ಸಣ್ಣ ಬಜೆಟ್ನ 'ಪ್ರೇಮದ ಊರಲಿ' ಸಿನಿಮಾದ ದೊಡ್ಡ ಯಶಸ್ಸು ಸಿನಿಮಾ ರಂಗದಲ್ಲಿ ಹೊಸ ಸಂಚಲನ ಮೂಡಿಸಿದೆ. ಇದರ ಪರಿಣಾಮವಾಗಿ ನಾಗರಬಾವಿಯಲ್ಲಿ ಮನೆ ಬಾಡಿಗೆ ಹೆಚ್ಚಾಗಿದೆ ಎಂಬ ಕುತೂಹಲಕಾರಿ ಚರ್ಚೆ ನಡೆಯುತ್ತಿದೆ. ಹೊಸಬರ ಸಿನಿಮಾಗೆ ಕಥೆಯೇ ಬಂಡವಾಳ ಎಂಬುದನ್ನು ಈ ಚಿತ್ರ ಸಾಬೀತುಪಡಿಸಿದೆ.
ಬೆಂಗಳೂರು(ನ.22): 'ಪ್ರೇಮದ ಊರಲಿ' ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಯಶಸ್ಸು ಕಂಡ ಬಳಿಕ ಬೆಂಗಳೂರಿನ ನಾಗರಬಾವಿ ಸುತ್ತಮುತ್ತ ಮನೆ ಬಾಡಿಗೆ ದರ ವಿಪರೀತವಾಗಿ ಹೆಚ್ಚಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಎಲ್ಲಿಯ ‘ಪ್ರೇಮದ ಊರಲಿ’ ಸಿನಿಮಾದ ಗೆಲುವು, ಎಲ್ಲಿಯ ನಾಗರಬಾವಿಯ ಮನೆ ಬಾಡಿಗೆ? ಇವೆರಡಕ್ಕೂ ಏನು ಸಂಬಂಧ ಎಂದು ಅಚ್ಚರಿ ಪಡಬೇಡಿ. ಗಾಂಧಿನಗರದ ಒಳಮರ್ಮ ಬಲ್ಲವರಿಗೆ ಈ ಬೆಳವಣಿಗೆಯ ಹಿಂದಿನ ಕಥೆ ಅರ್ಥವಾಗುತ್ತದೆ!
ಈಗ ಕಾಲ ಬದಲಾಗಿದೆ. ಗಾಂಧಿನಗರದ ಸಿನಿಮಾ ಮಾಡುವ ವರಸೆಯೂ ಬದಲಾಗುತ್ತಿರುವಂತೆ ಕಾಣುತ್ತಿದೆ. ದೊಡ್ಡ ಸ್ಟಾರ್ಗಳಿಲ್ಲದೆ, ಕೋಟಿ ಕೋಟಿ ರೂಪಾಯಿ ಬಂಡವಾಳ ಸುರಿಯದೆ, ಸಣ್ಣ ಬಜೆಟ್ನಲ್ಲೂ ಸಿನಿಮಾ ಮಾಡಿ ದೊಡ್ಡ ಲಾಭ ಗಳಿಸಬಹುದು ಎಂಬುದಕ್ಕೆ ‘ಪ್ರೇಮದ ಊರಲಿ’ ಸಿನಿಮಾ ಹೊಸ ಉದಾಹರಣೆಯಾಗಿದೆ.
‘ಪ್ರೇಮದ ಊರಲಿ’ ಕಥೆಯ ಸಾರಾಂಶವೇನು?
ಅಂದಹಾಗೆ, ಇಷ್ಟೆಲ್ಲಾ ಸದ್ದು ಮಾಡುತ್ತಿರುವ ‘ಪ್ರೇಮದ ಊರಲಿ’ ಸಿನಿಮಾದ ಕಥೆಯೇನು ಎಂಬ ಕುತೂಹಲ ಸಹಜ. ಇದೊಂದು ಪಕ್ಕಾ ಗ್ರಾಮೀಣ ಸೊಗಡಿನ, ಮುಗ್ಧ ಪ್ರೇಮಕಥೆಯನ್ನು ಹೊಂದಿರುವ ಸಿನಿಮಾ. ಹಳ್ಳಿಯೊಂದರ ಸುಂದರ ಪರಿಸರದಲ್ಲಿ ನಡೆಯುವ ಪ್ರೀತಿ, ಸ್ನೇಹ, ಕುಟುಂಬದ ಮೌಲ್ಯಗಳು ಹಾಗೂ ಭಾವನಾತ್ಮಕ ಸಂಬಂಧಗಳ ಸುತ್ತ ಈ ಕಥೆ ಸಾಗುತ್ತದೆ. ಯಾವುದೇ ಕೃತಕ ಬಿಲ್ಡಪ್ಗಳಿಲ್ಲದೆ, ನೈಜ ಅಭಿನಯ, ಮನಸ್ಸಿಗೆ ಹತ್ತಿರವಾಗುವ ಸಂಭಾಷಣೆ ಹಾಗೂ ಮಧುರವಾದ ಹಾಡುಗಳ ಮೂಲಕ ಈ ಚಿತ್ರ ಪ್ರೇಕ್ಷಕರ ಮನಗೆದ್ದಿದೆ. ಸರಳವಾದ ಕಥೆಯನ್ನು ಅಷ್ಟೇ ಅಚ್ಚುಕಟ್ಟಾಗಿ ತೆರೆಯ ಮೇಲೆ ತಂದಿದ್ದೇ ಈ ಸಿನಿಮಾದ ದೊಡ್ಡ ಪ್ಲಸ್ ಪಾಯಿಂಟ್.
40 ಪಟ್ಟು ಲಾಭ; ಹೊಸಬರಿಗೆ ಸಣ್ಣ ಬಜೆಟ್ ಸಿನಿಮಾ ದೊಡ್ಡ ಕನಸು
ಸಣ್ಣ ಮಟ್ಟದ ಬಜೆಟ್ನಲ್ಲಿ ನಿರ್ಮಾಣವಾದ ‘ಪ್ರೇಮದ ಊರಲಿ’ ಸಿನಿಮಾ, ಹಾಕಿದ ಬಂಡವಾಳಕ್ಕೆ ಬರೋಬ್ಬರಿ 40 ಪಟ್ಟು ಲಾಭ ತಂದುಕೊಟ್ಟಿದೆ ಎನ್ನಲಾಗಿದೆ. ದೊಡ್ಡ ಸ್ಟಾರ್ಗಳಿಲ್ಲದಿದ್ದರೂ, ದೊಡ್ಡ ಬಜೆಟ್ ಇಲ್ಲದಿದ್ದರೂ ಒಳ್ಳೆಯ ಕಥೆ ಇದ್ದರೆ ಸಿನಿಮಾ ಗೆಲ್ಲಬಹುದು ಎಂಬ ಭರವಸೆಯನ್ನು ಈ ಚಿತ್ರದ ಯಶಸ್ಸು ಹಲವರಲ್ಲಿ ಮೂಡಿಸಿದೆ. ಕಥೆ, ಚಿತ್ರಕಥೆಯ ಬ್ಯಾಗು ಹಿಡಿದು ಓಡಾಡುತ್ತಿರುವ ಉತ್ಸಾಹಿಗಳು, ಸಿನಿಮಾ ವ್ಯಾಮೋಹವಿರುವ ಹೊಸ ನಿರ್ಮಾಪಕರನ್ನು ಗುರುತಿಸಿ ಅವರ ಮನವೊಲಿಸುವ ಕೆಲಸದಲ್ಲಿ ತೊಡಗಿದ್ದಾರೆ. “ಸರ್, ಸೇಮ್ ‘ಪ್ರೇಮದ ಊರಲಿ’ ಥರದ್ದೇ ಕಥೆ, ಕಡಿಮೆ ಬಜೆಟ್, ಹಂಡ್ರೆಡ್ ಪರ್ಸೆಂಟ್ ಹಿಟ್ಟು...” ಎಂಬ ಭರವಸೆಯ ಮಾತುಗಳೊಂದಿಗೆ ಹೊಸಬರ ಜೇಬಿಗೆ ಕತ್ತರಿ ಹಾಕಿ ಸಿನಿಮಾ ಆರಂಭಿಸುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಮಾತುಗಳು ಕೇಳಿಬರುತ್ತಿವೆ.
ಗಾಂಧಿನಗರದಿಂದ ನಾಗರಬಾವಿಗೆ ಸಿನಿಮಾ ಟ್ರೆಂಡ್ ಶಿಫ್ಟ್?
ಸದ್ಯ ಗಾಂಧಿನಗರದ ಸಿನಿಮಾ ಚರ್ಚೆಗಳು ನಾಗರಬಾವಿಯತ್ತ ಶಿಫ್ಟ್ ಆದಂತೆ ಕಾಣುತ್ತಿದೆ. ಸಿನಿಮಾ ಮಾಡುವ ಹುಚ್ಚಿನಲ್ಲಿ ನಾಗರಬಾವಿಗೆ ಬಂದು ಇಳಿಯುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ ಎನ್ನಲಾಗಿದ್ದು, ಕಥೆ ಚರ್ಚೆ, ಚಿತ್ರಕಥೆ ಸಿದ್ಧತೆ, ತಾತ್ಕಾಲಿಕ ಕಚೇರಿ ಮತ್ತು ಸಿನಿಮಾ ತಂಡಗಳ ವಾಸ್ತವ್ಯಕ್ಕೆ ನಾಗರಬಾವಿ ಪ್ರಮುಖ ಕೇಂದ್ರವಾಗುತ್ತಿದೆ. ಇದರ ಪರಿಣಾಮವಾಗಿ ನಾಗರಬಾವಿಯ ಸುತ್ತಮುತ್ತ ಮನೆ ಬಾಡಿಗೆ ದರಗಳು ಹೆಚ್ಚಾಗಿವೆ ಎಂಬ ಚರ್ಚೆಯೂ ನಡೆಯುತ್ತಿದೆ. ಸಿನಿಮಾ ಮಾಡುವ ಉದ್ದೇಶದಿಂದ ಅಲ್ಲಿಗೆ ಬಂದು ನೆಲೆಸುವವರ ಸಂಖ್ಯೆ ಹೆಚ್ಚಾದಂತೆ, ಮನೆ ಮಾಲೀಕರು ಬಾಡಿಗೆ ದರವನ್ನು ಮನಸೋಇಚ್ಛೆ ಏರಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಒಟ್ಟಿನಲ್ಲಿ, ‘ಪ್ರೇಮದ ಊರಲಿ’ ಸಿನಿಮಾದ ಯಶಸ್ಸು ಸಿನಿಮಾ ಕನಸುಗಾರರಿಗೆ ಹೊಸ ನಿರ್ಮಾಪಕರನ್ನು ಸೆಳೆಯುವ ಅಸ್ತ್ರವಾಗಿದ್ದರೆ, ನಾಗರಬಾವಿಯ ಮನೆ ಮಾಲೀಕರಿಗೆ ಅದು ಭರ್ಜರಿ ಸುಗ್ಗಿಯಾಗಿ ಪರಿಣಮಿಸಿದೆ ಎಂಬ ವ್ಯಂಗ್ಯದ ಮಾತುಗಳು ಚಿತ್ರರಂಗದ ವಲಯದಲ್ಲಿ ಕೇಳಿಬರುತ್ತಿವೆ.
‘ಪ್ರೇಮದ ಊರಲಿ’ ಯಶಸ್ಸಿನ ಹೆಸರಿನಲ್ಲಿ “ಕಡಿಮೆ ಖರ್ಚಿನಲ್ಲಿ ಕೋಟಿ ಕೋಟಿ ಬಾಚುತ್ತೇವೆ” ಎಂದು ಬಣ್ಣದ ಮಾತುಗಳನ್ನಾಡಿಕೊಂಡು ಯಾರಾದರೂ ಹೊಸ ನಿರ್ಮಾಪಕರ ಬಳಿ ಬಂದರೆ, ಅವರು ಎಚ್ಚರಿಕೆಯಿಂದ ಇರಬೇಕಾಗಿದೆ. ಕೇವಲ ಒಂದು ಸಿನಿಮಾ ಗಳಿಸಿದ ಲಾಭವನ್ನು ಮುಂದಿಟ್ಟುಕೊಂಡು ಅದೇ ಮಾದರಿಯ ಮತ್ತೊಂದು ಸಿನಿಮಾ ಖಚಿತವಾಗಿ ಗೆಲ್ಲುತ್ತದೆ ಎಂದು ನಂಬುವುದು ಅಪಾಯಕಾರಿ.
ಹೊಸಬರನ್ನು ಅನುಮಾನದಿಂದ ನೋಡಬೇಡಿ; ಕಥೆಯ ತಾಕತ್ತು ಪರೀಕ್ಷಿಸಿ
ಇದರರ್ಥ ಸಿನಿಮಾ ಮಾಡುವ ಕನಸು ಹೊತ್ತು ಹೊಸದಾಗಿ ಬರುವವರೆಲ್ಲರೂ ಮೋಸಗಾರರು ಎಂದಲ್ಲ. ಪ್ರತಿಯೊಬ್ಬ ಹೊಸಬರನ್ನೂ ಅನುಮಾನದ ಕನ್ನಡಕ ಹಾಕಿಕೊಂಡು ನೋಡುವುದು ಅಥವಾ ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗುವುದು ಸರಿಯಲ್ಲ. ಆದರೆ ಕಥೆ ಹೇಳಲು ಬರುವವರಲ್ಲಿ ನಿಜಕ್ಕೂ ಸಿನಿಮಾ ಕಟ್ಟುವ ತಾಕತ್ತು ಮತ್ತು ಯೋಗ್ಯತೆ ಇದೆಯೇ ಎಂಬುದನ್ನು ಪರಿಶೀಲಿಸಬೇಕು. ಅವರು ಹೇಳುತ್ತಿರುವ ಕಥೆಯಲ್ಲಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಅಸಲಿ ‘ಸ್ಟಫ್’ ಇದೆಯೇ? ಕಥೆ ಹೊಸತನ ಹೊಂದಿದೆಯೇ? ಅದನ್ನು ಪರಿಣಾಮಕಾರಿಯಾಗಿ ತೆರೆಯ ಮೇಲೆ ತರುವ ಸಾಮರ್ಥ್ಯ ತಂಡಕ್ಕಿದೆಯೇ? ಎಂಬುದನ್ನು ಆಳವಾಗಿ ಯೋಚಿಸಬೇಕು.
ಒಂದು ಸಿನಿಮಾದ ಗೆಲುವು ಆ ಸಿನಿಮಾಕ್ಕೆ ಮಾತ್ರ ಸೀಮಿತವಾದ ಸ್ವತ್ತು. ಅದನ್ನು ಯಾರೂ ನೇರವಾಗಿ ಕಾಪಿ ಮಾಡಲು ಸಾಧ್ಯವಿಲ್ಲ. ಒಬ್ಬರು ಗೆದ್ದರು ಎಂದು ಮತ್ತೊಬ್ಬರು ಅದೇ ಮಾದರಿಯ, ಅದೇ ವಾಸನೆಯ ಕಥೆಯನ್ನು ಎತ್ತಿಕೊಂಡು ಸಿನಿಮಾ ಮಾಡಿದರೆ, ಇಂದಿನ ಪ್ರಬುದ್ಧ ಪ್ರೇಕ್ಷಕರು ಅದನ್ನು ಸ್ವೀಕರಿಸುತ್ತಾರೆ ಎಂಬ ಖಾತರಿ ಇಲ್ಲ. ತೆರೆಯ ಮೇಲೆ ಹೊಸತನ ಮತ್ತು ತಾಜಾತನ ಇದ್ದರೆ ಮಾತ್ರ ಪ್ರೇಕ್ಷಕರು ಸಿನಿಮಾವನ್ನು ಗೆಲ್ಲಿಸುತ್ತಾರೆ.
ಹೀಗಾಗಿ ‘ಪ್ರೇಮದ ಊರಲಿ’ ಯಶಸ್ಸು ಹೊಸಬರಿಗೆ ಪ್ರೇರಣೆಯಾಗಲಿ; ಆದರೆ ಅದನ್ನೇ ನಕಲು ಮಾಡುವ ಫಾರ್ಮುಲಾ ಎಂದು ಭಾವಿಸದಿರಲಿ. ಸಿನಿಮಾ ಗೆಲ್ಲಲು ಕಡಿಮೆ ಬಜೆಟ್ ಒಂದು ಅನುಕೂಲವಾಗಬಹುದು, ಆದರೆ ಗೆಲುವಿನ ನಿಜವಾದ ಬಂಡವಾಳ ಕಥೆ, ಸ್ವಂತಿಕೆ, ಪರಿಶ್ರಮ ಮತ್ತು ಅದನ್ನು ತೆರೆಯ ಮೇಲೆ ಕಟ್ಟಿಕೊಡುವ ತಾಕತ್ತು ಎಂಬುದನ್ನು ಮರೆಯಬಾರದು.
















