ಜೋಹಾನ್ಸ್’ಬರ್ಗ್[ಜೂ.18]: ಕ್ರಿಕೆಟ್ ಜಗತ್ತಿಗೆ ದಕ್ಷಿಣ ಆಫ್ರಿಕಾ ನೀಡಿದ ಮಾರಕ ವೇಗಿಗಳ ಪೈಕಿ ಡೇಲ್ ಸ್ಟೇನ್ ಕೂಡಾ ಒಬ್ಬರು. 2004ರಲ್ಲಿ ಇಂಗ್ಲೆಂಡ್ ವಿರುದ್ಧ ಪದಾರ್ಪಣೆ ಮಾಡಿದ ಸ್ಟೇನ್ ತಮ್ಮ ಕರಾರುವಕ್ಕಾದ ದಾಳಿಯ ಮೂಲಕ ಎದುರಾಳಿ ಬ್ಯಾಟ್ಸ್’ಮನ್’ಗಳ ಎದೆಯಲ್ಲಿ ನಡುಕ ಹುಟ್ಟಸಿರುವುದಂತೂ ಸುಳ್ಳಲ್ಲ. 

ಫಾಲಾಬೋರ್ವಾದಲ್ಲಿ ಜನಿಸಿದ 34 ವರ್ಷದ ಸ್ಟೇನ್, ಇದುವರೆಗೆ 86 ಟೆಸ್ಟ್, 116 ಏಕದಿನ ಹಾಗೂ 42 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನಾಡಿದ್ದು, ಕ್ರಮವಾಗಿ 419, 180 ಹಾಗೂ 58 ವಿಕೆಟ್ ಕಬಳಿಸಿದ್ದಾರೆ. ವೃತ್ತಿ ಜೀವನದಲ್ಲಿ ಹಲವಾರು ಗಾಯದ ಸಮಸ್ಯಗೆ ತುತ್ತಾಗಿ ತಂಡದಿಂದ ಹೊರಬೀಳುತ್ತಿದ್ದ ಸ್ಟೇನ್ ಕಳೆದೊಂದು ವರ್ಷದಿಂದ ಕ್ರಿಕೆಟ್’ನಿಂದ ದೂರವೇ ಉಳಿದಿದ್ದರು. ಇದೀಗ ಗಾಯದ ಸಮಸ್ಯೆಯಿಂದ ಗುಣಮುಖರಾಗಿದ್ದು, ಲಂಕಾ ಪ್ರವಾಸಕ್ಕೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ವಿಶ್ವಕಪ್ ಟೂರ್ನಿಗೆ ಇನ್ನು ಕೇವಲ 11 ತಿಂಗಳುಗಳಿರುವಾಗ ದಕ್ಷಿಣ ಆಫ್ರಿಕಾ ತಂಡದಲ್ಲಿ ಸ್ಥಾನ ಪಡೆದಿರುವ ಸ್ಟೇನ್ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.

ಇದನ್ನು ಓದಿ: ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಎಸೆತಗಳಿವು

ಇತ್ತೀಚೆಗಷ್ಟೇ ಕಾರ್ಯಕ್ರಮವೊಂದರಲ್ಲಿ ಪಾಕಿಸ್ತಾನ ಮಾಜಿ ವೇಗಿ ವಾಸೀಂ ಅಕ್ರಂ ಹಾಗೂ ಇಂಗ್ಲೆಂಡ್ ಮಾಜಿ ವೇಗಿ ಜೆಫ್ ಥಾಮ್ಸನ್ ಅವರನ್ನು ಸ್ಟೇನ್ ಭೇಟಿಯಾಗಿದ್ದರು. ಈ ಭೇಟಿಯ ಕ್ಷಣವನ್ನು ಕರಾರುವಕ್ಕಾದ ಯಾರ್ಕರ್’ಗಳಿಗೆ ಹೆಸರುವಾಸಿಯಾಗಿದ್ದ ವಾಸೀಂ ಅಕ್ರಂ ಹಂಚಿಕೊಂಡಿದ್ದರು. 5 ದಶಕದಲ್ಲಿ ನಾವು 1,100 ಟೆಸ್ಟ್ ವಿಕೆಟ್’ಗಳನ್ನು ಹಂಚಿಕೊಂಡಿದ್ದೇವೆ. ಲಾರ್ಡ್ಸ್’ನಲ್ಲಿ ಸ್ಟೇನ್, ಥಾಮ್ಸನ್ ಭೇಟಿಯಾದ ಕ್ಷಣವೆಂದು ಭಾವಚಿತ್ರವನ್ನು ಟ್ವಿಟರ್’ನಲ್ಲಿ ಹಂಚಿಕೊಂಡಿದ್ದರು.

ಇದನ್ನು ಓದಿ: ಲಂಕಾ ಪ್ರವಾಸಕ್ಕೆ ಬಲಿಷ್ಠ ಆಫ್ರಿಕಾ ತಂಡ ಪ್ರಕಟ; ಎಬಿಡಿ ಸ್ಥಾನಕ್ಕೆ ಈ ಆಟಗಾರ..!

ಇದಕ್ಕೆ ಪ್ರತಿಕ್ರಿಯಿಸಿರುವ ಸ್ಟೇನ್ ನೀವಿಬ್ಬರು ದಂತಕತೆಗಳು. ನಾನು ನನ್ನ ಹೀರೋಗಳೊಂದಿಗೆ ಗುರುತಿಸಿಕೊಳ್ಳುತ್ತೇನೆ ಎಂದು ಯೋಚಿಸಿರಲಿಲ್ಲ. ಇದು ಕನಸು ನನಸಾದ ಕ್ಷಣ ಎಂಬರ್ಥದ ಹ್ಯಾಷ್’ಟ್ಯಾಗ್[#dreamsdocometrue] ಕೂಡ ನೀಡಿದ್ದಾರೆ ಸ್ಟೇನ್.

ಸ್ಟೇನ್ ಟೆಸ್ಟ್ ಕ್ರಿಕೆಟ್’ನಲ್ಲಿ 419, ವಾಸೀಂ ಅಕ್ರಂ 414, ಆಸ್ಟ್ರೇಲಿಯಾದ ವೇಗಿ ಜೆಫ್ ಥಾಮ್ಸನ್ 200 ವಿಕೆಟ್ ಕಬಳಿಸಿದ್ದಾರೆ.   

ಇದನ್ನು ಓದಿ: ಇಮ್ರಾನ್ ಖಾನ್ ಮಾಜಿ ಪತ್ನಿಯಿಂದ ಸ್ಫೋಟಕ ಮಾಹಿತಿ ಬಹಿರಂಗ..!