ಹೊಸಬರ 'ಪ್ರೇಮದ ಊರಲಿ' ಸಿನಿಮಾ ಯಾವುದೇ ಪ್ರಚಾರವಿಲ್ಲದೆ ಭಾರಿ ಯಶಸ್ಸು ಕಂಡಿದೆ. ಗೋಲ್ಡನ್ ಸ್ಟಾರ್ ಗಣೇಶ್ ಹೊರತುಪಡಿಸಿ ಇತರ ಸ್ಟಾರ್ ನಟರು ಈ ಬಗ್ಗೆ ಮೌನವಹಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ನಟ ರಂಗಾಯಣ ರಘು ಪ್ರತಿಕ್ರಿಯಿಸಿ, ಸ್ಟಾರ್ ನಟರು ಶೂಟಿಂಗ್‌ನಲ್ಲಿ ಬ್ಯುಸಿ ಇರಬಹುದು ಎಂದಿದ್ದಾರೆ.
ಬೆಂಗಳೂರು: ಪ್ರೇಮದ ಊರಲಿ ಸಿನಿಮಾ ಧೂಳೆಬ್ಬಿಸುತ್ತಿದೆ. ಸೆಪ್ಟೆಂಬರ್ 25ರಂದು ಬಿಡುಗಡೆಯಾಗಿರುವ ಈ ಸಿನಿಮಾ ಹವಾ ಈಗಲೂ ನಿಂತಿಲ್ಲ. ಎಲ್ಲಿಯೂ ಹೆಚ್ಚಿನ ಪ್ರಚಾರವಿಲ್ಲದೇ ತಣ್ಣಗೆ ಸದ್ದಿಲ್ಲದೇ ಬಿಡುಗಡೆಯಾಗಿದ್ದ ಪ್ರೇಮದ ಊರಲಿ ಸಿನಿಮಾ, ಜನರ ಬಾಯಿಯಿಂದ ಬಾಯಿಗೆ ಹೋಗಿಯೇ ಈ ಪರಿಯಲ್ಲಿ ಪ್ರಚಾರ ಗಿಟ್ಟಿಸಿಕೊಂಡಿದೆ. ಯುವ ಪೀಳಿಗೆ ಇಂಥ ಸಿನಿಮಾ ನೋಡಲ್ಲ, ಅವರಿಗೆ ಬೇಕಿರೋದು ಹೀರೋ ಕೈಯಲ್ಲಿ ಲಾಂಗು, ಮಚ್ಚು ಹಿಡಿಸುವುದು, ರಕ್ತಪಾತ ಮಾಡಿಸುವುದು, ಒಂದಷ್ಟು ಕೊಲೆ ಮಾಡಿ ವೀಕ್ಷಕರಿಗೆ ಸಿಳ್ಳೆ ಹೊಡೆಸಿಕೊಳ್ಳುವುದು ಎನ್ನುವ ಮಾತಿಗೆ ವ್ಯತಿರಿಕ್ತವಾಗಿ ವಿಭಿನ್ನ ರೀತಿಯಲ್ಲಿ ತೋರಿಸಿರುವ ಪ್ರೇಮದ ಊರಲಿ ಸಿನಿಮಾ ದೊಡ್ಡ ದೊಡ್ಡ ಸೆಲೆಬ್ರಿಟಿಗಳ ವಿಚಾರವನ್ನೇ ತಲೆ ಕೆಳಗು ಮಾಡಿದೆ. ಯಾವ ಸಿನಿಮಾ ಹೇಗೆ ಓಡತ್ತೆ ಎಂದು ಹೇಳುವುದು ಕಷ್ಟವಾದರೂ ಇಂಥ ಸಿನಿಮಾಗಳಿಗೂ ಜನರು ಒಲವು ತೋರುತ್ತಾರೆ ಎನ್ನುವುದಕ್ಕೆ ಈ ಸಿನಿಮಾ ಸಾಕ್ಷಿಯಾಗಿದೆ.
ಯಾವುದೇ ಸ್ಟಾರ್ ನಟ-ನಟಿಯರು ಇಲ್ಲದೇ, ರಂಗಭೂಮಿ ಕಲಾವಿದರು, ಚಿಕ್ಕಪುಟ್ಟ ಪಾತ್ರಗಳಲ್ಲಿ ನಟಿಸಿದವರು ಇದರ ಹೈಲೈಟ್, ನಿರ್ದೇಶಕ ಕೂಡ ಲೈಟ್ಬಾಯ್ ಆಗಿರುವುದು ವಿಶೇಷ. ಇವೆಲ್ಲವುಗಳ ನಡುವೆಯೇ, ಜನರ ಕಣ್ಣು ಹೋಗಿರುವುದು ದೊಡ್ಡ ದೊಡ್ಡವರು ಎನ್ನಿಸಿಕೊಂಡಿರುವ ಸೆಲೆಬ್ರಿಟಿಗಳ ಕಡೆಗೆ. ಸಾಮಾನ್ಯವಾಗಿ ಸಿನಿಮಾ ಬಿಡುಗಡೆಯಾದಾಗ ಸ್ಟಾರ್ ನಟರು ಅದರ ಬಗ್ಗೆ ಮಾತನಾಡುವುದು ಇದೆ. ಆದರೆ, ಪ್ರೇಮದ ಊರಲಿ ಮೂವಿ ಈ ಪರಿಯಲ್ಲಿ ಸದ್ದು ಮಾಡುತ್ತಿದ್ದರೂ, ಗೋಲ್ಡನ್ ಸ್ಟಾರ್ ಗಣೇಶ್ ಬಿಟ್ಟರೆ ಸ್ಟಾರ್ ನಟರು ಈ ಸಿನಿಮಾ ಏಕೆ ನೋಡುತ್ತಿಲ್ಲ, ಒಂದೇ ಒಂದು ಮಾತೂ ಅವರ ಬಾಯಲ್ಲಿ ಏಕೆ ಬರುತ್ತಿಲ್ಲ ಎನ್ನುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.
ಗೋಲ್ಡನ್ ಸ್ಟಾರ್ ಸಪೋರ್ಟ್
ಪ್ರೇಮದ ಊರಲಿ ಸಿನಿಮಾ ಇನ್ನಷ್ಟು ಚೆನ್ನಾಗಿ ಓಡಲಿ ಎನ್ನುವ ಕಾರಣಕ್ಕೆ ಗಣೇಶ್ ಅವರು ತಮ್ಮ ಬೃಂದಾವಿಹಾರಿ ಸಿನಿಮಾದ ಬಿಡುಗಡೆಯನ್ನು ಒಂದು ತಿಂಗಳು ಮುಂದಕ್ಕೆ ಹಾಕಿದ್ದಾರೆ. ಪ್ರೇಮದ ಊರಲಿ ಸಿನಿಮಾ ನೋಡಿ ಅದಕ್ಕೆ ಸಪೋರ್ಟ್ ಮಾಡಿದ್ದಾರೆ. ಹೊಸಬರ ತಂಡಕ್ಕೆ ಶುಭಾಶಯ ಕೋರಿದ್ದಾರೆ. ಅವರನ್ನು ಬಿಟ್ಟರೆ, ದೊಡ್ಡ ದೊಡ್ಡ ಕಲಾವಿದರು ಏಕೆ ಏನೂ ಹೇಳ್ತಿಲ್ಲ ಎನ್ನುವ ಬಗ್ಗೆ ಇದಾಗಲೇ ಜಾಲತಾಣದಲ್ಲಿ ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಣೆಗಳು ಶುರುವಾಗಿದ್ದು, ಇದೇ ಪ್ರಶ್ನೆಯನ್ನು ಈಗ ಪ್ರೇಮದ ಊರಲಿ ಸಿನಿಮಾದ ಹೈಲೈಟ್ ಆಗಿರುವ ರಂಗಾಯಣ ರಘು ಅವರನ್ನು ಪ್ರಶ್ನಿಸಿದಾಗಿದೆ.
ರಂಗಾಯಣ ರಘು ಏನಂದ್ರು?
ಅದಕ್ಕೆ ನಟ ರಂಗಾಯಣ ರಘು ಅವರು ಯಾವುದೇ ವಿವಾದಾತ್ಮಕ ಹೇಳಿಕೆ ನೀಡದೇ, ಬಹುಶಃ ಅವರೆಲ್ಲರೂ ಶೂಟಿಂಗ್‌ನಲ್ಲಿ ಬಿಜಿ ಇರಬಹುದು. ನೋಡುತ್ತಾರೆ ಬಿಡಿ ಎಂದು ಹೇಳಿದರು. ಇದಾಗಲೇ ಡಾಲಿ ಧನಂಜಯ್, ಯೋಗರಾಜ್ ಭಟ್ ಸೇರಿದಂತೆ ಹಲವರು ಕಾಲ್ ಮಾಡಿ ಶುಭಾಶಯ ತಿಳಿಸಿದ್ದಾರೆ. ನಟಿ ಸುಧಾ ನರಸಿಂಹ ರಾಜು ಅವರಂತೂ ಸಿಕ್ಕಾಪಟ್ಟೆ ಖುಷಿ ಪಟ್ಟುಕೊಂಡಿದ್ದಾರೆ. ಯಾರೂ ಕಾಲ್ ಮಾಡಿಲ್ಲ ಎನ್ನೋದು ತಪ್ಪು. ಅನೇಕ ನಟ,ನಟಿಯರು, ನಿರ್ದೇಶಕರೆಲ್ಲಾ ತುಂಬಾ ಸಂತೋಷದಿಂದ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಸ್ಟಾರ್ ನಟರು ಬಹುಶಃ ಬಿಜಿ ಇರಬಹುದು. ಮುಂದಿನ ದಿನಗಳಲ್ಲಿ ನೋಡಬಹುದು ಎಂದು ಹೇಳಿದರು.

