ಮಾನವ ಹಾಗೂ ಆನೆಗಳ ಸಂಘರ್ಷ ಇತ್ತೀಚೆಗೆ ತೀವ್ರಗೊಳ್ಳುತ್ತಿದೆ. ಈ ಕುರಿತು ಬೆಳಕು ಚೆಲ್ಲುವ ಕ್ರಾಸಿಂಗ್ ಪಾತ್ ಅನ್ನೋ ಸಾಕ್ಷ್ಯ ಚಿತ್ರ ಇಂದು ರಿಲೀಸ್ ಆಗುತ್ತಿದೆ. ಸಂಯುಕ್ತ ಹೊರನಾಡು ನಿರ್ದೇಶನದ ಈ ಸಿನಿಮಾದ ವಿಶೇಷತೆ ಏನು?

ಬೆಂಗಳೂರು (ಆ.12) ಮಾನ ಹಾಗೂ ಆನೆ ನಡುವಿನ ಸಂಘರ್ಷಗಳ ಕುರಿತು ಸಾಕ್ಷ್ಯ ಚಿತ್ರ ವಿಶ್ವ ಆನೆಗಳ ದಿನ (ಆ.12) ಬಿಡುಗಡೆಯಾಗುತ್ತಿದೆ. ಕ್ರಾಸಿಂಗ್ ಪಾತ್ಸ್ ಅನ್ನೋ ಸಾಕ್ಷ್ಯ ಚಿತ್ರದ ಮೂಲಕ ನಟಿ ಸಂಯುಕ್ತ ಹೊರನಾಡು ನಿರ್ದೇಶಕಿಯಾಗಿ ಬಡ್ತಿ ಪಡೆದುಕೊಂಡಿದ್ದಾರೆ. ಈ ಸಾಕ್ಷ್ಯಚಿತ್ರವು ತೀವ್ರಗೊಳ್ಳುತ್ತಿರುವ ಮಾನವ-ಆನೆ ಸಂಘರ್ಷದ ಕುರಿತು ಬೆಳಕು ಚೆಲ್ಲುತ್ತದೆ. ಈ ಸಾಕ್ಷ್ಯಚಿತ್ರಕ್ಕೆ ಟೆಕಿಯಾನ್ (Tekion) ಸಂಸ್ಥೆಯ ಸಿಎಸ್‌ಆರ್‌ ಇನಿಶಿಯೇಟಿವ್ ಜೊತೆಗೆ ಕರ್ನಾಟಕ ಅರಣ್ಯ ಇಲಾಖೆ ಮತ್ತು ಆ ರೋಚಾ ಇಂಡಿಯಾ, ಸಂಪಿಗೆ ಫಿಲ್ಮ್ಸ್ ಪ್ರೊಡಕ್ಷನ್ ಇದಕ್ಕೆ ಸಹಯೋಗ ನೀಡಿವೆ.

ವನ್ಯಜೀವಿಗಳ ಆವಾಸಸ್ಥಾನ ಬರಿದು

ಕಾಡುಗಳು ಕಿರಿದಾಗುತ್ತಾ, ಮಾನವನ ಚಟುವಟಿಕೆಗಳಿಂದಾಗಿ ವನ್ಯಜೀವಿಗಳ ನೈಸರ್ಗಿಕ ಆವಾಸಸ್ಥಾನಗಳು ನಾಶವಾಗುತ್ತಿರುವ ಈ ಸಂದರ್ಭದಲ್ಲಿ, ಆನೆಗಳು ಅನಿವಾರ್ಯವಾಗಿ ಮಾನವ ವಸತಿ ಪ್ರದೇಶಗಳಿಗೆ ಕಾಲಿಡುತ್ತಿವೆ. ಇದು ಸ್ಥಳೀಯ ಸಮುದಾಯಗಳು ಮತ್ತು ವನ್ಯಜೀವಿಗಳು ಇಬ್ಬರ ಮೇಲೆಯೂ ಗಂಭೀರ ಪರಿಣಾಮ ಬೀರುವ ಸಂಘರ್ಷಕ್ಕೆ ಕಾರಣವಾಗಿದೆ. 'ಕ್ರಾಸಿಂಗ್ ಪಾತ್ಸ್' ಚಿತ್ರವು ಈ ಸಂಘರ್ಷವನ್ನು ಹಾಗೂ ಮಾನವ ಮತ್ತು ಪ್ರಾಣಿಗಳು ಸಹಬಾಳ್ವೆ ನಡೆಸಲು ಕಂಡುಕೊಳ್ಳಬೇಕಾದ ಸುಸ್ಥಿರ ಮಾರ್ಗಗಳ ತುರ್ತು ಅಗತ್ಯವನ್ನು ಪರಿಶೀಲಿಸುತ್ತದೆ.

ಈ ಸಾಕ್ಷ್ಯಚಿತ್ರವು 'ಆ ರೋಚಾ ಇಂಡಿಯಾ' ಸಂಸ್ಥೆಯು 'ಕರ್ನಾಟಕ ಅರಣ್ಯ ಇಲಾಖೆ'ಯ ಸಹಯೋಗದೊಂದಿಗೆ ನಡೆಸುತ್ತಿರುವ 'ಪ್ರಾಜೆಕ್ಟ್ ಇಎಡಿಡಿಎಸ್' (ಆನೆಗಳ ಉಪಟಳ ತಡೆಯುವ ಶ್ವಾನ ದಳ) ಯೋಜನೆಯನ್ನು ಹಿಂಬಾಲಿಸುತ್ತದೆ. ಈ ಯೋಜನೆಯು ಸಂರಕ್ಷಣೆ ಮತ್ತು ಮುನ್ನೆಚ್ಚರಿಕಾ ಕ್ರಮಗಳ ಮೂಲಕ ಮಾನವ-ಆನೆ ಸಂಘರ್ಷವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. 'ಆ ರೋಚಾ ಇಂಡಿಯಾ' ತಂಡದ ಅವಿನಾಶ್ ಕೃಷ್ಣನ್ ಅವರು ಈ ಇಎಡಿಡಿಎಸ್ ಕಾರ್ಯಕ್ರಮವನ್ನು ನಿಭಾಯಿಸುತ್ತಿದ್ದಾರೆ. 'ಗಂಧದ ಗುಡಿ' ಮತ್ತು '777 ಚಾರ್ಲಿ' ಚಿತ್ರಗಳಿಗೆ ಛಾಯಾಗ್ರಹಣ ಮಾಡಿರುವ ಪ್ರತೀಕ್ ಶೆಟ್ಟಿ ಅವರು ಈ ಚಿತ್ರಕ್ಕೂ ಛಾಯಾಗ್ರಹಣ ಮಾಡಿದ್ದಾರೆ.

ಯೋಜನೆಯೊಂದಿಗೆ ಕೈಜೋಡಿಸಿರುವ ಪ್ರಮುಖ ವ್ಯಕ್ತಿಗಳು:

  • ಈಶ್ವರ್ ಬಿ. ಖಂಡ್ರೆ — ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು, ಕರ್ನಾಟಕ ಸರ್ಕಾರ
  • ಪುಷ್ಕರ್ ಕುಮಾರ್ — ಪಿಸಿವಿಎಫ್ (PCCF)
  • ಮನೋಜ್ ರಾಜನ್ — ಯೋಜನಾ ಮುಖ್ಯಸ್ಥರು, ಪ್ರಾಜೆಕ್ಟ್ ಎಲಿಫೆಂಟ್
  • ಸೌರಭ್ ಕುಮಾರ್ — ಉಪ ಅರಣ್ಯ ಸಂರಕ್ಷಣಾಧಿಕಾರಿ (DCF), ಹಾಸನ
  • ಅವಿನಾಶ್ ಕೃಷ್ಣನ್ — ರಾಷ್ಟ್ರೀಯ ನಿರ್ದೇಶಕರು, ಆ ರೋಚಾ ಇಂಡಿಯಾ

ಹವಾಮಾನ ವೈಪರೀತ್ಯ, ಪರಿಸರ ನಾಶ ಮತ್ತು ನಮ್ಮ ಸುತ್ತಲೂ ಹೆಚ್ಚುತ್ತಿರುವ ಹಿಂಸಾಚಾರದ ಈ ಕಾಲಘಟ್ಟದಲ್ಲಿ, 'ಕ್ರಾಸಿಂಗ್ ಪಾತ್ಸ್' ಅತ್ಯಂತ ತುರ್ತಾಗಿ ಗಮನಹರಿಸಬೇಕಾದ ಶಾಂತಿಯುತ ಸಂಘರ್ಷದ ಕಡೆಗೆ ಬೆಳಕು ಚೆಲ್ಲಲು ಹಾಗೂ ಸಹಬಾಳ್ವೆಯ ಸಾಧ್ಯತೆಯನ್ನು ಎತ್ತಿಹಿಡಿಯಲು ಆಶಿಸುತ್ತದೆ.