ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿಯಲ್ಲಿ ನಡೆಯುತ್ತಿರುವ ಹನುಮಮಾಲೆ ವಿಸರ್ಜನೆ ಕಾರ್ಯಕ್ರಮಕ್ಕೆ ಖಾಸಗಿ ಕಂಪನಿಯವರ ಸಹಭಾಗಿತ್ವ ಪಡೆದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಗಂಗಾವತಿ (ಡಿ.03): ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿಯಲ್ಲಿ ನಡೆಯುತ್ತಿರುವ ಹನುಮಮಾಲೆ ವಿಸರ್ಜನೆ ಕಾರ್ಯಕ್ರಮಕ್ಕೆ ಖಾಸಗಿ ಕಂಪನಿಯವರ ಸಹಭಾಗಿತ್ವ ಪಡೆದಿಲ್ಲ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು. ಅಂಜನಾದ್ರಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ನಾನು ಹಾಗೂ ಜಿಲ್ಲಾಡಳಿತ ಖಾಸಗಿ ಸಹಭಾಗಿತ್ವ ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ ಸಚಿವರು, ಸಂಸದ ರಾಜಶೇಖರ್ ಹಿಟ್ನಾಳ್ ಅವರು ಕಂಪನಿಯವರ ಜತೆ ಏನು ಮಾತನಾಡಿದ್ದಾರೋ ನನಗೆ ಗೊತ್ತಿಲ್ಲ. ಈ ಬಗ್ಗೆ ಸಂಸದರ ಜೊತೆ ಮಾತನಾಡುವದಾಗಿ ಹೇಳಿದರು.

ಖಾಸಗಿ ಕಂಪನಿಯವರು ತಮ್ಮ ದೈವಿ ಭಕ್ತಿ ಇಟ್ಟಕೊಂಡು ಸೇವೆ ಮಾಡುವದರಲ್ಲಿ ತಪ್ಪೇನಿದೆ. ಯಾರಾದರು ಸೇವೆ ಮಾಡಬಹುದು, ಅವರೇ ಬಂದು ಸೇವೆ ಮಾಡಲು ಮುಂದೆ ಬಂದರೆ ನಾವು ಬೇಡ ಎನ್ನುವದಕ್ಕೆ ಸಾಧ್ಯವೇ ಎಂದು ಮರು ಪ್ರಶ್ನಿಸಿದರು. ರಸ್ತೆ ಸೇರಿದಂತೆ ವಿವಿಧಡೆ ಬ್ಯಾನರ್ ಹಾಕಿದ್ದಾರೆ. ಅದರಲ್ಲಿ ನನ್ನ ಭಾವಚಿತ್ರ ಬಳಕೆ ಮಾಡಿದ್ದಾರೆ. ಅದು ನಮಗೆ ಸಂಬಂಧ ಇಲ್ಲ, ಅವರೇ ಭಾವಚಿತ್ರ ಹಾಕಿದಾಗ ನಾನು ಏನು ಮಾಡಲು ಸಾಧ್ಯವಾಗುವದಿಲ್ಲ ಎಂದರು. ಕಾರ್ಖಾನೆಯ ವಿಚಾರದಲ್ಲಿ ನಾನು ಸಂಪೂರ್ಣ ವಿರೋಧಿಸುತ್ತೇನೆ ಎಂದರು.

ಭಕ್ತರಿಗೆ ಅಚ್ಚುಕಟ್ಟಾಗಿ ವ್ಯವಸ್ಥೆ ಕೈಗೊಳ್ಳಿ

ಅಂಜನಾದ್ರಿಗೆ ಬರುವ ಭಕ್ತರಿಗೆ ಅಚ್ಚುಕಟ್ಟಾಗಿ ವ್ಯವಸ್ಥೆ ಕೈಗೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು. ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ ವಿವಿಧ ಸೌಲಭ್ಯಗಳ ಬಗ್ಗೆ ಪರಿಶೀಲಿಸಿ ಪತ್ರಕರ್ತರೊಂದಿಗೆ ಮಾತನಾಡಿದರು. ಜಿಲ್ಲಾಡಳಿತವು ಎಲ್ಲ ವ್ಯವಸ್ಥಿತವಾಗಿ ಕೈಗೊಂಡಿದ್ದು, 18 ರಿಂದ 20 ಸಮಿತಿ ರಚಿಸಿ ಅವುಗಳಿಗೆ ಜವಾಬ್ದಾರಿ ಹಂಚಿಕೆ ಮಾಡಿ ಎಲ್ಲ ಕೆಲಸಗಳು ಸುಗಮವಾಗಿ ನಡೆಯುತ್ತಿವೆ. ಮಂಗಳವಾರ ಬೆಳಗ್ಗೆಯಿಂದಲೇ ಹನುಮಮಾಲಾಧಾರಿಗಳು ಅಂಜನಾದ್ರಿಗೆ ಆಗಮಿಸುತ್ತಿದ್ದಾರೆ. ಬುಧವಾರವೂ ಹೆಚ್ಚಿನ ಸಂಖ್ಯೆಯಲ್ಲಿ ಮಾಲಾಧಾರಿಗಳು ಬರುವ ನಿರೀಕ್ಷೆಯಿದೆ. ಹಾಗಾಗಿ ಹನುಮ ಮಾಲಾಧಾರಿಗಳು ಮತ್ತು ಭಕ್ತಾಧಿಗಳಿಗಾಗಿ ಕುಡಿಯುವ ನೀರು, ಊಟ, ಸ್ನಾನದ ವ್ಯವಸ್ಥೆ, ಪಾರ್ಕಿಂಗ್ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ ಎಂದು ಹೇಳಿದರು.

ಈ ವೇಳೆ ಆಂಜನೇಯಸ್ವಾಮಿ ಪಾದುಕೆಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಸಹಾಯಕ ಆಯುಕ್ತ ಕ್ಯಾ. ಮಹೇಶ್ ಮಾಲಗಿತ್ತಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಂಜುನಾಥ ಗುಂಡೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಟಿ.ಲಿಂಗರಾಜು, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ, ಗಂಗಾವತಿ ತಹಸೀಲ್ದಾರ ಯು.ನಾಗರಾಜ, ಕನಕಗಿರಿ ತಹಸೀಲ್ದಾರ ವಿಶ್ವನಾಥ ಮುರಡಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.