Asianet Suvarna News Asianet Suvarna News

ವಾಣಿ ಜಯರಾಂ ಹಾಡಿದ ಹಾಡು ಕನ್ನಡಿಗರು ಮರೆಯಲು ಸಾಧ್ಯವೇ..!

ಮೂಲತಃ ತಮಿಳುನಾಡಿನ ಸಂಗೀತ ಕುಟುಂಬದಿಂದ ಬಂದ ವಾಣಿ ಜಯರಾಂ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಬಾಲ್ಯದಿಂದಲೇ ಬಲ್ಲವರು. ಕೊಂಚ ನಾಸಿಕ ಪ್ರಧಾನವಾದ ಅವರ ದನಿಯಲ್ಲಿ ಅದೇನೋ ಒಂದು ವಿಶೇಷತೆ ಮನೆ ಮಾಡಿತ್ತು. ಅತ್ಯಂತ ಸರಾಗವಾಗಿ ತಾರಕಸ್ಥಾಯಿಯನ್ನು ತಲುಪುತ್ತಿದ್ದ ಅವರ ದನಿಗೆ ಒಂದು ಅಪರೂಪದ ಶಕ್ತಿ ಇತ್ತು. 

Vinay Shivamogga Shares Vani Jayaram's Sung Kannada Songs grg
Author
First Published Feb 4, 2023, 9:56 PM IST

ವಿನಯ್ ಶಿವಮೊಗ್ಗ

ಶಿವಮೊಗ್ಗ(ಫೆ.04): ಅದು ಡಾ. ರಾಜ್ ಅಭಿನಯದ “ಹೊಸಬೆಳಕು” ಚಿತ್ರ. ರಾಷ್ಟ್ರಕವಿ ಕುವೆಂಪು ರಚನೆಯ ಗೀತೆಯೊಂದಕ್ಕೆ M. ರಂಗರಾವ್ ಸಂಗೀತ ಸಂಯೋಜಿಸಿದ್ದರು. ಇಬ್ಬರು ನಾಯಕಿಯರು ಈ ಹಾಡಿಗೆ ಧ್ವನಿಯಾದವರು S ಜಾನಕಿ ಹಾಗೂ ವಾಣಿ ಜಯರಾಂ. ಅದೆಂಥಾ ರಚನೆ, ಸಂಯೋಜನೆ ಹಾಗೂ ಗಾಯನ !! ಇವತ್ತಿಗೂ “ತೆರೆದಿದೆ ಮನೆ ಓ ಬಾ ಅತಿಥಿ” ಹಾಡು ಕೇಳಿದಾಗ ಅದೇನೋ ಹೇಳಲಾಗದ ಎದೆ ತುಂಬಿ ಬರುವ ನವಿರಾದ ಭಾವನೆ. ಕವಿಯ ಆಶಯಕ್ಕೆ ಒಂದಿನಿತೂ ಕುಂದು ಬರದಂತೆ ಹಾಡಿದ್ದು ಕನ್ನಡದವರಲ್ಲ. ಆದರೆ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಚಲನಚಿತ್ರಗಳ ನಾಯಕಿಯರಿಗೆ ಜೀವ ತುಂಬಿದ ಜಾನಕಿ ಹಾಗೂ ವಾಣಿ ಜಯರಾಂ. ಕನ್ನಡದ ಇನ್ನೊಂದು ಚಿತ್ರ ವಿಜಯ ವಾಣಿಯಲ್ಲಿ ಕೂಡ ವಿರಹದ ಭಾವದಲ್ಲಿರುವ ನಾಯಕಿಯ ಅಂತರಂಗ ಬಣ್ಣಿಸುವ ಗೀತೆ “ಮಧುಮಾಸ ಚಂದ್ರಮ” ಕೂಡ ಇದೇ ರೀತಿಯ ಜನಪ್ರಿಯತೆ ಪಡೆದಿತ್ತು.

ಮೂಲತಃ ತಮಿಳುನಾಡಿನ ಸಂಗೀತ ಕುಟುಂಬದಿಂದ ಬಂದ ವಾಣಿ ಜಯರಾಂ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಬಾಲ್ಯದಿಂದಲೇ ಬಲ್ಲವರು. ಕೊಂಚ ನಾಸಿಕ ಪ್ರಧಾನವಾದ ಅವರ ದನಿಯಲ್ಲಿ ಅದೇನೋ ಒಂದು ವಿಶೇಷತೆ ಮನೆ ಮಾಡಿತ್ತು. ಅತ್ಯಂತ ಸರಾಗವಾಗಿ ತಾರಕಸ್ಥಾಯಿಯನ್ನು ತಲುಪುತ್ತಿದ್ದ ಅವರ ದನಿಗೆ ಒಂದು ಅಪರೂಪದ ಶಕ್ತಿ ಇತ್ತು. 

ಕೇಳಲೇ ಬೇಕು ವಾಣಿ ಜಯರಾಂ ಹಾಡಿರುವ ಈ 8 ಕನ್ನಡ ಹಾಡುಗಳು

ನಿನ್ನೆ ತಾನೆ ನಮ್ಮನ್ನಗಲಿದ ತೆಲುಗು ಚಲನಚಿತ್ರ ನಿರ್ದೇಶಕರಾದ K ವಿಶ್ವನಾಥ್ ಅವರ ಮಹೋನ್ನತ ಚಿತ್ರಗಳಾದ ಶಂಕರಾಭರಣಂ, ಸಾಗರ ಸಂಗಮಂ ಹಾಡುಗಳ ಮೂಲಕ ವಾಣಿ ಜಯರಾಂ ಅವರ  ಸಂಗೀತದ ಪ್ರಖಾಂಡ ಪಾಂಡಿತ್ಯ ರಸಿಕರಿಗೆ ಪರಿಚಯವಾಯಿತು. 

ಶಂಕರಾಭರಣಂ ಹಾಗೂ ಸ್ವಾತಿಕಿರಣಂ ಚಿತ್ರಗಳಿಗಾಗಿ ಉತ್ತಮ ಹಿನ್ನೆಲೆ ಗಾಯಕಿ ರಾಷ್ಟ್ರಪ್ರಶಸ್ತಿ ಬಂದಿರುವುದನ್ನು ಇಲ್ಲಿ ಸ್ಮರಿಸಲೇಬೇಕು. ಕನ್ನಡದಲ್ಲಿ ಸರಿ ಸುಮಾರು 600 ಗೀತೆಗಳಿಗೆ ಧ್ವನಿಯಾಗಿರುವ ವಾಣಿ ಜಯರಾಂ ಚಿತ್ರ ಬ್ರಹ್ಮ ಪುಟ್ಟಣ್ಣ ಕಣಗಾಲ್ ಚಿತ್ರಗಳಲ್ಲಿ ಅನೇಕ ಹಾಡುಗಳನ್ನು ಸುಂದರವಾಗಿ ಹಾಡಿದ್ದಾರೆ. 

ಕನ್ನಡದ ಮೇರು ಕಲಾವಿದ ಡಾ. ರಾಜ್ ಕುಮಾರ್ ಅವರೊಡನೆ ಇವರು ಹಾಡಿದ ಅನೇಕ ಯುಗಳಗೀತೆಗಳು  ಇವತ್ತಿಗೂ ಕನ್ನಡ ಚಿತ್ರರಸಿಕರ ನಾಲಿಗೆಯಲ್ಲಿ ನಲಿಯುತ್ತಿರುವುದು ಅವರ ಜನಪ್ರಿಯತೆಗೆ ಸಾಕ್ಷಿ. ಎರಡು ಕನಸು, ಕವಿರತ್ನ ಕಾಳಿದಾಸ, ಶ್ರಾವಣ ಬಂತು, ಶಂಕರ್ ಗುರು ಇನ್ನೂ ಹತ್ತು ಹಲವು ಚಿತ್ರಗಳಲ್ಲಿ ಅವರು ಹಾಡಿದ ಹಾಡುಗಳನ್ನು ಮರೆಯಲು ಸಾಧ್ಯವೇ?!  

ವಸಂತ ದೇಸಾಯಿ ಎಂಬ ಪ್ರಬುದ್ಧ ಸಂಗೀತ ನಿರ್ದೇಶಕನ ಸಂಯೋಜನೆಯಲ್ಲಿ ಮೂಡಿಬಂದ ಗುಡ್ಡಿ ಚಿತ್ರದ ಗೀತೆ “ಬೋಲರೇ ಪಪ್ಪಿಹರಾ” ಮೂಲಕ ವಾಣಿ ಜಯರಾಂ ಭಾರತದಾದ್ಯಂತ ಚಿರಪರಿಚಿರಾದರು. ಸಿತಾರ್ ಮಾಂತ್ರಿಕ ಪಂಡಿತ್ ರವಿಶಂಕರ್ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ “ಮೀರಾ” ಹಿಂದಿ ಚಲನಚಿತ್ರದಲ್ಲಿ ವಾಣಿ ಜಯರಾಂ  ಅವರು ಹಾಡಿದ ಪರಿಯನ್ನು ಮರೆಯಲು ಸಾಧ್ಯವೇ ಇಲ್ಲ!  

ಮೊನ್ನೆ ತಾನೆ ಪದ್ಮಭೂಷಣ ಪ್ರಶಸ್ತಿ ಅವರಿಗೆ ಒಲಿದಿತ್ತು. ತಡವಾಗಿಯಾದರೂ ಅವರಿಗೆ ಈ ಗೌರವ ದೊರಕಿದ್ದು ಅವರ ಅಭಿಮಾನಿಯಾದ ನನಗೆ ಸಂತೋಷ ತಂದಿತ್ತು. ಆದರೆ, ಈಗ ಬಂದ ಸುದ್ದಿ ಮಾತ್ರ ನಿಜಕ್ಕೂ ಅಕಾಲಿಕ, ಅಘಾತಕಾರಿಯಾಗಿದೆ. 

ಗಾಯಕಿ ವಾಣಿ ಜಯರಾಂ ನಿಧನಕ್ಕೆ ಆಘಾತ, ಸಿಎಂ ಬೊಮ್ಮಾಯಿ, ಜಗನ್ ಸೇರಿ ಗಣ್ಯರ ಸಂತಾಪ!

ದೇವಲೇಕದಲ್ಲಿ ಗಂಧರ್ವರ ಸಂಖ್ಯೆ ಗಣನೀಯವಾಗಿ ಕುಸಿತ ಕಂಡಿರಬಹುದು ಈ ನಿಟ್ಚಿನಲ್ಲಿ ನಡೆದ ತುರ್ತು ಸಭೆಗಾಗಿ ಕಳೆದ ವರ್ಷ ಭಾರತರತ್ನ ಲತಾ ಮಂಗೇಷ್ಕರ್, ಹಾಗು ಸರಸ್ವತಿ ಪುತ್ರ ಬಾಲ ಸುಬ್ರಮಣ್ಯಂ ಅವರನ್ನು ಕರೆಸಿಕೊಳ್ಳಲಾಯ್ತು. ಈಗ ಮುಂದುವರೆದು ಸ್ವರ್ಗದ ಗಂಧರ್ವ ಸಭೆಗೆ  ನೆನ್ನೆ  K ವಿಶ್ವನಾಥ್ ಅವರನ್ನು ಇವತ್ತು  ಕೋಗಿಲೆ ದನಿಯ ವಾಣಿ ಜಯರಾಂ ಅವರನ್ನು ಕರೆಸಿಕೊಳ್ಳಲಾಗಿದೆ ಏನೋ ?!  ಇಂಪಿನ ಜೀವಗಳು ಈ ಕರ್ಕಶ ಪ್ರಪಂಚದಿಂದ  ಈ ರೀತಿ ಹೇಳದೇ ಕೇಳದೇ ಖಾಲಿಯಾದರೇ ಹೇಗೆ ?! 

ಭಾವವೆಂಬ ಹೂವು ಅರಳಿ 
ಗಾನವೆಂಬ ಗಂಧ ಚೆಲ್ಲಿ
ರಾಗವೆಂಬ ಜೇನ ಹೊನಲು 
ತುಂಬಿ ಹರಿಯಲಿ
ಜಗವ ಕುಣಿಸಿ ತಣಿಸಲಿ
ಗಾನಕೆ ನಲಿಯದ ಮನಸೇ ಇಲ್ಲ
ಗಾನಕೆ ಮಣಿಯದ ಜೀವವೆ ಇಲ್ಲ
ಗಾನಕೆ ಒಲಿಯದ ದೇವರೆ ಇಲ್ಲ
ಗಾನವೆ ತುಂಬಿದೆ ಈ ಜಗವೆಲ್ಲಾ
ವಾಣಿ ಜಯರಾಂ ಹಾಡಿದ ಈ ಹಾಡನ್ನು ಮನಸ್ಸು ಗುನುಗುನಿಸುತ್ತಿದೆ. 
#ವಾಣಿ_ಜಯರಾಂ #ಸದ್ಗತಿ 

ವಿನಯ್ ಶಿವಮೊಗ್ಗ

Follow Us:
Download App:
  • android
  • ios