ಭಾರತದ ಮಾಜಿ ಆಟಗಾರ ರಾಬಿನ್ ಉತ್ತಪ್ಪ ಅವರು 2027ರ ಏಕದಿನ ವಿಶ್ವಕಪ್‌ಗೆ ತಮ್ಮ ಸಂಭಾವ್ಯ ತಂಡವನ್ನು ಪ್ರಕಟಿಸಿದ್ದಾರೆ. ಈ ತಂಡದಲ್ಲಿ ಸಂಜು ಸ್ಯಾಮ್ಸನ್ ಮತ್ತು ಭುವನೇಶ್ವರ್ ಕುಮಾರ್ ಅವರಂತಹ ಅಚ್ಚರಿಯ ಆಯ್ಕೆಗಳಿದ್ದು, ಕನ್ನಡಿಗ ಕೆ.ಎಲ್. ರಾಹುಲ್ ಏಕೈಕ ಆಟಗಾರನಾಗಿ ಸ್ಥಾನ ಪಡೆದಿದ್ದಾರೆ.
ಬೆಂಗಳೂರು: ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ಭಾರತ ತಂಡದಲ್ಲಿ ಯಾರೆಲ್ಲಾ ಇರಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ತಮ್ಮ ಸ್ಥಾನ ಉಳಿಸಿಕೊಳ್ಳುತ್ತಾರಾ, ವೇಗದ ಬೌಲರ್‌ಗಳಾಗಿ ಯಾರು ಬರಲಿದ್ದಾರೆ ಎಂಬ ಚರ್ಚೆಗಳು ಜೋರಾಗಿವೆ. ಇದರ ನಡುವೆಯೇ, ಭಾರತದ ಮಾಜಿ ಆಟಗಾರ ರಾಬಿನ್ ಉತ್ತಪ್ಪ ಅವರು 2027ರ ವಿಶ್ವಕಪ್‌ಗೆ ತಮ್ಮ ಸಂಭಾವ್ಯ ತಂಡವನ್ನು ಪ್ರಕಟಿಸಿದ್ದಾರೆ. ಉತ್ತಪ್ಪ ಪ್ರಕಟಿಸಿದ ತಂಡದಲ್ಲಿ ಏಕೈಕ ಕನ್ನಡಿಗ ಸ್ಥಾನ ಪಡೆದಿದ್ದು, ಇಬ್ಬರು ಆಟಗಾರರು ಸಂಭಾವ್ಯ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಅಚ್ಚರಿಯ ಆಯ್ಕೆ ಸಂಜು ಸ್ಯಾಮ್ಸನ್:
ರಾಬಿನ್ ಉತ್ತಪ್ಪ ತಮ್ಮ ತಂಡದಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾಗೆ ಸ್ಥಾನ ನೀಡಿದ್ದಾರೆ. ಆದರೆ, ಎಲ್ಲಕ್ಕಿಂತ ಮುಖ್ಯವಾಗಿ ವಿಕೆಟ್ ಕೀಪರ್ ಆಗಿ ಕೇರಳದ ಆಟಗಾರ ಸಂಜು ಸ್ಯಾಮ್ಸನ್‌ರನ್ನು ಆಯ್ಕೆ ಮಾಡಿರುವುದು ಎಲ್ಲರ ಗಮನ ಸೆಳೆದಿದೆ. ಸದ್ಯಕ್ಕೆ ಸಂಜು ಭಾರತದ ಏಕದಿನ ತಂಡದಲ್ಲಿ ಸ್ಥಾನ ಪಡೆದಿಲ್ಲ. ಸದ್ಯ ಕೆ.ಎಲ್. ರಾಹುಲ್ ತಂಡದ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿದ್ದರೆ, ಇಶಾನ್ ಕಿಶನ್ ಎರಡನೇ ಆಯ್ಕೆಯಾಗಿದ್ದಾರೆ. 2023ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಏಕದಿನ ಪಂದ್ಯ ಆಡಿದ್ದ ಸಂಜು ಅವರನ್ನು ನಂತರ ತಂಡಕ್ಕೆ ಪರಿಗಣಿಸಿಲ್ಲ. ಹೀಗಿದ್ದೂ ಸಂಜು ಸ್ಯಾಮ್ಸನ್‌ರನ್ನು ಉತ್ತಪ್ಪ ವಿಕೆಟ್ ಕೀಪರ್ ಬ್ಯಾಟರ್ ಆಗಿ ಆಯ್ಕೆ ಅಭಿಮಾನಿಗಳಿಗೆ ಅಚ್ಚರಿ ತಂದಿದೆ.
ಈ ವರ್ಷದ ಟಿ20 ವಿಶ್ವಕಪ್ ಗೆಲುವಿನಲ್ಲಿ ಸಂಜು ಪ್ರಮುಖ ಪಾತ್ರ ವಹಿಸಿದ್ದರೂ, ಟಿ20 ತಂಡದಲ್ಲಿಯೂ ಅವರ ಸ್ಥಾನ ಇನ್ನೂ ಖಚಿತವಾಗಿಲ್ಲ. ವೈಭವ್ ಸೂರ್ಯವಂಶಿ ಅವರ ಆಗಮನದಿಂದಾಗಿ, ಜಿಂಬಾಬ್ವೆ ಪ್ರವಾಸಕ್ಕೆ ಸಂಜುಗೆ ವಿಶ್ರಾಂತಿ ನೀಡಲಾಗಿತ್ತು. ಏಷ್ಯನ್ ಗೇಮ್ಸ್‌ನ ಟಿ20 ತಂಡದಲ್ಲಿ ಸಂಜು ಸ್ಥಾನ ಪಡೆದಿದ್ದರೂ, ವೈಭವ್ ಸೂರ್ಯವಂಶಿ ಮತ್ತು ಅಭಿಷೇಕ್ ಶರ್ಮಾ ಆರಂಭಿಕರಾಗಿ ಸ್ಥಾನ ಭದ್ರಪಡಿಸಿಕೊಂಡರೆ, ಟಿ20 ತಂಡದಲ್ಲೂ ಸಂಜು ಸ್ಥಾನ ಕಳೆದುಕೊಳ್ಳುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಉತ್ತಪ್ಪ, ಸಂಜು ಅವರನ್ನು ಏಕದಿನ ವಿಶ್ವಕಪ್ ತಂಡಕ್ಕೆ ಸೇರಿಸಿರುವುದು ವಿಶೇಷ. ಸಂಜು ಅವರ ಬ್ಯಾಟಿಂಗ್ ಶೈಲಿ ಏಕದಿನ ಕ್ರಿಕೆಟ್‌ಗೆ ಹೆಚ್ಚು ಸೂಕ್ತವಾಗಿದೆ ಎಂಬ ಅಭಿಪ್ರಾಯವೂ ಇದೆ.
ಓರ್ವ ಕನ್ನಡಿಗ, ಇಬ್ಬರು ಆರ್‌ಸಿಬಿ ಆಟಗಾರರಿಗೆ ಸ್ಥಾನ
2027ರ ಏಕದಿನ ವಿಶ್ವಕಪ್ ಟೂರ್ನಿಗೆ ಉತ್ತಪ್ಪ ಆಯ್ಕೆ ಮಾಡಿದ ಸಂಭಾವ್ಯ ತಂಡದಲ್ಲಿ ಕೆ ಎಲ್ ರಾಹುಲ್ ಸ್ಥಾನ ಪಡೆದ ಏಕೈಕ ಕನ್ನಡಿಗ ಎನಿಸಿಕೊಂಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ರಾಹುಲ್ ವಿಕೆಟ್ ಕೀಪರ್ ಬ್ಯಾಟರ್ ಆಗಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ಇನ್ನು ಆರ್‌ಸಿಬಿ ತಂಡದ ಅನುಭವಿ ಬ್ಯಾಟರ್ ವಿರಾಟ್ ಕೊಹ್ಲಿ ಹಾಗೂ ಅನುಭವಿ ಬೌಲರ್ ಭುವನೇಶ್ವರ್ ಕುಮಾರ್ ಸ್ಥಾನ ಪಡೆದಿದ್ದಾರೆ. ಅಂದಹಾಗೆ ಕಳೆದೆರಡು ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಚಾಂಪಿಯನ್ ಆಗುವಲ್ಲಿ ಈ ಇಬ್ಬರು ಆಟಗಾರರು ಪ್ರಮುಖ ಪಾತ್ರ ವಹಿಸಿದ್ದಾರೆ.
ಬಹಳ ದಿನಗಳಿಂದ ತಂಡದಿಂದ ಹೊರಗುಳಿದಿರುವ ವೇಗಿ ಭುವನೇಶ್ವರ್ ಕುಮಾರ್ ಅವರನ್ನೂ ಉತ್ತಪ್ಪ ತಮ್ಮ ವಿಶ್ವಕಪ್ ತಂಡಕ್ಕೆ ಸೇರಿಸಿಕೊಂಡಿರುವುದು ಮತ್ತೊಂದು ಅಚ್ಚರಿಯ ಸಂಗತಿ. ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಅರ್ಷದೀಪ್ ಸಿಂಗ್ ಅವರು ಉತ್ತಪ್ಪ ಆಯ್ಕೆ ಮಾಡಿದ ತಂಡದ ಇತರ ವೇಗಿಗಳು. ಬ್ಯಾಟಿಂಗ್ ವಿಭಾಗದಲ್ಲಿ ರೋಹಿತ್ ಶರ್ಮಾ, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ವೈಭವ್ ಸೂರ್ಯವಂಶಿ, ಕೆ.ಎಲ್. ರಾಹುಲ್, ಸಂಜು ಸ್ಯಾಮ್ಸನ್ ಇದ್ದರೆ, ಆಲ್‌ರೌಂಡರ್‌ಗಳಾಗಿ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಅವರನ್ನು ಉತ್ತಪ್ಪ ಆಯ್ಕೆ ಮಾಡಿದ್ದಾರೆ.
ರಾಬಿನ್ ಉತ್ತಪ್ಪ ಆಯ್ಕೆ ಮಾಡಿದ 2027ರ ಏಕದಿನ ವಿಶ್ವಕಪ್ ತಂಡ:
ರೋಹಿತ್ ಶರ್ಮಾ, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ವೈಭವ್ ಸೂರ್ಯವಂಶಿ, ಕೆ.ಎಲ್. ರಾಹುಲ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.


