ನಿವೃತ್ತಿಗೆ ಯು ಟರ್ನ್ ಹೊಡೆದ ವಿನೇಶ್ ಫೋಗಟ್; 2028ರ ಒಲಿಂಪಿಕ್ಸ್ ಮೇಲೆ ಕಣ್ಣಿಟ್ಟ ಕಾಂಗ್ರೆಸ್ ಶಾಸಕಿ!
ನವದೆಹಲಿ: ಭಾರತದ ತಾರಾ ಕುಸ್ತಿಪಟು ಹಾಗೂ ಕಾಂಗ್ರೆಸ್ ಶಾಸಕಿ ವಿನೇಶ್ ಫೋಗಟ್ ಇದೀಗ ಕುಸ್ತಿ ಅಖಾಡಕ್ಕೆ ಮರಳುವುದಾಗಿ ಘೋಷಿಸಿದ್ದಾರೆ. 31 ವರ್ಷದ ವಿನೇಶ್ ಇದೀಗ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಮೇಲೆ ಕಣ್ಣಿಟ್ಟಿದ್ದಾರೆ.

028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಮೇಲೆ ವಿನೇಶ್ ಕಣ್ಣು
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅನರ್ಹಗೊಂಡು ಚಿನ್ನದ ಪದಕದ ಕನಸು ಭಗ್ನಗೊಂಡ ಬಳಿಕ ಕುಸ್ತಿಯಿಂದಲೇ ನಿವೃತ್ತಿಯಾಗಿದ್ದ ಭಾರತದ ತಾರಾ ಕ್ರೀಡಾಪಟು, ಹಾಲಿ ಶಾಸಕಿಯೂ ಆಗಿರುವ ವಿನೇಶ್ ಫೋಗಟ್ ಮನಸ್ಸು ಬದಲಾಯಿಸಿದ್ದು, ಕುಸ್ತಿಯ ನಿವೃತ್ತಿ ಹಿಂಪಡೆಯುವುದಾಗಿ ಘೋಷಿಸಿದ್ದಾರೆ. ಅಲ್ಲದೆ, 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಗುರಿ ಇಟ್ಟುಕೊಂಡಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪದಕ ಜಸ್ಟ್ ಮಿಸ್
ಪ್ಯಾರಿಸ್ ಒಲಿಂಪಿಕ್ಸ್‌ನ 50 ಕೆ.ಜಿ. ವಿಭಾಗದ ಫೈನಲ್‌ಗೂ ಮುನ್ನ ತಮ್ಮ ತೂಕದಲ್ಲಿ 100 ಗ್ರಾಂ ಹೆಚ್ಚಿದ್ದ ಕಾರಣ ವಿನೇಶ್ ಅನರ್ಹಗೊಂಡಿದ್ದರು. ಇದೇ ಬೇಸರಿಂದ ಅವರು ಕುಸ್ತಿಗೆ ವಿದಾಯ ಪ್ರಕಟಿಸಿದ್ದರು.
ಕಾಂಗ್ರೆಸ್ ಶಾಸಕಿ ವಿನೇಶ್
ಇದಾದ ಬಳಿಕ ಕಾಂಗ್ರೆಸ್ ಪಕ್ಷ ಸೇರಿದ್ದ ಅವರು, ಕಳೆದ ವರ್ಷ ಹರ್ಯಾಣದ ಜುಲಾನ ಕ್ಷೇತ್ರದ ಶಾಸಕಿಯಾಗಿ ಆಯ್ಕೆಯಾಗಿದ್ದರು. ಈ ವರ್ಷ ಜುಲೈನಲ್ಲಿ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದರು.
ನಿವೃತ್ತಿಗೆ ಯು ಟರ್ನ್
ನಿವೃತ್ತಿ ಹಿಂಪಡೆದಿರುವ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಘೋಷಿಸಿರುವ 31 ವರ್ಷದ ವಿನೇಶ್, ‘ನನ್ನ ಕೆಲಸದ ಹೊರೆ, ಜೀವನದ ಏರಿಳಿತ, ತ್ಯಾಗ, ಜಗತ್ತು ಎಂದಿಗೂ ನೋಡದ ನನ್ನ ಮತ್ತೊಂದು ಮಜಲನ್ನು ಅರ್ಥಮಾಡಿಕೊಳ್ಳಲು ನಾನು ಸ್ವಲ್ಪ ಸಮಯ ತೆಗೆದುಕೊಂಡೆ.
ಕುಸ್ತಿಗೆ ವಿನೇಶ್ ಕಮ್‌ಬ್ಯಾಕ್
ನಾನು ಈಗಲೂ ಕ್ರೀಡೆಯನ್ನು ಪ್ರೀತಿಸುತ್ತೇನೆ. ನಾನು ಇನ್ನೂ ಸ್ಪರ್ಧಿಸಲು ಬಯಸುತ್ತೇನೆ. ಮೌನದಲ್ಲಿ, ನಾನು ಮರೆತಿದ್ದ ಒಂದು ವಿಷಯವನ್ನು ನಾನು ಕಂಡುಕೊಂಡೆ. ಬೆಂಕಿ ಎಂದಿಗೂ ಆರುವುದಿಲ್ಲ. ಅದು ಆಯಾಸ ಮತ್ತು ಶಬ್ಧದ ಕೆಳಗೆ ಹೂತುಹೋಗಿತ್ತು’ ಎಂದಿದ್ದಾರೆ.
ಚೊಚ್ಚಲ ಒಲಿಂಪಿಕ್ಸ್‌ನಲ್ಲಿ ವಿನೇಶ್‌ಗೆ ನಿರಾಸೆ
ವಿನೇಶ್ ಫೋಗಟ್ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಕನಸು ಇಲ್ಲಿಯವರೆಗೂ ಕನಸಾಗಿಯೇ ಉಳಿದಿದೆ. 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ವಿನೇಶ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು. ಆದರೆ ಕ್ವಾರ್ಟರ್ ಫೈನಲ್‌ನಲ್ಲಿ ಗಾಯಗೊಂಡು ಒಲಿಂಪಿಕ್ಸ್‌ನಿಂದ ಹೊರಬಿದ್ದಿದ್ದರು.
2021ರಲ್ಲೂ ಕ್ವಾರ್ಟರ್‌ನಲ್ಲಿ ಸೋಲು
ಇನ್ನು 2021ರ ಒಲಿಂಪಿಕ್ಸ್‌ನಲ್ಲಿ ಅಗ್ರಶ್ರೇಯಾಂಕಿತ ಕುಸ್ತಿಪಟುಗಳನ್ನು ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು. ಆದರೆ ಮತ್ತೊಮ್ಮೆ ಕ್ವಾರ್ಟರ್ ಫೈನಲ್‌ನಲ್ಲಿ ಆಘಾತಕಾರಿ ಸೋಲು ಕಂಡು ಒಲಿಂಪಿಕ್ ಪದಕ ವಂಚಿತರಾಗಿದ್ದರು.
ಪ್ಯಾರಿಸ್ ಒಲಿಂಪಿಕ್ಸ್ ಫೈನಲ್‌ನಲ್ಲಿ ಶಾಕ್
ಇನ್ನು 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ವಿನೇಶ್ ಮಹಿಳೆಯರ 50 ಕೆಜಿ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದರು. ಆದರೆ ಫೈನಲ್ ಪಂದ್ಯದ ಮುಂಜಾನೆ ಅವರ ತೂಕದಲ್ಲಿ 100 ಗ್ರಾಮ್ ಹೆಚ್ಚಿದ್ದರಿಂದ ಅವರನ್ನು ಅನರ್ಹಗೊಳಿಸಲಾಗಿತ್ತು.
ವಿನೇಶ್‌ಗೆ ನಿರಾಸೆ
ಇದಾದ ಬಳಿಕ ವಿನೇಶ್ ಫೋಗಟ್ ಪದಕಕ್ಕಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನ್ಯಾಯಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದರು. ಇದರ ಹೊರತಾಗಿಯೂ ವಿನೇಶ್‌ಗೆ ಪದಕ ಒಲಿದಿರಲಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

