'ಮಾರ್ಕ್' ಚಿತ್ರದ ಭರ್ಜರಿ ಯಶಸ್ಸಿನ ಹಿನ್ನೆಲೆಯಲ್ಲಿ ನಟ ಕಿಚ್ಚ ಸುದೀಪ್ ಮೈಸೂರಿನ ಸಂಗಮ್ ಚಿತ್ರಮಂದಿರಕ್ಕೆ ಭೇಟಿ ನೀಡಿ, ಅಭಿಮಾನಿಗಳೊಂದಿಗೆ ಕುಳಿತು ಸಿನಿಮಾ ವೀಕ್ಷಿಸಿದರು. ಈ ಸಂದರ್ಭದಲ್ಲಿ, ಪೈರಸಿ ವಿರುದ್ಧ ಹೋರಾಡಿದ ಅಭಿಮಾನಿಗಳನ್ನು ಶ್ಲಾಘಿಸಿ, ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳನ್ನು ಕೋರಿದರು.

ಮೈಸೂರು (ಡಿ.31): ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ 'ಮಾರ್ಕ್' ಚಿತ್ರ ಭರ್ಜರಿ ಯಶಸ್ಸು ಕಂಡಿರುವ ಹಿನ್ನೆಲೆಯಲ್ಲಿ, ಇಂದು ನಟ ಸುದೀಪ್ ಸಾಂಸ್ಕೃತಿಕ ನಗರಿ ಮೈಸೂರಿಗೆ ಭೇಟಿ ನೀಡಿದ್ದಾರೆ. 

ಕಿಚ್ಚನ ಆಗಮನ, ಹೊಸವರ್ಷ, ಫ್ಯಾನ್ಸ್‌ಗೆ ಹಬ್ಬ!

ಮೈಸೂರಿನ ಪ್ರಸಿದ್ಧ ಸಂಗಮ್ ಚಿತ್ರಮಂದಿರಕ್ಕೆ ಕಿಚ್ಚ ಸುದೀಪ್ ಭೇಟಿ ನೀಡಿದ್ದು, ತಮ್ಮ ನೆಚ್ಚಿನ ನಟನನ್ನು ನೋಡಲು ಸಾವಿರಾರು ಅಭಿಮಾನಿಗಳು ಕಿಕ್ಕಿರಿದು ಸೇರಿದ್ದಾರೆ. ಚಿತ್ರಮಂದಿರದ ಸುತ್ತಮುತ್ತ ಎಲ್ಲಿ ನೋಡಿದರೂ ಕಿಚ್ಚನ ಅಭಿಮಾನಿಗಳೇ. ಜನಸಂದಣಿಯನ್ನು ನಿಯಂತ್ರಿಸಲು ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.

ಅಭಿಮಾನಿಗಳ ಜೊತೆ ಕುಳಿತು 'ಮಾರ್ಕ್' ವೀಕ್ಷಣೆ

ವಿಶೇಷವೆಂದರೆ, ಸುದೀಪ್ ಅವರು ಸಂಗಮ್ ಚಿತ್ರಮಂದಿರದಲ್ಲಿ ಅಭಿಮಾನಿಗಳ ಜೊತೆ ಕುಳಿತು ತಮ್ಮದೇ 'ಮಾರ್ಕ್' ಸಿನಿಮಾ ವೀಕ್ಷಿಸಲಿದ್ದಾರೆ. ಮೈಸೂರಿನಲ್ಲಿ ಸುದೀಪ್ ಅವರ ಈ ಭೇಟಿ ಅಭಿಮಾನಿಗಳಲ್ಲಿ ಹೊಸ ವರ್ಷದ ಸಂಭ್ರಮವನ್ನು ಇಮ್ಮಡಿಗೊಳಿಸಿದೆ. ಸಿನಿಮಾ ವೀಕ್ಷಣೆಗೂ ಮುನ್ನ ಅವರು ಅಭಿಮಾನಿಗಳ ಪ್ರೀತಿಗೆ ಮನಸೋತು ಧನ್ಯವಾದ ಸಮರ್ಪಿಸಿದರು.

ಪೈರಸಿ ವಿರುದ್ಧ ಫ್ಯಾನ್ಸ್ ಹೋರಾಟ ಖುಷಿ ನೀಡಿದೆ - ಸುದೀಪ್

ಮೈಸೂರಿನಲ್ಲಿ ಮಾತನಾಡಿದ ಸುದೀಪ್ ಅವರು, ಚಿತ್ರ ತುಂಬಾ ಚೆನ್ನಾಗಿ ಪ್ರದರ್ಶನ ಕಾಣುತ್ತಿದೆ. ಅಭಿಮಾನಿಗಳ ಪ್ರೀತಿಗೆ ಏನೇ ಹೇಳಿದರೂ ಕಡಿಮೆಯೇ. ಮೈಸೂರಿನ ಚಿತ್ರಮಂದಿರದಲ್ಲಿ ಕೊನೆಯದಾಗಿ ಯಾವಾಗ ಸಿನಿಮಾ ನೋಡಿದ್ದೆ ಎಂಬುದೇ ಮರೆತು ಹೋಗಿದೆ. ಈ ಬಾರಿ ಪೈರಸಿ ವಿರುದ್ಧ ಅಭಿಮಾನಿಗಳೇ ನಿಂತು ಹೋರಾಡಿ ಚಿತ್ರವನ್ನು ರಕ್ಷಿಸಿರುವುದು ನನಗೆ ತುಂಬಾ ಖುಷಿ ತಂದಿದೆ ಎಂದು ಅಭಿಮಾನಿಗಳ ಕಾರ್ಯವನ್ನು ಶ್ಲಾಘಿಸಿದರು.

ಹೊಸ ವರ್ಷಕ್ಕೆ ಕಿಚ್ಚನ ಶುಭಾಶಯ

2025 ಮುಗಿದು 2026ಕ್ಕೆ ಪಾದಾರ್ಪಣೆ ಮಾಡುತ್ತಿರುವ ಹೊತ್ತಿನಲ್ಲಿ ಸುದೀಪ್ ಮೈಸೂರಿನ ಜನತೆ, ಅಭಿಮಾನಿಗಳಿಗೆ ಶುಭ ಕೋರಿದರು. 'ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು, ಮುಂದಿನ ವರ್ಷ ಎಲ್ಲರಿಗೂ ಒಳ್ಳೆಯದಾಗಲಿ' ಎಂದು ಸಾಂಸ್ಕೃತಿಕ ನಗರಿಯ ಮಂದಿಗೆ ಕಿಚ್ಚ ಸುದೀಪ್ ಮನಸಿನಿಂದ ಹಾರೈಸಿದರು.