ಏಷ್ಯನ್‌ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಕುಸ್ತಿ ಅಖಾಡಕ್ಕೆ ಮರಳಿದ ತಾರಾ ಅಥ್ಲೀಟ್‌ ವಿನೇಶ್ ಫೋಗಟ್‌, 53 ಕೆ.ಜಿ. ವಿಭಾಗದ ಸೆಮಿಫೈನಲ್‌ನಲ್ಲಿ ಸೋತು ನಿರಾಸೆ ಅನುಭವಿಸಿದ್ದಾರೆ. ಕ್ವಾರ್ಟರ್‌ ಫೈನಲ್ ಪಂದ್ಯದ ವೇಳೆ ರೆಫ್ರಿ ಜೊತೆಗಿನ ವಾಗ್ವಾದ ಸೇರಿದಂತೆ ಹಲವು ನಾಟಕೀಯ ಬೆಳವಣಿಗೆಗಳಿಗೆ ಈ ಟ್ರಯಲ್ಸ್ ಸಾಕ್ಷಿಯಾಯಿತು.

ನವದೆಹಲಿ: 2024ರ ಒಲಿಂಪಿಕ್ಸ್‌ ಫೈನಲ್‌ನ ಆಘಾತಕಾರಿ ಸೋಲಿನ ಬಳಿಕ ಮತ್ತೆ ಕುಸ್ತಿ ಅಖಾಡಕ್ಕೆ ಮರಳಿದ್ದ ತಾರಾ ಅಥ್ಲೀಟ್‌ ವಿನೇಶ್ ಫೋಗಟ್‌ ಭಾರೀ ನಿರಾಸೆ ಅನುಭವಿಸಿದ್ದಾರೆ. ಶನಿವಾರ ಏಷ್ಯನ್‌ ಗೇಮ್ಸ್‌ನ ಆಯ್ಕೆ ಟ್ರಯಲ್ಸ್‌ನ 53 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ ಅವರು, ಸೆಮಿಫೈನಲ್‌ನಲ್ಲಿ ಸೋತು ಹೊರಬಿದ್ದಿದ್ದಾರೆ.

ದೆಹಲಿ ಹೈಕೋರ್ಟ್‌, ಸುಪ್ರೀಂ ಕೋರ್ಟ್‌ ಆದೇಶದ ಬಳಿಕ ವಿನೇಶ್‌ಗೆ ಸ್ಪರ್ಧಿಸುವ ಅವಕಾಶ ಲಭಿಸಿತ್ತು. ಶನಿವಾರ ತಮ್ಮ 53 ಕೆ.ಜಿ. ವಿಭಾಗದಲ್ಲೇ ಸ್ಪರ್ಧೆಗಿಳಿದ ಅವರು, ಮೊದಲ ಸುತ್ತಿನಲ್ಲಿ ಜ್ಯೋತಿ ವಿರುದ್ಧ 7-1 ಅಂತರದಲ್ಲಿ ಗೆದ್ದರು. ಭಾರೀ ನಾಟಕೀಯವಾಗಿ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ ವಿನೇಶ್‌, ನಿಶು ಕುಮಾರಿ ವಿರುದ್ಧ 7-6 ಅಂತರದಲ್ಲಿ ಜಯಗಳಿಸಿದರು. ಆದರೆ ಸೆಮಿಫೈನಲ್‌ನಲ್ಲಿ ಅವರು ಮೀನಾಕ್ಷಿ ಗೋಯತ್‌ ವಿರುದ್ಧ 4-6 ಅಂತರದಲ್ಲಿ ಪರಾಭವಗೊಂಡರು. ಈ ವಿಭಾಗದ ಫೈನಲ್‌ನಲ್ಲಿ ಅಂತಿಮ್‌ ಪಂಘಲ್‌ ಅವರು ಮೀನಾಕ್ಷಿಯನ್ನು ಸೋಲಿಸಿ, ಏಷ್ಯನ್‌ ಗೇಮ್ಸ್‌ಗೆ ಅರ್ಹತೆ ಪಡೆದುಕೊಂಡರು. 

53 ಕೆ.ಜಿ. ಸ್ಪರ್ಧೆಗೆ ಅವಕಾಶ:

ವಿನೇಶ್‌ 2024ರ ಒಲಿಂಪಿಕ್ಸ್‌ ಸೇರಿ ಇತ್ತೀಚಿನ ಕೆಲ ಅಂ.ರಾ. ಕೂಟಗಳಲ್ಲಿ 50 ಕೆ.ಜಿ. ವಿಭಾಗದಲ್ಲೇ ಸ್ಪರ್ಧಿಸಿದ್ದರು. ಹೀಗಾಗಿ, ಅದೇ ವಿಭಾಗದಲ್ಲಿ ಉಳಿಸಲು ಡಬ್ಲ್ಯುಎಫ್‌ಐ ನಿರ್ಧರಿಸಿತ್ತು. ಆದರೆ ಶನಿವಾರ ಅವರಿಗೆ 53 ಕೆ.ಜಿ. ವಿಭಾಗದಲ್ಲೇ ಸ್ಪರ್ಧಿಸಲು ಡಬ್ಲ್ಯುಎಫ್‌ಐ ಅವಕಾಶ ನೀಡಿತು.

--ನಾನು ಮತ್ತೆ ಬರುತ್ತೇನೆ

ನಾನು ವಿಫಲನಾದೆ ಎಂದು ಅನಿಸುತ್ತಿಲ್ಲ. ನಾನು ಇಡೀ ವ್ಯವಸ್ಥೆಯ ವಿರುದ್ಧ ಹೋರಾಡುತ್ತಿದ್ದೆ. ಪ್ರತಿ ಅಂಕಗಳಿಗೂ ಹೋರಾಡಬೇಕಾಗಿತ್ತು. ನನಗೆ ಅನ್ಯಾಯವಾಗಿದೆ. ಆದರೆ ನನ್ನೊಂದಿಗೆ ಹೋರಾಡಿದ ಕ್ರೀಡಾಪಟುಗಳ ಬಗ್ಗೆ ನನಗೆ ದ್ವೇಷವಿಲ್ಲ. ನಾನು ಮತ್ತೆ ಬರುತ್ತೇನೆ.

- ವಿನೇಶ್‌ ಫೋಗಟ್‌

ರೆಫ್ರಿ ನಡುವೆ ವಾಗ್ವಾದ

ವಿನೇಶ್‌ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಹೈಡ್ರಾಮ ಸೃಷ್ಟಿಯಾಯಿತು. ವಿನೇಶ್‌ ಪಂದ್ಯದಲ್ಲಿ 0-5 ಅಂಕ ಹಿನ್ನಡೆಯಲಿದ್ದರು. ಈ ವೇಳೆ ನಿಶು ಕೆಳಗೆ ಬಿದ್ದಿದ್ದು, ಅವರನ್ನು ವಿನೇಶ್‌ ಪಿನ್‌ ಮಾಡಿದ್ದರೂ ‘ಬೈ ಫಾಲ್‌’ ಮೂಲಕ ಗೆಲುವು ಘೋಷಿಸಿಲ್ಲ ಎಂದು ವಿನೇಶ್‌ ಪತಿ ಸೋಮ್‌ವೀರ್‌ ನೀರಿನ ಬಾಟಲಿಯನ್ನು ಮ್ಯಾಟ್‌ ಮೇಲೆ ಎಸೆದು, ಅಖಾಡಕ್ಕೆ ನುಗ್ಗಿದ್ದಾರೆ. ಈ ವೇಳೆ ರೆಫ್ರಿ ಜೊತೆ ಮಾತಿನ ಚಕಮಕಿಯೂ ನಡೆಯಿತು. ಬಳಿಕ ವಿಡಿಯೋ ರಿವ್ಯೂಗೆ ವಿನೇಶ್‌ ಮನವಿ ಮಾಡಿದರೂ ಅದಕ್ಕೆ ರೆಫ್ರಿಗಳು ಆರಂಭದಲ್ಲಿ ಒಪ್ಪಿ, ಬಳಿಕ ನಿರಾಕರಿಸಿದ್ದು ಕೂಡಾ ವಿವಾದಕ್ಕೆ ಕಾರಣವಾಯಿತು. ನಂತರ ಡಬ್ಲ್ಯುಎಫ್‌ಐ ಅಧ್ಯಕ್ಷ ಸಂಜಯ್ ಸಿಂಗ್ ಕೂಡ ವಿನೇಶ್‌ ಮತ್ತು ಅವರ ಸಂಗಡಿಗರ ಜತೆ ಮಾತಿನ ಚಕಮಕಿ ನಡೆಸಿದ್ದು ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು.