ಬೆಂಗಳೂರು[ಜೂ.07]: ಭಾರತ ತಂಡದ ಅನುಭವಿ ಕ್ರಿಕೆಟಿಗ ಗೌತಮ್ ಗಂಭೀರ್ ಐಪಿಎಲ್’ನಲ್ಲಿ ನಾಯಕನಾಗಿ ಹಾಗೆಯೇ ಆರಂಭಿಕ ಬ್ಯಾಟ್ಸ್’ಮನ್ ಆಗಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯವಾದ 2018ನೇ ಸಾಲಿನ ಐಪಿಎಲ್’ನಲ್ಲಿ ಡೆಲ್ಲಿ ಡೇರ್’ಡೆವಿಲ್ಸ್ ತಂಡವನ್ನು ಪ್ರತಿನಿಧಿಸಿದ್ದ ಗಂಭೀರ್ ನಿರೀಕ್ಷಿತ ಪ್ರದರ್ಶನ ತೋರಲು ವಿಫಲರಾಗಿದ್ದರು. ಡೆಲ್ಲಿ ಡೇರ್’ಡೆವಿಲ್ಸ್ ತಂಡದ ಕಣಕ್ಕಿಳಿದಿದ್ದ ಗಂಭೀರ್ ಮೊದಲ ಪಂದ್ಯದಲ್ಲೇ ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ ಭರ್ಜರಿ ಅರ್ಧಶತಕ ಸಿಡಿಸಿ ಗಮನ ಸೆಳೆದಿದ್ದರು. ಆ ಬಳಿಕ ಗಂಭೀರ್ ನೀರಸ ಪ್ರದರ್ಶನದಿಂದಾಗಿ ಅರ್ಧದಿಂದಲೇ ಟೂರ್ನಿಯಿಂದ ಹೊರಗುಳಿದಿದ್ದು ಎಲ್ಲರಿಗೂ ಗೊತ್ತೇ ಇದೆ.

ಡೆಲ್ಲಿ ನಾಯಕತ್ವ ವಹಿಸಿಕೊಳ್ಳುವ ಮೊದಲು ಕೋಲ್ಕತಾ ನೈಟ್’ರೈಡರ್ಸ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಗಂಭೀರ್ 2 ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ತಮ್ಮ ದಿಟ್ಟ ನಿರ್ಧಾರದ ಮೂಲಕ ಗಮನ ಸೆಳೆದಿದ್ದರು. ಕೆಕೆಆರ್ ತಂಡದ ನಾಯಕರಾಗಿದ್ದಾಗ ಅದರಲ್ಲೂ ವೆಸ್ಟ್’ಇಂಡೀಸ್ ಆಲ್ರೌಂಡರ್ ಸುನಿಲ್ ನರೈನ್ ಅವರನ್ನು ಹರಾಜಿನಲ್ಲಿ ಖರೀದಿಸುವಾಗ ಹರಾಜಿನ ಸಂಪೂರ್ಣ ಬಜೆಟ್ ವಿನಿಯೋಗಿಸಲು ಗಂಭೀರ್ ರೆಡಿಯಿದ್ದರೂ ಎಂಬ ಅಚ್ಚರಿಯ ಅಂಶವನ್ನು ಕೆಕೆಆರ್’ನ ವ್ಯವಸ್ಥಾಪಕ ನಿರ್ದೇಶಕ ವೆಂಕಿ ಮೈಸೂರು ಹೊರಹಾಕಿದ್ದಾರೆ. ಕೇವಲ 33 ಲಕ್ಷ ಮೂಲ ಬೆಲೆಹೊಂದಿದ್ದ ಸುನಿಲ್ ನರೈನ್ ಅವರನ್ನು 4.71 ಕೋಟಿ ನೀಡಿ ಕೆಕೆಆರ್ ಖರೀದಿಸಿತ್ತು.

ಹರಾಜಿನ ವೇಳೆ ಗಂಭೀರ್- ಶಾರುಕ್ ಖಾನ್ ನಡುವಿನ ಸಂಭಾಷಣೆ ಹೀಗಿತ್ತು

SRK(ಶಾರುಕ್ ಖಾನ್): ನಾವು ಬೇರೆಯವರನ್ನು ಖರೀದಿಸೋಣವೇ.? ನೀವು ಸುನಿಲ್ ನರೈನ್ ಖರೀದಿಸೋಣ ಎನ್ನುತ್ತಿದ್ದಿರಾ..?

ಗಂಭೀರ್: ಹರಾಜಿನಲ್ಲಿ ಬಜೆಟ್’ನ ಮಿತಿ ಎಷ್ಟು?

SRK: ಎರಡು ಮಿಲಿಯನ್. ಆದ್ರೆ ಯಾರು ಈತ? ನಿಮಗೆ ಆತನ ಮೇಲೆ ವಿಶ್ವಾಸವಿದೆಯಾ?

ಗಂಭೀರ್: ಹೌದು. ಬಜೆಟ್’ನ ಮಿತಿ 2 ಮಿಲಿಯನ್ ಆದರೆ, ಆತನಿಗೆ 2 ಮಿಲಿಯನ್ ನೀಡಿ. ಬೇರೆಯವರು ಬೇಕಾಗಿಲ್ಲ ಎಂದಿದ್ದರಂತೆ.

ನನಗನಿಸುತ್ತದೆ ಶಾರುಕ್ ಖಾನ್, ನಮ್ಮ ಸಿಇಓ ವೆಂಕಿ ಅವರಿಗೆ ನರೈನ್ ಒಬ್ಬ ವೆಸ್ಟ್’ಇಂಡಿಸ್ ಆಟಗಾರ ಎನ್ನುವುದು ಮಾತ್ರ ಗೊತ್ತು. ಆತನನ್ನು ನಮ್ಮ ತಂಡಕ್ಕೆ ಸೇರಿಸಿಕೊಂಡಾಗ ಆತ ತನ್ನ ಪ್ರದರ್ಶನದ ಮೂಲಕ ಎಲ್ಲರನ್ನೂ ಅಚ್ಚರಿಗೆ ತಳ್ಳಿದ್ದಾರೆ ಎಂದು ಗಂಭೀರ್ ನರೈನ್ ಕುರಿತು ಹೇಳಿದ್ದರು.

ಸುನಿಲ್ ನರೈನ್ ಅವರನ್ನು ಕೆಕೆಆರ್ ತಂಡವು 2012ರ ಹರಾಜಿನಲ್ಲಿ ಖರೀದಿಸಿತ್ತು. ಆ ಬಳಿಕ ನರೈನ್ ಬೌಲಿಂಗ್ ಹಾಗೂ ಬ್ಯಾಟಿಂಗ್’ನಲ್ಲಿ ಅಮೋಘ ಪ್ರದರ್ಶನ ತೋರುತ್ತಿದ್ದು ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ. 2018ರ ಆವೃತ್ತಿಯಲ್ಲಿ ಸುನಿಲ್ ನರೈನ್ ಮೋಸ್ಟ್ ವ್ಯಾಲ್ಯುಯೆಬಲ್ ಪ್ಲೇಯರ್ ಎಂಬ ಗೌರವಕ್ಕೆ ಭಾಜನರಾಗಿದ್ದಾರೆ. ಆಡಿದ 16 ಪಂದ್ಯಗಳಲ್ಲಿ 357 ರನ್ ಹಾಗೂ 17 ವಿಕೆಟ್ ಕಬಳಿಸಿದ್ದಾರೆ.