10 Minutes Delivery: ಐದು ನಿಮಿಷದಲ್ಲಿ ಪಾರ್ಸೆಲ್ ಡೆಲಿವರಿ ಮಾಡಬೇಕು, ಬೇಗ ಡೆಲಿವರಿ ಸಿಗಬೇಕು ಎಂದು ಅನೇಕರು ಡೆಲಿವರಿ ಬಾಯ್‌ಗಳ ಜೊತೆಯಲ್ಲಿ ಜಗಳ ಆಡೋದುಂಟು. ಈಗ ಸರ್ಕಾರವೇ ಹತ್ತು ನಿಮಿಷದೊಳಗಡೆ ಡೆಲಿವರಿ ಮಾಡಬೇಕು ಅಂತೇನಿಲ್ಲ ಎಂದು ಹೇಳಿದೆ.
ಸರ್ಕಾರದ ಆದೇಶ ಮಾಡಿದಂತೆ, ರಸ್ತೆ ಸುರಕ್ಷತೆಯ ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು ಬ್ಲಿಂಕಿಟ್ (Blinkit), ಜೆಪ್ಟೋ (Zepto) ಮತ್ತು ಸ್ವಿಗ್ಗಿ ಇನ್‌ಸ್ಟಾಮಾರ್ಟ್ (Swiggy Instamart) ಕಂಪನಿಗಳು ತಮ್ಮ '10 ನಿಮಿಷದ ಡೆಲಿವರಿ' (10-minute delivery) ವಾಗ್ದಾನವನ್ನು ಅಧಿಕೃತವಾಗಿ ನಿಲ್ಲಿಸಿವೆ. ಇದನ್ನು ಗ್ರಾಹಕರು ಕೂಡ ಸ್ವೀಕರಿಸಿದ್ದಾರೆ.
ಸುರಕ್ಷತೆಗೆ ಆದ್ಯತೆ
ಡೆಲಿವರಿ ಮಾಡುವ ವ್ಯಕ್ತಿಗಳು (Delivery Partners) 10 ನಿಮಿಷಗಳಲ್ಲಿ ಆರ್ಡರ್ ಡೆಲಿವರಿ ಮಾಡಬೇಕು ಎಂದು ರಸ್ತೆಯಲ್ಲಿ ಜೀವದ ಹಂಗು ತೊರೆದು ವೇಗವಾಗಿ ವಾಹನ ಚಾಲನೆ ಮಾಡುತ್ತಾರೆ. ಇದರ ಬದಲು 30 ನಿಮಿಷಗಳ ಕಾಲ ಕಾಯುವುದು ಉತ್ತಮ ಎಂದು ಗ್ರಾಹಕರು ಹೇಳಿದ್ದಾರೆ.
ಬೆಂಗಳೂರು ಗ್ರಾಹಕರ ಪ್ರತಿಕ್ರಿಯೆ
ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ನಿವಾಸಿ ಮಾನಸಾ ರಾಮಕೃಷ್ಣನ್ ಅವರು, "ಆರ್ಡರ್ ಮಾಡಿದ ವಸ್ತುಗಳು 20-30 ನಿಮಿಷಗಳಲ್ಲಿ ಬಂದರೂ ನಮಗೆ ಯಾವುದೇ ತೊಂದರೆಯಿಲ್ಲ. 10 ನಿಮಿಷಗಳಲ್ಲಿ ತಲುಪಿಸುವುದು ಡೆಲಿವರಿ ಬಾಯ್‌ಗೆ ತುಂಬ ಕಷ್ಟವಾಗುತ್ತದೆ. ಈ ರೀತಿ ಮಾಡೋದರಿಂದ ಅಪಘಾತ ಆಗಬಹುದಾ ಎಂಬ ಭಯವಿರುತ್ತದೆ. ಈ ರೀತಿಯ ಐಷಾರಾಮಿ ಸೇವೆಗಾಗಿ ಯಾರ ಜೀವವೂ ಅಪಾಯಕ್ಕೆ ಸಿಲುಕಬಾರದು" ಎಂದಿದ್ದಾರೆ.
ದೇಶಾದ್ಯಂತ ಬೆಂಬಲ
ಚೆನ್ನೈ, ಕೋಲ್ಕತ್ತಾ, ದೆಹಲಿಯ ಗ್ರಾಹಕರು ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ನಮಗೆ ಅಷ್ಟು ಅವಸರವೇನಿಲ್ಲ, ಸರಿಯಾದ ಸಮಯಕ್ಕೆ ಡೆಲಿವರಿ ಕೊಟ್ಟರೆ ಸಾಕು, 10 ನಿಮಿಷದ ಒಳಗಡೆ ಡೆಲಿವರಿ ಕೊಡಬೇಕು ಎಂಬ ನಿಯಮ ಅಗತ್ಯವಿಲ್ಲ" ಎಂದು ಬಹುತೇಕರು ಹೇಳಿದ್ದಾರೆ.
ಯೋಜಿತ ಖರೀದಿ
ಚೆನ್ನೈ ಮೂಲದ ಜನನಿ, "ಒಂದು ವೇಳೆ ಅಷ್ಟು ಅವಸರವಿದ್ದರೆ ಅದು ನಾವು ಸರಿಯಾಗಿ ಪ್ಲಾನ್ ಮಾಡಿಲ್ಲ ಎಂದರ್ಥ. ಕಂಪನಿಗಳು ಈ ನಿಯಮ ತೆಗೆದುಹಾಕಿರುವುದು ಒಳ್ಳೆಯ ನಿರ್ಧಾರವಾಗಿದೆ" ಎಂದು ಹೇಳಿದ್ದಾರೆ.
ವಾಸ್ತವ ಸ್ಥಿತಿ
ಗ್ರಾಹಕರು ಈ ನಿರ್ಧಾರವನ್ನು ಬೆಂಬಲಿಸುತ್ತಿದ್ದರೂ, ಕೆಳಮಟ್ಟದಲ್ಲಿ ಕೆಲಸ ಮಾಡುವ ಅನೇಕ ಡೆಲಿವರಿ ಬಾಯ್ಸ್‌ಗೆ ಈ ನಿಯಮ ಬದಲಾಗಿರುವ ಬಗ್ಗೆ ಇನ್ನೂ ಸರಿಯಾದ ಮಾಹಿತಿ ಸಿಕ್ಕಿಲ್ಲವಂತೆ.


