ಡಾ. ವಿಷ್ಣುವರ್ಧನ್‌ ವೃತ್ತಿಜೀವನದಲ್ಲಿ ಅತೀ ದೊಡ್ಡ ಯಶಸ್ವೀ ಚಿತ್ರಗಳಲ್ಲೊಂದು ಇದು. ಇದೀಗ ಶಿವರಾಜ್‌ ಕುಮಾರ್‌ ಈ ಚಿತ್ರದ ಯಶಸ್ಸಿನ ಪಯಣದಲ್ಲಿ ವಿಷ್ಣುವರ್ಧನ್‌ ಜೊತೆಗೆ ಕರ್ನಾಟಕವನ್ನು ಸುತ್ತಿದ್ದರು ಎಂಬ ವಿಡಿಯೋ ವೈರಲ್‌ ಆಗುತ್ತಿದೆ. ಬಹುತೇಕರು ಇದು ನಮಗೆ ಗೊತ್ತೇ ಇರಲಿಲ್ಲ ಎನ್ನುತ್ತಿದ್ದಾರೆ.

ವಿ‍ಷ್ಣುವರ್ಧನ್ ಜೊತೆಗೆ ಇಡೀ ಕರ್ನಾಟಕ ಸುತ್ತಿದ್ದ ಶಿವರಾಜ್‌ಕುಮಾರ್

ಡಾ.ವಿಷ್ಣುವರ್ಧನ್‌ (Dr Vishnuvardhan) ವೃತ್ತಿಜೀವನದಲ್ಲಿ ಅತೀ ದೊಡ್ಡ ಯಶಸ್ವೀ ಚಿತ್ರಗಳಲ್ಲೊಂದು ಭೂತಯ್ಯನ ಮಗ ಅಯ್ಯು. ನಾಗರಹಾವು ಚಿತ್ರದ ರೆಬಲ್‌ ಹೀರೋ, ಆಂಗ್ರಿ ಯಂಗ್‌ ಮ್ಯಾನ್‌ ವಿಷ್ಣುವರ್ಧನ್‌ ಅವರಲ್ಲಿ ಅದನ್ನು ಮೀರಿದ ಕಲಾವಿದನನ್ನು ಪರಿಚಯಿಸಿದ್ದು ಭೂತಯ್ಯನ ಮಗ ಅಯ್ಯು. ಇದೀಗ ಶಿವರಾಜ್‌ ಕುಮಾರ್‌ (Shivarajkumar) ಅವರು ಚಿತ್ರದ ಯಶಸ್ಸಿನ ಪಯಣದಲ್ಲಿ ವಿಷ್ಣುವರ್ಧನ್‌ ಅವರೊಂದಿಗೆ ಕರ್ನಾಟಕವನ್ನು ಸುತ್ತಿದ್ದರು ಎಂಬ ವಿಡಿಯೋ ವೈರಲ್‌ ಆಗುತ್ತಿದೆ. ಟೀಕೆಗಳನ್ನು ಹೊರತುಪಡಿಸಿ ನೋಡಿದರೆ ಬಹುತೇಕರು ಇದು ನಮಗೆ ಗೊತ್ತೇ ಇರಲಿಲ್ಲ ಎನ್ನುತ್ತಿದ್ದಾರೆ. ವಿಷ್ಣುವರ್ಧನ್‌ ಅವರೊಂದಿಗಿನ ತಮ್ಮ ಬಾಂಧವ್ಯವನ್ನು ಮೆಲುಕು ಹಾಕಿದ್ದಾರೆ ಶಿವಣ್ಣ.

ನಿರ್ದೇಶಕ ಸಿದ್ದಲಿಂಗಯ್ಯ

ಸಿನಿಮಾದ ವಿಶೇಷತೆ ಏನೆಂದರೆ ಚಿತ್ರದ ಕಥೆಯನ್ನು ಓಕೆ ಮಾಡಿದ್ದವರೇ ವರದಪ್ಪ. ಶಿವರಾಜ್‌ ಕುಮಾರ್‌ ಅವರ ಚಿಕ್ಕಪ್ಪ. ಡಾ.ರಾಜ್‌ ಕುಮಾರ್‌ ಅವರ ಪ್ರೀತಿಯ ತಮ್ಮ. ಸಿನಿಮಾಗೆ ವಿಷ್ಣುವರ್ಧನ್‌ ಅವರನ್ನು ಆಯ್ಕೆ ಮಾಡಿದವರಲ್ಲಿ ನಿರ್ದೇಶಕ ಸಿದ್ದಲಿಂಗಯ್ಯನವರ ಜೊತೆ ವರದಪ್ಪನವರೂ ಇದ್ದಾರೆ. ಕನ್ನಡದ ಕಲ್ಟ್‌ ಕ್ಲಾಸಿಕ್‌ ಆಗಿ ಗುರುತಿಸಿಕೊಂಡಿರುವ ಚಿತ್ರಕ್ಕೆ ಮೂವರು ನಿರ್ಮಾಪಕರು. ಎನ್‌ ವೀರಾಸ್ವಾಮಿ (ರವಿಚಂದ್ರನ್‌ ಅವರ ತಂದೆ), ಚಂದೂಲಾಲ್‌ ಜೈನ್‌ ಹಾಗೂ ಎಸ್‌ ಪಿ ವರದಪ್ಪ. ಗೊರೂರು ರಾಮಸ್ವಾಮಿ ಅಯ್ಯಂಗಾರ್‌ ಅವರ ಸಣ್ಣ ಕಥೆ ಆಧರಿಸಿ ಚಿತ್ರವನ್ನು ರೂಪಿಸಲಾಗಿತ್ತು. ಗೊರೂರು ಅವರಿಂದ ಸಿನಿಮಾ ನಿರ್ಮಾಣಕ್ಕೆ ಹಕ್ಕು ತಂದವರೂ ವರದಪ್ಪನವರೇ. ಏಕೆಂದರೆ 12 ಪುಟಗಳ ಕಥೆಯನ್ನು ಎರಡೂವರೆ ಗಂಟೆಯ ಸಿನಿಮಾ ಹೇಗೆ ಮಾಡುತ್ತೀರಿ ಎಂದು ಗೊರೂರು ಅವರು ಗೊಂದಲದಲ್ಲಿದ್ದರಂತೆ. ಆಗ ಅವರನ್ನು ಒಪ್ಪಿಸಿದ್ದವರು ಇದೇ ವರದಪ್ಪ.

ಆಗಿನ ಕಾಲಕ್ಕೆ ಚಿತ್ರಕ್ಕೆ ಹಾಕಿದ್ದ ಬಂಡವಾಳ 12 ಲಕ್ಷ. ಸಿನಿಮಾ ಮಾಡಿದ ಬಿಸಿನೆಸ್‌ 45 ಲಕ್ಷ. ಬಹುತೇಕರಿಗೆ ಗೊತ್ತಿಲ್ಲದ ವಿಷಯ ಏನೆಂದರೆ ವರದಪ್ಪನವರು ನಿರ್ಮಾಪಕರೂ ಆಗಿದ್ದರು. ಡಾ.ರಾಜ್‌ ಸಂಸ್ಥೆಯನ್ನು ಹೊರತುಪಡಿಸಿಯೂ ಸಿನಿಮಾ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದರು. ಹೀಗಾಗಿಯೇ ನಿರ್ಮಾಪಕರ ಅಣ್ಣನ ಮಗನಾಗಿದ್ದ ಶಿವರಾಜ್‌ ಕುಮಾರ್‌, ವಿಷ್ಣುವರ್ಧನ್‌ ಜೊತೆ ರಾಜ್ಯದ ಹಲವೆಡೆ ಸಕ್ಸಸ್‌ ಟೂರ್‌ನಲ್ಲಿಯೂ ಭಾಗವಹಿಸಿದ್ದರು.

ಶಿವಣ್ಣ ಅವರಿಗೆ ಇನ್ನೂ ಹದಿಮೂರೋ ಹದಿನಾಲ್ಕು ವರ್ಷ

ʻಭೂತಯ್ಯನ ಮಗ ಅಯ್ಯುʼ ಸಿನಿಮಾ ಬಂದಾಗ ಶಿವಣ್ಣ ಅವರಿಗೆ ಇನ್ನೂ ಹದಿಮೂರೋ, ಹದಿನಾಲ್ಕು ವರ್ಷವೋ ಇರಬೇಕು. ಆಗಿನ್ನೂ ಅಪ್ಪು ಹುಟ್ಟಿರಲಿಲ್ಲ ಎಂದು ನೆನಪಿಸಿಕೊಂಡಿದ್ದಾರೆ ಶಿವರಾಜ್‌ ಕುಮಾರ್. 1974, ಫೆಬ್ರವರಿ-2 ರಂದು ರಿಲೀಸ್ ಆಗಿ‌ದ್ದ ಸಿನಿಮಾ ಭೂತಯ್ಯನ ಮಗ ಅಯ್ಯು. ವಿಷ್ಣುವರ್ಧನ್‌, ಲೋಕೇಶ್‌, ಎಂಪಿ ಶಂಕರ್‌ ಪ್ರಧಾನ ಪಾತ್ರದಲ್ಲಿದ್ದ ಸಿನಿಮಾ ಸಕ್ಸಸ್‌ ಆದಾಗ, 100 ಡೇಸ್‌ ಕಂಪ್ಲೀಟ್‌ ಮಾಡಿದಾಗ ಶಿವರಾಜ್‌ಕುಮಾರ್ ಅವರು ಈ ಒಂದು ಸಕ್ಸಸ್ ಪಯಣದಲ್ಲಿ ವಿಷ್ಣು ಜೊತೆಗೆ ಓಡಾಡಿದ್ದರು.

ಈ ಸ್ಟೋರಿ ಕಂಟೆಂಟ್‌ 'ಚಿತ್ರಲೋಕ'ದಿಂದ ಆಯ್ದ ಭಾಗವಾಗಿದ್ದು, ಇದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಸೀಕ್ರೆಟ್ ಸ್ಟೋರಿ ಹಲವರ ಪಾಲಿಗೆ ಶಾಕಿಂಗ್ ಮ್ಯಾಟರ್ ಕೂಡ ಆಗಿರಬಹುದು. ಸ್ಯಾಂಡಲ್‌ವುಡ್ ಚಿತ್ರರಂಗದ ಅಂಗಳದಲ್ಲಿ ಇಂತಹ ಅದೆಷ್ಟು ಕಥೆಗಳು ಬೆಳಕಿಗೆ ಬರದೇ, ಬರಲಾಗದೇ ಇವೆಯೋ ಏನೋ..!?