ಇದೇ ಮೊದಲ ಬಾರಿಗೆ ಪ್ರತಿ ಸೆಕೆಂಡ್‌ಗೆ 6 ಬಿಲಿಯನ್ ಟನ್ ಹಿಗ್ಗುತ್ತಿರುವ ಹೊಸ ಗ್ರಹ ಪತ್ತೆ, ಈ ಗ್ರಹ ಸ್ವತಂತ್ರವಾಗಿ ತೇಲಾಡುತ್ತಿರುವ ಗ್ರಹವಾಗಿದೆ. ಇದರ ಗುಣಲಕ್ಷಣ ನಕ್ಷತ್ರದ ರೀತಿ ಇದ್ದರೂ ಬೆಳೆಯುತ್ತಿರುವ ವೇಗ ಮಾತ್ರ ವಿಜ್ಞಾನಿಗಳನ್ನು ಅಚ್ಚರಿಗೊಳಿಸಿದೆ.

ಸ್ಕಾಟ್‌ಲೆಂಡ್ (ಅ.04) ಬಾಹ್ಯಾಕಾಶದಲ್ಲಿ ಪ್ರತಿ ದಿನ ಅಧ್ಯಯನ ಮಾಡಿದರೂ ಮುಗಿಯದಷ್ಟು ವಿಷಯಗಳಿವೆ, ನಕ್ಷತ್ರಗಳಿವೆ, ಚಿಕ್ಕ ಚಿಕ್ಕ ಗ್ರಹಗಳಿವೆ. ವಿಜ್ಞಾನಿಗಳ ಸತತ ಅಧ್ಯಯನದಲ್ಲಿ ಹಲವು ಬಾರಿ ಅಚ್ಚರಿಗಳು ಹೊರಬಂದಿದೆ. ಇದೀಗ ಸ್ಕಾಟ್‌ಲೆಂಡ್‌ನ ಸೈಟ್ ಆ್ಯಂಡ್ರೂಸ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಹಾಗೂ ಸಂಶೋಧಕರ ಅಧ್ಯಯನದಲ್ಲಿ ಜಗತ್ತನ್ನೇ ಅಚ್ಚರಿಗೊಳಿಸಿದ ಫಲಿತಾಂಶ ಸಿಕ್ಕಿದೆ. ಇದೇ ಮೊದಲ ಬಾರಿಗೆ ಅತೀ ವೇಗವಾಗಿ ಬೆಳೆಯುತ್ತಿರುವ ಗ್ರಹ ಪತ್ತೆಯಾಗಿದೆ. ಇದು ಜುಪಿಟರ್ ಗ್ರಹಕ್ಕಿಂತ 10 ಪಟ್ಟು ದೊಡ್ಡದಾಗಿದೆ. ಪ್ರತಿ ಸೆಕೆಂಡ್‌ಗೆ ಈ ಗ್ರಹ 6.6 ಬಿಲಿಯನ್ ಟನ್‌ನಷ್ಟು ಬೆಳೆಯುತ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಈ ಗ್ರಹದ ಹೆಸರು ಚಾ Cha 1107-7626 

ಹೊಸದಾಗಿ ಪತ್ತೆಯಾಗಿರುವ ಈ ಗ್ರಹದ ಹೆಸರು ಚಾ Cha 1107-7626.ಇದರ ಗುಣಲಕ್ಷ್ಣ ನಕ್ಷತ್ರದ ರೀತಿ ಇದೆ. ಆದರೆ ಸ್ವತಂತ್ರವಾಗಿ ತೇಲಾಡುತ್ತಿರುವ ಗ್ರಹ ಇದಾಗಿದೆ.ಅಂದರೆ ಕಕ್ಷೆಯಲ್ಲಿ ಸುತ್ತುವ ಬದಲು ತನ್ನದೇ ರೀತಿಯಲ್ಲಿ ಸ್ವತಂತ್ರವಾಗಿ ತೇಲಾಡುತ್ತಿರುವ ಗ್ರಹ ಇದು. ಬಾಹ್ಯಾಕಾಶದಲ್ಲಿರುವ ಪ್ರತಿಯೊಂದು ಗ್ರಹಗಳು ಹಿಗ್ಗುುವುದು, ಕುಗ್ಗುವುದು ಸಾಮಾನ್ಯ. ಇದರ ಪ್ರಮಾಣ ಭಾರಿ ವ್ಯತ್ಯಾಸವಾಗುವುದಿಲ್ಲ. ಸಣ್ಣ ಪ್ರಮಾಣದಲ್ಲಿ ಹಿಗ್ಗುವಿಕೆ, ಬೆಳವಣಿಗೆ ನಡೆಯುತ್ತಲೇ ಇರುತ್ತದೆ. ಆದರೆ ಚಾ Cha 1107-7626 ಗ್ರಹ ಪ್ರತಿ ಸೆಕೆಂಡ್‌ಗೆ 6.6 ಬಿಲಿಯನ್ ಟನ್‌ನಷ್ಟು ಬೆಳವಣಿಗೆಯಾಗುತ್ತಿದೆ. ಇದು ವಿಜ್ಞಾನಿಗಳ ಅಚ್ಚರಿಗೆ ಕಾರಣವಾಗಿದೆ.

ಭೂಮಿಯಿಂದ ಎಷ್ಟು ದೂರದಲ್ಲಿದೆ ಈ ಗ್ರಹ?

ಅತೀ ವೇಗವಾಗಿ ಬೆಳೆಯುತ್ತಿರುವ ಈ ಗ್ರಹ ಭೂಮಿಯಿಂದ 620 ಬೆಳಕಿನ ವರ್ಷದಷ್ಟು ದೂರದಲ್ಲಿದೆ. ಒಂದು ಬೆಳಕಿನ ವರ್ಷ ಎಂದರೆ ಬೆಳಕು ಒಂದು ವರ್ಷ ಪ್ರಯಾಣಿಸುವ ದೂರ, ಸರಿಸುಮಾರು 5.88 ಟ್ರಿಲಿಯನ್ ಮೈಲು ಅಥವಾ 9.56 ಟ್ರಿಲಿಯನ್ ಕಿಲೋಮೀಟರ್. ಸೌರಮಂಡಲದಿಂದ ಹೊರಭಾಗದಲ್ಲಿರುವ ಈ ಗ್ರಹ, ವಿಜ್ಞಾನಿಗಳ ಕುತೂಹಲ ಹೆಚ್ಚಿಸಿದೆ.

1 ರಿಂದ 2 ಮಿಲಿಯನ್ ವರ್ಷ ಹಳೇ ಗ್ರಹ

ಹೊಸ ಗ್ರಹ ಪತ್ತೆಯಾಗುತ್ತಿದ್ದಂತೆ ವಿಜ್ಞಾನಿಗಳ ಅಧ್ಯಯನ ತೀವ್ರಗೊಂಡಿದೆ. ಇದೀಗ ಹೊಸ ಗ್ರಹ 1 ರಿಂದ 2 ಮಿಲಿಯನ್ ವರ್ಷ ಹಳೇ ಗ್ರಹ ಎಂದು ಅಂದಾಜಿಸಲಾಗಿದೆ. ನಮ್ಮ ಸೌರಮಂಡಲ 4.5 ಬಿಲಿಯನ್ ವರ್ಷ ಹಳೆಯದಾಗಿದೆ. ಹೊಸ ಗ್ರಹದ ಕುರಿತು ಅಧ್ಯಯನ ನಡೆಯುತ್ತಿದೆ. ಶೀಘ್ರದಲ್ಲೇ ಮತ್ತಷ್ಟು ಮಾಹಿತಿಗಳು ಹೊರಬೀಳಲಿದೆ.