- Home
- Entertainment
- Sandalwood
- ಸರಣಿ ಅಪಘಾತಕ್ಕೆ ಕಾರಣರಾದ ಮಯೂರ್ ಪಟೇಲ್ ಹಿನ್ನೆಲೆ ಏನು? ಅದ್ಯಾಕೆ 'ಮಣಿ' ಹುಡುಗ ಸಿನಿಮಾದಲ್ಲಿ ಮಿಂಚಲೇ ಇಲ್ಲ!
ಸರಣಿ ಅಪಘಾತಕ್ಕೆ ಕಾರಣರಾದ ಮಯೂರ್ ಪಟೇಲ್ ಹಿನ್ನೆಲೆ ಏನು? ಅದ್ಯಾಕೆ 'ಮಣಿ' ಹುಡುಗ ಸಿನಿಮಾದಲ್ಲಿ ಮಿಂಚಲೇ ಇಲ್ಲ!
'ನನಗೆ ಆ ಸಮಯದಲ್ಲಿ ಕಲಿಸುವವರು ಯಾರೂ ಇರಲಿಲ್ಲ. ಎಲ್ಲರೂ ಅಂದುಕೊಳ್ಳುತ್ತಾರೆ- ತಂದೆ ಇದ್ದಾರೆ ಬಿಡು ಅಂತ.. ಆದರೆ ನನ್ನ ತಂದೆ ಏನೂ ಹೇಳಿಕೊಟ್ಟಿಲ್ಲ. ನಿನ್ನಲ್ಲಿ ನಿಜವಾದ ಕಲೆ ಇದ್ರೆ ಭಗವಂತ ನಿನ್ನ ಕೈ ಹಿಡಿಯುತ್ತಾನೆ ಅಂತ ಪ್ರ್ಯಾಕ್ಟಿಕಲ್ ಆಗಿ ಹೇಳುತ್ತಿದ್ದರು ಅಷ್ಟೇ. ನನ್ನಿಂದ ಏನಾಗುತ್ತೋ ಮಾಡಿದೀನಿ..

ಸ್ಯಾಂಡಲ್‌ವುಡ್ ನಟ ಮಯೂರ್ ಪಟೇಲ್ ಮದ್ಯಪಾನ ಮಾಡಿ ಕಾರು ಚಲಾಯಿಸಿ ಬೆಂಗಳೂರಿನ ಓಲ್ಡ್ ಏರ್ಪೋರ್ಟ್ ರಸ್ತೆಯಲ್ಲಿ ಸರಣಿ ಅಪಘಾತಕ್ಕೆ ಕಾರಣಕರ್ತರಾಗಿದ್ದಾರೆ. ಈ ಘಟನೆಯಲ್ಲಿ ನಾಲ್ಕು ವಾಹನಗಳು ಜಖಂಗೊಂಡಿದ್ದು, ಹಲಸೂರು ಸಂಚಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಮೂಲಕ ಸದ್ಯ ಕರ್ನಾಟಕದ ತುಂಬಾ ಸುದ್ದಿಯಲ್ಲಿದ್ದಾರೆ 'ಮಣಿ' ನಟ ಮಯೂರ್ ಪಟೇಲ್.
ಯಾರು ಈ ಮಯೂರ್ ಪಟೇಲ್?
ಕನ್ನಡ ಚಿತ್ರರಂಗದ ನಟ-ನಿರ್ಮಾಪಕ ಮದನ್ ಪಟೇಲ್ ಅವರ ಮಗ ಈ ಮಯೂರ್ ಪಟೇಲ್. 2003ರಲ್ಲಿ ಮಣಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಮಯೂರ್ ಪಟೇಲ್ ಅವರು ಆ ಬಳಿಕ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆ ಸಿನಿಮಾವನ್ನು ಯೋಗರಾಜ್ ಭಟ್ ಅವರು ನಿರ್ದೇಶಿಸಿದ್ದು, ನಾಯಕಿಯಾಗಿ ರಾಧಿಕಾ ಕುಮಾರಸ್ವಾಮಿ ನಟಿಸಿದ್ದರು. ಉಮಾಶ್ರೀ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. 'ಮಣಿ' ಸಿನಿಮಾ ರಿಲೀಸ್ ಸಮಯದಲ್ಲಿ ಏನೆಲ್ಲಾ ಸಮಸ್ಯೆ ಆಯ್ತು ಎಂದು ಮದನ್ ಪಟೇಲ್ ಪುತ್ರ ಮಯೂರ್ ಪಟೇಲ್ ಅಂದೊಮ್ಮೆ ಹಂಚಿಕೊಂಡಿದ್ದರು.
'ಮಣಿ ಸಿನಿಮಾ ರಿಲೀಸ್ ಸಮಯದಲ್ಲಿ ತುಂಬಾ ಕಷ್ಟವಾಯ್ತು. ಆಗ ಟೀ-ಜಂಕ್ಷನ್‌ನಲ್ಲಿ ಹೋರ್ಡಿಂಗ್ ಹಾಕಿಸುವುದು ಅಂದ್ರೆ ದೊಡ್ಡ ಸಿನಿಮಾ ರೀತಿ. ಒಂದು ವಾರಕ್ಕೆ 20 ಸಾವರಿ ಹಣ ಕೊಡಬೇಕಿತ್ತು. ಒಂದು ತಿಂಗಳು ಅಲ್ಲಿ ಹೋರ್ಡಿಂಗ್ ಮಾಡಿಸಬೇಕು ಅಂದ್ರೆ 1 ಲಕ್ಷ ಬೇಕು.
ಪೋಸ್ಟರ್ ಹಾಕ್ಸಿ ಅಂತ ಹೇಳುವುದು ತುಂಬಾನೇ ಸುಲಭ. ನನ್ನ ಮೊದಲ ಸಿನಿಮಾ ಅಲ್ಲಿ ಹೋರ್ಡಿಂಗ್ ಹಾಕಿಸಬೇಕು ಯಾರನ್ನ ಕೇಳಬೇಕು ಹೇಗೆ ಮಾಡಬೇಕು ಅಂತೆಲ್ಲಾ ಗೊತ್ತೇ ಇರ್ಲಿಲ್ಲ' ಎಂದಿದ್ದರು.
'ನನಗೆ ಆ ಸಮಯದಲ್ಲಿ ಕಲಿಸುವವರು ಯಾರೂ ಇರಲಿಲ್ಲ. ಎಲ್ಲರೂ ಅಂದುಕೊಳ್ಳುತ್ತಾರೆ- ತಂದೆ ಇದ್ದಾರೆ ಬಿಡು ಅಂತ.. ಆದರೆ ನನ್ನ ತಂದೆ ಏನೂ ಹೇಳಿಕೊಟ್ಟಿಲ್ಲ. ನಿನ್ನಲ್ಲಿ ನಿಜವಾದ ಕಲೆ ಇದ್ರೆ ಭಗವಂತ ನಿನ್ನ ಕೈ ಹಿಡಿಯುತ್ತಾನೆ ಅಂತ ಪ್ರ್ಯಾಕ್ಟಿಕಲ್ ಆಗಿ ಹೇಳುತ್ತಿದ್ದರು ಅಷ್ಟೇ. ನನ್ನಿಂದ ಏನಾಗುತ್ತೋ ಮಾಡಿದೀನಿ, ಅದೃಷ್ಟದಲ್ಲಿ ಬರೆದಿದ್ದು ಸಿಕ್ಕಿದೆ ಎಂದುಕೊಳ್ಳುತ್ತೇನೆ ಎಂದು ನೋವಿನಿಂದ ನುಡಿದಿದ್ದರು.
2000 ಇಸವಿಯಲ್ಲಿ 'ಆಂಧ್ರ ಹೆಂಡ್ತಿ' ಚಿತ್ರದಲ್ಲಿ ಸಣ್ಣ ಪಾತ್ರದ ಮೂಲಕ ಚಿತ್ರರಂಗಕ್ಕೆ ಬಂದ ನಟ-ನಿರ್ಮಾಪಕ ಮದನ್ ಪಟೇಲ್ ಮಗ ಮಯೂರ್ ಪಟೇಲ್ ಅವರು, 2003ರಲ್ಲಿ 'ಮಣಿ' ಚಿತ್ರದ ಮೂಲಕ ನಾಯಕರಾದರು. ಅಲ್ಲಿಂದ ಮುಂದೆ- ಕುಮ್ಮಿ, ಓಕೆ ಸರ್ ಓಕೆ, ಉಡೀಸ್, ಗುನ್ನ, ಲವ್ ಸ್ಟೋರಿ, ಹೆತ್ತವರ ಕನಸು, ಸ್ಟೂಡೆಂಟ್, ನಿನದೇ ನೆನಪು, ಮುನಿಯಾ, ಹುಂಜ, ಯಾರಿವನು, ಸ್ಲಂ, ರಾಜೀವ ಹೀಗೆ ಸಾಲುಸಾಲು ಸಿನಿಮಾದಲ್ಲಿ ಮಯೂರ್ ಪಟೇಲ್ ನಟಿಸಿದರೂ ಯಾವುದೇ ಸಿನಿಮಾ ಅವರನ್ನು ಭಾರೀ ಸಕ್ಸಸ್ ಕಡೆಗೆ ನಡೆಸಲೇ ಇಲ್ಲ. 2024ರಲ್ಲಿ ತಂದೆ ಮದನ್ ಪಟೇಲ್ ನಟನೆಯಲ್ಲಿ 'ತಮಟೆ' ಚಿತ್ರವನ್ನು ನಿರ್ದೇಶಿಸಿ ಆ ಮೂಲಕ ನಟ ಜೊತೆಗೆ ನಿರ್ದೇಶಕನ ಪಟ್ಟವನ್ನೂ ತಮ್ಮದಾಗಿಸಿಕೊಂಡಿದ್ದಾರೆ ಮಯೂರ್ ಪಟೇಲ್.
ನಿನ್ನೆಯ ಅಪಘಾತದ ಬಳಿಕ ಮಯೂರ್ ಪಟೇಲ್ ಈಗ ಆರೋಪಿ ಸ್ಥಾನದಲ್ಲಿ ನಿಂತಿದ್ದಾರೆ. ಆರೋಪ ಸಾಬೀತಾಗಿ ಅಪರಾಧಿಯ ಸ್ಥಾನದಲ್ಲಿ ನಿಲ್ಲಬೇಕಾದ ಅನಿವಾರ್ಯತೆ ಸದ್ಯ ಅವರಿಗೆ ಬಂದಿದೆ ಎನ್ನಲಾಗುತ್ತಿದೆ. 'ಕಾಲಾಯ ತಸ್ಮೈ ನಮಃ' ಎನ್ನದೇ ಬೇರೆ ದಾರಿಯಲ್ಲ!
ಸಿಲಿಕಾನ್ ಸಿಟಿಯ ಓಲ್ಡ್ ಏರ್ಪೋರ್ಟ್ ರಸ್ತೆಯ ಕಮಾಂಡೋ ಆಸ್ಪತ್ರೆ ಸಿಗ್ನಲ್ ಬಳಿ ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ (28 ಜನವರಿ 2026) ಭೀಕರ ಸರಣಿ ಅಪಘಾತ ಸಂಭವಿಸಿದೆ. ಸ್ಯಾಂಡಲ್‌ವುಡ್ ನಟ ಮಯೂರ್ ಪಟೇಲ್ ತಮ್ಮ ಪಾರ್ಚೂನರ್ ಕಾರನ್ನು ಅತಿ ವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿ, ಸಿಗ್ನಲ್‌ನಲ್ಲಿ ನಿಂತಿದ್ದ ಕಾರುಗಳಿಗೆ ಹಿಂಬದಿಯಿಂದ ಜೋರಾಗಿ ಡಿಕ್ಕಿ ಹೊಡೆದಿದ್ದಾರೆ. ಅಪಘಾತದ ತೀವ್ರತೆಗೆ ಸಾಲಾಗಿ ನಿಂತಿದ್ದ ಎರಡು ಸ್ವಿಫ್ಟ್ ಡಿಜೈರ್ ಹಾಗೂ ಒಂದು ಸರ್ಕಾರಿ ಕಾರು ಸೇರಿದಂತೆ ಒಟ್ಟು ನಾಲ್ಕು ವಾಹನಗಳು ಜಖಂಗೊಂಡಿವೆ.
ನಟ ಮಯೂರ್ ಪಟೇಲ್ 'ಡ್ರಿಂಕ್ & ಡ್ರೈವ್' ಸಾಬೀತು
ಘಟನಾ ಸ್ಥಳಕ್ಕೆ ಧಾವಿಸಿದ ಹಲಸೂರು ಸಂಚಾರ ಪೊಲೀಸರು ನಟ ಮಯೂರ್ ಪಟೇಲ್ ಅವರನ್ನು ವಶಕ್ಕೆ ಪಡೆದು 'ಡ್ರಿಂಕ್ ಆಂಡ್ ಡ್ರೈವ್' (DD) ತಪಾಸಣೆ ನಡೆಸಿದಾಗ ನಟ ಮದ್ಯಪಾನ ಮಾಡಿರುವುದು ದೃಢಪಟ್ಟಿದೆ. ಸದ್ಯ ಪೊಲೀಸರು ಪಾರ್ಚೂನರ್ ಕಾರನ್ನು ಸೀಜ್ ಮಾಡಿದ್ದು, ಹಲಸೂರು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಪೊಲೀಸ್ ಠಾಣೆ ಮುಂದೆ ಬಡ ಚಾಲಕನ ಕಣ್ಣೀರು
ಈ ಅಪಘಾತದಿಂದಾಗಿ ಜಖಂ ಆಗಿರುವ ಕಾರಿನ ಮಾಲೀಕರಲ್ಲೊಬ್ಬರಾದ ಕಾರ್ ಮಾಲೀಕ ಕಂ ಚಾಲಕ ಶ್ರೀನಿವಾಸ್ ಎಂಬುವರಿಗೆ ಇದರಿಂದ ಭಾರೀ ನಷ್ಟ ಉಂಟಾಗಿದೆ. ಪೊಲೀಸ್ ಸ್ಟೇಷನ್ ಮುಂದೆಯೇ ಕಣ್ಣೀರಿಟ್ಟ ಶ್ರೀನಿವಾಸ್, 'ನನ್ನ ಹೆಂಡತಿಯ ಒಡವೆ ಅಡವಿಟ್ಟು ಒಂದು ವಾರದ ಹಿಂದಷ್ಟೇ ಈ ಹೊಸ ಕಾರು ಖರೀದಿಸಿದ್ದೆ. ಕಂಪನಿಯೊಂದಕ್ಕೆ ಬಾಡಿಗೆಗೆ ಓಡಿಸುತ್ತಾ ಜೀವನ ಸಾಗಿಸುತ್ತಿದ್ದೆ. ಫೆಬ್ರವರಿ 5ಕ್ಕೆ ಮೊದಲ ಇಎಂಐ (EMI) ಕಟ್ಟಬೇಕಿದೆ. ಈಗ ಕಾರು ಜಖಂಗೊಂಡು ನಿಂತು ಹೋದರೆ ನಾನು ಸಾಲ ತೀರಿಸುವುದು ಹೇಗೆ?' ಎಂದು ಅಳಲು ತೋಡಿಕೊಂಡಿದ್ದಾರೆ.
'ನಾನು ಸಿನಿಮಾ ನಟ' ಎಂದು ಸೊಕ್ಕು ಪ್ರದರ್ಶನ?
ಅಪಘಾತದ ಬಳಿಕ ಕಾರಿನಿಂದ ಇಳಿದ ನಟ ಮಯೂರ್ ಪಟೇಲ್, 'ನಾನು ಸಿನಿಮಾ ನಟ ಮಯೂರ್ ಪಟೇಲ್, ಬೆಳಿಗ್ಗೆ ಎಲ್ಲ ಸರಿ ಮಾಡಿಕೊಡ್ತೀನಿ' ಎಂದು ಹೇಳಿದ್ದಾರಂತೆ. ಆದರೆ ಆ ಚಾಲಕ, 'ಇಲ್ಲ, ಅದೇನ್ ಸೆಟ್ಲ್ಮೆಂಟ್ ಮಾಡ್ತೀರೋ ಈಗಲೇ ಮಾಡ್ಲಿ; ಅಂತ ಪಟ್ಟು ಹಿಡಿದಿದ್ದಾರೆ. ಅದೇ ವೇಳೆಗೆ ಪೊಲೀಸರು ಸ್ಥಳಕ್ಕೆ ಬಂದು ನಟನನ್ನು ಕರೆದೊಯ್ದಿದ್ದಾರೆ. 'ಸಿಗ್ನಲ್‌ನಲ್ಲಿ ನಾವು ಸುಮ್ಮನೆ ನಿಂತಿದ್ದೆವು, ಕುಡಿದ ಅಮಲಿನಲ್ಲಿ ಹಿಂದಿನಿಂದ ಬಂದು ಡಿಕ್ಕಿ ಹೊಡೆದಿದ್ದಾರೆ' ಎಂದು ಶ್ರೀನಿವಾಸ್ ದೂರಿನಲ್ಲಿ ದಾಖಲಿಸಿದ್ದಾರೆ ಎನ್ನಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

