್ಶನದಲ್ಲಿ ಹನುಮದ್ ವ್ರತಾಚರಣೆ ಸಂದರ್ಭದಲ್ಲಿ 574 ಮೆಟ್ಟಿಲುಗಳ ಮೇಲೆ ವಿವಿಧ ಭಂಗಿಯಲ್ಲಿ ನಾಟ್ಯ ಮಾಡುತ್ತಾ ಹತ್ತಿದ್ದಾರೆ.
ನಂತರ ದೇಗುಲದ ಆವರಣದಲ್ಲಿ ಭರತನಾಟ್ಯ ಮಾಡಿ ದೇವರ ದರ್ಶನ ಪಡೆದಿದ್ದಾರೆ. ನಂತರ ದೇವಸ್ಥಾನದಲ್ಲಿ ಆರ್. ಹರ್ಷಿತಾರನ್ನು ಸನ್ಮಾನಿಸಿ ಗೌರವಿಸಿದರು.
ಹನುಮ ಭಕ್ತರಿಂದ ಅಂಜನಾದ್ರಿ ಕೇಸರಿಮಯ
ಹನುಮಮಾಲಾ ವಿಸರ್ಜನೆ ನಿಮಿತ್ತ ಆಂಜನೇಯನ ಜನ್ಮಸ್ಥಳವಾದ ಅಂಜನಾದ್ರಿ ಬೆಟ್ಟಕ್ಕೆ ಲಕ್ಷಾಂತರ ಭಕ್ತಾದಿಗಳು ಹರಿದು ಬಂದಿತು. ಇಡೀ ಅಂಜನಾದ್ರಿ ಬೆಟ್ಟವೇ ಕೇಸರಿಮಯವಾಗುವಂತೆ ಮಾಡಿತು. ಅದರಲ್ಲೂ ಬೆಳ್ಳಂಬೆಳಗ್ಗೆ ಸೂರ್ಯನ ಹೊಂಗಿರಣ ಆಂಜನೇಯನ ಜನ್ಮಸ್ಥಳ ಅಂಜನಾದ್ರಿಯ ಮೇಲೆ ಬಿದ್ದಾಗ ಈ ಕೇಸರಿಮಯ ಸೊಬಗು ಮತ್ತಷ್ಟು ರಂಗು ಪಡೆದುಕೊಂಡಿರುವುದು ಕಂಡು ಬಂದಿತು.
ಮಂಗಳವಾರ ಮಧ್ಯರಾತ್ರಿಯಿಂದಲೇ ಆಂಜನೇಯನ ದರ್ಶನ ಪಡೆಯಲು ಬೆಟ್ಟ ಏರಿದ ಹನುಮ ಮಾಲಾಧಾರಿಗಳು, ಮೆಟ್ಟಿಲು ಹತ್ತುವಾಗ ಜೈರಾಮ, ಜೈ ಆಂಜನೇಯನ ಘೋಷಣೆ ಕಿಷ್ಕಿಂಧಾ ಪ್ರದೇಶದಲ್ಲಿ ಮಾರ್ದನಿಸಿತು.
ರಾಜ್ಯದ ಮೂಲೆ ಮೂಲೆಯಿಂದ ಬಂದಿದ್ದ ಹನುಮಾಲಾಧಾರಿಗಳು ಗೊತ್ತು ಮಾಡಿದ್ದ ಜಾಗದಲ್ಲಿ ಹನುಮ ಮಾಲೆ ವಿಸರ್ಜನೆ ಮಾಡಿ ತುಂಗಭದ್ರಾ ಅಥವಾ ಸ್ನಾನ ಘಟ್ಟಗಳಲ್ಲಿ ಸ್ನಾನ ಮಾಡಿ ಪೂಜೆ ಸಲ್ಲಿಸಿ ಅಂಜನಾದ್ರಿ ಬೆಟ್ಟ ಏರುತ್ತಿದರು.
ವಿಶೇಷ ಪೂಜೆ:
ಕಳೆದ ಎರಡು ದಿನಗಳಿಂದ ಅಂಜನಾದ್ರಿ ಬೆಟ್ಟದ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಪ್ರಮುಖವಾಗಿ ಪವಮಾನ ಹೋಮ ಸೇರಿದಂತೆ ವಿವಿಧ ಹೋಮ ಹವನ, ವಿಶೇಷ ಪೂಜೆ ಜರುಗಿದವು. ಆಂಜನೇಯ ಸ್ವಾಮಿಗೆ ವಿವಿಧ ಹೂಗಳಿಂದ ವಿಶೇಷ ಅಲಂಕಾರ ಮಾಡಲಾಯಿತು. ಅಲ್ಲದೇ ದೇವಾಲಯದ ಒಳಗೆ ಮತ್ತು ಹೊರಗೆ ಹೂಗಳಿಂದ ಅಲಂಕಾರ ಮಾಡಿದ್ದು ಗಮನ ಸೆಳೆಯಿತು.


