2010ರಲ್ಲಿ ಆರ್ಡರ್ ಮಾಡಿದ ನೋಕಿಯಾ ಫೋನ್ 16 ವರ್ಷ ಬಳಿಕ ಡೆಲಿವರಿ, ಎಲ್ಲಾ ಕಡೆ 10 ನಿಮಿಷದಲ್ಲಿ ವಸ್ತುಗಳು ಡೆಲಿವರಿಯಾಗುತ್ತದೆ. ಇನ್ನು ಫೋನ್ ಸೇರಿ ಗ್ಯಾಜೆಟ್ಸ್ ಹೆಚ್ಚಂದರೆ ಒಂದು ವಾರ. ಆದರೆ 16 ವರ್ಷದ ಬಳಿಕ ಡೆಲಿವರಿಯಾಗಿದೆ. ಫೋನ್ ಪಡೆದ ವ್ಯಕ್ತಿಯ ರಿಯಾಕ್ಷನ್ ವೈರಲ್ ಆಗಿದೆ.
ಭಾರತದಲ್ಲಿ ಆನ್‌ಲೈನ್ ಮೂಲಕ ವಸ್ತುಗಳ ಆರ್ಡರ್ ಮಾಡಿದರೆ 10 ನಿಮಿಷದಲ್ಲಿ ಮನೆ ಬಾಗಿಲಲ್ಲಿ ಇರುತ್ತೆ. ಇನ್ನು ಫೋನ್, ಟಿವಿ, ಫ್ರಿಡ್ಜ್ ಸೇರಿದಂತೆ ಎಲೆಕ್ಟ್ರಾನಿಕ್ ವಸ್ತಗಳು ಗರಿಷ್ಠ 5 ರಿಂದ 6 ದಿನ ಅಷ್ಟೇ. ಭಾರತದ ಯಾವುದೇ ಮೂಲೆಯಾಗಿದ್ದರು ವಸ್ತುಗಳು ಮಿಂಚಿನ ವೇಗದಲ್ಲಿ ಡೆಲಿವರಿಯಾಗುತ್ತದೆ. ಇದು ಭಾರತ ಮಾತ್ರವಲ್ಲ ಬಹುತೇಕ ದೇಶಗಳಲ್ಲಿ ನಡೆಯುತ್ತಿರುವ ಡೆಲಿವರಿ ಪ್ರಕ್ರಿಯೆ. ಆದರೆ ಇಲ್ಲೊಬ್ಬರು ನೋಕಿಯಾ ಫೋನ್ ಆರ್ಡರ್ ಮಾಡಿದ್ದಾರೆ. 2010ರಲ್ಲಿ ಫೋನ್ ಆರ್ಡರ್ ಮಾಡಿದ್ದಾರೆ. ಆದರೆ ಡೆಲಿವರಿಯಾಗಿದ್ದು ಈಗ. ನೋಕಿಯಾ ಫೋನ್ ಡೆಲಿವರಿಗೆ ಬರೋಬ್ಬರಿ 16 ವರ್ಷ ತೆಗೆದುಕೊಂಡಿದಿದೆ. ಫೋನ್ ಪಡೆದ ವ್ಯಕ್ತಿ ಅತ್ತು ಖುಷಿ ಪಡಲು ಅಗದೆ ಇತ್ತ ಅಳಲು ಆಗದೆ ದಂಗಾಗಿ ಹೋಗಿದ್ದಾರೆ.
ಆರ್ಡರ್ ಮಾಡಿದ ವ್ಯಕ್ತಿ ಫೋನ್ ಸಿಕ್ಕ ಬೆನ್ನಲ್ಲೇ ಕಂಗಾಲು
ಈ ಘಟನೆ ನಡೆದಿರುವುದು ಲಿಬಿಯಾದಲ್ಲಿ. ವಿಶ್ವದ ಯಾವುದೇ ಮೂಲಗೂ, ಯಾವುದೇ ದೇಶದಿಂದ ಡೆಲಿವರಿ 15 ರಿಂದ 30 ದಿನದಲ್ಲಿ ತಲುಪುತ್ತದೆ. ಆದರೆ ಲಿಬಿಯಾದಲ್ಲಿ 16 ವರ್ಷ ತೆಗೆದುಕೊಂಡಿದ್ದಕ್ಕೆ ಹಲವು ಕಾರಣಗಳಿವೆ. ಲಿಬಿಯಾದ ಶಾಪ್‌ಕೀಪರ್ 2010ರಲ್ಲಿ ನೋಕಿಯಾ ಬಟನ್ ಫೋನ್ ಆರ್ಡರ್ ಮಾಡಿದ್ದಾರೆ. 2010ರಲ್ಲಿ ಭಾರಿ ಸದ್ದು ಮಾಡಿದ್ದ ನೋಕಿಯಾ ಮ್ಯೂಸಿಕ್ ಫೋನ್, ಅಂದಿನ ಅತ್ಯಾಧುನಿಕ ಹಾಗೂ ಅತ್ಯಾಕರ್ಷಕ ಫೋನ್ ಆಗಿತ್ತು. ಅಂದು ಆನ್‌ಲೈನ್ ಶಾಪಿಂಗ್ ಈ ಮಟ್ಟಕ್ಕೆ ಬೆಳೆದಿಲ್ಲ. ಜನರು ಮೊಬೈಲ್ ಶಾಪ್‌ಗೆ ತೆರಳಿ ಫೋನ್ ಖರೀದಿಸುತ್ತಿದ್ದರು. ಬೇಡಿಕೆ ಹೆಚ್ಚುತ್ತಿದ್ದ ಕಾರಣದಿಂದ ಮೊಬೈಲ್ ಶಾಪ್ ಮಾಲೀಕ ನೋಕಿಯಾ ಮ್ಯೂಸಿಕ್ ಬಟನ್ ಫೋನ್ ಆರ್ಡರ್ ಮಾಡಿದ್ದಾರೆ.
ಲಿಬಿಯಾದಲ್ಲಿ ಡೆಲಿವರಿ ಸಮಸ್ಯೆ
ನೋಕಿಯಾ ಡೀಲರ್ ಮೂಲಕ ಫೋನ್ ಆರ್ಡರ್ ಮಾಡಿದ್ದಾರೆ. ಮೊಬೈಲ್ ಶಾಪ್ ಮಾಲೀಕನ ಅಂಗಡಿಯಿಂದ ಕೆಲವೇ ದೂರದಲ್ಲಿರುವ ನೋಕಿಯಾ ವೇರ್‌ಹೌಸ್‌ಗೆ ಫೋನ್ ಬಂದಿದೆ. ಆದರೆ 2010ರ ಅಂತ್ಯದಲ್ಲಿ ಆರ್ಡರ್ ಮಾಡಿದ ಫೋನ್ ಬರಲು ಕೆಲ ತಿಂಗಳು ಹಿಡಿದಿದೆ. ಅಷ್ಟರಲ್ಲಿ ಅಂದರೆ 2011ರಲ್ಲಿ ಲಿಬಿಯಾದಲ್ಲಿ ಯುದ್ಧದ ಸಂದರ್ಭ ಸೃಷ್ಟಿಯಾಗಿತ್ತು. ಸರ್ಕಾರ ಪತನಗೊಂಡಿತ್ತು. ಹೋರಾಟಗಳು, ಉಗ್ರರ ಅಟ್ಟಹಾಸ ಸೇರಿದಂತೆ ಒಂದಲ್ಲಾ ಒಂದು ಘಟನೆ ನಡೆಯುತ್ತಲೇ ಹೋಗಿತ್ತು. ಹೀಗಾಗಿ ಲಿಬಿಯಾದಲ್ಲಿ ಸ್ಥಿರ ಆಡಳಿತ ನೀಡುವ ಸರ್ಕಾರವೇ ಇರಲಿಲ್ಲ. ವಸ್ತುಗಳ ಸಾಗಣೆ ದುಸ್ತರವಾಗಿತ್ತು.
ನೋಕಿಯಾ ವೇರ್‌ಹೌಸ್‌ನಲ್ಲಿ ಬಂದಿದ್ದ ಫೋನ್ ಒಂದಲ್ಲ ಎರಡಲ್ಲ ಬರೋಬ್ಬರಿ 16 ವರ್ಷಗಳ ಕಾಲ ಹಾಗೇ ಉಳಿದಿತ್ತು. ಇದೇ ವೇರ್‌ಹೌಸ್‌ನಲ್ಲಿ 2010-11ರ ಸಮಯದಲ್ಲಿ ಬಂದಿದ್ದ ಹಲವು ವಸ್ತುಗಳು ಹಾಗೇ ಉಳಿದಿದೆ. ವೇರ್‌ಹೌಸ್ ದಾಖಲೆ ಪ್ರಕಾರ ಹಲವು ವಸ್ತುಗಳು ಡೆಲಿವರಿಯಾಗದೇ ಉಳಿದುಕೊಂಡಿತ್ತು. ಇದನ್ನು ಕ್ಲಿಯರ್ ಮಾಡಲು ಮೇಲಾಧಿಕಾರಿಗಳು ಸೂಚಿಸಿದ್ದರು. ಹೀಗಾಗಿ ಒಂದರ ಹಿಂದೆ ಒಂದರಂತೆ ವಸ್ತುಗಳ ಡೆಲಿವರಿ ಆರಂಭಗೊಂಡಿತ್ತು. ಇದರಲ್ಲಿ 16 ವರ್ಷದ ಹಿಂದೆ ಆರ್ಡರ್ ಮಾಡಿದ್ದ ನೋಕಿಯಾ ಮ್ಯೂಸಿಕ್ ಫೋನ್ ಕೂಡ ಇತ್ತು.
ದಂಗಾಗಿ ಹೋದ ಶಾಪ್ ಮಾಲೀಕ
ಅಂದಿನ ಕಾಲಕ್ಕೆ ಭಾರಿ ಬೇಡಿಕೆ ಪಡೆದಿದ್ದ ನೋಕಿಯಾ ಬಟನ್ ಫೋನ್ ಡೆಲಿವರಿಯಾಗಿದೆ. ಶಾಪ್ ಮಾಲೀಕ ಒಂದು ಕ್ಷಣ ದಂಗಾಗಿ ಹೋಗಿದ್ದಾನೆ. ತಾನು ಆರ್ಡರೇ ಮಾಡೇ ಇಲ್ಲ ಎಂದು ಯೋಚಿಸುತ್ತಿರುವಾಗಲೇ, 2010ರ ಆರ್ಡರ್ ಹಾಗೂ ಪೇಮೆಂಟ್ ಮಾಹಿತಿಯನ್ನು ಡೆಲಿವರಿ ಸಿಬ್ಬಂದಿಗಳು ನೀಡಿದ್ದಾರೆ. ಅಷ್ಟರಲ್ಲೇ ಬರೋಬ್ಬರಿ 16 ವರ್ಷಗಳ ಹಿಂದಿನ ಕತೆ ನೆನಪಾಗಿದೆ. ಡೆಲಿವರಿ ಬಂದ ನೋಕಿಯ ಫೋನ್ ಅನ್‌ಬಾಕ್ಸ್ ಮಾಡಿ ಅತ್ತ ನಗಲು ಆಗದೇ ಅಳಲು ಆಗದೇ ಶಾಪ್ ಕೀಪರ್ ಹಾಸ್ಯದಲ್ಲಿ ಘಟನೆ ವಿವರಿಸಿದ್ದಾರೆ. ಎಲ್ಲೆಡೆ ಸ್ಮಾರ್ಟ್‌ಫೋನ್ ಜಮಾನ ಬಂದು ಹಲವು ವರ್ಷಗಳೇ ಉರುಳಿದೆ. ಈಗ 16 ವರ್ಷಗಳ ಹಿಂದಿನ ಬಟನ್ ಫೋನ್ ಡೆಲಿವರಿಯಾಗಿದೆ. ಅತೀವ ಬೇಡಿಕೆ ಸಮಯದಲ್ಲಿ ಫೋನ್ ಬರಲಿಲ್ಲ, ಫೋನ್ ಬಂದಾಗ ತಂತ್ರಜ್ಞಾನ ಬದಲಾಗಿ ಸಾಕಷ್ಟು ದೂರ ಪ್ರಯಾಣಿಸಿ ಆಗಿದೆ. ಈ ಫೋನ್‌ನ್ನು ಮಕ್ಕಳಿಗೆ ನೀಡಿದರೂ ಅವರು ಕಿತ್ತೊಗೆಯುತ್ತಾರೆ ಎಂದು ಶಾಪ್ ಮಾಲೀಕ ಹೇಳಿದ್ದಾನೆ.


