ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಒಂಟಿ ಪೆಂಗ್ವಿನ್ ಕಥೆಯನ್ನು ನಟ ರಕ್ಷಿತ್ ಶೆಟ್ಟಿಯವರ ಬದುಕಿಗೆ ಹೋಲಿಸಲಾಗುತ್ತಿದೆ. ಗುಂಪು ತೊರೆದು ತನ್ನದೇ ದಾರಿ ಹಿಡಿದ ಪೆಂಗ್ವಿನ್‌ನಂತೆ, ರಕ್ಷಿತ್ ಕೂಡ ತಮ್ಮ ವೃತ್ತಿ ಹಾಗೂ ವೈಯಕ್ತಿಕ ಜೀವನದಲ್ಲಿ ವಿಭಿನ್ನ ಹಾದಿ ಹಿಡಿದಿರುವುದೇ ಈ ಹೋಲಿಕೆಗೆ ಕಾರಣವಾಗಿದೆ.
ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಗುಂಪು ಬಿಟ್ಟು ಹಿಮಪರ್ವತದ ಕಡೆಗೆ ಸಾಗೋ ಒಂಟಿ ಪೆಂಗ್ವಿನ್ ಕಹಾನಿ ಸಿಕ್ಕಾಪಟ್ಟೆ ಸದ್ದು ಮಾಡ್ತಾ ಇದೆ. ಅಚ್ಚರಿ ಅಂದ್ರೆ ಕನ್ನಡ ಸಿನಿಪ್ರಿಯರು ಈ ಪೆಂಗ್ವಿನ್ ಜೊತೆ ಒಬ್ಬ ಕನ್ನಡ ಚಿತ್ರನಟನನ್ನ ಹೋಲಿಕೆ ಮಾಡ್ತಾ ಇದ್ದಾರೆ. ಆ ನಟ ಬೇರ್ಯಾರೂ ಅಲ್ಲ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ. ಪೆಂಗ್ವಿನ್ ಮತ್ತು ರಕ್ಷಿತ್ದೂ ಒಂದೇ ಕಥೆನಾ? ಆ ಕುರಿತ ರೋಚಕ ಸ್ಟೋರಿ ಇಲ್ಲಿದೆ ನೋಡಿ.
ಒಂಟಿ ಪೆಂಗ್ವಿನ್ ಜೊತೆ ರಕ್ಷಿತ್ ಶೆಟ್ಟಿ ಹೋಲಿಕೆ..!
ಯೆಸ್ ,ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಒಂದು ಪೆಂಗ್ವಿನ್ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡ್ತಾ ಇದೆ. ಗುಂಪಿನಲ್ಲಿರೋ ಎಲ್ಲಾ ಪೆಂಗ್ವಿನ್ಗಳು ಸಮುದ್ರದ ಕಡೆಗೆ ಹೋದ್ರೆ, ಒಂದು ಪೆಂಗ್ವಿನ್ ಗುಂಪನ್ನ ಬಿಟ್ಟು ಹಿಮಪರ್ವತದ ಕಡೆಗೆ ಸಾಗತೊಡಗುತ್ತೆ. ಸಮುದ್ರಲ್ಲಿ ತಿನ್ನೋದಕ್ಕೆ ಮೀನು ಸಿಕ್ಕುತ್ವೆ. ಆದ್ರೆ ಪರ್ವತದ ಕಡೆಗೆ ಹೋಗುವ ಪೆಂಗ್ವಿನ್ ಒಂಟಿಯಾಗಿ ಸಾಯಬೇಕಾಗುತ್ತೆ. ಆದ್ರೂ ಆ ಪೆಂಗ್ವಿನ್ ಪರ್ವತದ ಕಡೆಗೆ ಹೋಗಿದ್ದೇಕೆ ಅನ್ನೋದು ಈಗ ಚರ್ಚೆ ವಿಷ್ಯ.
ಈ ವಿಡಿಯೋ 2007ರಲ್ಲಿ ಬಿಡುಗಡೆಯಾದ ಎನ್ಕೌಂಟರ್ಸ್ ಅಟ್ ದಿ ಎಂಡ್ ಆಫ್ ದಿ ವರ್ಲ್ಡ್ ಸಾಕ್ಷಚಿತ್ರದ್ದು. ಗುಂಪನ್ನ ತ್ಯಜಿಸಿ ತನ್ನಿಷ್ಟದಂತೆ ಒಬ್ಬಂಟಿಯಾಗಿ ಸಾಗೋ ಪೆಂಗ್ವಿನ್ ಈಗ ಸೋಷಿಯಲ್ ಮಿಡಿಯಾದಲ್ಲಿ ಹೀರೋ ಆಗಿಬಿಟ್ಟಿದೆ. ಅಷ್ಟೇ ಅಲ್ಲ ಈ ಪೆಂಗ್ವಿನ್ನ ಕನ್ನಡ ಸಿನಿರಸಿಕರು ಒಬ್ಬ ಕನ್ನಡ ಸಿನಿಮಾ ಹೀರೋ ಜೊತೆ ಹೋಲಿಸ್ತಾ ಇದ್ದಾರೆ. ಅದು ಬೇರ್ಯಾರೂ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ!
ಪೆಂಗ್ವಿನ್‌ನಂತೆ ರಕ್ಷಿತ್ ಶೆಟ್ಟಿ ಒಬ್ಬಂಟಿ ಪಯಣ!
ಹೌದು ಈ ಪೆಂಗ್ವಿನ್ ಎಲ್ಲರ ಮಾರ್ಗ ತೊರೆದು ಹೊಸ ಜಾಗ ಹುಡುಕಿ ಹೊರಟ ಹೀರೋ ಅಂತ ಫೇಮಸ್ ಆಗಿದೆ. ರಕ್ಷಿತ್ ಕೂಡ ಈ ಪೆಂಗ್ವಿನ್ ರೀತಿನೇ. ಎಲ್ಲಾ ನಾಯಕನಟರದ್ದು ಒಂದು ದಾರಿ ಆದ್ರೆ ರಕ್ಷಿತ್ದೂ ಇನ್ನೊಂದು ದಾರಿ.
ಎಲ್ಲರ ಮಾರ್ಗ ಬಿಟ್ಟು ಹೊಸ ದಾರಿ ಹಿಡಿದ ಹೀರೋ!
ಸಾಮಾನ್ಯನಾಗಿ ಒಂದು ಸಿನಿಮಾ ಯಶಸ್ಸು ಕಂಡ ಮೇಲೆ ಅದರ ಬೆನ್ನಲ್ಲೇ ಬರೋ ಅವಕಾಶಗಳನ್ನ ಬಳಸಿಕೊಂಡು ಎಲ್ಲರೂ ಹಣ, ಹೆಸರು ಸಂಪಾದಿಸೋದಕ್ಕೆ ಮುಂದಾಗ್ತಾರೆ. ಆದ್ರೆ ರಕ್ಷಿತ್ ಇದಕ್ಕೆ ವ್ಯತಿರಿಕ್ತ. ಹಿಂದೆ ಸಿಂಪಲ್ ಆಗೊಂದ್ ಲವ್ ಸ್ಟೋರಿ ಚಿತ್ರ ಹಿಟ್ ಆದಾಗ ಬಂದ ಸಾಲು ಸಾಲು ನಟನೆಯ ಅವಕಾಶಗಳನ್ನ ಬಿಟ್ಟು ನಿರ್ದೇಶನಕ್ಕಿಳಿದಿದ್ರು ರಕ್ಷಿತ್.
ವೃತ್ತಿಜೀವನದ ಉತ್ತುಂಗ, ಚಿತ್ರರಂಗದಿಂದ ಮಾಯ..!
ಹೌದು ರಕ್ಷಿತ್ ತಮ್ಮ ಕರೀಯರ್ ಪೀಕ್ನಲ್ಲಿ ಇದ್ದಾಗಲೇ ಎಲ್ಲಾ ಬಿಟ್ಟು ಮಾಯ ಆಗಿದ್ದಾರೆ. ರಕ್ಷಿತ್ ನಟನೆಯ ಹಿಂದಿನ ಸಿನಿಮಾ ತೆರೆಗೆ ಬಂದಿದ್ದು 2023ರ ನವೆಂಬರ್‌ನಲ್ಲಿ. ಅಲ್ಲಿಂದ ಇಲ್ಲಿ ತನಕ ರಕ್ಷಿತ್ ಯಾವ ಚಿತ್ರವನ್ನೂ ಒಪ್ಪಿಕೊಂಡಿಲ್ಲ. ಸ್ಕ್ರಿಪ್ಟ್ ಬರೀತಿನಿ ಅಂತ ಹೋದವರು ಕಣ್ಮರೆಯಾಗಿಬಿಟ್ಟಿದ್ದಾರೆ.
ರಕ್ಷಿತ್ ಸ್ನೇಹಿತರಾದ ರಿಷಬ್ ಶೆಟ್ಟಿ, ರಾಜ್ ಶೆಟ್ಟಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ಮಾಡ್ತಾ ಇದ್ದಾರೆ. ಆದ್ರೆ ರಕ್ಷಿತ್ ಮಾತ್ರ ಎಲ್ಲದರಿಂದಲೂ ದೂರ ಉಳಿದುಬಿಟ್ಟಿದ್ದಾರೆ. ಕಾಗದ ದೋಣಿಯಲ್ಲಿ ಕೂತು, ಸಿಕ್ಕಿತೇ ಮುಂದಿನ ದಾರಿ ಅಂತ ಹುಡುಕ್ತಾ ಹೊರಟುಬಿಟ್ಟಿದ್ದಾರೆ.
ಫೆಬ್ರವರಿ 26ಕ್ಕೆ ರಶ್ಮಿಕಾ ಕಲ್ಯಾಣ, ರಕ್ಷಿತ್‌ಗ್ಯಾವಾಗ ಕಂಕಣ ಬಲ?
ರಕ್ಷಿತ್ ಶೆಟ್ಟಿ ತಮ್ಮ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಪರಿಚಯಿಸಿದ ನಟಿ ರಶ್ಮಿಕಾ ಜೊತೆ ಪ್ರೀತಿಯಲ್ಲಿ ಬಿದ್ದಿದ್ರು. ಇಬ್ಬರ ನಿಶ್ಚಿತಾರ್ಥ ಕೂಡ ಅದ್ದೂರಿಯಾಗಿ ನೆರವೇರಿತ್ತು. ಆದ್ರೆ ಒಂದೇ ವರ್ಷದಲ್ಲಿ ಇಬ್ಬರೂ ಬೇರೆ ಬೇರೆ ಆದರು. ಸದ್ಯ ರಶ್ಮಿಕಾ, ವಿಜಯ್ ದೇವರಕೊಂಡ ಜೊತೆ ಹಸೆಮಣೆ ಏರ್ತಾ ಇದ್ದಾರೆ. ಮುಂದಿನ ತಿಂಗಳು 26ನೇ ತಾರೀಖು ರಶ್ಮಿಕಾ ಕಲ್ಯಾಣ ನೆರವೇರಲಿದೆ. ಆದ್ರೆ ರಕ್ಷಿತ್ ಮಾತ್ರ ಈಗಲೂ ಒಬ್ಬಂಟಿಯಾಗೇ ಬದುಕ್ತಾ ಇದ್ದಾರೆ. ರಕ್ಷಿತ್‌ಗೆ ಕಂಕಣ ಬಲ ಕೂಡಿ ಬರೋದು ಯಾವಾಗ ಅಂತ ಅವರ ಅಭಿಮಾನಿಗಳು ಜ್ಯೋತಿಷಿಗಳನ್ನ ಕೇಳ್ತಾನೇ ಇರ್ತಾರೆ. ಆದ್ರೆ ಉತ್ತರ ಯಾವ ಜ್ಯೋತಿಷಿಗೂ ಗೊತ್ತಿಲ್ಲ.
ಒಟ್ನಲ್ಲಿ ರಕ್ಷಿತ್ ವೈಯಕ್ತಿಕ ಬದುಕು, ಅವರ ವೃತ್ತಿ ಬದುಕು, ಅವರ ಒಟ್ಟಾರೆ ಬದುಕನ್ನ ನೋಡಿದ್ರೆ ಈ ಪೆಂಗ್ವಿನ್ ಕಥೆಯೇ ನೆನಪಾಗ್ತಾ ಇದೆ. ಅಂತೆಯೇ ಒಂಟಿಯಾಗಿ ಹೊರಟ ಈ ವೈರಲ್ ಪೆಂಗ್ವಿನ್ನ ಎಲ್ಲರೂ ಪೆಂಗ್ವಿನ್ ಶೆಟ್ಟಿ ಅಂತ ಕರೀತಾ ಇದ್ದಾರೆ!
ಅಮೀತ್ ದೇಸಾಯಿ, ಏಷ್ಯಾನೆಟ್ ಸುವರ್ಣ ನ್ಯೂಸ್.


