ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಬ್ಬಂದಿ ಕೊರತೆ, ಕಾರ್ಯಾಚರಣೆಯ ಸಮಸ್ಯೆಗಳಿಂದಾಗಿ ಇಂಡಿಗೋ ಏರ್ಲೈನ್ಸ್‌ನ 200ಕ್ಕೂ ಹೆಚ್ಚು ವಿಮಾನಗಳು ರದ್ದಾಗಿವೆ. ಇದರಿಂದಾಗಿ ನೂರಾರು ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡು, ಸ್ಪಷ್ಟ ಮಾಹಿತಿ ಇಲ್ಲದೆ ಪ್ರತಿಭಟನೆ ನಡೆಸುತ್ತಿದ್ದಾರೆ.

ಬೆಂಗಳೂರು: ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳೆದ ಎರಡು ದಿನಗಳಿಂದ ಇಂಡಿಗೋ ಏರ್ಲೈನ್ಸ್‌ಗಳ ವಿಮಾನ ಹಾರಾಟದಲ್ಲಿ ಉಂಟಾಗಿರುವ ಭಾರೀ ವ್ಯತ್ಯಯದಿಂದ ನೂರಾರು ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿಮಾನಗಳ ನಿರಂತರ ರದ್ದು, ವಿಳಂಬ, ಸಿಬ್ಬಂದಿ ಕೊರತೆ ಹಾಗೂ ತಾಂತ್ರಿಕ ಅಡಚಣೆಗಳು ಸೇರಿ ಪ್ರಯಾಣಿಕರ ಪರದಾಟ ಹೇಳತೀರದಾಗಿದೆ.

200ಕ್ಕೂ ಹೆಚ್ಚು ವಿಮಾನಗಳ ಹಾರಾಟ ಸ್ಥಗಿತ , ಪ್ರಯಾಣಿಕರ ಪ್ರತಿಭಟನೆ!

ಮೂಲಗಳ ಪ್ರಕಾರ, ಸಿಬ್ಬಂದಿ ಕೊರತೆ ಹಾಗೂ ಕಾರ್ಯಾಚರಣಾ ಸಮಸ್ಯೆಗಳ ಹಿನ್ನೆಲೆಯಲ್ಲಿ ಇಂಡಿಗೋ 200ಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ರದ್ದುಗೊಳಿಸಿದೆ. ಇದರ ಪರಿಣಾಮವಾಗಿ ಕೋಲ್ಕತ್ತಾ, ಗೋವಾ, ದೆಹಲಿ, ಹೈದರಾಬಾದ್, ಪುಣೆ ಮುಂತಾದ ಪ್ರಮುಖ ಮಾರ್ಗಗಳ ವಿಮಾನಗಳನ್ನು ಬಳಸಬೇಕಿದ್ದ ಹಲವು ಪ್ರಯಾಣಿಕರು ತೊಂದರೆ ಅನುಭವಿಸಿದ್ದಾರೆ. ರಾತ್ರಿಯಿಂದ ಬೆಳಿಗ್ಗೆಯವರೆಗೂ ವಿಮಾನ ನಿಲ್ದಾಣದಲ್ಲಿ ಕಾದುಕೊಂಡು ಕುಳಿತಿದ್ದ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಟರ್ಮಿನಲ್–1 ಹೊರಗಡೆಯಲ್ಲಿ ಪ್ರತಿಭಟನೆ ನಡೆಸಿದರು. ಫ್ಲೈಟ್ ಬಗ್ಗೆ ವಿಚಾರಿಸಿದಾಗ ಅಧಿಕಾರಿಗಳು ಸ್ಪಷ್ಟ ಉತ್ತರ ಕೊಡುತ್ತಿಲ್ಲ ಎಂದು ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ. ವಿಳಂಬ–ರದ್ದುಗಳ ಬಗ್ಗೆ ಸ್ಪಷ್ಟ ಮಾಹಿತಿ ಕೊಡದೆ ಕಸ್ಟಮರ್ ಕೇರ್‌ ತಂಡ ತಾತ್ಸಾರವಾಗಿ ವರ್ತಿಸುತ್ತಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. ಕೂಡಲೇ ಪರಿಹಾರ ನೀಡಿ, ನಮಗೆ ಪರ್ಯಾಯ ವಿಮಾನ ಅಥವಾ ವಸತಿ ಕಲ್ಪಿಸಬೇಕು ಎಂಬ ಬೇಡಿಕೆಯನ್ನೂ ಮುಂದುವರೆಸಿದ್ದಾರೆ.

ವಿದೇಶ ಪ್ರಯಾಣಕ್ಕೆ ದೊಡ್ಡ ಹೊಡೆತ

ಜೈಪುರದಿಂದ ಬೆಂಗಳೂರು ಮೂಲಕ ಶ್ರೀಲಂಕಾ ಮತ್ತು ಮಲೇಷಿಯಾದತ್ತ ತೆರಳಬೇಕಿದ್ದ ಪ್ರಯಾಣಿಕರ ತಂಡವೊಂದಕ್ಕೆ ಈ ವ್ಯತ್ಯಯದಿಂದ ದೊಡ್ಡ ಹೊಡೆತವಾಗಿದೆ. ಬೆಳಗ್ಗೆ 4 ಗಂಟೆಗೆ ಹಾರಾಟಕ್ಕೆ ನಿಗದಿಯಾಗಿದ್ದ ವಿಮಾನ, ದೆಹಲಿಯಿಂದ ಬಂದ ಇಂಡಿಗೋ ವಿಮಾನವೇ 10 ಗಂಟೆಗಳ ವಿಳಂಬದಿಂದ ಬೆಂಗಳೂರಿಗೆ ಆಗಮಿಸಿದ ಕಾರಣ ಮಿಸ್ ಆಗಿದೆ. ತಡರಾತ್ರಿ ದೆಹಲಿ ಮತ್ತು ಜೈಪುರದಿಂದ ಹೊರಟಿದ್ದ 100 ಕ್ಕೂ ಹೆಚ್ಚು ಪ್ರಯಾಣಿಕರು ಬೆಳಗ್ಗೆ 11.30 ಗಂಟೆಗೆ ಕೆಐಎಗೆ (KIA) ಬಂದಿಳಿದಿದ್ದಾರೆ. ಇದರಿಂದಾಗಿ ಮುಂದಿನ ಸಂಪರ್ಕ ವಿಮಾನಗಳು ಕಳೆದುಹೋಗಿದ್ದು, ಪ್ರಯಾಣಿಕರು ಏರ್ಪೋರ್ಟ್‌ನಲ್ಲೇ ನಿರಾಶೆಯಿಂದ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ವಿಮಾನ ಮಿಸ್ ಆದ ಪ್ರಯಾಣಿಕರನ್ನು ತಾತ್ಕಾಲಿಕವಾಗಿ ವಿವಿಧ ಹೋಟೆಲ್‌ಗಳಿಗೆ ಶಿಫ್ಟ್ ಮಾಡಲು ಟ್ರಾವೆಲ್ಸ್ ಏಜೆನ್ಸಿಗಳು ಬಸ್ಸುಗಳನ್ನು ಒದಗಿಸಿವೆ.

ಗುರುವಾರ ಮತ್ತೆ 73ಕ್ಕೂ ಹೆಚ್ಚು ವಿಮಾನ ರದ್ದು – ಏರ್ಪೋರ್ಟ್‌ನಲ್ಲಿ ಜನಸಂದಣಿ

ಗುರುವಾರ ಕೂಡ ಸೇಮ್ ಸಮಸ್ಯೆ ಮುಂದುವರಿದಿದ್ದು, ಕೆಐಎನಿಂದ ನಿರ್ಗಮಿಸಬೇಕಿದ್ದ 30ಕ್ಕೂ ಹೆಚ್ಚು ವಿಮಾನಗಳು ರದ್ದುಗೊಂಡವು. ಆಗಮಿಸಬೇಕಿದ್ದ 40ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಪಡಿಸಲಾಗಿದೆ. ಒಟ್ಟು 73ಕ್ಕೂ ಹೆಚ್ಚು ವಿಮಾನಗಳ ರದ್ದು ಆಗಿರುವುದರಿಂದ ಏರ್ಪೋರ್ಟ್‌ನ ಟರ್ಮಿನಲ್–1 ಹಾಗೂ ಡಿಪಾರ್ಚರ್ ಗೇಟ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ.

ಏರ್ಪೋರ್ಟ್ ಅಧಿಕಾರಿಗಳ ಸ್ಪಷ್ಟನೆ

ಕೆಐಎ ಅಧಿಕಾರಿಗಳ ಪ್ರಕಾರ, ಇಂಡಿಗೋ ಏರ್ಲೈನ್ಸ್‌ನ ಸಿಬ್ಬಂದಿ ಕೊರತೆಯೇ ಪ್ರಮುಖ ಕಾರಣವಾಗಿದ್ದು, ಪರಿಸ್ಥಿತಿಯನ್ನು ಸಾಮಾನ್ಯಗೊಳಿಸಲು ಕಾರ್ಯಾಚರಣೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ. ಪ್ರಯಾಣಿಕರಿಗೆ ಮರುಬುಕ್ಕಿಂಗ್ ಹಾಗೂ ಪರಿಹಾರದ ಬಗ್ಗೆ ಸೂಚನೆ ನೀಡಲಾಗುತ್ತಿದೆ ಎಂದೂ ಹೇಳಿದ್ದಾರೆ.

ನಗರದಲ್ಲಿ ಹೆಚ್ಚಿದ ಪ್ರಯಾಣಿಕರ ಅಸಮಾಧಾನ

ಬೆಂಗಳೂರಿನಲ್ಲಿ ನಡೆದಿರುವ ಅಂತಾರಾಷ್ಟ್ರೀಯ ಕಾರ್ಯಕ್ರಮಗಳು ಹಾಗೂ ಹಬ್ಬದ ಪ್ರಯಾಣದ ಗದ್ದಲದ ನಡುವೆ ಈ ವ್ಯತ್ಯಯ ದಟ್ಟ ಪರಿಣಾಮ ಬೀರಿದ್ದು, ಹಲವಾರು ಪ್ರಯಾಣಿಕರು ಹೋಟೆಲ್ ಬುಕ್ಕಿಂಗ್, ಅಧಿಕೃತ ಸಭೆಗಳು, ವಿದೇಶ ಪ್ರವಾಸ, ಪರೀಕ್ಷೆಗಳು ಸೇರಿದಂತೆ ಹಲವು ಕಾರಣಗಳಿಗೆ ತಡವಾದ ವಿಷಯ ಬೆಳಕಿಗೆ ಬಂದಿದೆ. ಪ್ರಯಾಣಿಕರಿಗೆ ಪರಿಹಾರ, ಮರುಬುಕ್ಕಿಂಗ್, ಪರ್ಯಾಯ ವಿಮಾನಗಳ ಬಗ್ಗೆ ಇಂಡಿಗೋ ಈಗಾಗಲೇ ಕೆಲಸ ಮಾಡುತ್ತಿದ್ದರೂ, ಇನ್ನೂ ಬಹುತೇಕರಿಗೆ ಸ್ಪಷ್ಟ ಮಾಹಿತಿ ಸಿಗದೇ ಆತಂಕ ಮುಂದುವರಿದಿದೆ.