ನವದೆಹಲಿ: ಸ್ವದೇಶಿ ನಿರ್ಮಿತ ಯುದ್ಧ ಪ್ಯಾರಾಚೂಟ್ ಅನ್ನು ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ. ವಾಯುಪಡೆಯ ವಿಂಗ್ ಕಮಾಂಡರ್ವಿಶಾಲ್ ಲಕೇಶ್, ಮಾಸ್ಟರ್ ವಾರಂಟ್ ಅಧಿಕಾರಿ ಆರ್.ಜೆ. ಸಿಂಗ್, ಮತ್ತು ಮಾಸ್ಟರ್ವಾರಂಟ್ ಅಧಿಕಾರಿ ವಿವೇಕ್ ತಿವಾರಿ ಈ ಪ್ಯಾರಾಚೂಟ್ ನೊಂದಿಗೆ 32,000 ಅಡಿ ಎತ್ತರದಿಂದ ಹಾರುವ ಮೂಲಕ ಅದರ ಕಾರ್ಯಕ್ಷಮತೆ ಸಾಬೀತುಪಡಿಸಿದ್ದಾರೆ. ಈ ಪ್ಯಾರಾಚೂಟ್ ಅನ್ನು ಬೆಂಗಳೂರು ಮತ್ತು ಆಗ್ರಾದಲ್ಲಿರುವ ಪ್ರಯೋಗಾಲಯಗಳಲ್ಲಿ ನಿರ್ಮಿಸಲಾಗಿರುವುದು ವಿಶೇಷ. ಜತೆಗೆ, ಅಷ್ಟು ಎತ್ತರದಿಂದ ಸ್ವದೇಶಿ ಪ್ಯಾರಾಚೂಟ್ನ ಪರೀಕ್ಷೆ ನಡೆಸಲಾಗಿರುವುದು ಇದೇ ಮೊದಲು. ಈ ಸೇನಾ ಪ್ಯಾರಾಚೂಟ್ಗಳು ಶಸ್ತ್ರಾಸ್ತ್ರ, ಮದ್ದುಗುಂಡು, ಜೀವರಕ್ಷಕ ಕಿಟ್ ಸೇರಿ 150 ಕೆ.ಜಿ. ತೂಕ ಹೊರಬಲ್ಲದು. ಇದನ್ನು ಬಳಸುವವರು ಸುರಕ್ಷಿತವಾಗಿ ಇಳಿಯುವುದನ್ನು ಖಚಿತಪಡಿಸಲು ಅದು ಕೆಳಗೆ ಬರುವ ವೇಗವೂ ಕಡಿಮೆ ಆಗುವ ವ್ಯವಸ್ಥೆ ಇದೆ. ಜತೆಗೆ ನಾವಿಕ್ ಜಿಪಿಎಸ್ ವ್ಯವಸ್ಥೆಯೂ ಇದರಲ್ಲಿರುವುದರಿಂದ ನಿಗದಿಗೆ ಸ್ಥಳದಲ್ಲಿ ನಿಖರವಾಗಿ ಲ್ಯಾಂಡ್ ಆಗಲು ಸಾಧ್ಯವಾಗುತ್ತದೆ. ಇದು ವಾಯುದಾಳಿ ಅಥವಾಹಿಮಾಲಯದಂತಹ ಭೂಪ್ರದೇಶಗಳಲ್ಲಿ ತ್ವರಿತ ಪ್ರತಿಕ್ರಿಯೆಗೆ ನಿರ್ಣಾಯಕ. ಈ ಪ್ಯಾರಾಚೂಟ್ ಯಾವುದೇ ರೀತಿಯ ಹವಾಮಾನದಲ್ಲೂ ತೊಂದರೆ ಇಲ್ಲದೆಯೇ ಬಳಸಬಹುದಾಗಿದೆ.