ಇದು ಪಕ್ಕಾ ದರ್ಶನ್ ಮಾಡೆಲ್ (the devil movie review) ಮನರಂಜನೆ. ಖಾರ ಮಸಾಲೆ ಇದೆ, ಎಂಟರ್‌ಟೇನ್‌ಮೆಂಟ್‌ಗೆ ಮೋಸ ಇಲ್ಲ. ಆದರೆ ಈ ಸಿನಿಮಾದಲ್ಲಿ ಮಿಸ್ ಹೊಡೀತಿರೋ ಕೆಲವು ಅಂಶಗಳೂ ಇವೆ.
ದರ್ಶನ್ ನಟನೆಯ ದಿ ಡೆವಿಲ್ ಸಿನಿಮಾ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಥೇಟರ್ ಅಲಂಕಾರದಿಂದ ಹಿಡಿದು, ಕೊರೆಯೋ ಚಳಿಗೆ ನಿನ್ನೆ ರಾತ್ರಿಯಿಂದಲೇ ಥೇಟರ್‌ನಲ್ಲಿ ಜಾತ್ರೆಯಂಥಾ ವಾತಾವರಣ ನಿರ್ಮಿಸೋವರೆಗೆ ಫ್ಯಾನ್ಸ್ ಶ್ರಮ ಎದ್ದು ಕಾಣುತ್ತದೆ. ತನಗೋಸ್ಕರ ಇಷ್ಟೆಲ್ಲ ಮಾಡಿರೋ ಫ್ಯಾನ್ಸ್‌ಶ್ರಮಕ್ಕೆ ತಕ್ಕ ಫಲ ಸ್ಕ್ರೀನ್ ಮೇಲೆ ದರ್ಶನ್ ಕೊಟ್ಟಿದ್ದಾರ ಅನ್ನೋದು ಪ್ರಶ್ನೆ. ಅದಕ್ಕೆ ಉತ್ತರವಾಗಿ ಸೋಷಲ್ ಮೀಡಿಯಾದಲ್ಲಿ ಫ್ಯಾನ್ಸ್ ಮುಂಜಾನೆಯಿಂದಲೇ ರಿಯಾಕ್ಷನ್ ಹರಿದು ಬರುತ್ತಲೇ ಇದೆ. 'ದಿ ಡೆವಿಲ್ ಫಸ್ಟ್ ಹಾಫ್ - ಪಕ್ಕಾ ಪೈಸಾ ವಸೂಲ್. ಎಷ್ಟು ದಿವಸ ಆಗಿತ್ತು ಗುರುವೇ ನಿನ್ನ ಈ ತರಹ ಒಂದು ಪಕ್ಕಾ ಎಂಟರ್‌ಟೈನರ್‌ನಲ್ಲಿ ನೋಡಿ. ಎನ್ ಡೈಲಾಗ್ ಗುರು. ಪ್ರಕಾಶ್ ವೀರ್ ಅವರು ಇಷ್ಟು ಚೆನ್ನಾಗಿ ಸಿನಿಮಾ ಕಟ್ಟಿಕೊಡ್ತಾರೆ ಅಂತ ನಿರೀಕ್ಷಿಸಿರಲಿಲ್ಲ. ಪ್ರತೀ ಡಿಪಾರ್ಟ್‌ಮೆಂಟ್ ಕೂಡ ಚೆನ್ನಾಗಿ ಕೆಲಸ ಮಾಡಿದೆ' ಅಂತೆಲ್ಲ ಫ್ಯಾನ್ಸ್ ಕಾಮೆಂಟ್ ಪಾಸ್ ಮಾಡುತ್ತಿದ್ದಾರೆ.
ಕೃಷ್ಣಾವತಾರವಾ? ಡೆವಿಲ್ ಅಟ್ಟಹಾಸವಾ?
ಈಗ ಸಿನಿಮಾ ವಿಚಾರಕ್ಕೆ ಬರೋಣ. ಸಿನಿಮಾದ ಫಸ್ಟ್ ಹಾಫ್ ಸಂಪೂರ್ಣ ಮನರಂಜನೆಗೆ ಮೀಸಲು. 'ಇದ್ರೆ ನೆಮ್ದಿಯಾಗಿರ್ಬೇಕ್' ಹಾಡಿನ ಮೂಲಕವೇ ಡಿ ಬಾಸ್ ಎಂಟ್ರಿ. ಈ ಹಾಡು ಮುಗಿಯುತ್ತಿದ್ದ ಹಾಗೇ ಒಂದು ಟ್ವಿಸ್ಟ್. ಮಾಸ್ ಹೀರೋ ಕನಸು ಕಾಣ್ತಿರೋ ಸಾಮಾನ್ಯ ಯುವಕ ಎಂಟ್ರಿ ಕೊಡ್ತಾನೆ. ಬಹಳ ಸೊಗಸಾಗಿ ಪ್ರಕಾಶ್ ವೀರ್ ಸಿನಿಮಾ ಆರಂಭಿಸಿದ್ದಾರೆ. ಕಥೆ ಟೇಕಾಫ್ ಆಗೋದಕ್ಕೆ ಜಾಸ್ತಿ ಟೈಮ್ ಸಿಗಲ್ಲ. ಈ ಸಿನಿಮಾದ ಒಂದು ಭಾಗದಲ್ಲಿ ದೊಡ್ಡ ಹೀರೋ ಆಗುವ ಕನಸು ಕಾಣುವ ಯುವಕ ಕೃಷ್ಣ ಕಾಣಿಸಿಕೊಳ್ತಾನೆ. ಅವನಿಗೆ ಒಂದು ಕ್ಯಾಂಟೀನ್ ಇದೆ. ಅಲ್ಲಿ ಬಂದವರಿಗೆ ಹೊಟ್ಟೆ ತುಂಬ ಊಟದ ಜೊತೆಗೆ ಕೃಷ್ಣನ ಮನರಂಜನೆ ಬೋನಸ್ಸಾಗಿ ಸಿಗುತ್ತದೆ. ಅಣ್ಣಾವ್ರು, ಅಂಬರೀಶ್, ವಿಷ್ಣು ದಾದಾ ಮೊದಲಾದ ಐಕಾನ್‌ಗಳನ್ನೆಲ್ಲ ತನ್ನೊಳಗೆ ಆವಾಹಿಸಿಕೊಂಡು ತನ್ನ ಚಿಕ್ಕ ಕ್ಯಾಂಟೀನ್‌ಗೆ ಸದಾ ಜನರಿರುವಂತೆ ನೋಡಿಕೊಳ್ಳುತ್ತಾನೆ. ಇನ್ನೊಂದು ಕಡೆ ದಿ ಡೆವಿಲ್ ಇದ್ದಾನೆ. ಆ ಡೆವಿಲ್‌ಗೆ ದೊಡ್ಡ ಹಿನ್ನೆಲೆ ಇದೆ. ಮುಂದೆ ಇವರಿಬ್ಬರ ಮುಖಾಮುಖಿ ಆದರೆ ಹೇಗಿರಬಹುದು, ಕೃಷ್ಣನ ಪಾತ್ರ ಹೇಗೆಲ್ಲ ಟರ್ನ್ ತಗೊಳ್ಳಬಹುದು, ಕೃಷ್ಣಾವತಾರಕ್ಕೆ ಜಯವಾಗುತ್ತಾ, ಡೆವಿಲ್ ಅಟ್ಟಹಾಸ ಉಳಿದುಬಿಡುತ್ತಾ ಅನ್ನೋದು ಕಥೆ. ಇದಲ್ಲಿ ಕೊನೆಯಲ್ಲಿ ನಿರ್ದೇಶಕರು ಎರಡನೇ ಭಾಗಕ್ಕೂ ಸ್ಪೇಸ್ ಬಿಟ್ಟಿದ್ದಾರೆ.
ಸಿನಿಮಾದಲ್ಲಿ ಮನರಂಜನೆಗೆ ಮೋಸ ಇಲ್ಲ. ಕಥೆಯಲ್ಲಿ ಅಂಥಾ ಹೊಸತನ ಕಾಣದಿದ್ದರೂ ಅದನ್ನು ಸಿನಿಮಾ ಮಾಡಿದ ರೀತಿ ಜನರನ್ನು ಕುರ್ಚಿ ತುದಿಗೆ ಕೂರಿಸುವಂತಿದೆ. ಅಚ್ಯುತ ಪಾತ್ರ ಚಾಣಾಕ್ಷನಂತೆ ಹೋಗುತ್ತದೆ ಆದರೂ ಕೊನೆ ಕೊನೆಯಲ್ಲಿ ಆ ಪಾತ್ರಕ್ಕೆ ಸರಿಯಾದ ಫೋಕಸ್ ಸಿಕ್ಕಿದಂತಿದೆ. ಇಂಗ್ಲೀಷ್ ಸಿನಿಮಾಗಳನ್ನು ನೋಡುತ್ತಿದ್ದವರಿಗೆ ಈ ಸಿನಿಮಾದ ಕ್ಲೈಮ್ಯಾಕ್ಸ್ ಅಂಥಾ ಅಚ್ಚರಿಯೇನೂ ಮೂಡಿಸದು. ಕಥೆಯನ್ನು ಬಹಳ ಅಬ್ಬರದಿಂದ ಕಲರ್‌ಫುಲ್ ಆಗಿ ಕಟ್ಟಿಕೊಟ್ಟ ನಿರ್ದೇಶಕರು ಕ್ಲೈಮ್ಯಾಕ್ಸ್‌ಗೆ ಇನ್ನಷ್ಟು ಶ್ರಮ ಹಾಕಿದ್ದರೆ ಚೆನ್ನಾಗಿತ್ತು. ಹಾಡುಗಳು ಜೋಶ್ ಹೆಚ್ಚಿಸುತ್ತವೆ. ನಾಯಕಿ ಪಾತ್ರ ಚೆನ್ನಾಗಿದೆ. ಆದರೆ ಸಿಕ್ಕಿದ್ದೆಲ್ಲಕ್ಕೂ ಮಹಾಭಾರತ, ರಾಮಾಯಣದ ನಿರ್ಣಾಯಕ ಸ್ತ್ರೀಪಾತ್ರಗಳನ್ನು ಎಳೆದು ತರುವುದು ಎಷ್ಟು ಉಚಿತವೋ ಗೊತ್ತಿಲ್ಲ. ಒಟ್ಟಿನಲ್ಲಿ ಫ್ಯಾನ್ಸ್‌ಗೆ ಭರ್ಜರಿ ಮನರಂಜನೆ ಕೊಡುವ ಚಿತ್ರವಿದು. ಸ್ಟಾರ್ ಸಿನಿಮಾದ ಖದರನ್ನು, ಎಂಟರ್‌ಟೇನ್‌ಮೆಂಟ್ ಅನ್ನು ಈ ಸಿನಿಮಾದಲ್ಲಿ ನಿರೀಕ್ಷಿಸಬಹುದು. ದರ್ಶನ್ ನಟನೆಯಲ್ಲಿ ಎರಡು ಮಾತಿಲ್ಲ. ಅಚ್ಯುತ್ ಕುಮಾರ್ ಪಾತ್ರ ನಿರ್ವಹಣೆ ಸೊಗಸಾಗಿದೆ. ರಚನಾ ರೈ ಭರವಸೆ ಹುಟ್ಟಿಸುತ್ತಾರೆ. ಸಿ ಎಂ ಪಾತ್ರದಲ್ಲಿ ಮಹೇಶ್ ಮಂಜ್ರೇಕರ್ ಒಳ್ಳೆ ಪರ್ಫಾಮೆನ್ಸ್. ಒಟ್ಟಿನಲ್ಲಿ ಒಂದೊಳ್ಳೆ ಎಂಟರ್‌ಟೇನಿಂಗ್ ಸಿನಿಮಾವಿದು.



