2026ರ ಐಪಿಎಲ್ ಕ್ವಾಲಿಫೈಯರ್‌-2 ಪಂದ್ಯದಲ್ಲಿ, ಶುಭ್‌ಮನ್‌ ಗಿಲ್ ಅವರ ಅಮೋಘ ಶತಕದ ನೆರವಿನಿಂದ ಗುಜರಾತ್ ಟೈಟಾನ್ಸ್ ತಂಡವು ರಾಜಸ್ಥಾನ ರಾಯಲ್ಸ್ ವಿರುದ್ಧ 8 ವಿಕೆಟ್‌ಗಳ ಜಯ ಸಾಧಿಸಿತು. ಈ ಮೂಲಕ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ. ವೈಭವ್ ಸೂರ್ಯವಂಶಿ ಅವರ 96 ರನ್‌ಗಳ ಹೋರಾಟ ವ್ಯರ್ಥವಾಯಿತು.

ಮುಲ್ಲಾನ್‌ಪುರ್‌: 2026ರ ಐಪಿಎಲ್‌ ಫೈನಲ್‌ನಲ್ಲಿ ಹಾಲಿ ಚಾಂಪಿಯನ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಮಾಜಿ ಚಾಂಪಿಯನ್‌ ಗುಜರಾತ್‌ ಟೈಟಾನ್ಸ್‌ ಎದುರಾಗಲಿದೆ. ಶುಕ್ರವಾರ ನಡೆದ ಕ್ವಾಲಿಫೈಯರ್‌-2 ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದ ಗುಜರಾತ್‌, 3ನೇ ಬಾರಿಗೆ ಫೈನಲ್‌ಗೇರಿತು.

ಮೊದಲು ಬ್ಯಾಟ್‌ ಮಾಡಿದ ರಾಜಸ್ಥಾನ, ಆರಂಭಿಕ ಆಘಾತದ ಹೊರತಾಗಿಯೂ 20 ಓವರಲ್ಲಿ 6 ವಿಕೆಟ್‌ ನಷ್ಟಕ್ಕೆ 214 ರನ್‌ ಕಲೆಹಾಕಿತು. ವೈಭವ್‌ ಸೂರ್ಯವಂಶಿ ಮತ್ತೊಂದು ಅಮೋಘ ಇನ್ನಿಂಗ್ಸ್‌ ಮೂಲಕ ತಂಡಕ್ಕೆ ಆಸರೆಯಾದರು. 47 ಎಸೆತದಲ್ಲಿ 96 ರನ್‌ಗೆ ಔಟಾಗಿ ಮತ್ತೊಮ್ಮೆ ಶತಕದಿಂದ ವಂಚಿತರಾದರು. ಆದರೆ, ಗುಜರಾತ್‌ ಬೃಹತ್‌ ಗುರಿಯನ್ನು ಸುಲಭವಾಗಿ ಬೆನ್ನತ್ತಿತು. ನಾಯಕ ಶುಭ್‌ಮನ್‌ ಗಿಲ್‌ ಅಮೋಘ ಶತಕ ಸಿಡಿಸಿದರು. ಮೊದಲ ವಿಕೆಟ್‌ಗೆ ಸಾಯಿ ಸುದರ್ಶನ್‌ ಜೊತೆ 12.5 ಓವರಲ್ಲಿ 167 ರನ್‌ ಜೊತೆಯಾಟವಾಡಿದರು.

Scroll to load tweet…

32 ಎಸೆತದಲ್ಲಿ 58 ರನ್‌ ಗಳಿಸಿದ ಸುದರ್ಶನ್‌ ಕಳೆದ ಪಂದ್ಯದಂತೆ ಈ ಪಂದ್ಯದಲ್ಲೂ ಹಿಟ್‌ ವಿಕೆಟ್‌ ಆಗಿ ಔಟಾದರು. ಆದರೆ ಗಿಲ್‌ ಅಬ್ಬರ ನಿಲ್ಲಲಿಲ್ಲ. 53 ಎಸೆತದಲ್ಲಿ 15 ಬೌಂಡರಿ, 3 ಸಿಕ್ಸರ್‌ನೊಂದಿಗೆ 104 ರನ್‌ ಸಿಡಿಸಿದರು.

ವೈಭವ್‌ ಅಬ್ಬರ: 

ರಾಜಸ್ಥಾನ ಆರಂಭದಲ್ಲೇ ಜೈಸ್ವಾಲ್‌, ಜುರೆಲ್‌ ವಿಕೆಟ್‌ ಕಳೆದುಕೊಂಡಿತು. 4ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಜಡೇಜಾ, ಕೈನೋವಿನ ಸಮಸ್ಯೆಯಿಂದ ಹೊರನಡೆದಾಗ ತಂಡ ಸಂಕಷ್ಟಕ್ಕೆ ಸಿಲುಕಿತು. ಪರಾಗ್‌, ಶಾನಕ, ಆರ್ಚರ್‌ ಸಹ ಬೇಗನೆ ಔಟಾದರು. 12.4 ಓವರಲ್ಲಿ ರಾಜಸ್ಥಾನ 118 ರನ್‌ಗೆ 5 ವಿಕೆಟ್‌ ಕಳೆದುಕೊಂಡಿತು. ಜಡೇಜಾ ಮತ್ತೆ ಕ್ರೀಸ್‌ಗಿಳಿದು ವೈಭವ್‌ಗೆ ಜೊತೆಯಾದರು. ವೈಭವ್‌ 8 ಬೌಂಡರಿ, 7 ಸಿಕ್ಸರ್‌ ಸಿಡಿಸಿ ಮತ್ತೊಮ್ಮೆ ಶತಕದ ಹೊಸ್ತಿಲಲ್ಲಿ ವಿಕೆಟ್‌ ಕಳೆದುಕೊಂಡರು. ಕೊನೆಯಲ್ಲಿ ಆರ್ಭಟಿಸಿದ ಡೊನವೆನ್‌ ಫೆರೇರಾ 11 ಎಸೆತದಲ್ಲಿ 38 ರನ್‌ ಚಚ್ಚಿದರು. ಜಡೇಜಾ 45 ರನ್‌ ಗಳಿಸಿ ಔಟಾಗದೆ ಉಳಿದರು.

ಸ್ಕೋರ್‌: ರಾಜಸ್ಥಾನ 20 ಓವರಲ್ಲಿ 214/6 (ವೈಭವ್‌ 96, ಜಡೇಜಾ 45*, ಫೆರೇರಾ 38*, ಹೋಲ್ಡರ್‌ 2-27), ಗುಜರಾತ್‌ 00.0 ಓವರಲ್ಲಿ 215/2 (ಗಿಲ್‌ 104, ಸುದರ್ಶನ್‌ 58, ಬ್ರಿಜೇಶ್‌ 1-30)

ರಾರಾಜಿಸಿದ ಸೂರ್ಯವಂಶಿ ಜೆರ್ಸಿ!

15 ವರ್ಷದ ವೈಭವ್‌ ಈಗಾಗಲೇ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಶುಕ್ರವಾರ ಕ್ವಾಲಿಫೈಯರ್‌-2 ಪಂದ್ಯಕ್ಕೆ ನೂರಾರು ಅಭಿಮಾನಿಗಳು ‘ಸೂರ್ಯವಂಶಿ’ ಹೆಸರಿನ ಜೆರ್ಸಿಗಳನ್ನು ತೊಟ್ಟು ಕ್ರೀಡಾಂಗಣಕ್ಕೆ ಆಗಮಿಸಿದ್ದೇ ಸಾಕ್ಷಿ. ಇನ್ನು, ವೈಭವ್‌ರ 96 ರನ್‌ ಇನ್ನಿಂಗ್ಸ್‌ಗೂ ಹಲವು ಕ್ರಿಕೆಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಡೇಲ್‌ ಸ್ಟೈನ್‌, ಇರ್ಫಾನ್‌ ಪಠಾಣ್‌ ಸೇರಿ ಅನೇಕರು ಸಾಮಾಜಿಕ ತಾಣದಲ್ಲಿ ಸೂರ್ಯವಂಶಿಯನ್ನು ಕೊಂಡಾಡಿದ್ದಾರೆ.