ಕನ್ನಡ ಚಿತ್ರರಂಗದ ಅಪ್ರತಿಮ ಹಾಸ್ಯ ಕಲಾವಿದ ಟಿ.ಎನ್. ಬಾಲಕೃಷ್ಣ ಅವರ ಬದುಕು ಕಷ್ಟಗಳಿಂದ ಕೂಡಿದ್ದರೂ, 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಸಾಧನೆ ಮಾಡಿದರು. 8 ರೂಪಾಯಿಗೆ ಮಾರಾಟವಾದ ಬಾಲಕ ನಾಟಕ ಕಂಪನಿ ಸೇರಿ ಹೇಗೆ ಸಿನಿಮಾ ದಿಗ್ಗಜನಾದ ಎಂಬುದು ಸ್ಫೂರ್ತಿದಾಯಕ. ಆಸಕ್ತಿದಾಯಕ ಸ್ಟೋರಿ ಇಲ್ಲಿದೆ.

ಕನ್ನಡ ಚಿತ್ರರಂಗದಲ್ಲಿ ವಿಶಿಷ್ಟ ಅಭಿನಯ, ಹಾಸ್ಯಪ್ರಜ್ಞೆ ಹಾಗೂ ವಿಭಿನ್ನ ಮ್ಯಾನರಿಸಂ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದ ಸ್ಥಾನ ಪಡೆದ ಕಲಾವಿದರಲ್ಲಿ ಟಿ.ಎನ್. ಬಾಲಕೃಷ್ಣ ಕೂಡ ಒಬ್ಬರು. ಇಂದು ಅವರನ್ನು ಪ್ರೀತಿಯಿಂದ ಬಾಲಣ್ಣ ಎಂದೇ ಕರೆಯಲಾಗುತ್ತದೆ. ಆದರೆ ಅವರ ಬಾಲ್ಯದ ಬದುಕು, ಚಿತ್ರರಂಗಕ್ಕೆ ಬಂದ ಹಾದಿ ಮಾತ್ರ ಎಲ್ಲರನ್ನೂ ಭಾವುಕರನ್ನಾಗಿಸುತ್ತದೆ.

ಸಂಕಷ್ಟದಲ್ಲಿ ಅರಳಿದ ಬಾಲಣ್ಣ

1913ರ ನವೆಂಬರ್ 2ರಂದು ಜನಿಸಿದ ಬಾಲಕೃಷ್ಣ ಅವರು ಬಾಲ್ಯದಲ್ಲೇ ಅನೇಕ ಸಂಕಷ್ಟಗಳನ್ನು ಎದುರಿಸಿದ್ದರು. ಕುಟುಂಬದ ಆರ್ಥಿಕ ಪರಿಸ್ಥಿತಿ ಚೆನ್ನಾಗಿರಲಿಲ್ಲ. ತಂದೆಯ ಅನಾರೋಗ್ಯಕ್ಕೆ ಚಿಕಿತ್ಸೆ ಕೊಡಿಸಲು ಹಣದ ಅಗತ್ಯ ಎದುರಾಗಿತ್ತು. ಆಗ ಬಾಲಕೃಷ್ಣ ಅವರನ್ನು ಕೇವಲ ಎಂಟು ರೂಪಾಯಿಗೆ ಮತ್ತೊಂದು ಕುಟುಂಬಕ್ಕೆ ಒಪ್ಪಿಸಲಾಯಿತು ಎಂದು ಹೇಳಲಾಗುತ್ತದೆ. ಚಿಕ್ಕ ವಯಸ್ಸಿನಲ್ಲೇ ಇಂತಹ ಪರಿಸ್ಥಿತಿ ಎದುರಿಸಿದ ಅವರು, ಹೊಸ ಮನೆಯಲ್ಲೂ ನೆಮ್ಮದಿಯಿಂದ ಇರಲು ಸಾಧ್ಯವಾಗಲಿಲ್ಲ. ಅಲ್ಲಿನ ಕಿರುಕುಳದಿಂದ ಬೇಸತ್ತು ಆ ಸ್ಥಳದಿಂದ ಹೊರಬಂದ ಬಾಲಕ, ಬದುಕು ಕಟ್ಟಿಕೊಳ್ಳಲು ನಾಟಕ ಕಂಪನಿ ಸೇರಿಕೊಂಡರು.

ನಾಟಕ ಕಂಪನಿಯಲ್ಲಿ ಆರಂಭದಲ್ಲಿ ನಟನಾಗಿ ಅಲ್ಲ, ಸಣ್ಣಪುಟ್ಟ ಕೆಲಸಗಳನ್ನು ಮಾಡುವ ಮೂಲಕ ಜೀವನ ಸಾಗಿಸುತ್ತಿದ್ದರು. ಅವರಲ್ಲಿದ್ದ ಕಲಾಸಕ್ತಿ ಮತ್ತು ಪ್ರತಿಭೆ ಹೆಚ್ಚು ದಿನ ಮರೆಯಾಗಿರಲಿಲ್ಲ. ಒಂದು ದಿನ ನಾಟಕದಲ್ಲಿ ಅಭಿನಯಿಸುತ್ತಿದ್ದ ಕಲಾವಿದ ಅನಾರೋಗ್ಯಕ್ಕೆ ಒಳಗಾದ ಕಾರಣ.. ಅವರ ಬದಲಿಗೆ ಬಾಲಕೃಷ್ಣಗೆ ವೇದಿಕೆಯ ಮೇಲೆ ನಿಲ್ಲುವ ಅವಕಾಶ ಸಿಕ್ಕಿತು. ಈ ಅನಿರೀಕ್ಷಿತ ಅವಕಾಶ ಅವರ ಜೀವನಕ್ಕೆ ಹೊಸ ದಿಕ್ಕು ತೋರಿಸಿತು.

ಇನ್ನು ಬಾಲಣ್ಣ ಅವರ ಪ್ರತಿಭೆ ನಾಟಕ ರಂಗಕ್ಕೆ ಮಾತ್ರ ಸೀಮಿತ ಆಗಿರಲಿಲ್ಲ. ಕನ್ನಡ ಸಿನಿಮಾ ಕ್ಷೇತ್ರದಲ್ಲೂ ಅವರು ತಮ್ಮ ಛಾಪು ಮೂಡಿಸಲು ಆರಂಭಿಸಿದರು. ನಿರ್ದೇಶಕ ಬಿ.ಆರ್. ಪಂತುಲು ಗಮನಕ್ಕೆ ಬಂದ ಬಾಲಕೃಷ್ಣಗೆ 1943ರಲ್ಲಿ ಬಿಡುಗಡೆಯಾದ 'ರಾಧಾರಮಣ' ಚಿತ್ರದಲ್ಲಿ ಅವಕಾಶ ನೀಡಿದರು. ಆ ಕಾಲದಲ್ಲಿ ಸಿನಿಮಾದಲ್ಲಿ ಗುರುತಿಸಿಕೊಳ್ಳುವುದು ಸುಲಭದ ಕೆಲಸವಾಗಿರಲಿಲ್ಲ. ಆದರೂ ತಮ್ಮ ಅಭಿನಯದ ಮೂಲಕ ನಿಧಾನವಾಗಿ ಪ್ರೇಕ್ಷಕರ ಗಮನ ಸೆಳೆಯುತ್ತಾ ಹೋದರು.

ಇನ್ನೊಂದು ಸಂಗತಿ ಏನೆಂದರೆ ಬಾಲಣ್ಣಗೆ ಶ್ರವಣ ಸಮಸ್ಯೆ ಇತ್ತು. ಆದರೆ ಅದು ಅವರ ಕಲೆಗೆ ಅಡ್ಡಿ ಆಗಲಿಲ್ಲ. ಸಹನಟರು ಮಾತನಾಡುವಾಗ ತುಟಿಗಳ ಚಲನವಲನ ಗಮನಿಸಿ ಸಂಭಾಷಣೆ ಅರ್ಥಮಾಡಿಕೊಳ್ಳುತ್ತಿದ್ದರು. ಸಿನಿಮಾದ ಕಥೆ ಮತ್ತು ಸನ್ನಿವೇಶಗಳ ಬಗ್ಗೆ ಸಂಪೂರ್ಣ ತಿಳಿದುಕೊಂಡು ತಮ್ಮ ಪಾತ್ರಕ್ಕೆ ತಕ್ಕಂತೆ ಅಭಿನಯಿಸುತ್ತಿದ್ದರು. ಕಾಮಿಡಿ ಟೈಮಿಂಗ್, ಮುಖಭಾವಗಳು ಹಾಗೂ ಸಂಭಾಷಣೆ ಹೇಳುವ ಶೈಲಿ ಪ್ರೇಕ್ಷಕರನ್ನು ನಗಿಸುವಲ್ಲಿ ವಿಶೇಷ ಪಾತ್ರ ವಹಿಸುತ್ತಿದ್ದವು.

ಸುಮಾರು ಐದು ದಶಕಗಳ ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಬಾಲಣ್ಣ 500 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಹಾಸ್ಯ ಪಾತ್ರಗಳ ಜೊತೆಗೆ ವಿಭಿನ್ನ ರೀತಿಯ ಪಾತ್ರಗಳಲ್ಲೂ ನಟಿಸಿದ್ದಾರೆ. ಡಾ.ರಾಜ್‌ಕುಮಾರ್ ಜೊತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು. ಬಂಗಾರದ ಮನುಷ್ಯ ಸಿನಿಮಾದಲ್ಲಿನ ಅಭಿನಯಕ್ಕಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನೂ ಪಡೆದಿದ್ದರು.

ಕಷ್ಟಗಳ ನಡುವೆಯೂ ತಮ್ಮ ಕಲೆಯನ್ನು ಕೈಬಿಡದೆ ಬೆಳೆದು, ಕನ್ನಡ ಚಿತ್ರರಂಗದ ಪ್ರಮುಖ ನಟರಲ್ಲಿ ಒಬ್ಬರಾದ ಬಾಲಣ್ಣ ಅವರ ಬದುಕು ಅನೇಕರಿಗೆ ಸ್ಫೂರ್ತಿ. ಬಾಲ್ಯದಲ್ಲಿ ಎಂಟು ರೂಪಾಯಿಗೆ ಒಪ್ಪಿಸಲ್ಪಟ್ಟಿದ್ದ ಬಾಲಕ, ಮುಂದೆ ನೂರಾರು ಸಿನಿಮಾಗಳ ಮೂಲಕ ಲಕ್ಷಾಂತರ ಜನರನ್ನು ನಗಿಸಿ, ಮನರಂಜಿಸಿದ ಕಲಾವಿದನಾಗಿ ಬೆಳೆದದ್ದು ನಿಜಕ್ಕೂ ಅಸಾಧಾರಣ ಸಾಧನೆ.