ಊರ್ವಶಿ ಅವರ ಮಗಳು ಇದೀಗ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಭುವನ್‌ ಪೊನ್ನಣ್ಣ ನಟನೆಯ ಹೊಸ ಸಿನಿಮಾ ‘ಬುಲ್ಲಿ’ಯಲ್ಲಿ ಊರ್ವಶಿ ಹಾಗೂ ಅವರ ಮಗಳು ತೇಜಲಕ್ಷ್ಮಿ ಜೊತೆಯಾಗಿ ತೆರೆ ಹಂಚಿಕೊಂಡಿದ್ದಾರೆ.

ರಾಷ್ಟ್ರಪ್ರಶಸ್ತಿ ವಿಜೇತ ಬಹುಭಾಷಾ ನಟಿ ಊರ್ವಶಿ ಅವರ ಮಗಳು ಇದೀಗ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಭುವನ್‌ ಪೊನ್ನಣ್ಣ ನಟನೆಯ ಹೊಸ ಸಿನಿಮಾ ‘ಬುಲ್ಲಿ’ಯಲ್ಲಿ ಊರ್ವಶಿ ಹಾಗೂ ಅವರ ಮಗಳು ತೇಜಲಕ್ಷ್ಮಿ ಜೊತೆಯಾಗಿ ತೆರೆ ಹಂಚಿಕೊಂಡಿದ್ದಾರೆ. ಭುವನ್‌ ಪೊನ್ನಣ್ಣ ನಟನೆಯ ‘ಬುಲ್ಲಿ’ ಸಿನಿಮಾದ ಶೀರ್ಷಿಕೆ ಅನಾವರಣದ ವೇಳೆ ನಟಿ ಹರ್ಷಿಕಾ ಪೂಣಚ್ಚ ಈ ವಿಚಾರ ರಿವೀಲ್ ಮಾಡಿದರು.

ಈ ವೇಳೆ ಮಾತನಾಡಿದ ನಟಿ ಊರ್ವಶಿ, ‘ನಾನು ಮತ್ತು ನನ್ನ ಮಗಳು ಜೊತೆಯಾಗಿ ಯಾವ ಸಿನಿಮಾದಲ್ಲೂ ನಟಿಸಿಲ್ಲ. ಇದೇ ಮೊದಲ ಬಾರಿ ಕನ್ನಡ ಸಿನಿಮಾ ಬುಲ್ಲಿಯಲ್ಲಿ ಜೊತೆಯಾಗಿ ನಟಿಸುತ್ತಿದ್ದೇವೆ. ಮಗಳು ತೇಜಾ ಬೆಂಗಳೂರಿನಲ್ಲೇ ಓದಿ ಇದೀಗ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದಾಳೆ. ಸಿನಿಮಾಗಳಲ್ಲೂ ನಟಿಸುತ್ತಿದ್ದಾಳೆ. ನನಗೂ ಕನ್ನಡ ಚಿತ್ರರಂಗಕ್ಕೂ ದೈವಿಕ ನಂಟಿದೆ.

ಡಾ.ರಾಜ್‌ಕುಮಾರ್‌ ಅವರಿಂದ ಭುವನ್‌ವರೆಗೆ ಪ್ರತೀ ತಲೆಮಾರಿನ ಕಲಾವಿದರ ಜೊತೆಗೆ ಅಭಿನಯಿಸಿರುವುದಕ್ಕೆ ಹೆಮ್ಮೆ ಇದೆ. ರಾಮ ಶಾಮ ಭಾಮ ಸಿನಿಮಾ ನಂತರ ಅನೇಕ ಕನ್ನಡ ಸಿನಿಮಾ ಸ್ಕ್ರಿಪ್ಟ್‌ಗಳು ಬಂದಿದ್ದವು. ಆದರೆ ಯಾವುದೂ ಸಹಜವಾಗಿ ಕನೆಕ್ಟ್‌ ಆಗುವಂತಿರಲಿಲ್ಲ. ಬುಲ್ಲಿ ಸಿನಿಮಾದ ಸ್ಕ್ರಿಪ್ಟ್‌ನಲ್ಲಿ ಹೊಸತನವಿತ್ತು. ಈ ಸಿನಿಮಾದಲ್ಲಿ ಮಾಡಿಲ್ಲ ಎಂದಾದರೆ ಒಂದೊಳ್ಳೆ ಚಾನ್ಸ್‌ ಮಿಸ್‌ ಮಾಡಿಕೊಳ್ತಿದ್ದೆ’ ಎಂದರು. ಈ ವೇಳೆ ಪುನೀತ್‌ ರಾಜ್‌ಕುಮಾರ್‌ ಜೊತೆಗೆ ಡ್ಯಾನ್ಸ್‌ ಮಾಡಿದ್ದನ್ನು ನೆನಪಿಸಿಕೊಂಡು ಭಾವುಕರಾದರು.

ಬಡ್ಡಿ ವ್ಯಾಪಾರಿಯಾಗಿ ಓಂಪ್ರಕಾಶ್‌ ರಾವ್‌

ನಾಯಕ ಭುವನ್‌ ಮಾತನಾಡಿ, ‘ಚಿತ್ರದಲ್ಲಿ ಗೊತ್ತು ಗುರಿಯಿಲ್ಲದ ಜೆನ್‌ಜಿ ಹುಡುಗ ಬಲರಾಮನಾಗಿ ಕಾಣಿಸಿಕೊಂಡಿದ್ದೇನೆ. ನನ್ನ ಅಮ್ಮ ಯಶೋದೆ ಪಾತ್ರದಲ್ಲಿ ಊರ್ವಶಿ ನಟಿಸುವ ಮೂಲಕ ನನ್ನ ಬಹುದಿನಗಳ ಕನಸು ನನಸಾದಂತಾಗಿದೆ’ ಎಂದರು. ಓಂಪ್ರಕಾಶ್‌ ರಾವ್‌ ಬಡ್ಡಿ ವ್ಯಾಪಾರಿಯಾಗಿ ನಟಿಸಿದ್ದಾರೆ. ಅನೂಪ್‌ ಆಂಟನಿ ಈ ಸಿನಿಮಾದ ನಿರ್ದೇಶಕರು. ನವೀನ್‌ ನಿರ್ಮಾಪಕರು.