ISRO LHDAC: ಇಸ್ರೋದ ಬಹುನಿರೀಕ್ಷಿತ ಚಂದ್ರಯಾನ-3 ಯೋಜನೆ ಅಂತಿಮ ಘಟ್ಟಕ್ಕೆ ಬಂದಿದ್ದು, ಜುಲೈ 14 ರಂದು ಶ್ರೀಹರಿಕೋಟಾದಿಂದ ಉಡಾವಣೆಗೊಂಡಿದ್ದ ಚಂದ್ರಯಾನ-3, ಆಗಸ್ಟ್‌ 23ರಂದು ಸಂಜೆ 6.04 ನಿಮಿಷಕ್ಕೆ ಚಂದ್ರನ ಮೇಲ್ಮೈ ಸ್ಪರ್ಶ ಮಾಡಲಿದೆ.

ಬೆಂಗಳೂರು (ಆ.21): ಇಡೀ ಜಗತ್ತು ಭಾರತದ ಐತಿಹಾಸಿಕ ಕ್ಷಣಕ್ಕಾಗಿ ಕಾಯುತ್ತಿದೆ. ಭೂಮಿಯ ಹೊರತಾದ ಇನ್ನೊಂದು ಆಕಾಶಕಾಯದಲ್ಲಿ ತನ್ನ ನೌಕೆಯನ್ನು ಇದೇ ಮೊದಲ ಬಾರಿಗೆ ಯಶಸ್ವಿಯಾಗಿ ಇಳಿಯುವ ಪ್ರಯತ್ನ ಮಾಡುತ್ತಿರುವ ಇಸ್ರೋಗೆ ವಿಶ್ವದ ಎಲ್ಲೆಡೆಯಿಂದ ಹಾರೈಕೆಗಳು ಹರಿದುಬರುತ್ತಿದೆ. ಇದರ ನಡುವೆ ಇಸ್ರೋ ಸೋಮವಾರ ಚಂದ್ರನ ಪ್ರಮುಖ ಚಿತ್ರಗಳನ್ನು ಬಿಡುಗಡೆ ಮಾಡಿದೆ. ವಿಕ್ರಮ್‌ ಲ್ಯಾಂಡರ್‌ನ ಎಲ್‌ಎಚ್‌ಡಿಎಸಿ ಕ್ಯಾಮೆರಾ ಅಂದರೆ ಲ್ಯಾಂಡರ್‌ ಹಜಾರ್ಡ್‌ ಡಿಟೆಕ್ಷನ್‌ ಆಂಡ್‌ ಅವಾಯ್‌ಡೆನ್ಸ್ ಕ್ಯಾಮೆರಾ, ಚಂದ್ರನ ಮೇಲ್ಮೈ ಭಾಗದ ಕೆಲವೊಂದು ಚಿತ್ರಗಳನ್ನು ಬಿಡುಗಡೆ ಮಾಡಿದೆ. ಈ ಕ್ಯಾಮೆರಾ, ಚಂದ್ರನ ಮೇಲೆ ಲ್ಯಾಂಡರ್‌ ಇಳಿಯಲು ಸೇಫ್‌ ಆದ ಜಾಗ ಯಾವುದು, ಎಲ್ಲಿ ಗುಡ್ಡ ಪ್ರದೇಶಗಳಿವೆ, ಎಲ್ಲಿ ಕುಳಿಯಂಥ ಪ್ರದೇಶಗಳಿವೆ ಎನ್ನುವ ಮಾಹಿತಿಗಳನ್ನು ಇಸ್ರೋಗೆ ರವಾನೆ ಮಾಡುತ್ತದೆ. ಇದನ್ನು ಪರಿಶೀಲನೆ ಮಾಡಿ, ಇಸ್ರೋ ಯಾವ ಜಾಗ ಸೂಕ್ತ ಎಂದು ಹೇಳುತ್ತದೆಯೋ ಆ ಸ್ಥಳದಲ್ಲಿ ವಿಕ್ರಮ್‌ ಲ್ಯಾಂಡರ್‌ ಇಳಿಯಲು ಅನುವು ಮಾಡಿಕೊಡಲಾಗುತ್ತದೆ.

"ಲ್ಯಾಂಡರ್ ಹಜಾರ್ಡ್ ಡಿಟೆಕ್ಷನ್ ಮತ್ತು ಅವಾಯಿಡೆನ್ಸ್ ಕ್ಯಾಮೆರಾ (LHDAC) ದಿಂದ ಸೆರೆಹಿಡಿಯಲಾದ ಚಂದ್ರನ ದೂರದ ಪ್ರದೇಶದ ಚಿತ್ರಗಳು ಇಲ್ಲಿವೆ. ಈ ಕ್ಯಾಮರಾ ಸುರಕ್ಷಿತ ಲ್ಯಾಂಡಿಂಗ್ ಪ್ರದೇಶವನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ. ಲ್ಯಾಂಡರ್‌ ಇಳಿಯುವ ಸಮಯದಲ್ಲಿ ಬಂಡೆಗಳು ಅಥವಾ ಆಳವಾದ ಕಂದಕಗಳಿಲ್ಲದೆ ಇರುವ ಪ್ರದೇಶಗಳನ್ನು ಇದು ಗುರುತಿಸುತ್ತದೆ' ಎಂದು ಇಸ್ರೋ ಎಕ್ಸ್‌ನಲ್ಲಿ ಬರೆದಿದೆ. ಚಂದ್ರಯಾನ 3 ಆಗಸ್ಟ್ 23 ರಂದು ಸಂಜೆ 6:04 ಕ್ಕೆ (ಭಾರತೀಯ ಕಾಲಮಾನ) ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವ ನಿರೀಕ್ಷೆಯಿದೆ. ಭಾನುವಾರ ಬೆಳಿಗ್ಗೆ, ಕಾರ್ಯಾಚರಣೆಯ ಎರಡನೇ ಮತ್ತು ಅಂತಿಮ ಡೀಬೂಸ್ಟಿಂಗ್ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಲಾಯಿತು.

ಚಂದ್ರಯಾನ-3 ನೌಕೆಯ ಇದುವರೆಗಿನ ಪ್ರಯಾಣ
ಜುಲೈ 6: ಚಂದ್ರಯಾನ-3 ಮಿಷನ್ ಜುಲೈ 14 ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದ ಎರಡನೇ ಉಡಾವಣಾ ಕೇಂದ್ರದಿಂದ ಉಡಾವಣೆಯಾಗಲಿದೆ ಎಂದು ಇಸ್ರೋ ಘೋಷಣೆ ಮಾಡಿತ್ತು.

ಜುಲೈ 7: ನೌಕೆ ಹಾಗೂ ಉಡಾವಣಾ ರಾಕೆಟ್‌ನ ಎಲ್ಲಾ ರೀತಿಯ ಪರೀಕ್ಷೆಗಳು ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಮಾಹಿತಿ ನೀಡಿದ ಇಸ್ರೋ

ಜುಲೈ 11: 24 ಗಂಟೆಗಳ ಲಾಂಚ್‌ ರಿಹಸರ್ಲ್‌ಅನ್ನು ಯಶಸ್ವಿಯಾಗಿ ಮಾಡಲಾಗಿತ್ತು.

ಜುಲೈ 14: ಇಸ್ರೋದ LVM3 M4 ರಾಕೆಟ್‌, ಚಂದ್ರಯಾನ-3 ಅನ್ನು ತನ್ನ ಉದ್ದೇಶಿತ ಕಕ್ಷೆಗೆ ಉಡಾಯಿಸಿತು.

ಜುಲೈ 15: ಮಿಷನ್‌ನ ಮೊದಲ ಕಕ್ಷೆ ಏರಿಸುವ ಕಾರ್ಯಾಚರಣೆಯನ್ನು ಬೆಂಗಳೂರಿನ ಇಸ್ಟ್ರಾಕ್‌ನಲ್ಲಿ ಯಶಸ್ವಿಯಾಗಿ ಮಾಡಲಾಯಿತು. ಬಾಹ್ಯಾಕಾಶ ನೌಕೆಯು 41762 ಕಿಮೀ x 173 ಕಿಮೀ ಕಕ್ಷೆಯನ್ನು ತಲುಪಿತು.

ಜುಲೈ 17: ಎರಡನೇ ಕಕ್ಷೆ ಏರಿಸುವ ಕಾರ್ಯಾಚರಣೆಯನ್ನು ಮಾಡಲಾಯಿತು. 41603 ಕಿಮೀ x 226 ಕಿಮೀ ಕಕ್ಷೆಗೆ ಇದನ್ನು ಸೇರಿಸಲಾಯಿತು.

ಜುಲೈ 22: ನಾಲ್ಕನೇ ಕಕ್ಷೆಗೆ ಏರಿಸುವ ಕುಶಲತೆ ನಡೆಸಲಾಯಿತು. ಬಾಹ್ಯಾಕಾಶ ನೌಕೆಯನ್ನು 71351 ಕಿಮೀ x 233 ಕಿಮೀ ಕಕ್ಷೆಯಲ್ಲಿ ಯಶಸ್ವಿಯಾಗಿ ಇರಿಸಿತು.

ಜುಲೈ 25: ಮತ್ತೊಂದು ಕಕ್ಷೆ ಏರಿಸುವ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಲಾಯಿತು.

ಆಗಸ್ಟ್‌ 1: ಮಹತ್ವದ ಮೈಲಿಗಲ್ಲಿನಲ್ಲಿ, ಚಂದ್ರಯಾನ-3 ನೌಕೆ, 288 ಕಿಮೀ x 369328 ಕಿಮೀ ಕಕ್ಷೆಯೊಂದಿಗೆ ಟ್ರಾನ್ಸ್‌ಲೂನಾರ್ ಕಕ್ಷೆಯನ್ನು ಪ್ರವೇಶಿಸಿತು.

ಆಗಸ್ಟ್‌ 5: ಬಾಹ್ಯಾಕಾಶ ನೌಕೆಯು 164 km x 18074 km ನಲ್ಲಿ ಚಂದ್ರನ ಕಕ್ಷೆಯನ್ನು ಪ್ರವೇಶಿಸಿತು.

ಆಗಸ್ಟ್‌ 6: ಬಾಹ್ಯಾಕಾಶ ನೌಕೆಯ ಕಕ್ಷೆಯನ್ನು ಚಂದ್ರನ ಸುತ್ತ 170 ಕಿಮೀ x 4,313 ಕಿಮೀಗೆ ಇಳಿಸಲಾಯಿತು.

ಆಗಸ್ಟ್‌ 9: ಬಾಹ್ಯಾಕಾಶ ನೌಕೆಯನ್ನು 174 ಕಿಮೀ x 1437 ಕಿಮೀಗೆ ಇಳಿಸಿದ ಮತ್ತೊಂದು ಕಾರ್ಯಾಚರಣೆಯನ್ನು ನಡೆಸಲಾಯಿತು.

ಆಗಸ್ಟ್‌ 14: ಚಂದ್ರಯಾನ ಯೋಜನೆ, 151 ಕಿಮೀ x 179 ಕಿಮೀ ಕಕ್ಷೆಯ ಪರಿಚಲನೆಯ ಹಂತವನ್ನು ಪ್ರವೇಶಿಸಿತು.

ಆಗಸ್ಟ್‌ 16: ಸಣ್ಣ ಪ್ರಯಾಣದ ಫೈರಿಂಗ್‌ನ ನಂತರ ಬಾಹ್ಯಾಕಾಶ ನೌಕೆಯು 153 ಕಿಮೀ x 163 ಕಿಮೀ ಕಕ್ಷೆಗೆ ಇಳಿಯಿತು.

ಆಗಸ್ಟ್ 17: ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಅನ್ನು ಒಳಗೊಂಡಿರುವ ಲ್ಯಾಂಡಿಂಗ್ ಮಾಡ್ಯೂಲ್ ಅನ್ನು ಅದರ ಪ್ರೊಪಲ್ಷನ್ ಮಾಡ್ಯುಲ್‌ನಿಂದ ಬೇರ್ಪಟ್ಟಿತು.

ಆಗಸ್ಟ್‌ 18: ಬಾಹ್ಯಾಕಾಶ ನೌಕೆಯು ತನ್ನ ಕಕ್ಷೆಯನ್ನು 113 ಕಿಮೀ x 157 ಕಿಮೀಗೆ ಇಳಿಸಿದ 'ಡೀಬೂಸ್ಟಿಂಗ್' ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು. ಡೀಬೂಸ್ಟಿಂಗ್ ಎನ್ನುವುದು ಚಂದ್ರನ ಕಕ್ಷೆಯ ಸಮೀಪವಿರುವ ಬಿಂದು (ಪೆರಿಲುನ್) 30 ಕಿಮೀ ಮತ್ತು ದೂರದ ಬಿಂದು (ಅಪೋಲ್ಯೂನ್) 100 ಕಿಮೀ ಇರುವ ಕಕ್ಷೆಯಲ್ಲಿ ತನ್ನ ಸ್ಥಾನಕ್ಕೆ ನಿಧಾನಗೊಳ್ಳುವ ಪ್ರಕ್ರಿಯೆಯಾಗಿದೆ.

ಆಗಸ್ಟ್‌ 20: ಚಂದ್ರಯಾನ-3 ಎರಡನೇ ಮತ್ತು ಅಂತಿಮ ಡೀಬೂಸ್ಟಿಂಗ್ ಕಾರ್ಯಾಚರಣೆಯನ್ನು ನಿರ್ವಹಿಸಿತು ಮತ್ತು ಲ್ಯಾಂಡಿಂಗ್‌ ಮಾಡ್ಯುಲ್‌, ಕಕ್ಷೆಯನ್ನು 25 ಕಿಮೀ x 134 ಕಿಮೀಗೆ ಇಳಿಸಿತು.

Chandrayaan-3 Landing: ಚಂದ್ರನ ಮೇಲೆ ಭಾರತದ ಸಾಫ್ಟ್‌ ಲ್ಯಾಂಡಿಗ್‌, ನೀವು ಎಲ್ಲೆಲ್ಲಾ ವೀಕ್ಷಿಸಬಹುದು?

ಆಗಸ್ಟ್‌ 23: ಎಲ್ಲವೂ ಅಂದುಕೊಂಡಂತೆ ಯೋಜನೆಯಂತೆ ನಡೆದರೆ, ನೌಕೆಯ ಚಂದ್ರನ ಮೇಲ್ಮೈ ಮೇಲೆ ಯಶಸ್ವಿಯಾಗಿ ಇಳಿಯಲಿದೆ.

ಬಾಹ್ಯಾಕಾಶ ಯುದ್ಧಭೂಮಿಯಲ್ಲ..ರಷ್ಯಾದ ಲೂನಾ ಸೋಲು ಸಂಭ್ರಮ ಪಡುವ ವಿಚಾರವಲ್ಲ!

Scroll to load tweet…