- Home
- Sports
- 'ಇವನೇ ವಿಶ್ವದ ಬೆಸ್ಟ್ ಬ್ಯಾಟರ್' -ವೈಭವ್ ಸೂರ್ಯವಂಶಿ ಹೊಗಳಿದ ಶುಭ್ಮನ್ ಗಿಲ್; ರಸೆಲ್ ಬೃಹತ್ ದಾಖಲೆ ಉಡೀಸ್!
'ಇವನೇ ವಿಶ್ವದ ಬೆಸ್ಟ್ ಬ್ಯಾಟರ್' -ವೈಭವ್ ಸೂರ್ಯವಂಶಿ ಹೊಗಳಿದ ಶುಭ್ಮನ್ ಗಿಲ್; ರಸೆಲ್ ಬೃಹತ್ ದಾಖಲೆ ಉಡೀಸ್!
ರಾಜಸ್ಥಾನ್ ರಾಯಲ್ಸ್‌ನ ಯುವ ಆಟಗಾರ ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್‌ಗೆ ಗುಜರಾತ್ ಟೈಟಾನ್ಸ್ ನಾಯಕ ಶುಭ್ಮನ್ ಗಿಲ್ 'ವಿಶ್ವದ ಅತ್ಯುತ್ತಮ ಬ್ಯಾಟರ್' ಎಂದು ಹೊಗಳಿದ್ದಾರೆ. ಐಪಿಎಲ್ ಪಂದ್ಯದಲ್ಲಿ ವೇಗದ 1000 ರನ್ ಪೂರೈಸಿದ ದಾಖಲೆ ಬರೆದ ಸೂರ್ಯವಂಶಿಗೆ ಗಿಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಹಮದಾಬಾದ್: ರಾಜಸ್ಥಾನ್ ರಾಯಲ್ಸ್‌ನ ಯುವ ಆಟಗಾರ ವೈಭವ್ ಸೂರ್ಯವಂಶಿ ಆಟಕ್ಕೆ ಗುಜರಾತ್ ಟೈಟಾನ್ಸ್ ಕ್ಯಾಪ್ಟನ್ ಶುಭ್ಮನ್ ಗಿಲ್ ಫುಲ್ ಫಿದಾ ಆಗಿದ್ದಾರೆ. ಸೂರ್ಯವಂಶಿಯನ್ನ 'ವಿಶ್ವದ ಅತ್ಯುತ್ತಮ ಬ್ಯಾಟರ್' ಅಂತ ಗಿಲ್ ಹಾಡಿ ಹೊಗಳಿದ್ದಾರೆ. ಐಪಿಎಲ್ 2026ರ ಫೈನಲ್ ಪ್ರವೇಶಕ್ಕಾಗಿ ನಡೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್, ರಾಜಸ್ಥಾನ್ ತಂಡವನ್ನ ಸೋಲಿಸಿತ್ತು. ಆದರೂ, ಕೇವಲ 47 ಎಸೆತಗಳಲ್ಲಿ 96 ರನ್ ಸಿಡಿಸಿದ ಸೂರ್ಯವಂಶಿ ಅವರ ಹೋರಾಟದ ಆಟ ಈಗ ಕ್ರಿಕೆಟ್ ಜಗತ್ತಿನಲ್ಲಿ ದೊಡ್ಡ ಚರ್ಚೆಯಾಗಿದೆ.
ಫೈನಲ್‌ಗೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಿಲ್, ಈ ಯುವ ಆಟಗಾರನ ನಿರ್ಭೀತ ಆಟ ಮತ್ತು ತಾಂತ್ರಿಕತೆಯನ್ನು ಮೆಚ್ಚಿಕೊಂಡರು. 'ಅವನಿಗೆ ಇದು ನಿಜಕ್ಕೂ ಒಂದು ಅದ್ಭುತ ಸೀಸನ್. ಈ ರೀತಿ ಯಾರೂ ಬ್ಯಾಟಿಂಗ್ ಮಾಡುವುದನ್ನು ನಾನು ನೋಡಿಲ್ಲ. ಸದ್ಯದ ಮಟ್ಟಿಗೆ ಅವನು ವಿಶ್ವದ ಅತ್ಯುತ್ತಮ ಬ್ಯಾಟರ್‌ಗಳಲ್ಲಿ ಒಬ್ಬ. ಕೇವಲ ದೊಡ್ಡ ಶಾಟ್‌ಗಳನ್ನು ಹೊಡೆಯುವುದು ಮಾತ್ರವಲ್ಲ, ಅವನ ಬ್ಯಾಟಿಂಗ್ ಶೈಲಿ ಮತ್ತು ಕೈಗಳ ವೇಗ ಅದ್ಭುತವಾಗಿದೆ. ಎಂತಹ ಬಲಿಷ್ಠ ಬೌಲಿಂಗ್ ದಾಳಿ ಇದ್ದರೂ ಅವನು ಒಂದೇ ರೀತಿ ಆಡುತ್ತಾನೆ' ಎಂದು ಗಿಲ್ ಹೇಳಿದರು.
ಗಿಲ್ ಮಾತು ಮುಂದುವರಿಸುತ್ತಾ, 'ಆರಂಭದಲ್ಲಿ ಉತ್ತಮ ಸ್ಟಾರ್ಟ್ ಸಿಗದಿದ್ದರೂ, ಆಟಕ್ಕೆ ಬಲವಾಗಿ ಕಮ್‌ಬ್ಯಾಕ್ ಮಾಡಿ ನಮ್ಮ ಮೇಲೆ ಒತ್ತಡ ಹೇರಿದ ರೀತಿ ಅವನ ಮನಸ್ಥಿತಿಯನ್ನು ತೋರಿಸುತ್ತದೆ. ಮುಂದಿನ ವರ್ಷಗಳಲ್ಲಿ ಅವನ ವಿರುದ್ಧ ಆಡುವ ತಂಡಗಳಿಗೆ ಇದು ಕಠಿಣವಾಗಿರುತ್ತದೆ' ಎಂದು ಗಿಲ್ ಹೇಳಿದರು.
ಬಲಿಷ್ಠ ಗುಜರಾತ್ ಬೌಲಿಂಗ್ ದಾಳಿಯ ವಿರುದ್ಧ ರಾಜಸ್ಥಾನ್ ತಂಡವನ್ನು ಪಂದ್ಯದಲ್ಲಿ ಉಳಿಸಿದ್ದೇ ಸೂರ್ಯವಂಶಿ ಅವರ ಸ್ಫೋಟಕ ಇನ್ನಿಂಗ್ಸ್. ಗುಜರಾತ್‌ನ ವೇಗದ ಬೌಲರ್ ಕಗಿಸೊ ರಬಾಡ ಅವರ ಮಾರಕ ಬೌನ್ಸರ್‌ಗೆ ತಲೆಗೆ ಪೆಟ್ಟು ಬಿದ್ದರೂ, ಸೂರ್ಯವಂಶಿ ಧೃತಿಗೆಡಲಿಲ್ಲ. ವೈದ್ಯಕೀಯ ತಪಾಸಣೆಯ ನಂತರ ಮತ್ತಷ್ಟು ಬಲವಾಗಿ ಚೆಂಡುಗಳನ್ನು ಎದುರಿಸಿದ ಅವರ ಪ್ರಬುದ್ಧತೆ ಎಲ್ಲರ ಗಮನ ಸೆಳೆಯಿತು.
ಇದೇ ಇನ್ನಿಂಗ್ಸ್‌ನಲ್ಲಿ, ಐಪಿಎಲ್‌ನಲ್ಲಿ ಅತಿ ಕಡಿಮೆ ಎಸೆತಗಳಲ್ಲಿ 1,000 ರನ್ ಪೂರೈಸಿದ ಆಟಗಾರ ಎಂಬ ಆಂಡ್ರೆ ರಸೆಲ್ ಅವರ ದಾಖಲೆಯನ್ನು ಸೂರ್ಯವಂಶಿ ಮುರಿದರು. ಅಷ್ಟೇ ಅಲ್ಲ, ಅತಿ ಕಡಿಮೆ ಇನ್ನಿಂಗ್ಸ್‌ಗಳಲ್ಲಿ (23 ಇನ್ನಿಂಗ್ಸ್) 1000 ರನ್ ಗಳಿಸಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೂ ಈ ಯುವ ತಾರೆ ಪಾತ್ರರಾದರು. ಈ ಪಟ್ಟಿಯಲ್ಲಿ ಶಾನ್ ಮಾರ್ಷ್ (21 ಇನ್ನಿಂಗ್ಸ್) ಮೊದಲ ಸ್ಥಾನದಲ್ಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

