ಗಾಯಕಿ ವಾಣಿ ಜಯರಾಂ ನಿಧನಕ್ಕೆ ಆಘಾತ, ಸಿಎಂ ಬೊಮ್ಮಾಯಿ, ಜಗನ್ ಸೇರಿ ಗಣ್ಯರ ಸಂತಾಪ!
600ಕ್ಕೂ ಹೆಚ್ಚು ಕನ್ನಡ ಹಾಡಿನ ಮೂಲಕ ಕರ್ನಾಟಕದ ಮನೆ ಮಾತಾಗಿರುವ ಗಾಯಕಿ ವಾಣಿ ಜಯರಾಂ ನಿಧನಕ್ಕೆ ಸಿನಿ ಕ್ಷೇತ್ರದ ದಿಗ್ಗಜರು, ಸಿಎಂ ಬಸವರಾಜ್ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಬೆಂಗಳೂರು(ಫೆ.04): ಹತ್ತು ಸಾವಿರಕ್ಕೂ ಹೆಚ್ಚು ಹಾಡುಗಳ ಮೂಲಕ ಭಾರತೀಯರ ಮನಗೆದ್ದಿರುವ ದಕ್ಷಿಣ ಭಾರತದ ಖ್ಯಾತ ಗಾಯಕಿ ವಾಣಿ ಜಯರಾಂ ನಿಧನ ಆಘಾತ ತಂದಿದೆ. ತಮ್ಮ ಮನೆಯಲ್ಲೇ ವಾಣಿ ಜಯರಾಂ ಮೃತಪಟ್ಟಿದ್ದಾರೆ. ತಲೆಗೆ ತೀವ್ರಗಾಯಗೊಂಡು ವಾಣಿ ಜಯರಾಂ ಮೃತಪಟ್ಟಿರುವ ಸಾಧ್ಯತೆ ಡಟ್ಟವಾಗಿದೆ. ನಿಗೂಢ ಸಾವಿಗೆ ಚಿತ್ರರಂಗದ ಗಣ್ಯರು ಸೇರಿದಂತೆ ಹಲವು ದಿಗ್ಗಜರು ಸಂತಾಪ ಸೂಚಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ. ಕನ್ನಡ ಸೇರಿದಂತೆ ಇತರ 19 ಭಾಷೆಗಳಲ್ಲಿ ತಮ್ಮ ಗಾನಸುಧೆಯನ್ನು ಹರಿಸಿದ್ದ ಖ್ಯಾತ ಹಿನ್ನೆಲೆ ಗಾಯಕಿ ವಾಣಿ ಜಯರಾಂ ಅವರು ಇಂದು ನಮ್ಮನ್ನು ಅಗಲಿದ ಸುದ್ದಿ ತಿಳಿದು ಅತ್ಯಂತ ದುಃಖವಾಯಿತು. ಸಾಹಿತ್ಯಕ್ಕೆ ಭಾವ ತುಂಬಿ ಅವರು ಅನೇಕ ಅದ್ಭುತ ಗೀತೆಗಳನ್ನು ಹಾಡಿದ್ದಾರೆ. ಅವರ ಆತ್ಮಕ್ಕೆ ಸದ್ಗತಿ ಕೋರುತ್ತೇನೆ. ಓಂ ಶಾಂತಿಃ ಎಂದು ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.
ಆರೋಗ್ಯ ಸಚಿವ ಕೆ ಸುಧಾಕರ್, ಗಾಯಕಿ ನಿಧನಕ್ಕೆ ಆಘಾತ ವ್ಯಕ್ತಪಡಿಸಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ಗಾಯಕಿಗೆ ಇತ್ತೀಚೆಗೆ ಪದ್ಮಭೂಷಣ ಪ್ರಶಸ್ತಿ ಕೂಡ ಘೋಷಣೆಯಾಗಿದೆ. ತಮ್ಮ ಅದ್ಭುತ ಗಾಯನದ ಮೂಲಕ ಜಮಾನಸದಲ್ಲಿ ಅಮರರಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ದಕ್ಷಿಣ ಭಾರತದ ಖ್ಯಾತ ಗಾಯಕಿ ವಾಣಿ ಜಯರಾಂ ನಿಗೂಢ ಸಾವು
ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಗಾಯಕಿ ನಿಧನಕ್ಕೆ ಆಘಾತ ವ್ಯಕ್ತಪಡಿಸಿದ್ದಾರೆ. ಅಪರೂಪದ ಹಾಗೂ ಕ್ಲಾಸಿಕಲ್ ಮ್ಯೂಸಿಕ್ ದಿಗ್ಗಜ ಗಾಯಕಿ ನಿಧನ ತೀವ್ರ ದುಃಖ ತಂದಿದೆ ಎಂದು ಟ್ವೀಟ್ ಮಾಡಿದ್ದಾರೆ.
ಇತ್ತ ಕೇಂದ್ರ ಸಚಿವ ಭಗವಂತ್ ಖೂಬ ಕೂಡ ವಾಣಿ ಜಯರಾಂ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಭಾರತದ ಕ್ಲಾಸಿಕಲ್ ಸಂಗೀತ ಕ್ಷೇತ್ರದ ನಕ್ಷತ್ರ ಕಳೆದುಕೊಂಡಿದ್ದೇವೆ. ಕುಟುಂಬಸ್ಥರು, ಆಪ್ತರಿಗೆ ದುಃಖ ತಡೆದುಕೊಳ್ಳವು ಶಕ್ತಿ ನೀಡಲಿ ಎಂದು ಖೂಬ ಟ್ವೀಟ್ ಮಾಡಿದ್ದಾರೆ.
ಹಿರಿಯ ನಟಿ ಖುಷ್ಬೂ ಸುಂದರ್ ಕೂಡ ಸಂತಾಪ ಸೂಚಿಸಿದ್ದಾರೆ. ಹೊಸ ವರ್ಷದಲ್ಲಿ ಆಘಾತಕಾರಿ ಸುದ್ದಿಬಂದಿದೆ. ನಾವು ಅನರ್ಘ್ಯ ರತ್ನ ಕಳೆದುಕೊಂಡಿದ್ದೇವೆ. ಹಲವು ವರ್ಷಗಳಿಂದ ಇಂಪಾದ ಗಾಯನದ ಮೂಲಕ ಮನತಣಿಸಿರುವ ವಾಣಿ ಜಯರಾಂ ಇನ್ನಿಲ್ಲ ಅನ್ನೋ ಸುದ್ದಿ ಆಘಾತ ತಂದಿದೆ. ನಾವು ಯಾವತ್ತೂ ಸ್ಮರಿಸತ್ತೇವೆ ಅಮ್ಮ ಎಂದು ಖುಷ್ಬೂ ಟ್ವೀಟ್ ಮಾಡಿದ್ದಾರೆ.
ವಾಣಿ ಜಯರಾಂ ಇನ್ನಿಲ್ಲ ಅನ್ನೋ ಸುದ್ದಿ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಎರಡು ದಿನದ ಹಿಂದೆ ಮಾತನಾಡಿದ್ದೆ. ಬಹುಭಾಷ ಹಾಗೂ ದಿಗ್ಗಜ ಗಾಯಕಿ ಇಲ್ಲ ಅನ್ನೋದು ತೀವ್ರ ನೋವಾಗಿದೆ. ಆವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಖ್ಯಾತ ಗಾಯಕಿ ಕೆಎಸ್ ಚಿತ್ರ ಟ್ವೀಟ್ ಮಾಡಿದ್ದಾರೆ.
ಗಣರಾಜ್ಯೋತ್ಸ ಸಂದರ್ಭದಲ್ಲಿ ವಾಣಿ ಜಯರಾಂ ಸಾಧನೆ ಗುರುತಿಸಿ ಪದ್ಮ ಭೂಷಣ ಪ್ರಶಸ್ತಿ ಘೋಷಿಸಲಾಗಿತ್ತು. ಈ ಘೋಷಣೆ ಬಳಿಕ ವಾಣಿ ಜಯರಾಂ ವಿಡಿಯೋ ಮೂಲಕ ಧನ್ಯವಾದ ತಿಳಿಸಿದ್ದರು. ಸಂಗೀತ ಕ್ಷೇತ್ರದ ಸೇವೆ ಪರಿಗಣಿಸಿ ಪ್ರಶಸ್ತಿ ಘೋಷಿಸಿರುವುದು ಅತೀ ಸಂತಸ ತಂದಿದೆ ಎಂದಿದ್ದರು.
ರಾಷ್ಟ್ರಪತಿ, ರಾಜ್ಯಪ್ರಶಸ್ತಿ, ಶ್ರೇಷ್ಠ ಗಾಯಕಿ, ಸಂಗೀತ ಸಮ್ಮಾನ್, ಫಿಲಂ ಫೇರ್, ಪದ್ಮಭೂಷಣ ಸೇರಿದಂತೆ ಹಲವು ಪ್ರಶಸ್ತಿಗೆ ವಾಣಿ ಜಯರಾಂ ಭಾಜನರಾಗಿದ್ದಾರೆ. ಗುಜರಾತ್, ಒರಿಸ್ಸಾ ರಾಜ್ಯಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ. ಕನ್ನಡದ ‘ಶಂಕರಾಭರಣಂ ಚಿತ್ರದ ಹಾಡಿಗೆ ರಾಷ್ಟ್ರ ಪ್ರಶಸ್ತಿ ಪಡೆದ ವಾಣಿ ಜಯರಾಂ, ರಜನೀಕಾಂತರನ್ನು ತಮಿಳು ಸಿನಿಮಾಗೆ ಪರಿಚಯಿಸಿದ ‘ಅಪೂರ್ವ ರಾಗಂಗಳ್‘ ಚಿತ್ರದ ‘ಏಳು ಸ್ವರಂಗಳುಕ್ಕುಳ್ ಎತ್ತನೈ ಪಾಡಲ್’ ಎಂಬ ಅಷ್ಟೇ ಸುಶ್ರಾವ್ಯ ಹಾಡಿಗೂ ಕೂಡ ಅವರು ರಾಷ್ಟ್ರ ಪ್ರಶಸ್ತಿ ಪಡೆದರು.